ಸಕಲೇಶಪುರ | ಕಾಡ್ಗಿಚ್ಚು ನಂದಿಸಲು ಹೋಗಿದ್ದ ನಾಲ್ವರು ಅರಣ್ಯ ಸಿಬ್ಬಂದಿಗೆ ತಗುಲಿದ ಬೆಂಕಿ; ಇಬ್ಬರಿಗೆ ಗಂಭೀರ ಗಾಯ

Update: 2023-02-16 14:57 GMT

ಸಕಲೇಶಪುರ : ಕಾಡ್ಗಿಚ್ಚನ್ನು ನಂದಿಸಲು ಹೋದ 4 ಮಂದಿ ಅರಣ್ಯ ಇಲಾಖೆ ಸಿಬ್ಬಂದಿ ಬೆಂಕಿ ತಗುಲಿ ಗಾಯಗೊಂಡಿರುವ ಘಟನೆ ಕಾಡುಮನೆ ಎಸ್ಟೇಟ್‌ ಬಳಿ ಗುರುವಾರ ವರದಿಯಾಗಿದೆ. 

ಡಿಆರ್‌ಎಫ್‌ಒ ಮಂಜುನಾಥ್‌, ಫಾರೆಸ್ಟರ್‌ ಸುಂದರೇಶ್‌ ಗೆ ಗಂಭೀರ ಗಾಯಗಳಾಗಿದ್ದು, ಮತ್ತಿಬ್ಬರು ಸಣ್ಣಪುಟ್ಟ ಗಾಯಗೊಂಡಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ. 

ತಾಲೂಕಿನ ಕಾಡುಮನೆ ಸಮೀಪ ಮಣಿಬೀಡು ದೇವಸ್ಥಾನದ ಸಮೀಪವಿರುವ ಪಶ್ಚಿಮ ಘಟ್ಟದ ಕಾಡಿನಲ್ಲಿ ಅಕಸ್ಮಿಕವಾಗಿ ಹೊತ್ತಿಕೊಂಡ ಬೆಂಕಿಯನ್ನು ನಂದಿಸಲು ಹೋಗಿದ್ದ ವೇಳೆ ಘಟನೆ ನಡೆದಿದೆ. ಕಾಡ್ಗಿಚ್ಚಿನಿಂದ ಗ್ರಾಮಸ್ಥರು ಹಾಗೂ ಇತರ ಅರಣ್ಯ ಇಲಾಖೆ ಸಿಬ್ಬಂದಿಗಳ ನೆರವಿನಿಂದ ಸುಮಾರು 12 ಕಿ.ಮೀ ದೂರ ಗಾಯಾಳುಗಳನ್ನು ಎತ್ತಿಕೊಂಡು ಬಂದು ನಂತರ ಆ್ಯಂಬುಲೆನ್ಸ್ ಮುಖಾಂತರ ಪಟ್ಟಣದ ಕ್ರಾಫರ್ಡ್ ಅಸ್ಪತ್ರೆಗೆ ಚಿಕಿತ್ಸೆಗಾಗಿ ಕರೆತಂದು ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ಈ ಸಂಬಂಧ ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Similar News