×
Ad

ಮಡಿಕೇರಿ: ನೀರಿನ ತೊಟ್ಟಿಗೆ ಬಿದ್ದು ಕಾಡಾನೆ ಸಾವು

Update: 2023-02-18 22:40 IST

ಮಡಿಕೇರಿ: ಕಾಡಾನೆಯೊಂದು ನೀರಿನ ತೊಟ್ಟಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ಸೋಮವಾರಪೇಟೆ ತಾಲ್ಲೂಕಿನ ಶನಿವಾರಸಂತೆ ಹೋಬಳಿ ವ್ಯಾಪ್ತಿಯ ಎಳನೀರುಗುಂಡಿ ಗ್ರಾಮದಲ್ಲಿ ನಡೆದಿದೆ.

ಕಾಫಿ ತೋಟದಲ್ಲಿ ನೀರಾವರಿ ಸೌಲಭ್ಯಕ್ಕಾಗಿ ನಿರ್ಮಿಸಿದ್ದ ನೀರಿನ ತೊಟ್ಟಿಗೆ ಸುಮಾರು 20 ವರ್ಷದ ಹೆಣ್ಣಾನೆಯೊಂದು ಬಿದ್ದು ಮೃತಪಟ್ಟಿದೆ. ಪಕ್ಕದ ಮೀಸಲು ಅರಣ್ಯದಿಂದ ಬಂದ 3 ಕಾಡಾನೆಗಳು ಕಾಫಿ ತೋಟದೊಳಗೆ ನುಸುಳಿದೆ. ಈ ಸಂದರ್ಭ ಹೆಣ್ಣಾನೆಯೊಂದು ಆಕಸ್ಮಿಕವಾಗಿ ಸುಮಾರು 10 ಅಡಿಯಷ್ಟು ಆಳದ ನೀರಿನ ತೊಟ್ಟಿಯೊಳಗೆ ಬಿದ್ದಿದೆ. ಹೊರ ಬರಲು ಸಾಧ್ಯವಾಗದೆ ಆನೆ ಉಸಿರುಗಟ್ಟಿ ಮೃತಪಟ್ಟಿದೆ. 

ಶನಿವಾರ ಬೆಳಗ್ಗೆ ತೋಟದ ಕಾರ್ಮಿಕರು ನೀರಿನ ತೊಟ್ಟಿಯಲ್ಲಿ ಆನೆ ಸತ್ತು ಬಿದ್ದಿರುವುದನ್ನು ಗಮನಿಸಿ ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಆಗಮಿಸಿದ ಶನಿವಾರಸಂತೆ ಅರಣ್ಯ ವಲಯಾಧಿಕಾರಿ ಪ್ರಪುಲ್‍ಕುಮಾರ್ ಶೆಟ್ಟಿ ಹಾಗೂ ಸಿಬ್ಬಂದಿಗಳು ಆನೆಯ ಮೃತದೇಹವನ್ನು ಹೊರ ತೆಗೆದರು. ಶನಿವಾರಸಂತೆ ಪಶುವೈದ್ಯಾಧಿಕಾರಿ ಡಾ.ಸತೀಶ್ ಆನೆಯ ಮರಣೋತ್ತರ ಪರೀಕ್ಷೆ ನಡೆಸಿದರು. ನಂತರ ಪಕ್ಕದ ಮೀಸಲು ಅರಣ್ಯದಲ್ಲಿ ಅಂತಿಮ ಸಂಸ್ಕಾರ ಮಾಡಲಾಯಿತು. ನೀರಿನ ತೊಟ್ಟಿ ಬಳಿ ಇತರ ಕಾಡಾನೆಗಳು ಓಡಾಡುತ್ತಿದ್ದುದರಿಂದ ಕಾರ್ಮಿಕರು ಹಾಗೂ ಗ್ರಾಮಸ್ಥರು ಆತಂಕಗೊಂಡಿದ್ದರು.

Similar News