ಸಮಾಜ ಒಡೆಯುವುದನ್ನಷ್ಟೇ ಮಾಡಿದವರು ವಿಜಯಸಂಕಲ್ಪ ಯಾತ್ರೆ ಹೊರಟಿದ್ದಾರೆ: ಸಲೀಮ್ ಅಹ್ಮದ್

Update: 2023-02-20 07:42 GMT

ಮುಂದಿನ ವಿಧಾನಸಭಾ ಚುನಾವಣಾ ಸಿದ್ಧತೆಯ ಬಗ್ಗೆ ಹಿರಿಯ ಕಾಂಗ್ರೆಸ್ ನಾಯಕ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಮ್ ಅಹ್ಮದ್ ಅವರು ‘ವಾರ್ತಾಭಾರತಿ’ಯೊಂದಿಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ಚುನಾವಣೆಗೆ ಸಿದ್ಧತೆ ಹೇಗೆ ನಡೆದಿದೆ?

ಹಲವಾರು ಹಂತಗಳಲ್ಲಿ ತಯಾರಿ ನಡೆದಿದೆ. ಕಳೆದೆರಡು ವರ್ಷಗಳಿಂದ ಪಕ್ಷ ಸಂಘಟನೆ ಮತ್ತು ಹೋರಾಟ ಎರಡೂ ವಿಚಾರಗಳನ್ನಿಟ್ಟುಕೊಂಡು ಬೂತ್ ಮಟ್ಟದಲ್ಲಿ ಕೆಲಸ ಮಾಡುತ್ತಿದ್ದೇವೆ. ನಮ್ಮ ಹೋರಾಟ ಈ ಭ್ರಷ್ಟ ಸರಕಾರದ ವಿರುದ್ಧ. ಈ ಸರಕಾರಕ್ಕೆ ಬದ್ಧತೆಯಿಲ್ಲ, ಇಚ್ಛಾಶಕ್ತಿಯೂ ಇಲ್ಲ. ಇದು ಆಪರೇಷನ್ ಕಮಲ ಸರಕಾರ. ಬಹುಮತ ಪಡೆದು ಬಂದ ಸರಕಾರವಲ್ಲ. ನಮ್ಮ ಶಾಸಕರನ್ನು ಖರೀದಿಸಿ, ನೂರಾರು ಕೋಟಿ ರೂ. ಖರ್ಚು ಮಾಡಿ ಅಧಿಕಾರಕ್ಕೆ ಬಂತು. ಖರ್ಚಾದ ಹಣ ಕೂಡಿಸಬೇಕಲ್ಲ. ಅದಕ್ಕಾಗಿ 40 ಪರ್ಸೆಂಟ್ ಕಮಿಷನ್‌ಗೆ ಇಳಿಯಿತು.

ನಿಮ್ಮ ಕಾಲದಲ್ಲಿ ಭ್ರಷ್ಟಾಚಾರ ಜಾಸ್ತಿಯಿತ್ತು ಎಂದು ಅವರು ಹೇಳುತ್ತಾರೆ?

ನಮ್ಮ ಕಾಲದಲ್ಲಿ ಭ್ರಷ್ಟಾಚಾರ ಇರಲಿಲ್ಲ ಎಂದು ನಾನು ಹೇಳುವುದಿಲ್ಲ. ಸಣ್ಣ ಮಟ್ಟದಲ್ಲಿ ಇತ್ತು. ಅದೂ ತಪ್ಪೇ. ಆದರೆ ಕಳೆದ 4 ವರ್ಷಗಳಲ್ಲಿ ಈ ಸರಕಾರದ ಸಾಧನೆ ಏನು? ಕಮಿಷನ್ ಬಿಟ್ಟರೆ ಬೇರೆ ಏನನ್ನೂ ಮಾಡಲಿಲ್ಲ. ಕೋವಿಡ್ ಸಂದರ್ಭದಲ್ಲಿ 2 ಸಾವಿರ ಕೋಟಿ ರೂ. ಹಗರಣದ ಬಗ್ಗೆ ನಾವು ಆರೋಪ ಮಾಡಿದ್ದೆವು. ವೈದ್ಯಕೀಯ ಸಲಕರಣೆ ಖರೀದಿಯಲ್ಲಿ ಬ್ಯುಸಿ ಆಗಿದ್ದರು. ಯಾರು ಆರೋಗ್ಯ ಸಚಿವರಾಗಬೇಕೆಂಬ ಪೈಪೋಟಿಯಿತ್ತು. ಲೆಕ್ಕ ಕೊಡಿ ಎಂದು ಕೇಳಿದ್ದಕ್ಕೆ ಇಲ್ಲಿಯವರೆಗೂ ಉತ್ತರವಿಲ್ಲ.

ಹೈಕಮಾಂಡ್‌ಗೆ ಕಪ್ಪ ಕೊಡುವುದಕ್ಕೆ ಬಜೆಟ್‌ನಲ್ಲಿ ಹಣ ಮೀಸಲಿಟ್ಟಿದ್ದರಾ ಎಂದು, ಮೊದಲು ಕಾಂಗ್ರೆಸ್‌ನಲ್ಲಿದ್ದ ಸುಧಾಕರ್ ಅವರೇ ಆರೋಪ ಮಾಡುತ್ತಿದ್ದಾರಲ್ಲ?

ನಾಚಿಕೆಯಾಗಬೇಕು ಸುಧಾಕರ್‌ಗೆ. ಅವರಿಗೇನಾದರೂ ಸಿದ್ಧಾಂತವಿದೆಯಾ? ಯಾವ ಪಕ್ಷ ಅವರನ್ನು ಶಾಸಕರನ್ನಾಗಿ ಮಾಡಿತೋ ಅದಕ್ಕೆ ಚೂರಿ ಹಾಕಿ ಹೊರಟರು. ನಮ್ಮ ಸರಕಾರದಲ್ಲಿರುವಾಗ ಎಲ್ಲ ಬಗೆಯ ಅಧಿಕಾರ ಬಯಸಿದ್ದರು. ಪಕ್ಷದ ಪದಾಧಿಕಾರಿ ಯೂ ಆಗಿದ್ದರು.

  ಬೆನ್ನಿಗೆ ಚೂರಿಹಾಕಿದರು ಎನ್ನುತ್ತೀರಿ. ಬಾಂಬೇ ಬಾಯ್ಸ್ ಬರುವು ದಾದರೆ ಅರ್ಜಿ ಹಾಕಿ ಬರಬಹುದು ಎಂದೂ ಹೇಳುತ್ತೀರಿ?

ಯಾರೂ ಅರ್ಜಿ ಹಾಕಬಹುದು. ಎಲ್ಲರೂ ಒಪ್ಪಿಗೆ ಕೊಟ್ಟರೆ ಮಾತ್ರ ತೆಗೆದುಕೊಳ್ಳುತ್ತೇವೆ. ಬಾಂಬೆ ಬಾಯ್ಸ್‌ಗೆ ಮಾತ್ರವಲ್ಲ. ರಾಜ್ಯದ
ಎಲ್ಲರಿಗೂ. ಸುಧಾಕರ್ ಒಳ್ಳೆಯ ಸ್ನೇಹಿತರು. ಅದು ಬೇರೆ. ಆದರೆ,
ಯಾವ ಪಕ್ಷದಲ್ಲಿ ಬೆಳೆದರೋ ಆ ಪಕ್ಷದ ಬಗ್ಗೆ ಬದ್ಧತೆ ಇರಬೇಕಿತ್ತು.

  ವಿಶ್ವನಾಥ್ ಅವರು ನನ್ನ ರಕ್ತದಲ್ಲಿರುವುದು ಕಾಂಗ್ರೆಸ್. ಮತ್ತೆ ಸೇರುತ್ತೇನೆ ಎಂದು ಬಹಿರಂಗವಾಗಿಯೇ ಹೇಳಿಕೆ ಕೊಟ್ಟಿದ್ದಾರೆ?

   ವಿಶ್ವನಾಥ್ ಎಲ್ಲೋ ಒಂದು ಕಡೆ ಎಡವಿದರು. ಅವರೊಬ್ಬ
ಕಟ್ಟಾ ಕಾಂಗ್ರೆಸಿಗ. ಯಾವುದೋ ವಿಚಾರಕ್ಕೆ ನೋವಾಗಿ ಪಕ್ಷ ಬಿಟ್ಟು ಹೋದರು.

  ಯಾರು ಕಾಂಗ್ರೆಸ್ ಪಕ್ಷದ ಫಲಾನುಭವಿಗಳೋ ಅವರ ಮಕ್ಕಳು ಈಗ ಬಿಜೆಪಿಯ ವೋಟ್ ಬ್ಯಾಂಕ್ ಆಗಿದ್ದಾರೆ. ಇದರ ಬಗ್ಗೆ ಏನೆನ್ನುತ್ತೀರಿ?

ನರೇಂದ್ರ ಮೋದಿ ಹೇಳಿದ ಯಾವುದನ್ನಾದರೂ 8 ವರ್ಷದಲ್ಲಿ ನಡೆಸಿಕೊಟ್ಟರಾ? ನೂರು ದಿನಗಳಲ್ಲಿ ಕಪ್ಪುಹಣ ವಾಪಸ್ ತರುತ್ತೇವೆ ಎಂದರು. ವರ್ಷಕ್ಕೆ 2 ಕೋಟಿ ಉದ್ಯೋಗ ಎಂದು ಯುವಕರಿಗೆ ಬಣ್ಣದ ಮಾತು ಹೇಳಿ ಒಂಭತ್ತು ವರ್ಷವಾಯಿತು. 18 ಕೋಟಿಯಲ್ಲ, 18 ಲಕ್ಷ ಉದ್ಯೋಗವನ್ನೂ ಕೊಡಲಿಲ್ಲ. ರಾಮ ರಾಜ್ಯ ಮಾಡುತ್ತೇವೆ ಎಂದರು. ರಾವಣರಾಜ್ಯವಾಗಿದೆ. ನೂರಾರು ವರ್ಷಗಳಿಂದ ಅನ್ಯೋನ್ಯವಾಗಿ ಸಹಬಾಳ್ವೆಯಿಂದ ಬಾಳುತ್ತಿದ್ದಲ್ಲಿ ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ.

  ಬಿಜೆಪಿ ಬಂದ ನಂತರವೇ ಕೋಮುಗಲಭೆ ಆಗಿದೆ ಎಂದು ಹೇಗೆ ಹೇಳುವುದು? ಮೊದಲೂ ಇತ್ತಲ್ಲವೆ?

ಎಲ್ಲೋ ನಡೆಯುತ್ತಿತ್ತೇ ಹೊರತು ಹೆಚ್ಚಿನ ಪಾಲು ಶಾಂತ ವಾಗಿತ್ತು. ಸರ್ವಜನಾಂಗದ ಶಾಂತಿಯ ತೋಟ ಕರ್ನಾಟಕ. ಯಾವತ್ತೂ ಕೋಮುಭಾವನೆಗಳು ಇರಲಿಲ್ಲ. ಕೆಲವೇ ಜಿಲ್ಲೆಗಳಲ್ಲಿ ಇತ್ತು. ಆದರೆ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ನಿರಂತರವಾಗಿದೆ. ಇವರಿಗೆ ಬೇರೇನೂ ಕಾರ್ಯಕ್ರಮವಿಲ್ಲ. ಬೆಳಗಾದರೆ ಹಿಜಾಬ್, ಅಝಾನ್, ಹಲಾಲ್. ಸರಕಾರದ ಜವಾಬ್ದಾರಿಯೇನು? ಸರಕಾರಕ್ಕೆ ಯಾವುದೇ ಜಾತಿ ಜನಾಂಗ ಇಲ್ಲ. ಪ್ರತಿಯೊಬ್ಬರಿಗೂ ಕಾರ್ಯಕ್ರಮ, ಪ್ರತಿಯೊಬ್ಬರಿಗೂ ರಕ್ಷಣೆ ಕೊಡಬೇಕು. ಆದರೆ ಅದನ್ನು ಈ ಸರಕಾರ ಮಾಡುತ್ತಿಲ್ಲ. ವಿಜಯಸಂಕಲ್ಪ ಯಾತ್ರೆ ಮಾಡುವುದಕ್ಕೆ ಹೊರಟಿದ್ದಾರೆ. ಯಾವ ಪುರುಷಾರ್ಥಕ್ಕೆ? ಯಾವ ಘನಕಾರ್ಯ ಮಾಡಿದ್ದೀರಿ ಎಂದು ಜನ ನಿಮಗೆ ಆಶೀರ್ವಾದ ಮಾಡಬೇಕು? ಪೆಟ್ರೋಲ್ ಬೆಲೆ ರೂ. 55ರಿಂದ ರೂ. 100 ಮಾಡಿದಿರಿ. ಗ್ಯಾಸ್ ಬೆಲೆ ರೂ. 400ರಿಂದ ರೂ. 1,100ಕ್ಕೆ ತಂದಿದ್ದೀರಿ.

  ಆದರೂ ಜನ ಯಾಕೆ ಬೆಂಬಲಿಸುತ್ತಾರೆ?

ಯಾಕೆ ಜನ ಇವರಿಗೆ ಮತ ಹಾಕಬೇಕು ಎಂದು ನಾನು ಕೇಳುತ್ತೇನೆ. ಸುಳ್ಳಿನ ಮೇಲೆ ಸುಳ್ಳು. ಡಬಲ್ ಇಂಜಿನ್ ಸರಕಾರ ಎನ್ನುತ್ತಾರೆ. 25 ಸಂಸದರಿದ್ದಾರೆ. 5 ಜನ ಕೇಂದ್ರ
ಮಂತ್ರಿಗಳಿದ್ದಾರೆ. ಏನಾಯಿತು ಮೇಕೆದಾಟು ಯೋಜನೆ? ಮಹಾದಾಯಿ ಏನಾಯಿತು? ಡಿಪಿಆರ್ ಮಾಡಿದ್ದೇವೆ ಎನ್ನುತ್ತಾರೆ. ಡಿಪಿಆರ್ ಎಸ್.ಎಂ. ಕೃಷ್ಣ
ಸರಕಾರದಲ್ಲಿಯೇ ಮಾಡಿದ್ದೆವು. ಮತ್ತೆ ಡಿಪಿಆರ್ ಮಾಡಿದ್ದೀರಿ. ಕೆಲಸ ಏಕೆ ಶುರುವಾಗಿಲ್ಲ? ಇಲ್ಲಿ ಹುಲಿಗಳಾಗಿ ಗರ್ಜನೆ. ಮೋದಿ ಮುಂದೆ ಇಲಿಗಳು. ಯಾರೇ ಇರಲಿ, ರಾಜ್ಯಕ್ಕೆ ಏನು ಪಾಲು ಬರಬೇಕು ಅದನ್ನು ತರುವ ಶಕ್ತಿ ಇರಬೇಕು.

  ಕೇಂದ್ರದಲ್ಲಿ ಯುಪಿಎ ಇದ್ದು, ಇಲ್ಲಿ ಕಾಂಗ್ರೆಸ್ ಇದ್ದರೆ ನೀವೂ ಹೀಗೇ ಇರುತ್ತಿದ್ದಿರಿ ಅಲ್ಲವೆ?

   ಕಾಂಗ್ರೆಸ್ ನಾಯಕರು ಯಾವತ್ತೂ ರಾಜ್ಯದ ಹಿತ ಕಾಪಾಡುತ್ತಿದ್ದರು. 10 ವರ್ಷ ಯುಪಿಎ ಸರಕಾರ ಇತ್ತು. ನಾವು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇವೆ. ಕೇಂದ್ರದಲ್ಲಿ, ಕರ್ನಾಟಕದಲ್ಲಿ, ಗೋವಾದಲ್ಲಿ ಬಿಜೆಪಿ ಇದೆ. ನಾಲ್ಕು ವರ್ಷವಾದರೂ, ಎಲೆಕ್ಷನ್ ಬರುವಾಗ ಡಿಪಿಆರ್
ನೆನಪಾಯಿತೆ? ಬಿಜೆಪಿ ಬಂದರೆ ಕೂಡಲೇ ಮಹಾದಾಯಿ ಯೋಜನೆ, ರಕ್ತದಲ್ಲಿ ಬರೆದು
ಕೊಡುತ್ತೇವೆ ಎಂದು ಯಡಿಯೂರಪ್ಪ ಹೇಳಿದ್ದರು. ಸರಕಾರದ ಈ ಭ್ರಷ್ಟಾಚಾರವನ್ನು ಬಯಲುಗೊಳಿಸುವ ಕೆಲಸವನ್ನು ನಾವು ಮಾಡುತ್ತಿದ್ದೇವೆ.

  ಕಾಂಗ್ರೆಸ್‌ಗೆ ಯಾಕೆ ವೋಟು ಕೊಡಬೇಕು?

ಸಿದ್ದರಾಮಯ್ಯ ಸರಕಾರವನ್ನೇ ನೋಡಿ. ಅತ್ಯಂತ ಒಳ್ಳೆಯ ಸರಕಾರವನ್ನು 5 ವರ್ಷ ಕೊಟ್ಟೆವು. 165 ಭರವಸೆಗಳಲ್ಲಿ 159 ಭರವಸೆ ಈಡೇರಿಸಿದ್ದೇವೆ. ದಾಖಲೆಯಿದೆ. ನಮ್ಮ
ಮೇಲೆ ಯಾವುದೇ ಭ್ರಷ್ಟಾಚಾರ, ಹಗರಣಗಳ ಆರೋಪ ಇಲ್ಲ.

ಲೋಕಾಯುಕ್ತವನ್ನು ಮುಚ್ಚಿದಿರಿ. ಶಿಕ್ಷಕರ ನೇಮಕಾತಿ ಹಗರಣದ ಬಗ್ಗೆಯೂ ಬಿಜೆಪಿ ಹೇಳುತ್ತಿದೆ. ಸ್ವಚ್ಛ, ಪ್ರಾಮಾಣಿಕ ಸರಕಾರವಾಗಿತ್ತು ಎಂದು ಹೇಗೆ ಹೇಳುತ್ತೀರಿ?

ಇವರಿಗೆ ಬದ್ಧತೆಯಿದ್ದರೆ ವಿರೋಧಪಕ್ಷದಲ್ಲಿ ಇವರು ಇದ್ದರಲ್ಲ, ಏನು ಮಾಡುತ್ತಿ ದ್ದರು? ಹೋರಾಟ ಮಾಡುವ ಶಕ್ತಿಯಿತ್ತಲ್ಲ. ಯಾಕೆ ಧೈರ್ಯವಿರಲಿಲ್ಲ? ಈಗಲೂ ನಮ್ಮ ಅವಧಿಯಲ್ಲಿ ಹಗರಣ ನಡೆದಿದೆ ಎನ್ನಿಸಿದರೆ ಕೂಡಲೇ ಆಯೋಗ ಮಾಡಿ, 10 ವರ್ಷದ ತನಿಖೆ ಮಾಡಲಿ. ಆ ಧೈರ್ಯ ಅವರಿಗಿಲ್ಲ. ಯಾಕೆಂದರೆ ನಾವು ತಪ್ಪು
ಮಾಡಿಲ್ಲ. ಅವರು ತಪ್ಪುಮಾಡಿದ್ದಾರೆ. 40 ಪರ್ಸೆಂಟ್ ಕಮಿಷನ್ ಬಗ್ಗೆ ಪ್ರಧಾನಿಗೇ ಪತ್ರ ಬರೆದು ದೂರಿದ್ದಾರೆ. ಎರಡು ವರ್ಷವಾಯಿತು. ‘‘ನ ಖಾವೂಂಗಾ ನ ಖಾನೇ ದೂಂಗಾ’’ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿದ್ದರಲ್ಲ, ಒಂದಾದರೂ ತನಿಖೆ ಮಾಡಿಸಿದರಾ? ಕಡೇಪಕ್ಷ ಇದರ ಬಗ್ಗೆ ಕೇಳಿದ್ದಾರಾ? ಹಾಗಾದರೆ ಪ್ರಧಾನಿ ಶಾಮೀಲಾಗಿದ್ದಾರೆ ಎಂದೇ ತಿಳಿಯಬೇಕಲ್ಲವೆ?

  ಚುನಾವಣೆ ಎದುರಿಸುವ ವಿಚಾರದಲ್ಲಿ ಸೋಷಿಯಲ್ ಮೀಡಿಯಾದಂತಹ ಹೊಸ ತಂತ್ರಗಳನ್ನು ಕಾಂಗ್ರೆಸ್ ಬಳಸಿಕೊಳ್ಳುತ್ತಿಲ್ಲ ಎಂಬ ಮಾತಿದೆ. ಈ ನಿಟ್ಟಿನ ಸಿದ್ಧತೆ ಹೇಗಿದೆ?

   ಸಂಘಟನೆಯ ಮೊದಲ ಘಟ್ಟ ಬೂತ್. ಅಲ್ಲಿನ ಸಮಿತಿಗಳನ್ನು ಬಲಪಡಿಸುತ್ತಿದ್ದೇವೆ. ಈಗಾಗಲೇ ಎರಡು ಕಾರ್ಯಕ್ರಮ ಘೋಷಣೆ ಮಾಡಿದ್ದೇವೆ. 200 ಯೂನಿಟ್ ಉಚಿತ ವಿದ್ಯುತ್ ಮತ್ತು ಗೃಹಲಕ್ಷ್ಮೀ ಕಾರ್ಯಕ್ರಮ. 10 ಕೆಜಿ ಅಕ್ಕಿ ಇನ್ನೂ ಕೆಲವು ಘೋಷಣೆಗಳನ್ನು ಮಾಡಲಿದ್ದೇವೆ. ಇವರು ಯುವಕರಲ್ಲಿ ಮತ ಕೇಳುತ್ತಾರಲ್ಲ, ಯುವಕರಿಗೆ ಉದ್ಯೋಗ ಕೊಟ್ಟಿದ್ದಾರಾ? ಪದವೀಧರರು ಅಟೆಂಡರ್ ಕೆಲಸ ಮಾಡುತ್ತಿದ್ದಾರೆ. ಯಾವುದೇ ಸರಕಾರ ಜಾತಿ ಬಿಟ್ಟು, ಸರ್ವಜನಾಂಗದ ಅಭಿವೃದ್ಧಿ ಮಾಡಿದರೆ ಅದು ಒಳ್ಳೆಯ ಸರಕಾರ.

  ಮುಸ್ಲಿಮ್ ತುಷ್ಟೀಕರಣ, ಹಿಂದೂ ವಿರೋಧಿ ಎಂಬ ಹಣೆಪಟ್ಟಿ ನಿಮಗಿದೆ?

 ಅದು ಬಿಜೆಪಿ ಹೇಳಿಕೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಎಲ್ಲ ವರ್ಗದವರಿಗೂ ಅಧಿಕಾರವನ್ನೂ ಕೊಟ್ಟಿದ್ದೇವೆ.

  ಅಧ್ಯಕ್ಷರ ಮೇಲಿನ ಆರೋಪವನ್ನು ನೈತಿಕತೆ ದೃಷ್ಟಿಯಿಂದ ಹೇಗೆ ಎದುರಿಸುತ್ತೀರಿ?

ಈ ಸರಕಾರ ಹೆದರಿಸಲು ನೋಡುತ್ತದೆ. ಹೆದರಿಸಿದರು, ಬಿಜೆಪಿಗೆ ಬನ್ನಿ ಎಂದರು. ಆದರೆ ಡಿ.ಕೆ. ಶಿವಕುಮಾರ್ ಕಟ್ಟಾ ಕಾಂಗ್ರೆಸಿಗ. ಪಕ್ಷ ಕಟ್ಟುತ್ತಿರುವ ಹಿರಿಯ. ಅವರನ್ನು ದುರ್ಬಲಗೊಳಿಸಿದರೆ ಕಾಂಗ್ರೆಸನ್ನು ದುರ್ಬಲಗೊಳಿಸಬಹುದು ಎಂದುಕೊಂಡಿದ್ದಾರೆ. ಆದರೆ ಶಿವಕುಮಾರ್ ಹೆದರುವ ವ್ಯಕ್ತಿಯಲ್ಲ. ಜನರಿಗೂ ಗೊತ್ತಿದೆ. ಈ ಸರಕಾರ ಯಾವಾಗ ತೊಲಗುತ್ತದೆ ಎಂದು ಅವರೂ ಕಾದಿದ್ದಾರೆ. ನಾವು ಇಂದಿರಾ ಕ್ಯಾಂಟೀನ್ ಮಾಡಿದರೆ ಆ ಹೆಸರು ಇವರಿಗೆ ಅಲರ್ಜಿ. ಇವರಿಗೆ ನಾಚಿಕೆಯಾಗಬೇಕು. ಸಿ.ಟಿ. ರವಿ ಮಾತೆತ್ತಿದರೆ ಜವಾಹರ ಲಾಲ್ ನೆಹರೂ ಎನ್ನುತ್ತಾರೆ. ಇವರ ಯೋಗ್ಯತೆಯೇನು, ನೆಹರೂ ಯೋಗ್ಯತೆಯೇನು? ಹಿರಿಯ ನಾಯಕರನ್ನು ಗೌರವದಿಂದ ನೋಡಬೇಕು. ನಮ್ಮ ಪಕ್ಷದಲ್ಲಿ ಬಳಸಿ ಒಗೆಯುವುದಿಲ್ಲ. ಯಡಿಯೂರಪ್ಪನವರು ಕಣ್ಣೀರು ಹಾಕಿ ರಾಜೀನಾಮೆ ಕೊಟ್ಟರು. ಅವರ ಕಣ್ಣೀರ ಕಥೆಯೇನು ಎಂಬುದನ್ನು ಬಿಜೆಪಿ ಈವರೆಗೆ ಹೇಳಿಲ್ಲ.

ನಿಮ್ಮ ಪಕ್ಷದಲ್ಲಿಯೂ ಕಾರ್ಯಕರ್ತರ ಅಳಲು, ದುಡಿದರೂ ಅವಕಾಶ ಸಿಗುತ್ತಿಲ್ಲ ಎಂಬುದೇ ಅಲ್ಲವೆ?

ನನ್ನ ಕುಟುಂಬ ರಾಜಕೀಯ ಹಿನ್ನೆಲೆಯದ್ದಲ್ಲ. ಕಾರ್ಯಕರ್ತನಾಗಿ ಬಂದೆ. ಇಂದು ಇಷ್ಟೆಲ್ಲ ಸ್ಥಾನ ಸಿಕ್ಕಿದೆ. ನನ್ನಂಥವನಿಗೆ ಅವಕಾಶ ಸಿಕ್ಕಿರುವಂತೆಯೆ ಎಲ್ಲ ಕಾರ್ಯಕರ್ತ ರಿಗೂ ಅವಕಾಶ ಸಿಗುತ್ತದೆ. ಇವರು ಅಡ್ವಾಣಿಯವರನ್ನು, ಮುರಳಿ ಮನೋಹರ ಜೋಶಿಯವರನ್ನು ಏನು ಮಾಡಿದರು? ಕಾಂಗ್ರೆಸ್‌ನಲ್ಲಿ ಎಲ್ಲರಿಗೂ ಇಂದಿಗೂ ಗೌರವವಿದೆ. ಮನಮೋಹನ್ ಸಿಂಗ್, ಶಿವಶಂಕರಪ್ಪಎಲ್ಲರಿಗೂ ಅದೇ ಗೌರವವಿದೆ.

  ಕೆಪಿಸಿಸಿ ಕಚೇರಿ ಕಾರ್ಯಕರ್ತರನ್ನು ಒಳಗೊಳ್ಳುವುದಿಲ್ಲ ಎಂಬ ಆರೋಪದ ಬಗ್ಗೆ?

ಯಾರು ಇಂತಹ ಆರೋಪ ಮಾಡುತ್ತಾರೊ ಗೊತ್ತಿಲ್ಲ. ಈ ಕಚೇರಿ ಎಲ್ಲ ವರ್ಗದ ಕಾರ್ಯಕರ್ತರಿಗೂ ತೆರೆದಿರುತ್ತದೆ. ಎಲ್ಲ ನಾಯಕರ ಮುಕ್ತ ಭೇಟಿಗೆ ಅವಕಾಶವಿದೆ.

  ಚುನಾವಣೆಯಲ್ಲಿ ನಿಮ್ಮ ಅಜೆಂಡ?

ಒಂದೇ. ಭ್ರಷ್ಟ ಸರಕಾರವನ್ನು ತೆಗೆಯಬೇಕು. ನಾವು ಅಧಿಕಾರಕ್ಕೆ ಬರಬೇಕು ಎಂದಲ್ಲ. ಈ ಕೆಟ್ಟ, ಜನವಿರೋಧಿ, ರೈತವಿರೋಧಿ, ಯುವವಿರೋಧಿ ಸರಕಾರ ಹೋಗಬೇಕು. ರಾಜ್ಯದಲ್ಲಿ ಒಳ್ಳೆಯ ಆಡಳಿತ, ಅಭಿವೃದ್ಧಿ ಪರ ಸರಕಾರ, ಎಲ್ಲರ ಸರಕಾರ ಬರಬೇಕು.