ಕರಾವಳಿ ಪ್ರವಾಸೋದ್ಯಮಕ್ಕೆ ಕ್ರಮ: ಸಚಿವ ಡಾ.ಅಶ್ವತ್ಥನಾರಾಯಣ

Update: 2023-02-20 16:35 GMT

ಬೆಂಗಳೂರು, ಫೆ.20: ಕರಾವಳಿ ತೀರ ಪ್ರದೇಶದಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲು ಸರಕಾರ ಹಲವು ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದ್ದಾರೆ. 

ಸೋಮವಾರ ಪರಿಷತ್‍ನಲ್ಲಿ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಕೆ.ಪ್ರತಾಪ್ ಸಿಂಹ ನಾಯಕ ಅವರ ಪ್ರಶ್ನೆಗೆ ಪ್ರವಾಸೋದ್ಯಮ ಸಚಿವ ಆನಂದ್‍ಸಿಂಗ್ ಪರವಾಗಿ ಉತ್ತರ ನೀಡಿದ ಸಚಿವರು, ‘ಹೆಲಿ’ ಟೂರಿಸಂ ಸೇರಿದಂತೆ ವಿವಿಧ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಪ್ರವಾಸೋದ್ಯಮ ಅಭಿವೃದ್ಧಿಪಡಿಸಲಾಗುವುದು ಎಂದು ಹೇಳಿದರು. 

ಕರ್ನಾಟಕ ಪ್ರವಾಸೋದ್ಯಮ ನೀತಿ 2020-26ರಡಿಯಲ್ಲಿ ರಾಜ್ಯದಲ್ಲಿ ಗುರುತಿಸಲಾದ ಪ್ರವಾಸಿ ತಾಣಗಳಲ್ಲಿ ಪ್ರವಾಸೋದ್ಯಮ ಯೋಜನೆಗಳಲ್ಲಿ ಪರಿಸರ ಸ್ನೇಹಿ ಮತ್ತು ಸುಸ್ಥಿರ ಪ್ರವಾಸೋದ್ಯಮ ಉಪಕ್ರಮಗಳನ್ನು ಕೈಗೊಳ್ಳಲು ಹಲವು ಯೋಜನೆಗಳನ್ನು ಜಾರಿ ಮಾಡಲಾಗಿದೆ ಎಂದು ತಿಳಿಸಿದರು. 

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಧರ್ಮಸ್ಥಳ ಮತ್ತು ಮಂಗಳೂರನ್ನು ಪ್ರವಾಸಿ ತಾಣಗಳು ಎಂದು ಪರಿಗಣಿಸಿದ್ದು, ಮುಂಬರುವ ದಿನಗಳಲ್ಲಿ ಪ್ರಮುಖ ಪ್ರವಾಸಿ ಸ್ಥಳಗಳನ್ನು ಒಳಗೊಂಡಂತೆ ಹಸಿರು ಸರ್ಕ್ಯೂಟ್ ರಚಿಸಲು ಎಲಿಟೂರಿಸಂ ಸೇವಾ ಪೂರೈಕೆದಾರರಿಗೆ ಸೂಚಿಸಲಾಗುವುದು ಎಂದು ಸಚಿವರು ತಿಳಿಸಿದರು.

ಕರಾವಳಿ ತೀರ ಪ್ರದೇಶದಲ್ಲಿ ಕೇಂದ್ರ ಸರಕಾರ ನಿಯಮಾವಳಿಗಳನ್ನು ಸಡಿಲ ಮಾಡಿರುವ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ಪ್ರವಾಸೋದ್ಯಮದ ಅಭಿವೃದ್ಧಿಗೆ ಮತ್ತಷ್ಟು ವಿಫುಲ ಅವಕಾಶಗಳು ಸಿಗುತ್ತಿವೆ. ಅಲ್ಲದೆ, ಏಕರೂಪದ ಸಮ್ಮತಿಯ ಅವಧಿ ರಾಜ್ಯ ಮಾಲೀನ್ಯ ನಿಯಂತ್ರಣ ಮಂಡಳಿ ಜಲ ಮಾರ್ಗ 1974 ಮತ್ತು ವಾಯು ಕಾಯ್ದೆ 1981ರಡಿಯಲ್ಲಿ ಕಿತ್ತಲೆ, ಹಸಿರು, ಮೂರು ಪ್ರವರ್ಗಗಳಲ್ಲಿ ಉದ್ಯಮಿಗಳಿಗೆ ಏಕರೂಪದ ಸಮ್ಮತಿ ಇರಬೇಕು ಎಂದು ನಿರ್ಧರಿಸಲಾಗಿದೆ ಎಂದು ಡಾ. ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು.

Similar News