ಬಳ್ಳಾರಿ ಜಿಲ್ಲೆಯಿಂದಲೇ ಸ್ಪರ್ಧೆ ಮಾಡುವೆ: ಸಚಿವ ಬಿ. ಶ್ರೀರಾಮುಲು

Update: 2023-02-18 11:51 GMT

ಬಳ್ಳಾರಿ: ‘ಮುಂಬರಲಿರುವ ವಿಧಾನಸಭೆ ಚುನಾವಣೆಯಲ್ಲಿ ಬಳ್ಳಾರಿ ಜಿಲ್ಲೆಯಿಂದಲೇ ಸ್ಪರ್ಧೆ ಮಾಡಲು ಉದ್ದೇಶಿಸಿದ್ದು, ಬಳ್ಳಾರಿ ಗ್ರಾಮೀಣ ಅಥವಾ ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವ ಉದ್ದೇಶವಿದೆ. ಆದರೆ, ಪಕ್ಷದ ವರಿಷ್ಠರ ತೀರ್ಮಾನವೇ ಅಂತಿಮ’ ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ಸ್ಪಷ್ಟಪಡಿಸಿದ್ದಾರೆ.

ಶನಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಈ ಹಿಂದೆ ಸಂಸದರಾಗಿದ್ದ ವೇಳೆ ಬಿಎಸ್‍ವೈ ಹಾಗೂ ವರಿಷ್ಠರು ಹೊರ ಜಿಲ್ಲೆಯಲ್ಲಿ ಸ್ಪರ್ಧೆ ಮಾಡಲು ಅವಕಾಶ ಕಲ್ಪಿಸಿದ್ದರು. ಚಿತ್ರದುರ್ಗ ಜಿಲ್ಲೆಗೆ ನಾನು ಹೋಗಿ ಸ್ಪರ್ಧೆ ಮಾಡಿದ್ದ ಕಾರಣ ಅಲ್ಲಿ 5 ಜನ ಆಯ್ಕೆಯಾದರು. ಅದೇ ರೀತಿ ಬಾಗಲಕೋಟೆಯ 7 ಕ್ಷೇತ್ರಗಳಲ್ಲಿ ಬಾದಾಮಿ, ಜಮಖಂಡಿ ಬಿಟ್ಟು 5 ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು.

ನಾನು ಬೇರೆ ಜಿಲ್ಲೆಗೆ ಹೋಗುವುದರಿಂದ ಲಾಭ ಆಗುತ್ತದೆ ಎಂದು ನನನ್ನು ಅಲ್ಲಿಗೆ ಕರೆಸಿದ್ದರು. ನಾನು ಇಚ್ಛೆಪಟ್ಟು ಹೋಗಿಲ್ಲ. ಇದೀಗ ನಾನು ಬಳ್ಳಾರಿ ಜಿಲ್ಲೆಯಲ್ಲಿ ನಿಲ್ಲಬೇಕು ಎಂದು ಇಚ್ಛೆಪಟ್ಟಿದ್ದೇನೆ. ಬಳ್ಳಾರಿ ಜಿಲ್ಲೆ ಒಂದು ಕ್ಷೇತ್ರದಲ್ಲಿ ಸ್ಪರ್ಧಿಸಲಿದ್ದು, ವರಿಷ್ಠರ ತೀರ್ಮಾನಕ್ಕೆ ನಾನು ಬದ್ಧನಿದ್ದೇನೆ ಎಂದು ರಾಮುಲು ಹೇಳಿದರು.

ಬಜೆಟ್ ಮಂಡನೆ ವೇಳೆ ‘ಕಿವಿಯಲ್ಲಿ ಹೂವು ಇಟ್ಟುಕೊಂಡು’ ಬಂದ ಪ್ರತಿಪಕ್ಷ ಸದಸ್ಯರಿಗೆ ಜನತೆ ಪಾಠ ಕಲಿಸಲಿದ್ದಾರೆ. ಶಿಷ್ಟಾಚಾರ ಪಾಲಿಸದೆ ಅಗೌರವ ತೋರುವ ಕೆಲಸವನ್ನು ಕಾಂಗ್ರೆಸ್ಸಿಗರು ಮಾಡಿದ್ದಾರೆ. ಕಾಂಗ್ರೆಸ್ ನಾಯಕರು ಪ್ರಚಾರಕ್ಕಾಗಿ ನಾಟಕ ಮಾಡುತ್ತಿದ್ದು, ರಾಜ್ಯದ ಜನತೆ ಎಲ್ಲವನ್ನೂ ಗಮನಿಸುತ್ತಿದ್ದಾರೆ ಎಂದು ರಾಮುಲು ಟೀಕಿಸಿದರು.

ಫೆ.23ಕ್ಕೆ ಬಳ್ಳಾರಿ ಜಿಲ್ಲೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ನೀಡುತ್ತಿದ್ದು, ಸಂಡೂರಿನಲ್ಲಿ ನಡೆಯಲಿರುವ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.

Similar News