×
Ad

ಮಡಿಕೇರಿ: ನಂದಿಮೊಟ್ಟೆ- ದೇವಸ್ತೂರು ರಸ್ತೆ ದುರಸ್ತಿಗೆ ಒತ್ತಾಯಿಸಿ ಗ್ರಾಮಸ್ಥರಿಂದ ರಸ್ತೆ ತಡೆದು ಪ್ರತಿಭಟನೆ

ರಸ್ತೆ ದುರಸ್ತಿ ಕಾರ್ಯ ಆರಂಭಿಸದಿದ್ದಲ್ಲಿ ಚುನಾವಣೆ ಬಹಿಷ್ಕಾರದ ಎಚ್ಚರಿಕೆ

Update: 2023-02-17 16:42 IST

ಮಡಿಕೇರಿ; ಹೆಬ್ಬೆಟ್ಟಗೇರಿ-ದೇವಸ್ತೂರು ಗ್ರಾಮಗಳಿಗೆ ತೆರಳುವ ರಸ್ತೆ ದುರಸ್ತಿಗೆ ಒತ್ತಾಯಿಸಿ ಗ್ರಾಮಸ್ಥರು ರಸ್ತೆ ತಡೆ ಪ್ರತಿಭಟನೆ ನಡೆಸಿದರು.

ನಂದಿಮೊಟ್ಟೆ ಜಂಕ್ಷನ್ ಬಳಿ ಜಮಾಯಿಸಿದ ಪ್ರತಿಭಟನಾಕಾರರು, ಜಿಲ್ಲಾಡಳಿತ, ಜನಪ್ರತಿನಿಧಿ ಹಾಗೂ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. 

ಈ ಸಂದರ್ಭ ಮಾತನಾಡಿದ ಹೆಬ್ಬೆಟ್ಟಗೇರಿ ಗ್ರಾಮಸ್ಥರಾದ ರಮೇಶ್, ನಂದಿಮೊಟ್ಟೆ ಜಂಕ್ಷನ್‍ನಿಂದ ಹೆಬ್ಬೆಟ್ಟಗೇರಿ ಹಾಗೂ ದೇವಸ್ತೂರು ಗ್ರಾಮಗಳಿಗೆ ತೆರಳುವ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಈ ಗ್ರಾಮಗಳಲ್ಲಿ ಶಾಲೆ ಮುಚ್ಚಲ್ಪಟ್ಟಿರುವುದರಿಂದ ಹಾಗೂ ಸರಿಯಾದ ಸಮಯಕ್ಕೆ ಬಸ್ ವ್ಯವಸ್ಥೆ ಕೂಡ ಇಲ್ಲದಿರುವುದರಿಂದ ಬಹುತೇಕ ಮಂದಿ ಖಾಸಗಿ ವಾಹನಗಳಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿದ್ದಾರೆ. ಆದರೆ, ರಸ್ತೆ ಹದಗಟ್ಟಿರುವುದರಿಂದ ಆಟೋ ಹಾಗೂ ಖಾಸಗಿ ವಾಹನಗಳು ಈ ರಸ್ತೆಯಲ್ಲಿ ಬರಲು ಹಿಂದೇಟು ಹಾಕುತ್ತಿದ್ದಾರೆ. ಬರುವ ವಾಹನಗಳಿಗೆ ದುಬಾರಿ ಬಾಡಿಗೆ ನೀಡಬೇಕಾದ ಅನಿವಾರ್ಯತೆ ಇದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. 

ತುರ್ತು ಪರಿಸ್ಥಿತಿಯಲ್ಲಿ ಆಂಬ್ಯುಲೆನ್ಸ್ ಕೂಡ ಈ ರಸ್ತೆಯಲ್ಲಿ ಸಂಚರಿಸಲಾಗದಷ್ಟು ರಸ್ತೆಯಲ್ಲಿ ಗುಂಡಿ ಬಿದ್ದಿದೆ. ಇದೇ ರಸ್ತೆಯ ಮೂಲಕ ಪ್ರವಾಸಿ ತಾಣ ಮಾಂದಲ್‍ಪಟ್ಟಿಗೆ ಸಂಚರಿಸಬೇಕಿದೆ. ಪ್ರವಾಸಿಗರು ಈ ರಸ್ತೆಯಲ್ಲಿ ತೆರಳಲು ನಮ್ಮ ಅಭ್ಯಂತರವಿಲ್ಲ. ಆದರೆ, ಹದಗೆಟ್ಟಿರುವ ರಸ್ತೆಯಲ್ಲಿ ಸಂಚರಿಸುತ್ತಿರುವುದರಿಂದ ಅವರಿಗೂ ಪ್ರಾಣಾಪಾಯ ಸಂಭವಿಸುವ ಭೀತಿ ಇದೆ. ರಸ್ತೆ ದುರಸ್ತಿ ಬಗ್ಗೆ ಸಂಬಂಧಪಟ್ಟವರನ್ನು ವಿಚಾರಿಸಿದಾಗ ಇವತ್ತು ಮಾಡುತ್ತೇವೆ, ನಾಳೆ ಮಾಡುತ್ತೇವೆ ಎನ್ನುತ್ತಾರೆ. ಆದರೆ ಕೆಲ ಮೂಲಗಳ ಪ್ರಕಾರ ಈ ರಸ್ತೆಗೆ ಇನ್ನು ಅನುದಾನವೇ ಮೀಸಲಿಟ್ಟಿಲ್ಲ. ಹೀಗಾಗಿ ರಸ್ತೆ ದುರಸ್ತಿ ಮಾಡುವವರೆಗೆ ಹೋರಾಟ ಅನಿವಾರ್ಯವಾಗಿದೆ ಎಂದರು. 

ಸ್ಥಳಕ್ಕೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಬರಬೇಕೆಂದು ಪ್ರತಿಭಟಕಾಕಾರರು ಪಟ್ಟುಹಿಡಿದರು. ರಸ್ತೆ ತಡೆ ಹಿಡಿದಿದ್ದರಿಂದ ಆರ್‍ಟಿಓ, ಅಬ್ಬಿಫಾಲ್ಸ್, ಮಾಂದಲ್‍ಪಟ್ಟಿ ರಸ್ತೆ ಸಂಚಾರ ಅವ್ಯವಸ್ಥಗೊಂಡಿತ್ತು. ಬಳಿಕ ಸ್ಥಳಕ್ಕೆ ಆಗಮಿಸಿದ ಲೋಕೋಪಯೋಗಿ ಇಲಾಖೆ ಎಇಇ ಯುವರಾಜು, ಈ ರಸ್ತೆ ಹಿಂದೆ ಜಿ.ಪಂ. ವ್ಯಾಪ್ತಿಗೆ ಒಳಪಟ್ಟಿತ್ತು. 2020ರ ಬಳಿಕ  ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೆ ಬಂದಿದ್ದು, ಸುಮಾರು 11 ಲಕ್ಷ ರೂ. ವೆಚ್ಚದಲ್ಲಿ ಶೀಘ್ರದಲ್ಲೇ ರಸ್ತೆಯ ಗುಂಡಿ ಮುಚ್ಚುವ ಕೆಲಸ ಮಾಡಲಾಗುವುದು ಎಂದು ಭರವಸೆ ನೀಡಿದರು.

ಈ ಸಂದರ್ಭ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಗ್ರಾಮಸ್ಥರು, ನೀವು ಗುಂಡಿ ಮುಚ್ಚುವುದು ಬೇಡ. ರಸ್ತೆಯಲ್ಲಿ ಇರುವ ಜಲ್ಲಿ ತೆಗೆದುಕೊಡಿ, ಮಣ್ಣಿನಲ್ಲಿ ಸಮತಟ್ಟು ಮಾಡಿ ನಾವೇ ಸರಿಪಡಿಸಿಕೊಳ್ಳುತ್ತೇವೆ. ಈ ರಸ್ತೆಯನ್ನು ನೋಡಿದರೆ ನಿಮಗೆ ಪ್ಯಾಚ್ ವರ್ಕ್ ಮಾಡುವ ತರ ಇದೇಯೇ? ಇಲ್ಲಿ ಅನಾಹುತ ಸಂಭವಿಸಿದ ಮೇಲೆ ನೀವು ಬರುತ್ತಿರಷ್ಟೇ. ಕೆಲವು ಭಾಗದಲ್ಲಿ ರಸ್ತೆಯೇ ಇಲ್ಲ. 11 ಲಕ್ಷದಲ್ಲಿ ಈ ರಸ್ತೆ ದುರಸ್ತಿ ಸಾಧ್ಯವಿದೆಯೇ ಎಂದು ಆಕ್ರೋಶ ವ್ಯಕ್ತಪಡಿಸಿ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.  

ಕೆ.ನಿಡುಗಣೆ ಗ್ರಾ.ಪಂ. ಅಧ್ಯಕ್ಷ ಡೀನ್ ಬೋಪಣ್ಣ ಮಾತನಾಡಿ, ಗುತ್ತಿಗೆದಾರರ ಬೇಜವಬ್ದಾರಿತನದಿಂದ ಲೋಕೋಪಯೋಗಿ ಇಲಾಖೆಯಲ್ಲಿ ಕೆಲಸಗಳು ಆಗುತ್ತಿಲ್ಲ. ಗಾಳಿಬೀಡು ವ್ಯಾಪ್ತಿಯಲ್ಲೂ ಹೀಗೆಯೇ ಆಗಿದೆ. ಕೆಲಸ ಮಾಡದ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಿ, ಅಂತವರಿಗೆ ಯಾಕೆ ಕೆಲಸ ಕೊಡುತ್ತೀರಾ ಎಂದು ಪ್ರಶ್ನಿಸಿದರು. 

ಪ್ರತಿಭಟನಾಕಾರರ ಆಕ್ರೋಶಕ್ಕೆ ಮಣಿದ ಲೋಕೋಪಯೋಗಿ ಇಲಾಖೆ ಎಇಇ ಯುವರಾಜು, ಸೋಮವಾರದೊಳಗಾಗಿ ರಸ್ತೆ ದುರಸ್ತಿ ಕಾರ್ಯ ಆರಂಭಿಸಲಾಗುತ್ತದೆ. ಹಣ ಕಡಿಮೆಯಾದರೆ ಹೆಚ್ಚುವರಿ ಅನುದಾನ ಬಳಸಿ ರಸ್ತೆ ದುರಸ್ತಿ ಮಾಡಿಕೊಡುವುದಾಗಿ ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ಹಿಂಪಡೆಯಲಾಯಿತು. ಆದರೂ ರಸ್ತೆ ದುರಸ್ತಿಯಾಗದಿದ್ದಲ್ಲಿ ಜೆಸಿಬಿ ಮೂಲಕ ರಸ್ತೆ ಅಗೆದು ಸಂಪೂರ್ಣ ರಸ್ತೆ ತಡೆ ಮಾಡುವ ಜೊತೆಗೆ ಚುನಾವಣೆ ಬಹಿಷ್ಕರಿಸಬೇಕಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದರು. 

ಸ್ಥಳದಲ್ಲಿ ಗ್ರಾಮಾಂತರ ಠಾಣಾ ಪೊಲೀಸರು ಭದ್ರತೆ ಒದಗಿಸಿದ್ದರು.

ಕೆ.ನಿಡುಗಣೆ ಗ್ರಾ.ಪಂ. ಮಾಜಿ ಸದಸ್ಯ ರಘು, ಹೆಬ್ಬೆಟ್ಟಗೇರಿ ಗ್ರಾಮಸ್ಥರಾದ ಗಣೇಶ್, ವಿನೋದ್, ಪಿಲೋಮಿನಾ, ನೇತ್ರಾ, ಪುರುಷೋತ್ತಮ, ದೇವಸ್ತೂರು ಗ್ರಾಮಸ್ಥರಾದ ಕುಕ್ಕೇರ ಲಕ್ಷ್ಮಣ್, ನಯನ್, ಸುಜಿತ್, ಸತೀಶ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Similar News