×
Ad

ರಾಜ್ಯ ಬಜೆಟ್ 2023-24 | ಪ್ರತಿ ಗ್ರಾಮ ಪಂಚಾಯತ್ ಸಶಕ್ತಿಗೆ 780 ಕೋಟಿ ರೂ. ಅನುದಾನ

Update: 2023-02-17 14:04 IST

ಬೆಂಗಳೂರು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡಿಸಿದ ಬಜೆಟ್ ನಲ್ಲಿ ರಾಜ್ಯದ ಆರ್ಥಿಕ ಉತ್ತೇಜನೆ ಮಾಡಲು ಸರ್ಕಾರ 61,234 ಕೋಟಿ ರೂ. ನೆರವು ನೀಡಿದೆ, ಈ ಪ್ರಕಾರ 2023-24 ನೇ ಸಾಲಿನಲ್ಲಿ ಪ್ರತಿ ಗ್ರಾಮ ಪಂಚಾಯಿತಿಗೆ ₹22 ರಿಂದ 60 ಲಕ್ಷ  ಗಳಷ್ಟು ಅನುದಾನ ಲಭ್ಯಪಡಿಸಲು 780 ಕೋಟಿ ರೂ. ಒಂದು ಬಾರಿಯ ವಿಶೇಷ ಅನುದಾನ ಘೋಷಿಸಿದ್ದಾರೆ.

ವಿಕೇಂದ್ರೀಕೃತ ಆಡಳಿತ ವ್ಯವಸ್ಥೆಯನ್ನು ಸಶಕ್ತಗೊಳಿಸಲು ಮತ್ತು ಜನರಿಗೆ ಗ್ರಾಮ ಪಂಚಾಯಿತಿಗಳ ಮುಖಾಂತರ ಸ್ಥಳೀಯವಾಗಿಯೇ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ಅವಕಾಶ ಮಾಡಲಾಗುವುದು. ಪ್ರಸ್ತುತ ಗ್ರಾಮ ಪಂಚಾಯಿತಿಗಳಿಗೆ, ಜನಸಂಖ್ಯೆ ಆಧರಿಸಿ 12 ಲಕ್ಷ ರೂ. ಗಳಿಂದ 35 ಲಕ್ಷ ರೂ. ಗಳವರೆಗೆ ರಾಜ್ಯ ಸರ್ಕಾರದಿಂದ ಅನುದಾನ ನೀಡಲಾಗುತ್ತಿದೆ. 2023-24ನೇ ಸಾಲಿನಲ್ಲಿ ಪ್ರತಿ ಗ್ರಾಮ ಪಂಚಾಯತಿಗೆ 22 ರಿಂದ 60 ಲಕ್ಷ ರೂ. ಗಳಷ್ಟು ಅನುದಾನ ಲಭ್ಯಪಡಿಸಲು 780 ಕೋಟಿ ರೂ. ಗಳ ಒಂದು ಬಾರಿಯ ವಿಶೇಷ ಅನುದಾನ ಒದಗಿಸಲಾಗುವುದು, ಎಂದು ಮುಖ್ಯಮಂತ್ರಿ ಬೊಮ್ಮಾಯಿ ಘೋಷಣೆ ಮಾಡಿದರು.

ಇನ್ಯಾವ ಘೋಷಣೆಗಳಿವೆ? :

ಗ್ರಾಮೀಣ ರಸ್ತೆಗಳ - ಸುಧಾರಣೆಗಾಗಿ ಸರ್ಕಾರವು ಹೆಚ್ಚಿನ ಮಹತ್ವವನ್ನು ನೀಡಿದೆ. ಪ್ರಸಕ್ತ ಸಾಲಿನಲ್ಲಿ 2,070 ಕೋಟಿ ರೂ. ಗಳ ವೆಚ್ಚದಲ್ಲಿ 4,504 ಕಿ.ಮೀ. ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗಿದೆ.

ಗ್ರಾಮೀಣ ಭಾಗದ ರಸ್ತೆಗಳ ಮತ್ತು ಕೃಷಿ ಭೂಮಿಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳ ಅಭಿವೃದ್ಧಿಗಾಗಿ, ನರೇಗಾ ಜೊತೆಗೆ ಸಂಯೋಜಿಸಿ ಪ್ರತಿ ವಿಧಾನ ಸಭಾ ಕ್ಷೇತ್ರಕ್ಕೆ 25 ಕಿ.ಮೀ. ನಂತೆ ಒಟ್ಟಾರೆಯಾಗಿ 5,000 ಕಿ.ಮೀ. ರಸ್ತೆಯನ್ನು ಅಭಿವೃದ್ಧಿಪಡಿಸಲು 300 ಕೋಟಿ ರೂ. ವೆಚ್ಚ ಮಾಡಲಾಗುವುದು.

ರಾಜ್ಯದ 20 ಸಾವಿರ ಗ್ರಾಮಗಳಲ್ಲಿ ತ್ಯಾಜ್ಯ ನೀರನ್ನು ವೈಜ್ಞಾನಿಕವಾಗಿ ನಿರ್ವಹಿಸುವ ಕಾಮಗಾರಿಗಳು ಜಾರಿಯಲ್ಲಿವೆ. ಗ್ರಾಮೀಣ ಪ್ರದೇಶಗಳ ಸ್ವಚ್ಛತೆಯನ್ನು ಕಾಪಾಡಲು ಅಗತ್ಯ ಚರಂಡಿ ವ್ಯವಸ್ಥೆಯನ್ನು ನರೇಗಾ ಹಾಗೂ ಸ್ವಚ್ಛ ಭಾರತ್ ಯೋಜನೆಗಳಡಿಯಲ್ಲಿ 4,190 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುವುದು.

ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳ ದಾಖಲಾತಿಯಿರುವ ಸರ್ಕಾರಿ ಶಾಲೆಗಳಲ್ಲಿ ಊಟ ಮಾಡಲು ಹಾಗೂ ಇತರೆ ಕಾರ್ಯಕ್ರಮಗಳಿಗೆ ಅನುವಾಗುವಂತೆ ನರೇಗಾ ಯೋಜನೆಯಡಿಯಲ್ಲಿ ಪ್ರತಿ ಜಿಲ್ಲೆಯಲ್ಲಿ 18 ಲಕ್ಷ ರೂ. ಗಳ ಘಟಕ ವೆಚ್ಚದಲ್ಲಿ ಆಹಾರ ಮಂದಿರಗಳನ್ನು ನಿರ್ಮಿಸಲಾಗುವುದು.

Similar News