ಮೈಸೂರು-ಬೆಂಗಳೂರು ಎಕ್ಸ್ ಪ್ರೆಸ್ ಹೈವೆ | ಸರ್ವೀಸ್ ರಸ್ತೆ ನಿರ್ಮಾಣ ಮಾಡದೇ ಟೋಲ್ ಸಂಗ್ರಹ ಬೇಡ: ಡಿ.ಕೆ.ಶಿವಕುಮಾರ್
ಮೈಸೂರು: ಮೈಸೂರು-ಬೆಂಗಳೂರು ಎಕ್ಸ್ ಪ್ರೆಸ್ ಹೈವೆ ಪಕ್ಕದಲ್ಲಿ ಸರ್ವೀಸ್ ರಸ್ತೆ ಮಾಡದೇ ಟೋಲ್ ಸಂಗ್ರಹ ಮಾಡಲು ಹೊರಟರೆ ಕಾಂಗ್ರೆಸ್ ಪಕ್ಷದ ವತಿಯಿಂದ ದೊಡ್ಡ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಮೈಸೂರು-ಬೆಂಗಳೂರು ರಸ್ತೆಯನ್ನು ಚತುಷ್ಪಥ ರಸ್ತೆಯನ್ನಾಗಿ ಮಾಡಲಾಗಿತ್ತು. ನಂತರ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದ ಮೇಲೆ ಎಚ್.ಸಿ.ಮಹದೇವಪ್ಪ ಲೋಕೋಪಯೋಗಿ ಸಚಿವರಾಗಿದ್ದಾಗ ಕೇಂದ್ರ ಸರ್ಕಾರದಲ್ಲಿ ಮಂತ್ರಿಯಾಗಿದ್ದ ಆಸ್ಕರ್ ಫರ್ನಾಂಡಿಸ್ ಅವರು ಹತ್ತು ಪಥದ ರಸ್ತೆಗೆ ಅನುಮೋದನೆ ನೀಡಿದ್ದರು. ಆದರೆ ಬಿಜೆಪಿ ಸರ್ಕಾರ ನಾವು ಬಂದ ಮೇಲೆ ಮಾಡಿದ್ದು ಎಂದು ಹೇಳುತ್ತಿದ್ದಾರೆ. ಬಹಳ ಸಂತೋಷ. ಆದರೆ ಜನರಿಗೆ ಸರ್ವೀಸ್ ರಸ್ತೆ ಮಾಡದೆ ಟೋಲ್ ಸಂಗ್ರಹ ಮಾಡಿದರೆ ಸುಮ್ಮನಾಗುವುದಿಲ್ಲ. ಇವರು ನಿಗದಿ ಮಾಡುವ 250 ರೂ. ಹಣ ನೀಡಿ ಜನ ಓಡಾಡಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಎಕ್ಸ್ ಪ್ರೆಸ್ ಹೈವೆ ನಿರ್ಮಾಣ ಮಾಡಿದ ಮೇಲೆ ಸರ್ವೀಸ್ ರಸ್ತೆಯನ್ನು ಮಾಡಬೇಕು. ದುಡ್ಡು ಇರುವವರು ಟೋಲ್ ಕೊಟ್ಟು ಓಡಾಡುತ್ತಾರೆ. ದುಡ್ಡು ಕೊಡಲು ಆಗದಿದ್ದವರು ಸರ್ವೀಸ್ ರಸ್ತೆಯಲ್ಲಿ ಓಡಾಡುತ್ತಾರೆ. ಬಹಳ ಬುದ್ಧಿವಂತನಂತೆ ಮಾತನಾಡುವ ಸಂಸದ ಪ್ರತಾಪ್ ಸಿಂಹ ಅವರಿಗೆ ಇದು ಅರ್ಥವಾಗುವುದಿಲ್ಲವೇ? ಸಂಸದರಾದ ವಿ.ಶ್ರೀನಿವಾಸ ಪ್ರಸಾದ್ ಅವರು ಯಾಕೆ ಮಾತನಾಡುತ್ತಿಲ್ಲ ಎಂದು ಕುಟುಕಿದರು.
ಈ ಭಾಗದ ಬಡವರು, ಮಧ್ಯಮ ವರ್ಗದವರು ರೈತರು ಇವರು ನಿಗದಿ ಪಡಿಸಿದ ಟೋಲ್ ಹಣ ನೀಡಿ ಹೋಗಲು ಸಾಧ್ಯವೆ? ರೈತರ ಎತ್ತಿನಗಾಡಿ ಎಲ್ಲಿ ಹೋಗಬೇಕು. ಮೊದಲು ಸರ್ವೀಸ್ ರಸ್ತೆ ಮಾಡಿ ನಂತರ ಯಾರನ್ನಾದರೂ ಕರೆದು ಉದ್ಘಾಟನೆ ಮಾಡಿಸಿ ರಸ್ತೆಯಲ್ಲೆಲ್ಲಾ ಉರುಳಾಡಲಿ ಎಂದು ಲೇವಡಿ ಮಾಡಿದರು.
ನಟ ಸುದೀಪ್ ನನ್ನ ಒಳ್ಳೆ ಸ್ನೇಹಿತರು, ಅವರಿಗೆ ಕಳೆದ ನನ್ನ 35 ವರ್ಷದ ರಾಜಕೀಯ ಅನುಭವದ ಬಗ್ಗೆ ತಿಳಿಸಿದ್ದೇನೆ. ಅವರು ತಮ್ಮದೇ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಅವರನ್ನು ಬಲವಂತವಾಗಿ ಕಾಂಗ್ರೆಸ್ ಪಕ್ಷಕ್ಕೆ ಬನ್ನಿ ಎಂದು ಹೇಳುವುದಿಲ್ಲ. ಇವತ್ತಿನ ರಾಜಕಾರಣದ ಬಗ್ಗೆ ತಿಳಿಸಿದ್ದೇನೆ ಎಂದು ಹೇಳಿದರು.
'ಮಾನ್ಯ ಪ್ರಾಧಾನ ಮಂತ್ರಿ ನರೇಂದ್ರ ಮೋದಿ ಅವರು ಮೈಸೂರನ್ನು ಪ್ಯಾರಿಸ್ ಮಾಡುತ್ತೇವೆ ಎಂದು ಹೇಳಿದ್ದರು. ನಿಮಗೆ ಕೈಮುಗಿದು ಕೇಳುತ್ತೇನೆ ಪ್ಯಾರಿಸ್ ಮಾಡೋದು ಬೇಡ ಪ್ಯಾರಿಸ್ ನಲ್ಲಿರುವ ಒಂದು ರಸ್ತೆ ರೀತಿ ಮಾಡಿ' ಎಂದು ಇದೇ ವೇಳೆ ಹೇಳಿದರು.