ಮಂಡ್ಯ | ಕೆಳಸೇತುವೆ ನಿರ್ಮಾಣಕ್ಕೆ ಆಗ್ರಹಿಸಿ ಹೆದ್ದಾರಿ ಬಂದ್: ಸಂಚಾರ ಅಸ್ತವ್ಯಸ್ತ, ಪೊಲೀಸರಿಂದ ಲಘು ಲಾಠಿಪ್ರಹಾರ

Update: 2023-02-21 06:25 GMT

ಮಂಡ್ಯ, ಫೆ.20: ತಾಲೂಕಿನ ಹನಕೆರೆ ಬಳಿ ಕೆಳಸೇತುವೆ ನಿರ್ಮಾಣಕ್ಕೆ ಒತ್ತಾಯಿಸಿ ಸುತ್ತಮುತ್ತಲ ಗ್ರಾಮಸ್ಥರು ಸೋಮವಾರ ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ಹೈವೇ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.

ರೈತಸಂಘದ ಮುಖಂಡ ಎಸ್.ಸಿ. ಮಧುಚಂದನ್ ನೇತೃತ್ವದಲ್ಲಿ ಬೆಳಗ್ಗೆ ಹನಕರೆ ಬಳಿಗೆ ಎತ್ತಿನಗಾರಿ, ಜಾನುವಾರು ಸಮೇತ ಆಗಮಿಸಿದ ನೂರಾರು ಮಂದಿ ರಸ್ತೆ ಬಂದ್ ಮಾಡಿದ್ದರಿಂದ ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಯಿತು.

ಕಾಮಗಾರಿ ಪ್ರಾರಂಭವಾದಾಗಲೇ ಹನಕೆರೆ ಗ್ರಾಮದ ಬಳಿ ಕೆಳಸೇತುವೆ ನಿರ್ಮಾಣಕ್ಕೆ ಹಲವು ಬಾರಿ ಮನವಿಸ ಸಲ್ಲಿಸಿದ್ದರೂ ನಿರ್ಲಕ್ಷ್ಯವಹಿಸಲಾಗಿದೆ. ಹಾಗಾಗಿ ಪ್ರತಿಭಟನೆ ಅನಿವಾರ್ಯವಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಹನಕೆರೆ ಬಳಿಸೇತುವೆ ನಿರ್ಮಿಸುವ ಬದಲು ಸುಮಾರು 600 ಮೀಟರ್ ದೂರದಲ್ಲಿ ನಿರ್ಮಿಸಲಾಗಿದೆ. ಇದರಿಂದ ಸುತ್ತಮುತ್ತಲ ಸುಮಾರು 30 ಗ್ರಾಮಗಳ ಜನರು, ವಿದ್ಯಾರ್ಥಿಗಳಿಗೆ ತೊಂದರೆ ಆಗಿದೆ ಎಂದು ಅವರು ಹೇಳಿದರು.

ಸ್ಥಳಕ್ಕಾಗಮಿಸಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಪತ್ರವೊಂದನ್ನು ತೋರಿಸಿ, ಅನುಮತಿ ಸಿಕ್ಕ ಕೂಡಲೇ ಸೇತುವೆ ನಿರ್ಮಿಸಿಕೊಡಲಾಗುವುದು, ಈಗ ಪ್ರತಿಭಟನೆ ಕೈಬಿಡಿ ಎಂದು ಮನವಿ ಮಾಡಿದರು. ಪತ್ರವನ್ನು ಕಿತ್ತುಕೊಂಡು ಓದಿದ ಪ್ರತಿಭಟನಾಕಾರರು, ಇದು ಡಿಸೆಂಬರ್ ನಲ್ಲಿಹೊರಡಿಸಿರುವ ಆದೇಶಪತ್ರವಾಗಿದ್ದು, ಇದಕ್ಕೆ ಕಿಮ್ಮತ್ತಿಲ್ಲವೆಂದು ಹರಿದುಹಾಕಿ ಪ್ರತಿಭಟನೆ ಮುಂದುವರಿಸಿದರು.

ಸ್ಥಳಕ್ಕಾಗಮಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಹೆದ್ದಾರಿ ಸಂಚಾರಕ್ಕೆ ತೊಂದರೆಯಾಗುತ್ತಿದ್ದು ಹೋರಾಟವನ್ನು ಕೈಬಿಡುವಂತೆ ಮನವಿ ಮಾಡಿದರೂ ಪ್ರತಿಭಟನೆ ಮುಂದುವರಿಸಿದ್ದರಿಂದ ಪೊಲೀಸರು ಲಘು ಲಾಠಿಪ್ರಹಾರ ನಡೆಸಿ, ರೈತಮುಖಂಡರಾದ ಮಧುಚಂದನ್, ಪ್ರಸನ್ನ ಎನ್.ಗೌಡ ಅವರನ್ನು ಬಂಧಿಸಿ ಕರೆದೊಯ್ದರು.

ನಂತರ, ಗ್ರಾಮಸ್ಥರು ರಸ್ತೆಪಕ್ಕದಲ್ಲಿ ಧರಣಿ ಮುಂದುವರಿದರು. ಆ ವೇಳೆಗೆ ಎರಡು ತಿಂಗಳಲ್ಲಿ ಸದರಿ ಸ್ಥಳದಲ್ಲಿ ಕೆಳಸೇತುವೆ ನಿರ್ಮಾಣ ಕಾಮಗಾರಿ ಆರಂಭಿಸುವ ಭರವಸೆಯ ಪತ್ರವನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಫ್ಯಾಕ್ಸ್ ಮೂಲಕ ಕಳುಹಿಸಿದ ನಂತರ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.

ರೈತಸಂಘದ ಮುಖಂಡರಾದ ಪ್ರಸನ್ನ ಎನ್.ಗೌಡ, ಪ್ರಸನ್ನಕುಮಾರ್, ನಗರಸಭೆ ಮಾಜಿ ಸದಸ್ಯೆ ನಾಗರೇವಕ್ಕ, ಗೌಡಗೆರೆ ಗ್ರಾಪಂ ಅಧ್ಯಕ್ಷ ಸಿದ್ದೇಗೌಡ, ಮಹೇಶ್, ಸತೀಶ್, ಜಯರಾಂ, ನಾಗರಾಜು, ಹರೀಶ್, ಚಿಕ್ಕೈದೇಗೌಡ, ಇತರ ಮುಖಂಡರು ಸೇರಿದಂತೆ ಹಲವು ಮಹಿಳೆಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Similar News