×
Ad

ನನ್ನ ಹತ್ಯೆಗೆ ಬಹಿರಂಗವಾಗಿ ಕರೆ ನೀಡಿದ ಸಚಿವ ಅಶ್ವತ್ಥನಾರಾಯಣ ವಿರುದ್ಧ ಕ್ರಮ ಏಕಿಲ್ಲ?: ಸಿದ್ದರಾಮಯ್ಯ

''ಜನರನ್ನು ಪ್ರಚೋದಿಸದೇ ನೀವೇ ಕೋವಿ ಹಿಡಿದುಕೊಂಡು ಬಂದು ಬಿಡಿ...''

Update: 2023-02-15 22:35 IST

ಬೆಂಗಳೂರು: ನನ್ನ ಹತ್ಯೆಗೆ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಬಹಿರಂಗವಾಗಿ ಕರೆ ನೀಡಿದ್ದಾರೆಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ. 

ಈ ಸಂಬಂಧ ಟ್ವೀಟ್ ಮಾಡಿರುವ ಅವರು,  ''ಟಿಪ್ಪುವನ್ನು ಹೊಡೆದುಹಾಕಿದಂತೆ ನನ್ನನ್ನೂ ಹೊಡೆದುಹಾಕಬೇಕು ಎಂದು ಸಚಿವ ಡಾ. ಅಶ್ವತ್ಥನಾರಾಯಣ ಜನರಿಗೆ ಕರೆನೀಡಿದ್ದಾರೆ. ಜನರನ್ನು ಯಾಕೆ ಪ್ರಚೋದಿಸುತ್ತೀರಿ ಸಚಿವರೇ? ನೀವೇ ಕೋವಿ ಹಿಡಿದುಕೊಂಡು ಬಂದು ಬಿಡಿ'' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

''ನನ್ನ ಹತ್ಯೆಗೆ ಡಾ. ಅಶ್ವತ್ಥನಾರಾಯಣ  ಅವರು ಕೊಟ್ಟ ಕರೆಯಿಂದ ನನಗೇನು ಆಶ್ಚರ್ಯವಾಗಿಲ್ಲ. ಗಾಂಧೀಜಿಯನ್ನು ಕೊಂದವರನ್ನೇ ಆರಾಧಿಸುತ್ತಿರುವ ಪಕ್ಷದ ನಾಯಕರಿಂದ  ಕೊಲೆಗಡುಕತನವಲ್ಲದೆ, ಪ್ರೀತಿ, ಕರುಣೆ, ಸ್ನೇಹವನ್ನು ನಿರೀಕ್ಷಿಸಲು ಸಾಧ್ಯವೇ? ರಾಜ್ಯದ ಒಬ್ಬ ಸಚಿವ ಈ ರೀತಿ ಬಹಿರಂಗವಾಗಿ ಹತ್ಯೆಗೆ ಕರೆ ನೀಡಿದ ನಂತರವೂ ಅವರ ವಿರುದ್ಧ ಪೊಲೀಸರು ಕ್ರಮಕೈಗೊಂಡಿಲ್ಲ ಎಂದಾದರೆ ಈ ರಾಜ್ಯವನ್ನು ಆಳುವವರು ಜೀವಂತವಾಗಿಲ್ಲ, ಸರ್ಕಾರ ಸತ್ತುಹೋಗಿದೆ ಎಂದೇ ಲೆಕ್ಕ'' ಎಂದು ಕಿಡಿಕಾರಿದ್ದಾರೆ. 

''ಸಚಿವ ಡಾ. ಅಶ್ವತ್ಥನಾರಾಯಣ  ಅವರು ನೀಡಿರುವ ಹತ್ಯೆಯ ಕರೆಯ ಬಗ್ಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮತ್ತು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಪ್ರತಿಕ್ರಿಯೆ ಏನು ಎನ್ನುವುದನ್ನು ನಾನು ತಿಳಿದುಕೊಳ್ಳಬಯಸುತ್ತೇನೆ. 
ಮೌನ ಸಮ್ಮತಿಯ ಲಕ್ಷಣವೇ?'' ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ. 

Similar News