ಈಶ್ವರ ಖಂಡ್ರೆಗೆ ಅಗೌರವ ತೋರಿದ ಕಾಗೇರಿ ಸಭಾಧ್ಯಕ್ಷ ಸ್ಥಾನ ತ್ಯಜಿಸಬೇಕು: ಅಖಿಲ ಭಾರತ ವೀರಶೈವ ಮಹಾಸಭಾ ಕಿಡಿ

Update: 2023-02-16 16:55 GMT

ಬೆಂಗಳೂರು:  ಮಾಜಿ ಸಚಿವ ಈಶ್ವರ ಖಂಡ್ರೆಯವರನ್ನು ಉದ್ದೇಶಿಸಿ ಲಘುವಾಗಿ ಮಾತನಾಡಿರುವ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸಭಾಪತಿ ಸ್ಥಾನದಲ್ಲಿ ಕುಳಿತುಕೊಂಡು ಒಂದು ಪಕ್ಷದ ವಕ್ತಾರರಂತೆ ವರ್ತನೆ ತೋರಿದ್ದಾರೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಆರೋಪಿಸಿದೆ. 

ಈ ಕುರಿತು ಪ್ರಕಟನೆ ಹೊರಡಿಸಿರುವ ಅಖಿಲ ಭಾರತ ವೀರಶೈವ ಮಹಾಸಭೆ, ತಕ್ಷಣವೇ ಸಭಾಧ್ಯಕ್ಷ ಸ್ಥಾನಕ್ಕೆ ಗೌರವಕೊಟ್ಟು ಆ ಸ್ಥಾನವನ್ನು ತ್ಯಜಿಸಬೇಕು. ಇಲ್ಲದೇ ಇದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟವನ್ನು ರೂಪಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ. 

'ವಿಧಾನಸಭೆಯ ಸಭಾಧ್ಯಕ್ಷರಾದ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಸಭಾಧ್ಯಕ್ಷರ ಸ್ಥಾನಕ್ಕೆ ತಕ್ಕಂತೆ ನಡೆದುಕೊಳ್ಳದೇ ಒಂದು ಪಕ್ಷದ ವಕ್ತಾರರಂತೆ ವರ್ತಿಸಿರುವುದು ಅಕ್ಷಮ್ಯ ಅಪರಾಧ. ಸಭಾಧ್ಯಕ್ಷ ಸ್ಥಾನದ ಘನತೆ- ಗೌರವಗಳಿಗೆ ಧಕ್ಕೆ ತಂದಿರುವ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿಯವರು ತಕ್ಷಣವೇ ಸಭಾಧ್ಯಕ್ಷ ಸ್ಥಾನಕ್ಕೆ ಗೌರವಕೊಟ್ಟು ಆ ಸ್ಥಾನವನ್ನು ತ್ಯಜಿಸಬೇಕಾಗಿ ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭೆಯು ಒತ್ತಾಯಿಸುತ್ತದೆ' ಎಂದು ಹೇಳಿದೆ.

'ಸಜ್ಜನ ಮನೆತನದಿಂದ ಬಂದ ರಾಜಕಾರಣಿ, ರಾಜಕೀಯ ಹಿನ್ನೆಲೆಯುಳ್ಳ ಉತ್ತಮ ಭಾಲ್ಕಿಯ ಜನಪ್ರಿಯ ಶಾಸಕರು, ಮಾಜಿ ಸಚಿವರೂ ಆದ ಶ್ರೀ ಈಶ್ವರ ಬಿ. ಖಂಡ್ರೆಯವರನ್ನು ಉದ್ದೇಶಿಸಿ ಲಘುವಾಗಿ ಮಾತನಾಡಿರುವುದು ಸರಿಯಲ್ಲ. ವಿನಃ ಕಾರಣ ಯಾವುದೋ ದುರುದ್ದೇಶವನ್ನಿಟ್ಟುಕೊಂಡು ಸಭಾಧ್ಯಕ್ಷರು ವರ್ತಿಸಿರುವುದನ್ನು ಯಾರೂ ಸಹ ಸಹಿಸಿಕೊಳ್ಳಲು ಸಾಧ್ಯವಿಲ್ಲ. ವಿಧಾನಸಭಾ ಚುನಾವಣೆ ಹತ್ತಿರ ಈ ಸಂದರ್ಭದಲ್ಲಿ ಈ ರೀತಿ ಒಬ್ಬ ಜನನಾಯಕರಿಗೆ ಅವಮಾನ ಮಾಡಿರುವುದನ್ನು ಪ್ರಜ್ಞಾವಂತ ಸಮಾಜವು ಸಹಿಸಿಕೊಳ್ಳಲು ಸಾಧ್ಯವೇ ಇಲ್ಲ' ಎಂದು ತಿಳಿಸಿದೆ. 

ಇದನ್ನೂ ಓದಿ: ವಿಧಾನಸಭೆ ಚುನಾವಣೆ | 5 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಘೋಷಿಸಿದ ಜನಾರ್ದನ ರೆಡ್ಡಿ

'ಸಭಾಧ್ಯಕ್ಷರ ಸ್ಥಾನದ ಗೌರವ ಉಳಿಯಬೇಕಾದರೆ, ಭಾರತ ಸಂವಿಧಾನ ಮತ್ತು ಅದರ ಆಶಯಗಳಿಗೆ ಬದ್ಧರಾಗಿ ನಡೆದುಕೊಳ್ಳುವ ರಾಜಕಾರಣಿಯಾಗಿದ್ದರೆ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಕೂಡಲೇ ಸಭಾಧ್ಯಕ್ಷ ಸ್ಥಾನವನ್ನು ತ್ಯಜಿಸಬೇಕು. ತ್ಯಜಿಸದೇ ಆ ಸ್ಥಾನಕ್ಕೆ ಅಂಟಿಕೊಂಡರೆ ಅವರೂ ಸಹ ಒಬ್ಬ ತತ್ವ ನಿಷ್ಠೆ, ಬದ್ಧತೆ ಇಲ್ಲದ ರಾಜಕಾರಣಿಯೆಂದು ಭಾವಿಸಬೇಕಾಗುತ್ತದೆ. ಇಂತಹ ವರ್ತನೆಯನ್ನು ಸರಿಪಡಿಸಿಕೊಳ್ಳದಿದ್ದರೆ ಮಹಾಸಭೆಯಿಂದ ರಾಜ್ಯಾದ್ಯಂತ ಉಗ್ರ ಹೋರಾಟವನ್ನು ರೂಪಿಸಬೇಕಾಗುತ್ತದೆ' ಎಂದು ಪ್ರಕಟನೆಯಲ್ಲಿ ತಿಳಿಸಿದೆ. 

Full View

Similar News