ಶಾಲಾ ನೋಂದಣಿಗೆ ಮೇಲ್ಮನವಿ ಸಲ್ಲಿಸಲು ಶಿಕ್ಷಣ ಇಲಾಖೆ ಸೂಚನೆ
Update: 2023-02-16 21:18 IST
ಬೆಂಗಳೂರು, ಫೆ.16: ಖಾಸಗಿ ಅನುದಾನರಹಿತ ಶಾಲೆಗಳ ನೋಂದಣಿಗೆ ಸಂಬಂಧಿಸಿ, ಮೇಲ್ಮನವಿ ಪ್ರಾಧಿಕಾರವನ್ನು ಶಿಕ್ಷಣ ಇಲಾಖೆಯು ನಿಯೋಜಿಸಿದೆ. ನೋಂದಣಿಗೆ ಅರ್ಜಿ ಸಲ್ಲಿಸಿ ತಿರಸ್ಕೃತಗೊಂಡ ಶಾಲಾ ಆಡಳಿತ ಮಂಡಳಿಗಳು ಮೇಲ್ಮನವಿಗಳನ್ನು ಪ್ರಾಧಿಕಾರಕ್ಕೆ ಸಲ್ಲಿಕೆ ಮಾಡಬಹುದು ಎಂದು ತಿಳಿಸಿದೆ.
2022-23ನೆ ಸಾಲಿನಿಂದ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಹೊಸ ಶಾಲಾ ನೋಂದಣಿ ಹಾಗೂ ಶಾಲಾ ಉನ್ನತೀಕರಣ ನೋಂದಣಿಯ ಅಧಿಕಾರವನ್ನು ನೀಡಲಾಗಿದೆ. ಶಾಲಾ ಆಡಳಿತ ಮಂಡಳಿಗಳು ಸಲ್ಲಿಸಿದ್ದ ಅರ್ಜಿಯನ್ನು ಉಪನಿರ್ದೇಶಕರು ತಿರಸ್ಕರಿಸಿದ್ದರೆ, ಮೇಲ್ಮನವಿಯನ್ನು ಸಲ್ಲಿಸಬಹುದು ಎಂದು ತಿಳಿಸಿದೆ.
ಬೆಂಗಳೂರು ಮತ್ತು ಮೈಸೂರು ವಿಭಾಗಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು, ಕಲಬುರಗಿ ವಿಭಾಗಕ್ಕೆ ಕಲಬುರಗಿಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತರು ಮತ್ತು ಧಾರವಾಡ ವಿಭಾಗಕ್ಕೆ ದಾರವಾಡದ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತರು ಮೇಲ್ಮನವಿ ಪ್ರಾಧಿಕಾರಿಯಾಗಿರುತ್ತಾರೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.