ರಾಜ್ಯ ಬಜೆಟ್ 2023 | 10 ಸಾವಿರ ಮನೆಗಳ ನಿರ್ಮಾಣ ಸೇರಿ ಮೀನುಗಾರರ ಕಲ್ಯಾಣಕ್ಕೆ ಹಲವು ಯೋಜನೆಗಳ ಘೋಷಣೆ
ಬೆಂಗಳೂರು, ಫೆ.17: ಮೀನುಗಾರರಿಗೆ ನೆರವಾಗಲು 62 ಎಫ್‍ಎಫ್‍ಪಿಒಗಳ ಸ್ಥಾಪನೆ ಹಾಗೂ 12,175 ಮೀನುಗಾರರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ವಿತರಣೆ. ಸಾಂಪ್ರದಾಯಿಕ ಮೀನುಗಾರರ ಜೀವನೋಪಾಯ ಉತ್ತಮಪಡಿಸಲು ಕರಾವಳಿ ಜಿಲ್ಲೆಗಳ ವಿವಿಧ ಸ್ಥಳಗಳಲ್ಲಿ ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಕೃತಕ ಬಂಡೆ ಸಾಲುಗಳ ಸ್ಥಾಪನೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಘೋಷಣೆ ಮಾಡಿದ್ದಾರೆ.
ಶುಕ್ರವಾರ ವಿಧಾನಸಭೆಯಲ್ಲಿ ಆಯವ್ಯಯ ಮಂಡನೆ ಮಾಡಿದ ಅವರು, ‘ಉತ್ತಮ ತಳಿಯ ಬಲಿತ ಬಿತ್ತನೆ ಮೀನು ಮರಿಗಳ ದಾಸ್ತಾನು ಪ್ರೋತ್ಸಾಹಿಸಲು 20 ಕೋಟಿ ರೂ.ಅನುದಾನ. ಉತ್ತರ ಕರ್ನಾಟಕ ಭಾಗದಲ್ಲಿ ಮೀನು ಕೃಷಿ ಉತ್ತೇಜಿಸಲು ಹಾವೇರಿ ಜಿಲ್ಲೆಯಲ್ಲಿ ಹೊಸದಾಗಿ ಮೀನು ಮರಿ ಉತ್ಪಾದನಾ ಮತ್ತು ಪಾಲನಾ ಕೇಂದ್ರ ಸ್ಥಾಪನೆ. ಸಾರ್ವಜನಿಕರಿಗೆ ಗುಣಮಟ್ಟದ ಮೀನು ಉತ್ಪನ್ನಗಳನ್ನು ಪೂರೈಸಲು ಪರಿಸರಸ್ನೇಹಿ ತ್ರಿಚಕ್ರ ಮೀನು ಮಾರಾಟ ವಾಹನಗಳನ್ನು ಕೇಂದ್ರ ಸರಕಾರದ ಸಹಯೋಗದೊಂದಿಗೆ ಒದಗಿಸುವುದು.
ಮೀನುಗಾರರ ಹಾಗೂ ಅವರ ದೋಣಿಗಳ ಸುರಕ್ಷತೆಗಾಗಿ 17 ಕೋಟಿ ರೂ.ಗಳ ಅನುದಾನದಲ್ಲಿ ಇಸ್ರೋ ಅಭಿವೃದ್ಧಿಪಡಿಸಿರುವ ಜಿಪಿಎಸ್ ಸಂವಹನ ವ್ಯವಸ್ಥೆಯನ್ನು ಎಲ್ಲ ಯಾಂತ್ರೀಕೃತ ಮೀನುಗಾರಿಕೆ ದೋಣಿಗಳಲ್ಲಿ ಅಳವಡಿಕೆ. 10 ಸಾವಿರ ವಸತಿ ರಹಿತ ಮೀನುಗಾರರಿಗೆ ಮನೆ. ಮುಂದಿನ 2 ವರ್ಷಗಳಲ್ಲಿ ಎಲ್ಲ ಸೀಮೆಎಣ್ಣೆ ಆಧಾರಿತ ದೋಣಿಗಳಲ್ಲಿ ಪೆಟ್ರೋಲ್/ಡೀಸೆಲ್ ಆಧಾರಿತ ಮೋಟಾರ್ ಇಂಜಿನ್ ಅಳವಡಿಸಲು ತಲಾ 50 ಸಾವಿರ ರೂ. ನಂತೆ ಸಹಾಯಧನ. ಇದಕ್ಕಾಗಿ ಪ್ರಸಕ್ತ ವರ್ಷದಲ್ಲಿ 40 ಕೋಟಿ ರೂ. ಗಳನ್ನು ಮೀಸಲು.
ಮೀನುಗಾರರ ದೋಣಿಗಳಿಗಾಗಿ ರಿಯಾಯಿತಿ ದರದಲ್ಲಿ ನೀಡುತ್ತಿರುವ ಡೀಸೆಲ್ ಮಿತಿಯನ್ನು 1.5 ಲಕ್ಷ ಕಿಲೋ ಲೀಟರ್‍ಗಳಿಂದ 2 ಲಕ್ಷ ಕಿಲೋ ಲೀಟರ್‍ಗೆ ಹೆಚ್ಚಳ. ಇದರಿಂದ ಮೀನುಗಾರರಿಗೆ ರಾಜ್ಯ ಸರಕಾರದಿಂದ 250 ಕೋಟಿ ರೂ.ಗಳ ನೆರವಾಗಲಿದೆ. ಸೀಮೆಎಣ್ಣೆ ಸಹಾಯಧನದ ಪ್ರಕ್ರಿಯೆಯನ್ನು ಪ್ರಸಕ್ತ ಸಾಲಿನಿಂದ ಡಿಬಿಟಿ ಮುಖಾಂತರ ನೇರವಾಗಿ ಮೀನುಗಾರರ ಖಾತೆಗೆ ಜಮೆ.
ಆಳಸಮುದ್ರ ಮೀನುಗಾರಿಕೆ ಉತ್ತೇಜಿಸಲು 100 ಆಳ ಸಮುದ್ರ ಮೀನುಗಾರಿಕಾ ದೋಣಿಗಳಿಗೆ ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯೊಂದಿಗೆ ಸಂಯೋಜಿಸಿ ಮತ್ಸ್ಯ ಸಿರಿ ಎಂಬ ವಿಶೇಷ ಯೋಜನೆ. ಸೀಗಡಿ ಉತ್ಪನ್ನಗಳ ರಫ್ತು ಪ್ರೋತ್ಸಾಹಿಸಲು ಯಾದಗಿರಿ, ರಾಯಚೂರು ಹಾಗೂ ಬಳ್ಳಾರಿ ಜಿಲ್ಲೆಗಳಲ್ಲಿ ಸೀಗಡಿ ಕೃಷಿ ಕ್ಲಸ್ಟರ್ ಸ್ಥಾಪನೆ. ಮೀನಿನ ರಫ್ತು ಮತ್ತು ಮೌಲ್ಯವರ್ಧನೆಗಾಗಿ ಬೈಂದೂರು ತಾಲೂಕಿನ ಕಂಬದಕೋಣೆಯಲ್ಲಿ ಸೀಫುಡ್ ಪಾರ್ಕ್ ಅನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಸ್ಥಾಪನೆ.