ಜಗದಗಲ

Update: 2023-02-21 08:39 GMT

ಪರಿಮಳದ ನಗರಿಯಲ್ಲಿ

ವಿಶ್ವ ಸುಗಂಧ ದ್ರವ್ಯಗಳ ರಾಜಧಾನಿ, ಫ್ರೆಂಚ್ ಪಟ್ಟಣ ಗ್ರಾಸ್ಸ್ ಬಿಸಿಗಾಳಿಗೆ ಬಾಡುತ್ತಿದೆ. 17ನೇ ಶತಮಾನದಿಂದಲೂ ಗ್ರಾಸ್ಸ್ ತನ್ನ ಪರಿಮಳಯುಕ್ತ ಹೂವುಗಳಿಗಾಗಿ ಪ್ರಪಂಚದಾದ್ಯಂತ ಪ್ರಸಿದ್ಧ. ಫ್ರೆಂಚ್ ರಿವೇರಿಯಾದಿಂದ ಒಳನಾಡಿನಲ್ಲಿರುವ ಗ್ರಾಸ್ಸ್, ಮೇ ಗುಲಾಬಿ, ಟ್ಯೂಬೆರೋಸ್, ಲ್ಯಾವೆಂಡರ್ ಮತ್ತು ಮಲ್ಲಿಗೆ ಹೂಗಳು ಅರಳಲು ಅನುಕೂಲಕರ ವಾತಾವರಣವುಳ್ಳ ನಗರಿ. ವಿಶ್ವದ ಕೆಲವು ದೊಡ್ಡ ಪರ್ಫ್ಯೂಮ್ ಬ್ರಾಂಡ್ಗಳಿಗಾಗಿ ಹೂ ಉತ್ಪಾದಿಸುವ ಊರು ಇದು. ಗ್ರಾಸ್ಸ್ ಮಲ್ಲಿಗೆಗೆ ಚಿನ್ನಕ್ಕಿಂತ ಹೆಚ್ಚಿನ ಬೆಲೆ.
ಪರ್ಫ್ಯೂಮ್ ಉದ್ಯಮದಲ್ಲಿ ದೊಡ್ಡ ಹೆಸರಿರುವ ಗ್ರಾಸ್ಸ್ ಸುಗಂಧ ಸಂಸ್ಕೃತಿ ಯುನೆಸ್ಕೋದ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಪಟ್ಟಿಯನ್ನು 2018ರಲ್ಲಿ ಸೇರಿದೆ. ಇಂಥ ಹೆಗ್ಗಳಿಕೆಗೆ ಈಗ ಧಕ್ಕೆಯೊಡ್ಡುತ್ತಿರುವುದು ಅತಿ ತಾಪಮಾನ ಮತ್ತು ಅತಿವೃಷ್ಟಿ. ಈ ಹವಾಮಾನ ವೈಪರೀತ್ಯ, ಪುಷ್ಪಕೃಷಿಗೆ ಕಷ್ಟ ತಂದಿಟ್ಟಿದೆ. ಕಳೆದ ಬೇಸಿಗೆಯಲ್ಲೂ ತೀವ್ರ ಬರದಿಂದಾಗಿ ಬೆಳೆಯ ಅರ್ಧದಷ್ಟು ನಾಶವಾಗಿತ್ತು. ಅತಿ ತಾಪಮಾನ ಗುಲಾಬಿಯನ್ನು ಕೊಲ್ಲುತ್ತಿದೆ. ಟ್ಯೂಬ್ರೋಸ್ನಂತಹ ಕೆಲವು ಹೂಗಳನ್ನು ಬೆಳೆಸಲು ಸಾಧ್ಯವಾಗುವುದಿಲ್ಲ. ಅದರ ಫಸಲು ಶೇ.40ರಷ್ಟು ತಗ್ಗಿದೆ.

ಗ್ರಾಸ್ಸ್ ಮಾತ್ರವಲ್ಲ, ಪ್ರಪಂಚದಾದ್ಯಂತ ಸುಗಂಧ ದ್ರವ್ಯ ತಯಾರಿಕೆಗೆ ಅಗತ್ಯವಿರುವ ಮೂಲ ವಸ್ತುಗಳು ಬೆಳೆಯುತ್ತಿರುವ ಪ್ರದೇಶಗಳೆಲ್ಲ ತೀವ್ರ ತಾಪಮಾನಕ್ಕೆ ಕನಲಿವೆ. ಮುಖ್ಯವಾಗಿ ಬೇಕಿರುವ ವೆನಿಲ್ಲಾ ಬೆಳೆಯಲ್ಲಿ ಕೂಡ ದೊಡ್ಡ ಮಟ್ಟದ ಕುಸಿತವಾಗಿದೆ. ಇಂಥ ಬೆಳವಣಿಗೆಗಳು ಪರ್ಫ್ಯೂಮ್ ಬೆಲೆಯನ್ನೂ ಬಿಸಿಯಾಗಿಸಿರುವುದು ಸುಳ್ಳಲ್ಲ.

ಸುಗಂಧ ದ್ರವ್ಯಕ್ಕೆ ಬೇಕಿರುವ ಬೆಳೆಗಳಿಗೆ ಸಾಕಷ್ಟು ನೀರಿನ ಅಗತ್ಯವಿದ್ದರೂ, ಗ್ರಾಸ್ಸ್ನಲ್ಲಿ ಹನಿನೀರಾವರಿ ಪದ್ಧತಿ ಅನುಸರಿಸುವ ಮೂಲಕ ಅತಿ ಕಡಿಮೆ ನೀರನ್ನು ಬಳಸಲಾಗುತ್ತದೆ. ಕೃಷಿಯು ಪರಿಸರ ಸ್ನೇಹಿಯಾಗಿರುವಂತೆ ನೋಡಿಕೊಳ್ಳಲಾಗುತ್ತಿದೆ. ಜೈವಿಕ ವೈವಿಧ್ಯತೆಯ ರಕ್ಷಣೆಗಾಗಿ ಸಾವಯವ ಮಾರ್ಗ ಅನುಸರಿಸುತ್ತಾರೆ ಕೃಷಿಕರು. ತಮ್ಮ ಸ್ವಾಯತ್ತತೆ ಮತ್ತು ಸಾರ್ವಭೌಮತ್ವವನ್ನು ಕಳೆದುಕೊಳ್ಳದೆ ಉದ್ಯಮವನ್ನು ಬೆಂಬಲಿಸಬೇಕೆಂಬುದು ಇವರ ಧೋರಣೆ. ಹಾಗಾಗಿಯೇ, ಗ್ರಾಸ್ಸ್ ಇತಿಹಾಸ ಮತ್ತು ಪರಂಪರೆಯನ್ನು ಉತ್ಪನ್ನಗಳ ಮಾರುಕಟ್ಟೆ ವಿಸ್ತರಣೆಗೆ ಬಳಸಿಕೊಳ್ಳುವ ಬ್ರಾಂಡ್ಗಳ ಗುಲಾಮರಾಗದಂತೆ, ಅವರ ನಿಯಂತ್ರಣಕ್ಕೆ ಸಿಲುಕದಂತೆ ಕಾಪಾಡಿಕೊಳ್ಳುವಲ್ಲಿಯೂ ಗೆದ್ದಿದ್ದಾರೆ. ಯಾಕೆಂದರೆ, ಸುಗಂಧದ್ರವ್ಯ ಉದ್ಯಮ ಶತಮಾನಗಳಿಂದ ಗ್ರಾಸ್ಸ್ ಆತ್ಮವೇ ಆಗಿದೆ. ಇದು ಕೇವಲ ಅವರ ಕೃಷಿ ಪದ್ಧತಿಯಲ್ಲ; ಬದಲಾಗಿ, ಅವರ ಸಂಸ್ಕೃತಿ ಮತ್ತು ಜೀವನ ವಿಧಾನವೇ ಆಗಿದೆ.

ಇತಿಹಾಸಕ್ಕೊಂದು ಕಣ್ಣು

18 ತಿಂಗಳು ಮುಚ್ಚಿದ್ದ, ಸುಮಾರು 150 ಕೋಟಿ ರೂ ವೆಚ್ಚದಲ್ಲಿ ಮರು ಅಭಿವೃದ್ಧಿಪಡಿಸಲಾದ ಮ್ಯಾಂಚೆಸ್ಟರ್ ಮ್ಯೂಸಿಯಂ ಮತ್ತೆ ತೆರೆದಿದೆ. ಸಸ್ತನಿಗಳು, ಸಸ್ಯಶಾಸ್ತ್ರೀಯ ಮಾದರಿಗಳು ಮತ್ತು ಪಳೆಯುಳಿಕೆಗಳವರೆಗೆ ಆಗಲೇ ಇದ್ದ ಸುಮಾರು 45 ಲಕ್ಷ ವಸ್ತುಗಳ ಸಂಗ್ರಹದ ಜೊತೆಗೆ, ಈಗ ಇನ್ನಷ್ಟು ಹೊಸದನ್ನು ಕಾಣಲು ಮತ್ತು ವೈವಿಧ್ಯಮಯ, ಅಜ್ಞಾತ ಕಥೆಗಳನ್ನು ಕೇಳಲು ಮ್ಯೂಸಿಯಂ ಅನುವು ಮಾಡಿಕೊಡಲಿದೆ. ಬ್ರಿಟಿಷ್ ಮ್ಯೂಸಿಯಂ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲಾಗಿರುವ ಈ ಎರಡಂತಸ್ತಿನ ವಿಸ್ತರಣೆ, ಲೀ ಕೈ ಹಂಗ್ ಚೈನೀಸ್ ಕಲ್ಚರ್ ಗ್ಯಾಲರಿ ಮತ್ತು ದಕ್ಷಿಣ ಏಶ್ಯದ ಗ್ಯಾಲರಿ ಸೇರಿದಂತೆ ಹೊಸ ಪ್ರದರ್ಶನ ಸ್ಥಳಗಳ ಸಮೂಹವಾಗಿದೆ.

ಪ್ರಾದೇಶಿಕ ದೃಷ್ಟಿಯ ಮೂಲಕ ಜಾಗತಿಕ ಇತಿಹಾಸವನ್ನು ತಿಳಿಯುವ ಅವಕಾಶವನ್ನು ಈ ಮ್ಯೂಸಿಯಂ ತೆರೆಯುತ್ತದೆ. ಜವಳಿ ಉದ್ಯಮದಂಥ ಪರಂಪರೆಯನ್ನು, ವಲಸೆಯ ಕಥೆಗಳನ್ನು ಇವತ್ತಿನ ಮನಸ್ಸುಗಳಿಗೆ ಮುಟ್ಟಿಸುವ ವಸ್ತುಗಳು, ಸಾಕ್ಷ್ಯಚಿತ್ರಗಳು ಇಲ್ಲಿವೆ. ಈ ಮ್ಯೂಸಿಯಂ ಬಿಚ್ಚಿಡುವ ಕಥೆಗಳು ದಕ್ಷಿಣ ಏಶ್ಯ ಮತ್ತು ಚೀನಾದಿಂದ ಇಂಗ್ಲೆಂಡ್ ಡಯಾಸ್ಪೊರಾವರೆಗೆ ವ್ಯಾಪಿಸಿದವಾಗಿವೆ. ಪ್ರಾಚೀನ ನಾಣ್ಯಗಳು ಮತ್ತು ಆಭರಣಗಳ ಮೂಲಕ ಹಾಗೆಯೇ ಧ್ವನಿವ್ಯವಸ್ಥೆ ಮೂಲಕ ಮೊಗಲ್ ರಾಜವಂಶದ ಮರೆತುಹೋದ ಮಹಿಳೆಯರ ಕಥೆಗಳನ್ನು ತಿಳಿಯಬಹುದು.

ಸಾಮಾನ್ಯವಾಗಿ ವಸ್ತುಸಂಗ್ರಹಾಲಯಗಳು ಒಂದೇ ಆಯಾಮದ ಕಥೆಗಳನ್ನುಳ್ಳವಾಗಿರುತ್ತವೆ. ಅದು ಸಂಗ್ರಾಹಕರ ದೃಷ್ಟಿಕೋನದ ಮೇಲೆ ಹೆಚ್ಚು ಅವಲಂಬಿತ. ಸಾಮಾನ್ಯವಾಗಿ ಬಿಳಿಯರು, ಪುರುಷರು ಅಥವಾ ಅಂಥದೇ ಮನಃಸ್ಥಿತಿಯ ಸಂಸ್ಥೆಗಳು ಇಂಥದ್ದರ ಹಿಂದೆ ಇರುತ್ತವೆ. ಆದರೆ ಮ್ಯಾಂಚೆಸ್ಟರ್ ಮ್ಯೂಸಿಯಂ ಇತರ ದೃಷ್ಟಿಕೋನಗಳನ್ನು ಪರಿಗಣಿಸುವ ಒಂದು ಸಾಧ್ಯತೆಯೆನ್ನುತ್ತಾರೆ ಅದರ ನಿರ್ದೇಶಕಿ ಎಸ್ಮೆ ವಾರ್ಡ್.

ದಕ್ಷಿಣ ಏಶ್ಯವು ಪ್ರತಿನಿಧಿಸುವ ಸಂಯುಕ್ತ ಪ್ರಭಾವಗಳ ಇತಿಹಾಸವು ಇಲ್ಲಿನ ವಸ್ತುಗಳ ಮೂಲಕ ಮಾತನಾಡುತ್ತಿದೆ. ಮ್ಯಾಂಚೆಸ್ಟರ್ ಮ್ಯೂಸಿಯಂ ಸಾಮ್ರಾಜ್ಯದ ಕೂಸು. ಇದು ಇದರ ವಾಸ್ತವ. ಆದರೆ ಇದೆಲ್ಲವೂ ಒಂದು ಹೊಸ ಸಂವಾದವನ್ನು ಸಾಧ್ಯಗೊಳಿಸುವುದೆಂಬ ನಂಬಿಕೆ ವಾರ್ಡ್ ಅವರದು.

ಮ್ಯಾಂಚೆಸ್ಟರ್ ವಿಶ್ವವಿದ್ಯಾನಿಲಯದ ಆಧುನಿಕ ಭಾರತೀಯ ಇತಿಹಾಸದ ಪ್ರೊಫೆಸರ್ ಅನಿಂದಿತಾ ಘೋಷ್ ಪ್ರಕಾರ, ಈ ಮ್ಯೂಸಿಯಂನ ಪುನರಾಭಿವೃದ್ಧಿ ಒಂದು ಗೇಮ್ ಚೇಂಜರ್. ಇದು ಮ್ಯಾಂಚೆಸ್ಟರ್ನ ಸಮುದಾಯಗಳ ಕಥನವನ್ನು ಬಿಂಬಿಸುವಂಥದ್ದು. ವಲಸಿಗರ ದೀರ್ಘ ಇತಿಹಾಸ, ಶ್ರಮಿಕ ಸಂಸ್ಕೃತಿ ಎಲ್ಲದರ ನೋಟವೊಂದನ್ನು ಇಲ್ಲಿ ಪಡೆಯಬಹುದು. ಕಿರಿಯ ತಲೆಮಾರು ತನ್ನ ಪರಂಪರೆಯ ಬಗ್ಗೆ, ಗತಕಾಲದ ಬಗ್ಗೆ ತಿಳಿದುಕೊಳ್ಳುವಲ್ಲಿ ಇದು ಅದ್ಭುತ ಮಾರ್ಗ. ಶಾಲೆ ಮತ್ತಿತರೆಡೆಗಳಲ್ಲಿ ಸಿಗದ ಅರಿವಿನ ಅವಕಾಶ ಇದು. ಇದೊಂದು ದೊಡ್ಡ ನಿಧಿ. ವಸ್ತುಸಂಗ್ರಹಾಲಯಗಳು ಹೇಗಿರಬೇಕು ಎಂಬುದಕ್ಕೆ ಒಂದು ಮಾದರಿ. ದಕ್ಷಿಣ ಏಶ್ಯದ ಸಮುದಾಯಕ್ಕೆ ಬೇರೆ ಯಾವುದೂ ಕೊಡದ ರೀತಿಯಲ್ಲಿ ಧ್ವನಿ ಕೊಡಬಲ್ಲದ್ದಾಗಿದೆ ಈ ಮ್ಯೂಸಿಯಂ.

ಜೀವವೈವಿಧ್ಯದ ಉಳಿವಿಗಾಗಿ

ಪ್ರಕೃತಿಯನ್ನು ಉಳಿಸಿಕೊಳ್ಳದೆ ಏನೂ ಆಗದು ಎಂಬುದು ಅಭಿವೃದ್ಧಿಯ ಅಹಂಕಾರದಲ್ಲಿದ್ದ ದೇಶಗಳಿಗೆಲ್ಲ ಮನವರಿಕೆಯಾಗುತ್ತಿದೆ. ವಿಶ್ವಸಂಸ್ಥೆ ಕೂಡ ಈಗ ಜೀವವೈವಿಧ್ಯದ ವಿಚಾರವಾಗಿ ಹೆಚ್ಚು ಗಮನ ಕೇಂದ್ರೀಕರಿಸಿ, ಎಲ್ಲ ರಾಷ್ಟ್ರಗಳ ಮುಂದೆಯೂ ನಿಖರ ಗುರಿಯನ್ನು ಇಟ್ಟಿದೆ. ಇತ್ತೀಚೆಗೆ ಇಂಗ್ಲೆಂಡ್ ಪರಿಸರ ಕಾರ್ಯದರ್ಶಿ, ಪ್ರಕೃತಿ ಸಂರಕ್ಷಣೆಯಲ್ಲಿ ಹೂಡಿಕೆ ಮಾಡಲು ಹಣಕಾಸು ವಲಯ ಮುಂದಾಗಬೇಕೆಂದು ಹೇಳಿರುವುದು ಅಂಥ ಅಗತ್ಯವನ್ನು ಪೂರೈಸುವ ನಿಟ್ಟಿನ ಒಂದು ಹೆಜ್ಜೆ. ಭೂಮಿಯ ಪರಿಸರ ವ್ಯವಸ್ಥೆಗಳ ನಾಶವನ್ನು ತಡೆಯುವಲ್ಲಿ ಕಂಪೆನಿಗಳು ಮತ್ತು ಹಣಕಾಸು ಸಂಸ್ಥೆಗಳು ಮಹತ್ವದ ಪಾತ್ರವನ್ನು ವಹಿಸಬೇಕೆಂಬುದನ್ನು ಥೆರೆಸ್ ಕಾಫೆ ಒತ್ತಿಹೇಳಿದ್ದಾರೆ.

ಅoಠಿ15 ಜೀವವೈವಿಧ್ಯ ಒಪ್ಪಂದದ ನಂತರ ಮುಂದಿನ ಕ್ರಮಗಳನ್ನು ಚರ್ಚಿಸಲು ಇಂಗ್ಲೆಂಡ್ ಸರಕಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ, ಜೈವಿಕ ವೈವಿಧ್ಯತೆ ಮತ್ತು ಹವಾಮಾನ ಗುರಿಗಳನ್ನು ಪೂರೈಸಲು ಕಂಪೆನಿಗಳು ಮತ್ತು ಹೂಡಿಕೆದಾರರು ತೊಡಗಿಸಿಕೊಳ್ಳಬೇಕಿರುವುದನ್ನು ಅವರು ಮನವರಿಕೆ ಮಾಡಿಕೊಟ್ಟರು. ಸಮಶೀತೋಷ್ಣ ಮಳೆಕಾಡುಗಳನ್ನು ಪುನಃಸ್ಥಾಪಿಸುವ ಮತ್ತು ಸಂರಕ್ಷಿಸುವ ಯೋಜನೆಗಳಿಗೆ ವಿಮಾ ಕಂಪೆನಿಯೊಂದು ದೊಡ್ಡಮೊತ್ತದ ನೆರವು ನೀಡಿರುವುದನ್ನೂ ಅವರು ಪ್ರಸ್ತಾವಿಸಿದರು.

ಇಂಗ್ಲೆಂಡ್ ತನ್ನ ಸಂರಕ್ಷಿತ ಪ್ರದೇಶಗಳ ಆರೋಗ್ಯವನ್ನು ಸುಧಾರಿಸುವತ್ತ ಗಮನಹರಿಸುತ್ತದೆ. ಇಂಗ್ಲೆಂಡ್ನಲ್ಲಿ ಈಗಾಗಲೇ ಗಣನೀಯ ಪ್ರಮಾಣದ ಸಂರಕ್ಷಿತ ಭೂಮಿ ಇದೆ. ಅದರಲ್ಲಿ ಬಹಳಷ್ಟು ಇರಬೇಕಾದ ಸ್ಥಿತಿಯಲ್ಲಿಲ್ಲ ಎಂಬುದು ಗಮನಕ್ಕೆ ಬಂದಿದೆ. ಅದಕ್ಕಾಗಿಯೇ ಡೆಫ್ರಾ (ಪರಿಸರ, ಆಹಾರ ಮತ್ತು ಗ್ರಾಮೀಣ ವ್ಯವಹಾರಗಳ ಇಲಾಖೆ) ಮಾತ್ರವಲ್ಲದೆ, ನ್ಯಾಚುರಲ್ ಇಂಗ್ಲೆಂಡ್ ಮತ್ತು ಪರಿಸರ ಏಜೆನ್ಸಿಯಂತಹ ಸಂಸ್ಥೆಗಳು ಹೇಗೆ ಈ ನಿಟ್ಟಿನಲ್ಲಿ ತೊಡಗಿಸಿಕೊಳ್ಳಲಿವೆ ಎಂಬುದು ಮುಖ್ಯವಾಗಲಿದೆ. ವಿಶೇಷ ವೈಜ್ಞಾನಿಕ ಆಸಕ್ತಿಯ ತಾಣಗಳು, ಸವಕಳಿಯಾದ ಪ್ರದೇಶ ರಕ್ಷಣೆ ಇವೆಲ್ಲವೂ ಪ್ರಮುಖ ಗುರಿಯಾಗಬೇಕಿದೆ ಎಂದು ಅವರು ಹೇಳಿದ್ದಾರೆ.

ಜೈವಿಕ ವೈವಿಧ್ಯತೆಗಾಗಿ ಪ್ರತಿಯೊಂದು ದೇಶ ಶ್ರಮಿಸಬೇಕಿದೆ. ಯಾವುದೇ ದೇಶವು ಜೀವವೈವಿಧ್ಯದ ಅಳಿವನ್ನು ನಿಲ್ಲಿಸಬಹುದು. ಅದಕ್ಕಾಗಿಯೇ ಪ್ರತಿಯೊಂದು ದೇಶವೂ ಹಾನಿಕಾರಕ ಸಬ್ಸಿಡಿಗಳನ್ನು ಮರುಪರಿಶೀಲನೆಗೆ ಒಳಪಡಿಸುವುದು ಮೊದಲ ಆದ್ಯತೆಯಾಗಬೇಕು. ಚೀನಾ, ಅಮೆರಿಕ, ಫ್ರಾನ್ಸ್ ಎಲ್ಲೆಡೆ ತೈಲ ಅಥವಾ ಕೀಟನಾಶಕಗಳಿಗೆ ಸಬ್ಸಿಡಿಗಳನ್ನು ಬೇರೆ ಉದ್ದೇಶಕ್ಕೆ ಬಳಸಬಹುದು ಎಂದೂ ಅವರು ಪ್ರತಿಪಾದಿಸಿದ್ದಾರೆ.