ಐಎಎಸ್ ಅಧಿಕಾರಿ ರೋಹಿಣಿ ಸಂಧಾನದ ರಹಸ್ಯವೇನು: ಸರಕಾರಕ್ಕೆ ಐಪಿಎಸ್ ಅಧಿಕಾರಿ ರೂಪಾ ದೂರು

Update: 2023-02-19 16:17 GMT

ಬೆಂಗಳೂರು, ಫೆ. 19: ‘ದೇಶದ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ತಾನು ಮಾಡಿರುವ ಕೆಲಸಕ್ಕೆ ಶಾಸಕನ ಹತ್ತಿರ ಸಂಧಾನಕ್ಕೆ ಹೋಗಿರುವುದು ಗೊತ್ತಾಗಿದ್ದು, ಇದನ್ನು ಬಹಿರಂಗಪಡಿಸಲಿ. ಜತೆಗೆ, ರಾಜ್ಯ ಸರಕಾರ ಈ ಸಂಬಂಧ ತನಿಖೆ ನಡೆಸಲಿ’ ಎಂದು ಐಪಿಎಸ್ ಅಧಿಕಾರಿ ಡಿ.ರೂಪಾ ಮೌದ್ಗಿಲ್ ದೂರು ಸಲ್ಲಿಸಿದ್ದಾರೆ. 

ರವಿವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ‘ರೋಹಿಣಿ ಸಿಂಧೂರಿ ಅವರು ಶಾಸಕ ಸಾ.ರಾ.ಮಹೇಶ್ ಅವರೊಂದಿಗೆ ರಾಜಿ ಸಂಧಾನ ಮಾಡಿಕೊಂಡಿರುವುದು ಮಾಧ್ಯಮಗಳ ಮೂಲಕ ಗೊತ್ತಾಗಿದೆ. ಇವರು ಏಕೆ ಸಂಧಾನಕ್ಕೆ ಹೋದರು? ಏಕೆ ಹೋಗಬೇಕಿತ್ತು?’ ಎಂದು ಪ್ರಶ್ನೆ ಮಾಡಿದರು.

‘ಅಲ್ಲದೆ, ಯಾವ ಸರಕಾರಿ ನಿಯಮದಲ್ಲಿ ಐಎಎಸ್ ಮತ್ತು ಐಪಿಎಸ್ ಅಧಿಕಾರಗಳ ಜತೆ ರಾಜಕಾರಣಿಗಳ ಸಂದಾನಕ್ಕೆ ಅವಕಾಶವಿದೆ?. ಪ್ರಕರಣಗಳು ಸರಕಾರದ ಮಟ್ಟದಲ್ಲಿ ಇದ್ದಾಗ ಯಾಕೆ ಸಂಧಾನಕ್ಕೆ ಹೋಗಿದ್ದರು. ಏನಾದರು ತಪ್ಪು ಮಾಡಿದ್ದರಾ ಎಂದು ಪ್ರಶ್ನಿಸಿದ ಅವರು, ರಾಜಕಾರಣಿಗಳ ವಿಚಾರದಲ್ಲಿ ಸಂಧಾನ ಎಂದು ಬಂದರೆ ಮೈ ಉರಿಯಿತು. ಆ ರಾಜಕಾರಣಿಗೂ ರೋಹಿಣಿ ಸಿಂಧೂರಿ ವಿರುದ್ಧದ ಯಾವುದೋ ದಾಖಲೆ, ಫೋಟೊ ಸಿಕ್ಕಿರಬೇಕು. ಆದ್ದರಿಂದಲೇ ರಾಜಿ ಸಂಧಾನಕ್ಕೆ ಹೊರಟಿದ್ದಾರೆಯೇ’ ಎಂದು ಆರೋಪಿಸಿದ್ದಾರೆ.

‘ಪ್ರತಿ ಬಾರಿಯೂ ರೋಹಿಣಿ ಸಿಂಧೂರಿ ತಪ್ಪು ಮಾಡಿದಾಗ ತಪ್ಪಿಸಿಕೊಳ್ಳುತ್ತಾರೆ. ಅವರನ್ನು ಬಚಾವ್ ಮಾಡುವುದಕ್ಕೆ ಯಾರಿದ್ದಾರೆ, ಯಾರೆಲ್ಲಾ ಅವರನ್ನು ಬೆಂಬಲಿಸುತ್ತಾರೆ ನನಗೆ ತಿಳಿಯಬೇಕು. ಚಾಮರಾಜನಗರದಲ್ಲಿ 24 ಜನ ಆಕ್ಸಿಜನ್‍ನಿಂದ ಸತ್ತಾಗ ಈಕೆಯ ಮೇಲೆ ತನಿಖೆ ನಡೆಸದೆ ಪಾರಾದರು. ಕನ್ನಡದ ಹುಡುಗಿ ಐಎಎಸ್ ಶಿಲ್ಪ ನಾಗ್ ವಿರುದ್ಧ ಜಗಳ, ರಂಪ ಮಾಡಿದ್ದರು. ಡಿಕೆ ರವಿ ಪ್ರಕರಣ, ಐಪಿಎಸ್ ಹರೀಶ್ ಸಾವು, ಸಾರಾ ಮಹೇಶ್ ಜೊತೆಗಿನ ಗುದ್ದಾಟ, ಐಎಎಸ್ ಅಧಿಕಾರಿಗಳಾದ ಹರ್ಷ ಗುಪ್ತ ಜೊತೆ ಜಗಳ, ಮಣಿವಣ್ಣನ್ ಜೊತೆ ಜಗಳ ಮಾಡಿದ್ದರು. ಆಗೆಲ್ಲಾ ಬಜಾವ್ ಆಗಿದ್ದರು. ಈ ಬಗ್ಗೆ ಸೂಕ್ತ ತನಿಖೆಯಾಗಬೇಕು’ ಎಂದು ರೂಪಾ ಸರಕಾರವನ್ನು ಒತ್ತಾಯಿಸಿದರು.

‘ಮತ್ತೊಂದೆಡೆ ಸಾಮಾಜಿಕ ಜಾಲತಾಣಗಳ ಮೂಲಕ ರೋಹಿಣಿ ಸಿಂಧೂರಿ ಅವರ ಮೇಲೆ ಆರೋಪಗಳ ಸುರಿಮಳೆ ಗೈದಿರುವ ರೂಪಾ ಅವರು, ಮೈಸೂರಿನ ಜಿಲ್ಲಾಧಿಕಾರಿ ಮನೆ, ಪಾರಂಪರಿಕ ಕಟ್ಟಡವಾದ್ದರೂ ಅಲ್ಲಿ ಕೋವಿಡ್ ಸಂದರ್ಭದಲ್ಲಿ ಟೈಲ್ಸ್ ಹಾಕಿದ್ದು, ಈಜುಕೋಳ ಮಾಡಿದ್ದು ಸರಿಯಲ್ಲ. ಮನುಷ್ಯತ್ವ ಇರುವವರು ಯಾರೂ ಹೀಗೆ ಮಾಡುತ್ತಿರಲಿಲ್ಲ’ ಎಂದು ಟೀಕಿಸಿದರು. 

‘ಡಿ.ಕೆ.ರವಿ ತೀರಿ ಹೋದ ಕೆಲ ತಿಂಗಳು ಮುಂಚೆ ಕನ್ನಡದ ಹುಡುಗ, ಐಪಿಎಸ್ ಅಧಿಕಾರಿ ಎನ್. ಹರೀಶ್ ಅವರ ಜತೆ ರೋಹಿಣಿ ಮದುವೆಯಾಗಲಿದ್ದಾರೆ ಎಂಬ ವಿಚಾರ ಹರಿದಾಡಿತ್ತು. ಆದರೆ, ಆತ, ಈಕೆಗಾಗಿ ಕಾದು ಕಾದು ಆತ್ಮಹತ್ಯೆ ಮಾಡಿಕೊಂಡದ್ದು, ಎಂದು ಹಲವರು ಹೇಳಿದರೂ, ನಾನು ಅದನ್ನು ನಂಬಲಿಲ್ಲ, ಈಗೂ ನಂಬಿಲ್ಲ. ಅಲ್ಲದೆ, ಡಿ.ಕೆ.ರವಿ, ಸಂಭಾವಿತ ವ್ಯಕ್ತಿ. ಸಿಬಿಐ ರಿಪೋರ್ಟ್‍ನಲ್ಲಿ ಅವರ ಚಾಟ್ಸ್ ಬಗ್ಗೆ ಉಲ್ಲೇಖ ಇದ್ದು, ರವಿ ಅವರು ಎಂದಾದರೂ ಎಲ್ಲೆ ಮೀರಿ ಮೆಸೇಜ್ ಮಾಡಿದ ತಕ್ಷಣವೇ ಅವರನ್ನು ಬ್ಲಾಕ್ ಮಾಡಬಹುದಿತ್ತು. ಆದರೆ ರೋಹಿಣಿ, ಡಿ.ಕೆ.ರವಿ ಅವರನ್ನು ಶಾಶ್ವತವಾಗ ಬ್ಲಾಕ್ ಮಾಡಲಿಲ್ಲ. ಬ್ಲಾಕ್ ಮಾಡದೆ ಇದ್ದದ್ದು ಉತ್ತೇಜನ ಕೊಡುವ ಹಾಗೆ ಎಂಬಂತೆಯೇ ಕಾಣುತ್ತದೆ ಎಂಬುದು ಅನೇಕರ ಅಭಿಪ್ರಾಯ’ ಎಂದು ಆರೋಪಿಸಿದರು. ಹೀಗೆ, 19 ವಿಷಯಗಳನ್ನು ಉಲ್ಲೇಖಿಸಿ ರೂಪಾ ಅವರು ರೋಹಿಣಿ ಅವರನ್ನು ಟೀಕಿಸಿದ್ದಾರೆ.

‘ಐಎಎಸ್, ಐಪಿಎಸ್ ಅಧಿಕಾರಿಗಳು ಸೇರಿದಂತೆ ಹಲವರಿಗೆ ರೋಹಿಣಿ ಸಿಂಧೂರಿ ಕಳಿಸಬಾರದಂತಹ ಫೋಟೊಗಳನ್ನು ಕಳುಹಿಸಿದ್ದಾರೆ. ಅವುಗಳು ನನಗೆ ಸಿಕ್ಕಿವೆ. ಅವೆಲ್ಲವನ್ನು ಸರಕಾರಕ್ಕೆ ನೀಡಿದ್ದೇನೆ. ಒಂದಿಷ್ಟು ಮಾದರಿ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದೇನೆ. ಈ ಬಗ್ಗೆಸೂಕ್ತ ತನಿಖೆಯಾಗಲಿ’ ಎಂದು ರೂಪಾ ಒತ್ತಾಯಿಸಿದರು.

‘ರೂಪಾ ಅವರು ಜವಾಬ್ದಾರಿಯುತ ಸ್ಥಾನದಲ್ಲಿದ್ದಾರೆ. ಆದರೆ, ನನ್ನ ಮೇಲೆ ಹಗೆ ತೀರಿಸಿಕೊಳ್ಳಲು ಮಾನಸಿಕ ಸ್ಥಿಮಿತತೆ ಕಳೆದುಕೊಂಡವರಂತೆ ವರ್ತಿಸುತ್ತಿದ್ದಾರೆ. ಸರ್ವಿಸ್ ಕಂಡಕ್ಟ್ ರೂಲ್ಸ್ (ಸೇವಾ ನಡತೆ ನಿಯಮ) ಉಲ್ಲಂಘಿಸಿರುವ ರೂಪಾ ವಿರುದ್ಧ ಸಕ್ಷಮ ಪ್ರಾಧಿಕಾರಕ್ಕೆ ದೂರು ನೀಡುತ್ತೇನೆ. ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‍ಗಳ ಅಡಿಯಲ್ಲಿ ಎಲ್ಲ ರೀತಿಯ ಕಾನೂನು ಕ್ರಮಗಳನ್ನು ಕೈಗೊಳ್ಳುತ್ತೇನೆ. ಅಲ್ಲದೆ, ವಯಕ್ತಿಕ ಹಗೆಯನ್ನಿಟ್ಟುಕೊಂಡು ನನ್ನ ವಿರುದ್ಧ ಸುಳ್ಳು ಹಾಗೂ ವೈಯಕ್ತಿಕ ನಿಂದನೆಯ ಅಭಿಯಾನ ನಡೆಸುತ್ತಿದ್ದಾರೆ. ಸಾಮಾಜಿಕ ಮಾಧ್ಯಮಗಳಿಂದ ತೆಗೆದ ಫೋಟೊಗಳನ್ನು ನನ್ನ ತೇಜೋವಧೆಗೆ ಬಳಸಿಕೊಳ್ಳುತ್ತಿದ್ದಾರೆ. ಈ ಫೋಟೊಗಳನ್ನು ನಾನು ಕೆಲವು ಅಧಿಕಾರಿಗಳಿಗೆ ಕಳುಹಿಸಿದ್ದೇನೆ ಎಂದು ಆರೋಪಿಸಿರುವ ರೂಪಾ, ಸದರಿ ಅಧಿಕಾರಿಗಳ ಹೆಸರನ್ನು ಬಹಿರಂಗಪಡಿಸಬೇಕು.

-ರೋಹಿಣಿ ಸಿಂಧೂರಿ, ಐಎಎಸ್ ಅಧಿಕಾರಿ

Similar News