ಆರ್ಡರ್‌ ಮಾಡಿದ ಐಫೋನ್‌ ಕೊಳ್ಳಲು ಹಣವಿಲ್ಲ: ಡೆಲಿವರಿ ಏಜಂಟ್‌ನನ್ನು ಕೊಂದು ಮನೆಯಲ್ಲೇ ಮೃತದೇಹ ಅಡಗಿಸಿಟ್ಟ ಯುವಕ!

ಹಾಸನದಲ್ಲಿ ನಡೆದ ಭೀಕರ ಕೃತ್ಯ

Update: 2023-02-20 10:45 GMT

ಹಾಸನ : ಇ-ಕಾಮರ್ಸ್‌ ತಾಣವೊಂದರಿಂದ ತಾನು ಆರ್ಡರ್‌ ಮಾಡಿದ್ದ ಐಫೋನ್‌ಗೆ ಪಾವತಿಸಲು ಹಣವಿಲ್ಲ ಎಂಬ ಕಾರಣಕ್ಕೆ 20 ವರ್ಷದ ಯುವಕನೊಬ್ಬ ಡೆಲಿವರಿ ಏಜಂಟ್‌ನನ್ನು ಕೊಂದು, ಮೃತದೇಹವನ್ನು ತನ್ನ ಮನೆಯಲ್ಲಿ ನಾಲ್ಕು ದಿನ ಇರಿಸಿ ನಂತರ ನಿರ್ಜನ ಪ್ರದೇಶದಲ್ಲಿ ಅದನ್ನು ಸುಟ್ಟು ಹಾಕಿದ ಘಟನೆ ಹಾಸನ ಜಿಲ್ಲೆಯ ಅರಸೀಕೆರೆಯಿಂದ ವರದಿಯಾಗಿದೆ.

ಆರೋಪಿಯನ್ನು ಪೊಲೀಸರು ಶನಿವಾರ ಬಂಧಿಸಿದ್ದು ಆತನನ್ನು ಅರಸೀಕರೆ ನಿವಾಸಿ ಹೇಮಂತ್‌ ದತ್ತಾ ಎಂದು ಗುರುತಿಸಲಾಗಿದೆ. ಆತನಿಂದ ಹತ್ಯೆಗೀಡಾಗಿದ್ದವನೆಂದು ತಿಳಿಯಲಾದ ಹೇಮಂತ್‌ ನಾಯ್ಕ್‌ (23) ಕೂಡ ಅದೇ ಪಟ್ಟಣದವನಾಗಿದ್ದಾನೆ.

ದತ್ತಾ ಫ್ಲಿಪ್‌ಕಾರ್ಟ್‌ನಿಂದ ಐಫೋನ್‌ ಒಂದನ್ನು ಆರ್ಡರ್‌ ಮಾಡಿದ್ದ ಹಾಗೂ ಡೆಲಿವರಿ ವೇಳೆ ಅದಕ್ಕೆ ರೂ. 46,000 ಆತನ ಪಾವತಿಸಬೇಕಿತ್ತು. ಫೆಬ್ರವರಿ 7 ರಂದು ನಾಯ್ಕ್‌  ಫೋನ್‌ ಡೆಲಿವರಿ ಮಾಡಲು ದತ್ತಾ ಮನೆಗೆ ಹೋಗಿದ್ದಾಗ ಬಾಕ್ಸ್‌ ತೆರೆಯುವಂತೆ ದತ್ತಾ ಆತನಿಗೆ ಕೇಳಿದ್ದ. ಅದಕ್ಕೆ ನಾಯ್ಕ್‌ ನಿರಾಕರಿಸಿದ್ದನಲ್ಲದೆ ಹಾಗೆ ಮಾಡಿದರೆ  ಮತ್ತೆ ವಾಪಸ್‌ ಕೊಂಡೊಯ್ಯುವ ಹಾಗಿಲ್ಲ ಎಂದು ಹೇಳಿ ಫೋನ್‌ ಹಣ ನೀಡುವಂತೆ ದತ್ತಾಗೆ ಸೂಚಿಸಿದ್ದ.

ಆಗ ಡೆಲಿವರಿ ಏಜಂಟ್ ನನ್ನು ದತ್ತಾ ಚಾಕುವಿನಿಂದ ಇರಿದು ಹತ್ಯೆಗೈದು ನಂತರ ಮನೆಯಲ್ಲಿಯೇ ಮೃತದೇಹವನ್ನು ನಾಲ್ಕು ದಿನಗಳ ಕಾಲ ಇರಿಸಿ ಫೆಬ್ರವರಿ 11 ರಂದು ರೈಲ್ವೆ ಸೇತುವೆ ಸಮೀಪ ನಿರ್ಜನ ಪ್ರದೇಶದಲ್ಲಿ ಸೀಮೆಎಣ್ಣೆ ಸುರಿದು ಸುಟ್ಟಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ನಾಯ್ಕ್‌ ಮನೆಗೆ ವಾಪಸಾಗದೇ ಇದ್ದಾಗ ಆತನ ಸೋದರ ಮಂಜುನಾಥ್‌ ಫೆಬ್ರವರಿ 8ರಂದು ನಾಪತ್ತೆ ದೂರು ದಾಖಲಿಸಿದ್ದ. ಈ ನಡುವೆ ಮೃತದೇಹವೊಂದು ರೈಲ್ವೆ ಸೇತುವೆ ಸಮೀಪವಿದೆ ಎಂದು ಮಂಜುನಾಥನ ಸ್ನೇಹಿತ ತಿಳಿಸಿದ್ದ. ನಂತರ ಅದು ಹೇಮಂತ್‌ ಮೃತದೇಹ ಎಂದು ಗುರುತಿಸಲಾಗಿತ್ತು. ಆತನ ಮೊಬೈಲ್‌ ಫೋನ್‌ ಲೊಕೇಶನ್‌ ಕೊನೆಯ ಬಾರಿ ದತ್ತಾ ನಿವಾಸದಲ್ಲಿದ್ದದ್ದು ಪತ್ತೆಯಾದ ನಂತರ ಆತನ ಮನೆಗೆ ಪೊಲೀಸರು ದಾಳಿ ನಡೆಸಿದಾಗ ಅಲ್ಲಿ ಹೇಮಂತನ ಮೊಬೈಲ್‌ ಫೋನ್‌ ಮತ್ತಿತರ ವಸ್ತುಗಳು ಪತ್ತೆಯಾಗಿದ್ದವು.

ಹತ್ಯೆಗೀಡಾಗಿದ್ದ ಹೇಮಂತ್‌ ಕೆಲ ಸಮಯ ಬೆಂಗಳೂರಿನಲ್ಲಿ ಕೆಲಸ ಮಾಡಿದ ನಂತರ ಕಳೆದೆಂಟು ತಿಂಗಳುಗಳಿಂದ ಇಕಾರ್ಟ್‌ ಲಾಜಿಸ್ಟಿಕ್ಸ್‌ನಲ್ಲಿ ಡೆಲಿವರಿ ಏಜಂಟ್‌ ಆಗಿದ್ದ.

Similar News