ಬಜೆಟ್ ಎಂದರೆ ಅಂಕಿಅಂಶಗಳ ಕಸರತ್ತಲ್ಲ, ಪ್ರತಿಯೊಬ್ಬ ಪ್ರಜೆಯ ಲೆಕ್ಕಾಚಾರ: ಸಿದ್ದರಾಮಯ್ಯ
ಬೆಂಗಳೂರು, ಫೆ. 20: ಬಜೆಟ್ ಎಂದರೆ ಅಂಕಿಅಂಶಗಳ ಕಸರತ್ತಲ್ಲ, ಪ್ರತಿಯೊಬ್ಬ ಪ್ರಜೆಯ ಲೆಕ್ಕಾಚಾರವಿದು, ಪ್ರತಿ ಮನೆಯ ಗೃಹಿಣಿಯ ಆಯವ್ಯಯವಿದು. ಬಜೆಟ್ ಎಂದರೆ ಹಿನ್ನೋಟ, ಮುನ್ನೋಟ ಎರಡೂ ಇರಬೇಕು. ಜನರ ಸಮಸ್ಯೆಗಳಿಗೆ ನಾವು ಹೇಗೆ ಪರಿಹಾರ ಕೊಡಲು ಪ್ರಯತ್ನ ಮಾಡುತ್ತೇವೆ ಎಂಬ ಮಾಹಿತಿ ಇರಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ಸೋಮವಾರ ವಿಧಾನಸಭೆಯಲ್ಲಿ 2023-24ನೆ ಸಾಲಿನ ಬಜೆಟ್ ಕುರಿತ ಚರ್ಚೆಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 3,09,182 ಕೋಟಿ ರೂ.ಗಾತ್ರದ ಬಜೆಟ್ ಮಂಡನೆ ಮಾಡಿದ್ದಾರೆ. ಕಳೆದ ವರ್ಷದ ಬಜೆಟ್ ಗಾತ್ರ 2,65,720 ಕೋಟಿ ರೂ.ಗಳು. ತೆರಿಗೆ ಸಂಗ್ರಹ ಹೆಚ್ಚಾಗಿರುವುದರಿಂದ ಬಜೆಟ್ ಗಾತ್ರ ಹೆಚ್ಚಾಗಿದೆ ಎಂದರು.
ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.26ರಷ್ಟು ತೆರಿಗೆ ಸಂಗ್ರಹದಲ್ಲಿ ಬೆಳವಣಿಗೆ ಇದೆ. ಕಳೆದ ವರ್ಷ ಬಜೆಟ್ ಮಂಡಿಸಿದಾಗ 14,699 ಕೋಟಿ ರೂ.ವಿತ್ತೀಯ ಕೊರತೆ ಇತ್ತು. ಪರಿಷ್ಕೃತ ಅಂದಾಜಿನಲ್ಲಿ 5,095 ಕೋಟಿಗೆ ಇಳಿಕೆಯಾಗಿದೆ ಎಂದು ಹೇಳಿದ್ದಾರೆ. ಮುಂದಿನ ವರ್ಷ ತೆರಿಗೆ ಸಂಗ್ರಹ ಹೆಚ್ಚಾಗುವುದರಿಂದ ರಾಜಸ್ವ ಸಂಗ್ರಹದ ಉಳಿಕೆ ಮಾಡುತ್ತೇವೆ ಎಂದಿದ್ದಾರೆ. ಮುಂದಿನ ವರ್ಷ ಈ ಸರಕಾರ ಇರುವುದಿಲ್ಲ, ಬಿಜೆಪಿ ಸರಕಾರ ರಾಜಸ್ವ ಉಳಿಕೆ ಬಜೆಟ್ ಮಂಡನೆ ಮಾಡಲು ಸಾಧ್ಯವಿಲ್ಲ ಎಂದು ಅವರು ಟೀಕಿಸಿದರು.
ಬಜೆಟ್ ನಲ್ಲಿ ಪಾರದರ್ಶಕತೆ ಮತ್ತು ಉತ್ತರದಾಯಿತ್ವ ಇರಬೇಕು. ಆದರೆ ಈ ಬಜೆಟ್ ನಲ್ಲಿ ಎಲ್ಲೂ ಜನರಿಗೆ ಸತ್ಯ ಹೇಳುವ ಕೆಲಸ ಮಾಡಿಲ್ಲ. ಬಜೆಟ್ ಮೂಲಕ ಜನರ ದಾರಿ ತಪ್ಪಿಸುವ ಪ್ರಯತ್ನ ಮಾಡಿದ್ದಾರೆ. ರಾಜ್ಯಪಾಲರ ಭಾಷಣದ ಬಗ್ಗೆ ವಂದನಾ ನಿರ್ಣಯ ಮಂಡಿಸುವಾಗ 2018ರಲ್ಲಿ ಬಿಜೆಪಿ ಪಕ್ಷ ರಾಜ್ಯದ ಜನರಿಗೆ 600 ಭರವಸೆಗಳನ್ನು ನೀಡಿದ್ದರು, ಅದರಲ್ಲಿ ಕೇವಲ ಶೇ.10ರಷ್ಟು ಭರವಸೆಗಳನ್ನು ಮಾತ್ರ ಈಡೇರಿಸಿದ್ದಾರೆ ಎಂದಿದ್ದೆ. ಅದಕ್ಕೆ ಬೊಮ್ಮಾಯಿ ಅವರು ಸಿದ್ದರಾಮಯ್ಯ ಸರಕಾರ ಜನರಿಗೆ ನೀಡಿದ್ದ ಭರವಸೆಗಳಲ್ಲಿ ಶೇ.30 ಭರವಸೆಗಳನ್ನು ಈಡೇರಿಸಿಲ್ಲ ಎಂದು ಹೇಳಿದ್ದಾರೆ ಎಂದು ಸಿದ್ದರಾಮಯ್ಯ ತಿಳಿಸಿದರು.
ನಮ್ಮ ಪ್ರಣಾಳಿಕೆಯನ್ನು ತೆಗೆದುಕೊಂಡು ಬಂದಿದ್ದೇನೆ, ನಾವು ಹೇಳಿದ್ದೆಷ್ಟು, ಈಡೇರಿಸಿದ್ದೆಷ್ಟು? ನೀವು ಹೇಳಿದ್ದೆಷ್ಟು? ಈಡೇರಿಸಿದ್ದೆಷ್ಟು? ಎಂದು ಇಲ್ಲಿ ಚರ್ಚೆಯಾಗಲಿ. ಸುಳ್ಳು ಹೇಳಿ ಜನರಿಗೆ ತಪ್ಪು ಸಂದೇಶ ಹೋಗಬಾರದು. ಚರ್ಚೆಗೆ ನಾನು ಸಿದ್ಧನಿದ್ದೇನೆ, ಇದನ್ನು ಸವಾಲಾಗಿ ಸ್ವೀಕರಿಸಿ ಯಾರಾದರೂ ಚರ್ಚೆಗೆ ಬರುವುದಾದರೆ ಬರಲಿ.ಬಿಜೆಪಿ ಸರಕಾರದ ಶೇ.90ರಷ್ಟು ಭರವಸೆಗಳು ಈಡೇರಿಕೆಯಾಗದೆ ಹಾಗೆಯೇ ಉಳಿದಿದೆ. ಕಳೆದ ಬಜೆಟ್‍ನಲ್ಲಿ ಸರಕಾರ 206 ಹೊಸ ಕಾರ್ಯಕ್ರಮಗಳನ್ನು ಹೇಳಿತ್ತು, ಅದರಲ್ಲಿ 57 ಕಾರ್ಯಕ್ರಮಗಳನ್ನು ಇವತ್ತಿನವರೆಗೆ ಜಾರಿ ಮಾಡಲು ಆಗಿಲ್ಲ ಎಂದು ಅವರು ಟೀಕಿಸಿದರು.
ಜನವರಿ ಅಂತ್ಯಕ್ಕೆ ಬಜೆಟ್ ನಲ್ಲಿ ತೋರಿಸಿದ ಹಣದಲ್ಲಿ ಖರ್ಚಾದದ್ದು ಕೇವಲ ಶೇ.56ರಷ್ಟು ಮಾತ್ರ. ಒಂದು ತಿಂಗಳಲ್ಲಿ ಶೇ.44ರಷ್ಟು ಹಣ ಖರ್ಚು ಮಾಡಲು ಆಗುತ್ತಾ? ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಈ ಬಜೆಟ್ ರಾಜ್ಯವನ್ನು ಸಾಲದ ಸುಳಿಗೆ ಸಿಲುಕಿಸಿರುವ, ರೈತರ, ಬಡವರ, ದಲಿತರ ವಿರೋಧಿ ಬಜೆಟ್. ಇದರಲ್ಲಿ ಬರಿ ಸುಳ್ಳುಗಳೆ ಕೂಡಿವೆ ಎಂದರು.
'ರಾಜ್ಯದ ಬೊಕ್ಕಸದಲ್ಲಿರುವುದು ಜನರ ಬೆವರಗಳಿಕೆಯ ತೆರಿಗೆ ಹಣ. ವರಮಾನ ತೆರಿಗೆ ನೀಡುವವರು ಮಾತ್ರ ತೆರಿಗೆದಾರರು ಎನ್ನುವ ತಪ್ಪು ಕಲ್ಪನೆ ನಮ್ಮಲ್ಲಿ ಬಹಳಷ್ಟು ಜನರಲ್ಲಿದೆ'
- ಸಿದ್ದರಾಮಯ್ಯ, ವಿಪಕ್ಷ ನಾಯಕ
ರಾಜ್ಯದ ಬೊಕ್ಕಸದಲ್ಲಿರುವುದು ಜನರ ಬೆವರಗಳಿಕೆಯ ತೆರಿಗೆ ಹಣ. ವರಮಾನ ತೆರಿಗೆ ನೀಡುವವರು ಮಾತ್ರ ತೆರಿಗೆದಾರರು ಎನ್ನುವ ತಪ್ಪು ಕಲ್ಪನೆ ನಮ್ಮಲ್ಲಿ ಬಹಳಷ್ಟು ಜನರಲ್ಲಿದೆ. 8/10#Session2023
— Siddaramaiah (@siddaramaiah) February 20, 2023