ಸದನದಲ್ಲಿ ಆಡಳಿತ-ವಿಪಕ್ಷ ಸದಸ್ಯರ ನಡುವೆ ‘ಭ್ರಷ್ಟಾಚಾರ’ದ ವಾಗ್ವಾದ: ಯಾವುದೇ ತನಿಖೆಗೆ ಸಿದ್ಧ ಎಂದ ಸಿಎಂ ಬೊಮ್ಮಾಯಿ

Update: 2023-02-20 14:27 GMT

ಬೆಂಗಳೂರು, ಫೆ. 20: ‘ಡಬಲ್ ಎಂಜಿನ್ ಸರಕಾರ, ಶೇ.40ರಷ್ಟು ಕಮಿಷನ್ ಆರೋಪ, ಭ್ರಷ್ಟಾಚಾರ, ಲೋಕಾಯುಕ್ತ, ಎಸಿಬಿ’ ಸಹಿತ ಇನ್ನಿತರು ವಿಚಾರಗಳು ಆಡಳಿತರೂಢ ಬಿಜೆಪಿ ಹಾಗೂ ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರ ನಡುವೆ ಕೆಲಕಾಲ ತೀವ್ರ ವಾಗ್ವಾದಕ್ಕೆ ಕಾರಣವಾಯಿತು.

ಸೋಮವಾರ ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಉತ್ತರ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ‘ದೇಶದಲ್ಲೇ ಅತಿಹೆಚ್ಚು ಭ್ರಷ್ಟ ಸರಕಾರ ಎಂದು ಸಿದ್ದರಾಮಯ್ಯ ಆಡಳಿತವನ್ನು ಮೂರು ಸಮೀಕ್ಷೆಗಳು ತಿಳಿಸಿವೆ. ಕಾಂಗ್ರೆಸ್‍ನಿಂದ ಟೆಂಡರ್ ಶ್ಯೂರ್ ರಸ್ತೆಗೆ ಅನುಮತಿ ನೀಡುವಾಗ ಶೇ.48ಕ್ಕೂ ಹೆಚ್ಚು ಭ್ರಷ್ಟಾಚಾರ ನಡೆದಿತ್ತು. ಇವರು ನಮ್ಮ ಸರಕಾರದ ಶೇ.40 ಪಸೆರ್ಂಟ್ ಆರೋಪ ಮಾಡುತ್ತಿದ್ದಾರೆಂದು ಉಲ್ಲೇಖಿಸಿದರು.

ಇದಕ್ಕೆ ಆಕ್ಷೇಪಿಸಿದ ವಿಪಕ್ಷ ಉಪನಾಯಕ ಯು.ಟಿ.ಖಾದರ್, ‘ಶೇ.40ರಷ್ಟು ಕಮಿಷನ್ ಆರೋಪ ಮಾಡಿದ್ದು, ಕಾಂಗ್ರೆಸ್ ಪಕ್ಷವಲ್ಲ. ಬದಲಿಗೆ ಗುತ್ತಿಗೆದಾರರ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದು ಎಂದರು. ‘ಆತ ನಿಮ್ಮ ಪಕ್ಷ ಏಜೆಂಟ್’ ಎಂದು ಆಡಳಿತ ಪಕ್ಷದ ಸದಸ್ಯರು ದೂರಿದ್ದು, ಉಭಯ ಸದಸ್ಯರ ನಡುವೆ ಏರಿದ ಧ್ವನಿಯಲ್ಲಿ ಗದ್ದಲಕ್ಕೆ ಅವಕಾಶ ಮಾಡಿತು.

ಈ ಮಧ್ಯೆ ಮಾತನಾಡಿದ ಬಸವರಾಜ ಬೊಮ್ಮಾಯಿ, ‘ರಾಜ್ಯಪಾಲರ ಭಾಷಣವನ್ನು ಸಿದ್ದರಾಮಯ್ಯ, ‘ತೌಡು ಕುಟ್ಟುವ ಭಾಷಣ’ ಎಂದಿದ್ದಾರೆ. ಆದರೆ, ‘ಅವರು ತಮ್ಮ ಅನುಭವವನ್ನು ಹೇಳಿದ್ದಾರೆ. ಆದರೆ, ನಾವು ಭತ್ತವನ್ನು ಕುಟ್ಟಿ ಅಕ್ಕಿ ತೆಗೆಯುವವರು’ ಎಂದು ಹೇಳಿದರು. ನಮ್ಮ ವಿರುದ್ಧ ಮಾಡಿದ ಯಾವುದೇ ಆರೋಪಕ್ಕೆ ದಾಖಲೆ ಮತ್ತು ದೂರನ್ನು ಏಕೆ ಕೊಟ್ಟಿಲ್ಲ. ಇವರ ಹಿಂದೆ ಯಾರಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಮ್ಮ ಕಮಿಷನ್ ನಿಂತು ಹೋಯಿತಲ್ಲ ಎಂಬ ಸಂಕಟದಿಂದ ಹೀಗೆಲ್ಲ ಆರೋಪ ಮಾಡುತ್ತಿದ್ದಾರೆ. ಕಾಂಗ್ರೆಸ್ ನಾಯಕರ ಮಾತೇ ಒಂದು ದೊಡ್ಡ ಸುಳ್ಳು. ಕಾಂಗ್ರೆಸ್ ಅವಧಿಯಲ್ಲಿ ಗೋಲಿಬಾರ್‍ನಿಂದ ಹೆಚ್ಚು ರೈತರು ಸಾವನ್ನಪ್ಪಿದ್ದಾರೆ. ಚುನಾವಣೆ ಬಂದಾಗ ರೈತರ ಬಗ್ಗೆ ಪ್ರೀತಿ ಉಕ್ಕಿ ಹರಿಯುತ್ತಿದೆ ಎಂದು ಬೊಮ್ಮಾಯಿ ವಾಗ್ದಾಳಿ ನಡೆಸಿದರು.

ತನಿಖೆಗೆ ಸಿದ್ಧ: ‘ಸರಕಾರದ ವಿರುದ್ಧ ಸುಖಾ ಸುಮ್ಮನೆ ಆರೋಪ ಮಾಡುವುದಲ್ಲ, ದಾಖಲೆ ಇದ್ದರೆ ನೇರವಾಗಿ ಸರಕಾರದ ಬಳಿಗೆ ಬನ್ನಿ. ಅನಗತ್ಯವಾಗಿ ತಪ್ಪು ಹುಡುಕುವ ಕೆಲಸ ಬೇಡ, ಲೋಕಾಯುಕ್ತ ಸೇರಿದಂತೆ ಯಾವುದೇ ರೀತಿಯ ತನಿಖೆ ಮಾಡಲು ನಾವು ಸದಾ ಸಿದ್ಧ ಇದ್ದೇವೆ ಎಂದು ಬೊಮ್ಮಾಯಿ ಸವಾಲು ಹಾಕಿದರು.

ಕಾಂಗ್ರೆಸ್ ಅವಧಿಯಲ್ಲಿ ಸಚಿವರು ಹಾಗೂ ಸಿಎಂ ವಿರುದ್ಧದ ಆರೋಪಗಳನ್ನು ಮುಚ್ಚಿ ಹಾಕುವ ಉದ್ದೇಶದಿಂದಲೇ ಲೋಕಾಯುಕ್ತ ಅಧಿಕಾರವನ್ನು ಕಸಿದು ಎಸಿಬಿ ರಚನೆ ಮಾಡಿದರು. ಅಲ್ಲಿ ದಾಖಲಾಗಿದ್ದ ದೂರುಗಳನ್ನು ತನಿಖೆ ಮಾಡಲು ಅಂದಿನ ಸರಕಾರ ಮುಂದಾಗಲಿಲ್ಲ. ತನಿಖೆಯಾಗದ ಎಲ್ಲ ಪ್ರಕರಣಗಳನ್ನು ಇದೀಗ ಲೋಕಾಯುಕ್ತ ತನಿಖೆಗೆ ಶಿಫಾರಸ್ಸು ಮಾಡುತ್ತಿದ್ದೇವೆ ಎಂದು ಅವರು ಘೋಷಣೆ ಮಾಡಿದರು.

ನಮ್ಮ ಮೇಲೆ ಯಾವುದೇ ಪ್ರಕರಣಗಳಲ್ಲಿ ನಿಖರ ಮಾಹಿತಿ ಇದ್ದರೆ ಲೋಕಾಯುಕ್ತಕ್ಕೆ ಕೊಡಿ. ಸುಮ್ಮನೆ ಬೀದಿಯಲ್ಲಿ ನಿಂತು ಆರೋಪ ಮಾಡುವುದು ಸರಿಯಲ್ಲ. ನಿಮ್ಮ ಬಣ್ಣದ ಮಾತುಗಳಿಗೆ ಜನ ಮರಳಾಗುವುದಿಲ್ಲ. ನೀರಾವರಿ ಇಲಾಖೆ ಟೆಂಡರ್ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತರಲಾಗಿದೆ ಎಂದು ಅವರು ತಿಳಿಸಿದರು.

Similar News