VIDEO- ನಿಮ್ಮನ್ನು ಹೊರಗೆ ಹಾಕಬೇಕಾದೀತು...: ಸದನದಲ್ಲಿ ಈಶ್ವರ್ ಖಂಡ್ರೆ-ಸ್ಪೀಕರ್ ಕಾಗೇರಿ ಜಟಾಪಟಿ

Update: 2023-02-16 13:02 GMT

ಬೆಂಗಳೂರು, ಫೆ. 16: ‘ನಿಮ್ಮಂತವರನ್ನು ಯಾರು ಆಯ್ಕೆ ಮಾಡಿದ್ದು, ನಿಮ್ಮನ್ನು ಆಯ್ಕೆ ಮಾಡಿದ್ದು ಸದನಕ್ಕೆ ಶೋಭೆ ತರುವುದಿಲ್ಲ’ ಎಂದು ಕಾಂಗ್ರೆಸ್ ಪಕ್ಷದ ಸದಸ್ಯ ಈಶ್ವರ್ ಖಂಡ್ರೆ ಕುರಿತು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಮಾತು, ಕಾಂಗ್ರೆಸ್ ಸದಸ್ಯರನ್ನು ತೀವ್ರವಾಗಿ ಕೆರಳಿಸಿತಲ್ಲದೆ, ಧರಣಿ ಹಾಗೂ ಕೆಲಕಾಲ ಸದನ ಮುಂದೂಡಿಕೆಗೆ ಕಾರಣವಾಯಿತು.

ಗುರುವಾರ ವಿಧಾನಸಭೆ ಶೂನ್ಯವೇಳೆಯಲ್ಲಿ ಸಚಿವ ಅಶ್ವತ್ಥ ನಾರಾಯಣ, ಸಿದ್ದರಾಮಯ್ಯ ಕುರಿತ ಹೇಳಿಕೆ ಸಂಬಂಧ ಶೂನ್ಯವೇಳೆಯಲ್ಲಿ ಮಾತನಾಡಲು ತಮಗೂ ಅವಕಾಶ ನೀಡಬೇಕೆಂದು ಕೋರಿ ಈಶ್ವರ್ ಖಂಡ್ರೆ ಎದ್ದುನಿಂತದ್ದಕ್ಕೆ ಆಕ್ಷೇಪಿಸಿದ ಸ್ಪೀಕರ್ ಕಾಗೇರಿ, ‘ನೀವು ಸದನದಲ್ಲಿ ಹೀಗೆ ವರ್ತಿಸಿದರೆ ಹೊರಗೆ ಹಾಕಬೇಕಾದೀತು. ನಿಮ್ಮಂತಹವರ ಆಯ್ಕೆ ಸದನಕ್ಕೆ ಶೋಭೆ ತರುವುದಿಲ್ಲ’ ಎಂದು ಆಕ್ಷೇಪಿಸಿದರು.

ಇದರಿಂದ ಆಕ್ರೋಶಿತರಾದ ಕಾಂಗ್ರೆಸ್ ಸದಸ್ಯರು, ‘ಜನರಿಂದ ಆಯ್ಕೆಯಾದ ಸದಸ್ಯರಿಗೆ ಹೀಗೆ ಹೇಳುವುದು ಸರಿಯಲ್ಲ. ತನ್ನನ್ನು ಆಯ್ಕೆ ಮಾಡಿದ ನನ್ನ ಕ್ಷೇತ್ರದ ಜನರಿಗೆ ಅವಮಾನ ಮಾಡಿದಂತೆ’ ಎಂದು ಸ್ಪೀಕರ್ ಹೇಳಿಕೆ ಖಂಡಿಸಿ ಪೀಠದ ಮುಂದಿನ ಬಾವಿಗಿಳಿದು ಧರಣಿಗೆ ಮುಂದಾದರು. ಇದರಿಂದ ಸದನದಲ್ಲಿ ಗದ್ದಲ ಸೃಷ್ಟಿಯಾಯಿತು.

ಈ ವೇಳೆ ಡಾ.ಅಶ್ವತ್ಥ ನಾರಾಯಣ, ವಿಪಕ್ಷ ಉಪನಾಯಕ ಯು.ಟಿ.ಖಾದರ್ ಪ್ರಸ್ತಾಪಕ್ಕೆ ಉತ್ತರ ನೀಡಿ ನಿನ್ನೆ ನೀಡಿದ್ದ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದರು. ಈ ವೇಳೆ ಎದ್ದು ನಿಂತ ಕಾಂಗ್ರೆಸ್ ಸದಸ್ಯ ಪ್ರಿಯಾಂಕ್ ಖರ್ಗೆ, ಇಬ್ಬರಿಗೂ ಮಾತನಾಡಲು ಅವಕಾಶ ನೀಡಿ ಎಂದು ಸ್ಪೀಕರ್‍ಗೆ ಮನವಿ ಮಾಡಿದರು. ‘ಖಂಡ್ರೆಯವರೆ, ಬಹಳ ದಿನಗಳಿಂದ ನಿಮ್ಮ ನಡವಳಿಕೆಯನ್ನು ಗಮನಿಸುತ್ತಿದ್ದೇವೆ. ಈ ರೀತಿ ಸದನದಲ್ಲಿ ನಡೆದುಕೊಳ್ಳುವುದು ಸಲ್ಲ. ಇದು ನಿಮಗೆ ಶೋಭೆ ತರಲ್ಲ’ ಎಂದರು.

ಆಗ ಖಂಡ್ರೆ, ‘ನನಗೂ ಮಾತನಾಡಲು ಅವಕಾಶ ಕೊಡಿ, ನಾನು ಮಾತನಾಡಬೇಕಿದೆ. ನನಗೂ ಮಾತನಾಡಲು ಹಕ್ಕಿದೆ ಎಂದರು. ಆಗ ಸಿಟ್ಟಿಗೆದ್ದ ಸ್ಪೀಕರ್, ‘ಪದೇ ಪದೇ ನೀವು ಎದ್ದು ನಿಲ್ಲುವುದು ಶೋಭೆಯಲ್ಲ. ಗೌರವಿಸುವುದನ್ನು ಕಲಿತುಕೊಳ್ಳಿ. ಪಕ್ಷದಲ್ಲಿ ನೀವು ಕಾರ್ಯಾಧ್ಯಕ್ಷರಾಗಿದ್ದೀರಿ. ನಿಮ್ಮ ಈ ನಡವಳಿಕೆ ಗೌರವ ತರುವುದಿಲ್ಲ. ನಿಮ್ಮನ್ನು ಹೊರಗೆ ಹಾಕಬೇಕಾದೀತು, ಹೊರಗೆ ಹಾಕೋಣವೇ?’ ಎಂದರು. ಇದರಿಂದ ಸ್ಪೀಕರ್ ಹಾಗೂ ಖಂಡ್ರೆ ನಡುವೆ ಮಾತಿನ ಚಕಮಕಿ ನಡೆಯಿತು.

ಒಂದು ಹಂತದಲ್ಲಿ ಸಿಟ್ಟಿಗೆದ್ದ ಸ್ಪೀಕರ್ ಕಾಗೇರಿ, ‘ನಿಮ್ಮಂತಹವರು ಈ ಸದನಕ್ಕೆ ಆಯ್ಕೆಯಾಗಿ ಬರುವುದು ಸರಿಯಲ್ಲ. ನಿಮಗೆ ಸೌಜನ್ಯವೂ ಇಲ್ಲ. ನಿಮ್ಮಂತವಹವರನ್ನು ಆಯ್ಕೆ ಮಾಡಿ ಕಳುಹಿಸುತ್ತಾರಲ್ಲ ನಾವು ಏನು ಹೇಳಬೇಕು? ಎಂದು ತಿವಿದರು. ಇದರಿಂದ ಕೆರಳಿದ ಕಾಂಗ್ರೆಸ್ ಸದಸ್ಯ ಪ್ರಿಯಾಂಕ ಖರ್ಗೆ, ಕೃಷ್ಣಭೈರೇಗೌಡ, ಸಂಗಮೇಶ್, ಸ್ಪೀಕರ್ ಹೀಗೆ ಹೇಳುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.

‘ಇದೇನು ಸರ್ವಾಧಿಕಾರವೇ, ಸದಸ್ಯರಿಗೆ ಮಾತನಾಡುವ ಹಕ್ಕಿಲ್ಲವೇ? ನೀವು ಮಾತನಾಡಿದ ರೀತಿ ಸರಿಯಿಲ್ಲ. ಖಂಡ್ರೆಯವರನ್ನು ಆಯ್ಕೆ ಮಾಡಿದ ಜನಕ್ಕೆ ಅಪಮಾನ ಮಾಡುವಂತೆ ನಿಮ್ಮ ಮಾತಿದೆ’ ಎಂದು ಕಾಂಗ್ರೆಸ್ ಸದಸ್ಯರು, ಸ್ಪೀಕರ್ ವಿರುದ್ಧ ಏರಿದ ಧ್ವನಿಯಲ್ಲಿ ಹೇಳಿದ್ದು ಸದನದಲ್ಲಿ ಗದ್ದಲಕ್ಕೆ ಕಾರಣವಾಯಿತು. ಈಶ್ವರ್ ಖಂಡ್ರೆ ಸೇರಿದಂತೆ ಇನ್ನಿತರ ಸದಸ್ಯರು ಸ್ಪೀಕರ್ ಪೀಠದ ಮುಂದಿನ ಬಾವಿಗಿಳಿದು ಧರಣಿ ಆರಂಭಿಸಿದರು. ಗದ್ದಲ ಹೆಚ್ಚಾದ ಹಿನ್ನೆಲೆಯಲ್ಲಿ ಸ್ಪೀಕರ್ ಕೆಲಕಾಲ ಸದನವನ್ನು ಮುಂದೂಡಿದರು

ಸ್ಪೀಕರ್ ಸಂದಾನದ ಬಳಿಕ ಸದನ ಸಮಾವೇಶಗೊಂಡಾಗ ಸ್ಪೀಕರ್, ‘ಖಂಡ್ರೆಯವರ ಬಗ್ಗೆ ಹಾಗೂ ಅವರನ್ನು ಆಯ್ಕೆ ಮಾಡಿದ ಜನರ ಬಗ್ಗೆ ತಮಗೆ ಗೌರವವಿದೆ. ಉದ್ವಿಗ್ನ ಸಂದರ್ಭದಲ್ಲಿ ಕೆಲ ಮಾತುಗಳನ್ನಾಡಿದ್ದೇನೆ. ಕಾಂಗ್ರೆಸ್ ಸದಸ್ಯರು ತಮ್ಮ ಧರಣಿ ಕೈಬಿಟ್ಟು ತಮ್ಮ ಆಸನಗಳಿಗೆ ತೆರಳಬೇಕು’ ಎಂದು ಮನವಿ ಮಾಡಿದರು.

ಆಗ ಕಾಂಗ್ರೆಸ್ ಸದಸ್ಯರು ತಮ್ಮ ಧರಣಿಯನ್ನು ಕೈ ಬಿಟ್ಟರು. ನಂತರ ಮಾತನಾಡಿದ ಈಶ್ವರ ಖಂಡ್ರೆ, ಸ್ಪೀಕರ್ ಪೀಠದ ಬಗ್ಗೆ ನನಗೆ ಗೌರವವಿದೆ. ನನ್ನನ್ನು ಆಯ್ಕೆ ಮಾಡಿದ್ದೇ ತಪ್ಪು ಎನ್ನುವ ರೀತಿಯಲ್ಲಿ ಮಾತನಾಡಿದ್ದು ನೋವು ತರಿಸಿತು. ವೈಯುಕ್ತಿಕವಾಗಿ ನನಗೆ ನಿಮ್ಮ ಬಗ್ಗೆ ಏನೂ ಇಲ್ಲ ಎಂದು ಹೇಳಿ ವಿವಾದಕ್ಕೆ ತೆರೆ ಎಳೆದರು.

Full View

Similar News