ಕಾಂಗ್ರೆಸ್ ಭದ್ರಕೋಟೆಯಲ್ಲಿ ನಡೆಯುವುದೇ ಬಿಜೆಪಿ, ಜೆಡಿಎಸ್ ಆಟ?

ಗಾಂಧಿನಗರ ವಿಧಾನಸಭಾ ಕ್ಷೇತ್ರ

Update: 2023-02-21 07:39 GMT

ಸತತ ಗೆಲುವು ಕಂಡ ದಿನೇಶ್ ಗುಂಡೂರಾವ್‌ಗೆ  ಎದುರಾಳಿಗಳು ಯಾರು? ಐದು ಬಾರಿ ಗೆದ್ದ ಕ್ಷೇತ್ರದಲ್ಲಿ ಆಗಿರದ ಅಭಿವೃದ್ಧಿಯೇ ಸವಾಲಾಗಲಿದೆಯೆ? ಕಾಂಗ್ರೆಸ್ ಭದ್ರಕೋಟೆ ಒಡೆಯಲು ಬಿಜೆಪಿ, ಜೆಡಿಎಸ್ ರಣತಂತ್ರವೇನು? ಗಾಂಧಿನಗರವೆಂಬ ಬಣ್ಣದ ಲೋಕದಲ್ಲಿ ಈ ಬಾರಿ ಯಾರಿಗೆ ಗೆಲುವು?

ಗಾಂಧಿನಗರ ಎಂದ ತಕ್ಷಣ ನೆನಪಾಗುವುದು ಚಿತ್ರರಂಗ. ಕನ್ನಡದ ಪ್ರಮುಖ ಚಿತ್ರ ನಿರ್ಮಾಣ ಸಂಸ್ಥೆಗಳು, ಅಪೂರ್ವ ಇತಿಹಾಸವಿರುವ ಚಿತ್ರ ಮಂದಿರಗಳು ಇರುವ ಪ್ರದೇಶ ಇದು. ವೈವಿಧ್ಯಮಯ ಬಣ್ಣದ ಕನಸುಗಳನ್ನು ಮಾರುವ ಗಾಂಧಿನಗರ, ಮತದಾರರ ಪಾಲಿಗೆ ಕನಸುಗಳನ್ನು ಮಾರುವ ಕ್ಷೇತ್ರವೂ ಹೌದು.

ಇಲ್ಲಿ ಹಲವು ಭಾಷಿಕರು ನೆಲೆಸಿದ್ದಾರೆ. ಸದಾ ಜನನಿಬಿಡವಾದ ವಾಣಿಜ್ಯ ಕೇಂದ್ರವೂ ಹೌದು. ಬೆಂಗಳೂರಿನ ಹೃದಯವಾಗಿರುವ ಮೆಜೆಸ್ಟಿಕ್ ಇರುವುದು ಇದೇ ಕ್ಷೇತ್ರದ ವ್ಯಾಪ್ತಿಯಲ್ಲಿ.

ದಿನೇಶ್ ಗುಂಡೂರಾವ್ ವರ್ಚಸ್ಸು

ಕಳೆದ 23 ವರ್ಷಗಳಿಂದ ಕಾಂಗ್ರೆಸ್ ಹಿಡಿತದಲ್ಲಿರುವ ಈ ಕ್ಷೇತ್ರಕ್ಕೆ ದಿನೇಶ್ ಗುಂಡೂರಾವ್ ಶಾಸಕರು. ಮುಖ್ಯಮಂತ್ರಿಗಳಾಗಿದ್ದ ತಂದೆ ಆರ್. ಗುಂಡೂರಾವ್ ಅವರ ನೆರಳಿನಲ್ಲಿ ರಾಜಕಾರಣ ಕಲಿತ ದಿನೇಶ್, 1999ರಿಂದ 2018ರವರೆಗೆ ಸತತವಾಗಿ ಗೆಲುವು ಸಾಧಿಸಿದ್ದಾರೆ. ಈ ಬಾರಿಯೂ ಗೆಲ್ಲುವ ವಿಶ್ವಾಸದಲ್ಲಿದ್ದಾರೆ. ಪಕ್ಷದ ಪ್ರಮುಖ ಮುಖಂಡರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿರುವ ದಿನೇಶ್ ತಮ್ಮ ವರ್ಚಸ್ಸೇ ಮಂತ್ರದಂಡವೆಂಬ ಆತ್ಮವಿಶ್ವಾಸದಲ್ಲಿದ್ದಾರೆ. 

ಕ್ಷೇತ್ರದಲ್ಲಿ ಓಕಳಿಪುರಂ, ಚಿಕ್ಕಪೇಟೆ, ಕಾಟನ್ ಪೇಟೆ, ಬಿನ್ನಿಪೇಟೆ, ದತ್ತಾತ್ರೇಯ ದೇವಸ್ಥಾನ, ಗಾಂಧಿನಗರ, ಸುಭಾಷ್ ನಗರ ವಾರ್ಡ್‌ಗಳಿವೆ. ಕೊಳೆಗೇರಿಗಳೂ ಹೆಚ್ಚಿದ್ದು, ದಿನೇಶ್ ಗುಂಡೂರಾವ್ ಅವರ ಪ್ರಭಾವ ತೀವ್ರವಾಗಿದೆ.

ದಿನೇಶ್ ಗುಂಡೂರಾವ್ ಅವರಿಗಿಂತ ಮೊದಲೂ ಇಲ್ಲಿ ಕಾಂಗ್ರೆಸ್ ತನ್ನ ಛಾಪು ಒತ್ತಿದೆ. 1978ರಲ್ಲಿ ಮೊದಲ ಬಾರಿಗೆ ಚುನಾವಣೆ ಎದುರಿಸಿ ಈ ಕ್ಷೇತ್ರದಲ್ಲಿ ಇಂದಿರಾ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಕೆ. ಲಕ್ಷ್ಮ್ಮಣ್, ಜನತಾ ಪಕ್ಷದ ಎಂ. ಆರ್. ಜಯರಾಮ್ ಅವರನ್ನು ಸೋಲಿಸಿದ್ದರು. ಆದರೆ 1983ರಲ್ಲಿ ಜನತಾ ಪಕ್ಷ ಎಂ.ಎಸ್. ನಾರಾಯಣ ರಾವ್ ಅವರನ್ನು ಕಣಕ್ಕಿಳಿಸಿ, ಗಾಂಧಿನಗರವನ್ನು ಗೆದ್ದುಕೊಂಡಿತ್ತು.

1989ರಲ್ಲಿ ಆರ್. ದಯಾನಂದ ರಾವ್ ಅವರ ಮೂಲಕ ಕಾಂಗ್ರೆಸ್, ಗಾಂಧಿನಗರ ಕ್ಷೇತ್ರವನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡಿತು. 44 ವರ್ಷಗಳಲ್ಲಿ ಇತಿಹಾಸದಲ್ಲಿ ಒಂದೇ ಬಾರಿ, 1994ರಲ್ಲಿ ಎಡಿಎಂಕೆ ಗಾಂಧಿನಗರದಲ್ಲಿ ಗೆಲುವಿನ ಬಾವುಟ ಹಾರಿಸಿತ್ತು. ಎಡಿಎಂಕೆಯ ಬಿ. ಮುನಿಯಪ್ಪ, ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಯನ್ನು ಹಿಂದಿಕ್ಕಿದ್ದರು. ಬಿಜೆಪಿ ಮೂರನೇ ಸ್ಥಾನಕ್ಕೆ ಬಂದಿತ್ತು. ಆಗ ನಟ ನೆ.ಲ. ನರೇಂದ್ರ ಬಾಬು ಬಿಜೆಪಿ ಅಭ್ಯರ್ಥಿಯಾಗಿದ್ದರು.

1999ರಿಂದ ದಿನೇಶ್ ಗುಂಡೂರಾವ್ ತಳಮಟ್ಟದಲ್ಲಿ ಕೆಲಸಗಳನ್ನು ಮಾಡುತ್ತ ಕ್ಷೇತ್ರದ ಜನರ ಮನ ಗೆಲ್ಲುತ್ತ ಬಂದರು.  ದಿನೇಶ್ ಎದುರು ಎರಡು ಬಾರಿ ಪಿ.ಸಿ. ಮೋಹನ್ ಸ್ಪರ್ಧಿಸಿ ಸೋತರು. ಕಳೆದ ಚುನಾವಣೆಯಲ್ಲಿ ಯುವ ಆಕಾಂಕ್ಷಿಯಾಗಿದ್ದ ಎ.ಆರ್. ಸಪ್ತಗಿರಿ ಗೌಡರನ್ನು ಬಿಜೆಪಿ ಕಣಕ್ಕೆ ಇಳಿಸಿತ್ತಾದರೂ, ದಿನೇಶ್ ವರ್ಚಸ್ಸಿನ ಎದುರು ಆಟ ನಡೆಯಲಿಲ್ಲ.

ಹಳೇ ಹುಲಿ, ಹೊಸ ಆಟ

ಬಿಜೆಪಿ ಇನ್ನೂ ಅಭ್ಯರ್ಥಿಗಳನ್ನು ಘೋಷಿಸಿಲ್ಲ. ಕಳೆದ ಬಾರಿ ಸ್ಪರ್ಧಿಸಿದ್ದ ಸಪ್ತಗಿರಿ ಗೌಡರಿಗೆ ಈ ಕ್ಷೇತ್ರದಿಂದ ಸ್ಪರ್ಧಿಸುವ ಉಮೇದಿ ಇದೆ. ಆದರೆ ಕ್ಷೇತ್ರದಲ್ಲಿ ಚುನಾವಣಾ ಕಣಕ್ಕೆ ಕಾಲಿಟ್ಟಿರುವವರು ಕೃಷ್ಣಯ್ಯ ಶೆಟ್ಟರು. ಬಿ.ಎಸ್. ಯಡಿಯೂರಪ್ಪನವರ ಪರಮಾಪ್ತ ವಲಯದಲ್ಲಿದ್ದವರು ಕೃಷ್ಣಯ್ಯ ಶೆಟ್ಟಿ. ಯಡಿಯೂರಪ್ಪನವರ ಸಂಪುಟದಲ್ಲಿ ಮುಜರಾಯಿ ಇಲಾಖೆ ಸಚಿವರಾಗಿ, ಗಂಗಾಜಲ, ತಿರುಪತಿ ಲಡ್ಡುಗಳನ್ನು ವಿತರಿಸಿ ಜನಪ್ರಿಯರಾಗಿದ್ದರು.

2011ರಲ್ಲಿ ರಾಚೇನಹಳ್ಳಿ ಭೂ ಹಗರಣದಲ್ಲಿ ಜೈಲು ಪಾಲಾಗಿದ್ದರು. ಮರಳಿ ಬಂದ ನಂತರ ಬಿಜೆಪಿಯಿಂದ ಟಿಕೆಟ್ ನಿರೀಕ್ಷೆಯಲ್ಲಿದ್ದರು. ಪಕ್ಷ ಅವಕಾಶ ನೀಡದೆ ಇದ್ದಾಗ ಕಾಂಗ್ರೆಸ್‌ಗೆ ಪಕ್ಷಾಂತರವಾಗಿದ್ದರು. 2018ರ ಹೊತ್ತಿಗೆ ಮತ್ತೆ ಬಿಜೆಪಿಗೆ ಮರಳಿದ ಶೆಟ್ಟರು ಚುನಾವಣಾ ಕಣಕ್ಕೆ ಇಳಿಯಲು ಉತ್ಸುಕರಾಗಿದ್ದರು. ಈ ಬಾರಿ ತಮ್ಮ ಅದೃಷ್ಟ ಪರೀಕ್ಷೆಗೆ ಸಕಲ ತಯಾರಿ ನಡೆಸಿರುವ ಶೆಟ್ಟರು, ಗಾಂಧಿನಗರ ಕ್ಷೇತ್ರದಲ್ಲಿ ಈಗಾಗಲೇ ಸಕ್ರಿಯರಾಗಿದ್ದಾರೆ. ಗಾಂಧಿನಗರ ಕ್ಷೇತ್ರದಲ್ಲಿ 25ಕ್ಕೂ ಹೆಚ್ಚು ಉಚಿತ ಕ್ಯಾಂಟೀನ್ ಆರಂಭಿಸಿದ್ದಾರೆ. ಪುಣ್ಯಕ್ಷೇತ್ರ ದರ್ಶನಕ್ಕೆ ತೆರಳುವವರಿಗೆ ನೆರವು ಮುಂತಾದ ತಮ್ಮ ಎಂದಿನ ಸೇವಾ ಕಾರ್ಯಗಳನ್ನು ಕೈಗೆತ್ತಿಕೊಂಡಿದ್ದಾರೆ. ತಮಗೇ ಟಿಕೆಟ್ ನೀಡುವುದಕ್ಕೆ ಪಕ್ಷದ ಮೇಲೆ ಒತ್ತಡ ಸೃಷ್ಟಿಸಲು ಇಷ್ಟೆಲ್ಲ ಯತ್ನ ನಡೆಸಿದ್ದಾರೆ.

ಜೆಡಿಎಸ್ ಕೂಡ ತನ್ನದೇ ಮತ ಬ್ಯಾಂಕ್ ಹೊಂದಿದ್ದು, ಈ ಬಾರಿಯಾದರೂ ಕ್ಷೇತ್ರವನ್ನು ತಮ್ಮದಾಗಿಸಿಕೊಳ್ಳಬೇಕೆಂಬ ಆತುರದಲ್ಲಿದೆ. ಈ ಹಿಂದೆ ವಿ. ನಾರಾಯಣಸ್ವಾಮಿಯವರು ತೀವ್ರ ಸ್ಪರ್ಧೆ ಒಡ್ಡಿ 36,635 ಮತಗಳನ್ನು ಗಳಿಸಿ ಮೂರನೆಯ ಸ್ಥಾನ ಪಡೆದಿದ್ದರು. ಈ ಹಿನ್ನೆಲೆಯಲ್ಲಿ ಈ ಬಾರಿ ತೀವ್ರ ಸ್ಪರ್ಧೆ ಒಡ್ಡುವ ವಿಶ್ವಾಸ ಜೆಡಿಎಸ್‌ಗಿದೆ.

ಈ ಬಾರಿ ಆಮ್ ಆದ್ಮಿ ಪಕ್ಷವೂ ಈ ಕ್ಷೇತ್ರದಲ್ಲಿ ಕಣಕ್ಕಿಳಿಯುವ ಸಾಧ್ಯತೆ ಇದೆ. ಅಭ್ಯರ್ಥಿ ಇನ್ನೂ ಘೋಷಣೆಯಾಗಿಲ್ಲ. ಆದರೆ ಆಪ್ ಸ್ಪರ್ಧೆಯಿಂದ ಬಿಜೆಪಿಗೆ ಲಾಭವಾಗುವ ಸಾಧ್ಯತೆ ಹೆಚ್ಚು.

ಆಗದ ಅಭಿವೃದ್ಧಿ ಮುಳುವಾಗುವುದೇ?

ಅತ್ಯಂತ ಜನನಿಬಿಡ ಪ್ರದೇಶವಾದ ಗಾಂಧಿನಗರ ದಲ್ಲಿ ಮೂಲಸೌಲಭ್ಯಗಳದ್ದೇ ಕೊರತೆ. ಶಾಲೆ, ಆಸ್ಪತ್ರೆ, ರಸ್ತೆಗಳಂತಹ ಮೂಲಸೌಕರ್ಯಗಳನ್ನು ಸೂಕ್ತ ರೀತಿಯಲ್ಲಿ ಒದಗಿಸಿಲ್ಲ. ಅಭಿವೃದ್ಧಿ ಕಾರ್ಯಗಳಿಲ್ಲದ ಹಿಂದುಳಿದ ಕ್ಷೇತ್ರವಾಗಿದೆ ಎಂಬುದು ನಿವಾಸಿಗಳ ದೂರು. ಒತ್ತೊತ್ತಾದ ರಸ್ತೆಗಳು, ಬೆಂಗಳೂರಿನ ಕೇಂದ್ರ ಭಾಗದಲ್ಲಿದ್ದೂ, ಆಧುನಿಕತೆ ಸ್ಪರ್ಶವನ್ನು ಪಡೆಯದೆ ಇರುವುದು ಸ್ಥಳೀಯರಲ್ಲಿ ಅಸಮಾಧಾನ ತಂದಿದೆ. ರಸ್ತೆ ಗುಂಡಿಗಳು ಮಾರಣಾಂತಿಕವಾಗಿರುವುದರ ಬಗ್ಗೆಯೂ ಕ್ಷೇತ್ರದ ಜನರು ದೂರುತ್ತಲೇ ಬಂದಿದ್ದಾರೆ.

ಅನುದಾನ ಬಿಡುಗಡೆಯಲ್ಲಿ ಲೋಪ, ಅಸಹಕಾರದ ಆರೋಪ ಮಾಡಿ, ಬಿಜೆಪಿಯ ಮೇಲೆ ಹೊಣೆ ಹೊರಿಸುವ ಮೂಲಕ ಅಭಿವೃದ್ಧಿ ಕೆಲಸಗಳ ಹಿನ್ನಡೆಗೆ ಸಮಜಾಯಿಷಿ ಕೊಡುತ್ತಾ ಬಂದಿದ್ದಾರೆ ಎಂಬ ತಕರಾರೂ ದಿನೇಶ್ ವಿರುದ್ಧ ಇದೆ. ಆದರೂ ದಿನೇಶ್ ಗುಂಡೂರಾವ್ ಈ ಬಾರಿಯೂ ಮತದಾರರ ವಿಶ್ವಾಸ ಗೆಲ್ಲಬಹುದು ಎಂಬ ಲೆಕ್ಕಾಚಾರವಿದೆ. ಮತದಾನದ ಗಳಿಗೆಯ ನಿರ್ಧಾರವೇನಿದ್ದರೂ ಮತದಾರನದ್ದು ಅಷ್ಟೆ.

 ವೀಕ್ಷಿಸಿ: ಅಖಾಡದವರೆಗೂ ಬಂದಿದೆಯೆ ಇಬ್ಬರ ಹಲವು ವರ್ಷಗಳ ಮುಸುಕಿನ ಗುದ್ದಾಟ ?

Full View