ದೂರದೃಷ್ಟಿ ಇಲ್ಲದ, ಕೃಷಿಕರ ಪರ ಇರದ ಗುಮಾಸ್ತ ತಯಾರಿಸಿದ ಲೆಕ್ಕಾಚಾರದ ಬಜೆಟ್: ಬಡಗಲಪುರ ನಾಗೇಂದ್ರ

Update: 2023-02-17 11:46 GMT

ಬೆಂಗಳೂರು: 2023-2024 ನೇ ಸಾಲಿನ ರಾಜ್ಯದ ಬಜೆಟ್ ಆಭಿವೃದ್ಧಿಯ ದೂರದೃಷ್ಟಿ ಇಲ್ಲದ, ಕೃಷಿಕರ ಪರ ಇಲ್ಲದ ಬಜೆಟ್ ಆಗಿದ್ದು, ಇದೊಂದು ಗುಮಾಸ್ತ ತಯಾರಿಸಿದ ಲೆಕ್ಕಪತ್ರ ಮಂಡನೆಯಾಗಿದೆ ಹೊರತು ಇದರಲ್ಲಿ ತಿರುಳಿಲ್ಲ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಟೀಕಿಸಿದ್ದಾರೆ. 

ಈ ಸಂಬಂಧ ಪತ್ರಿಕಾ ಪ್ರಕಟನೆ ಹೊರಡಿಸಿರುವ ಅವರು,  'ರೈತರ ಆದಾಯವನ್ನು ಹೆಚ್ಚಿಸುವ ಯಾವುದೇ ಕಾರ್ಯಕ್ರಮ ಇಲ್ಲ, ಕೃಷಿ ಉತ್ಪನ್ನಗಳ ಖರೀದಿಸಿ ಆವರ್ತನಿಧಿ ಮೀಸಲಿಟ್ಟಿಲ್ಲ, ಶೂನ್ಯ ಬಡ್ಡಿ ದರದ ಸಾಲವನ್ನು ಐದು ಲಕ್ಷಕ್ಕೆ ಹೆಚ್ಚಿಸಿರುವುದು ಸ್ವಾಗತಾರ್ಹ, ಆದರೆ ಬೆಳೆಸಾಲದ "ಸ್ಟೇಲ್ ಆಫ್ ಫೈನಾನ್ಸ್" ಹೆಚ್ಚಿಸದೆ ಇದ್ದರೆ ಶೇಕಡ 87 ಭಾಗ ಇರುವ ಸಣ್ಣ ಹಿಡುವಳಿದಾರ ರೈತರಿಗೆ ಏನೂ ಪ್ರಯೋಜನ ವಾಗುವುದಿಲ್ಲ' ಎಂದು ಹೇಳಿದ್ದಾರೆ. 

'ಶೇಕಡ 63 ಭಾಗ ಅವಲಂಬಿವಿಸಿರುವ ಕೃಷಿಕ್ಷೇತ್ರಕ್ಕೆ ಮೀಸಲಿಟ್ಟಿರುವ ಹಣ ಕೇವಲ ಶೇ. 11, ನೀರಾವರಿಗೆ ಶೇ.6.5 ಇಟ್ಟು, ಸಂಪೂರ್ಣ ಕೃಷಿಕ್ಷೇತ್ರವನ್ನು ಕಡೆಗಣಿಸಿದೆ. ರೈತರು ಸಾಲದ ಹೊರೆಯಿಂದ ವಿಮುಕ್ತವಾಗಲು ಈ ಬಜೆಟ್ ನಲ್ಲಿ ಯಾವುದೇ ಪ್ರಸ್ತಾಪ ಇಲ್ಲ' ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ. 

Similar News