ಬಿಜೆಪಿ ಸರಕಾರ ಭ್ರಷ್ಟಾಚಾರ ನಿರ್ಮೂಲನೆ ಮಾಡಲು ಶ್ರಮಿಸುತ್ತಿದೆ: ಸಚಿವ ಅಶ್ವತ್ಥನಾರಾಯಣ

''ಪಕ್ಷದ ಸಂಘಟನೆ, ದೇಶದ ಅಭಿವೃದ್ಧಿಗೆ ಮೋದಿ ಮಾದರಿ''

Update: 2023-02-21 10:09 GMT

ನಾಗಮಂಗಲ: ಪಕ್ಷದ ರಚನಾತ್ಮಕ ಸಂಘಟನೆಗೆ ಮತ್ತು ದೇಶದ ಅಭಿವೃದ್ಧಿಗೆ ಪ್ರಧಾನಿ ನರೇಂದ್ರ ಮೋದಿಯವರು ಅತ್ಯುತ್ತಮ ಮಾದರಿ ಆಗಿದ್ದಾರೆ. ಅವರಿಂದಾಗಿ ದೇಶದಲ್ಲಿ ಪ್ರತಿಯೊಬ್ಬರ ಸಬಲೀಕರಣ ಸಾಧ್ಯವಾಗುತ್ತಿದೆ ಎಂದು ಉನ್ನತ ಶಿಕ್ಷಣ, ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆ ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ ಹೇಳಿದ್ದಾರೆ.

ಅವರು ಮಂಗಳವಾರ ಇಲ್ಲಿ ಏರ್ಪಡಿಸಿದ್ದ ಬಿಜೆಪಿ ಮಹಿಳಾ ಸಮಾವೇಶದಲ್ಲಿ ಮಾತನಾಡಿದರು.

ಮೋದಿಯವರು ಪಕ್ಷದ ಸಂಘಟನೆಗೆ ಮೂವತ್ತು ವರ್ಷಗಳ ಕಾಲ ದುಡಿದಿದ್ದರು. ಅಲ್ಲಿ 12 ವರ್ಷಗಳ ಕಾಲ ಮುಖ್ಯಮಂತ್ರಿಗಳಾಗಿ ಗುಜರಾತನ್ನು ಮಾದರಿ ರಾಜ್ಯವನ್ನಾಗಿ ಮಾಡಿದ ಅವರು, ಕಳೆದ ಒಂಬತ್ತು ವರ್ಷಗಳಿಂದ ನವಭಾರತವನ್ನು ಕಟ್ಟುತ್ತಿದ್ದಾರೆ ಎಂದು ಅವರು ನುಡಿದರು.

ಮೋದಿಯವರು ದೇಶದ ಚುಕ್ಕಾಣಿ ಹಿಡಿದ ಮೇಲೆ ಮಹಿಳೆಯರಿಗೆ ಶೌಚಾಲಯ, ಅಡುಗೆ ಅನಿಲ, ಕುಡಿಯುವ ನೀರು, ಕೌಶಲ್ಯ, ಆರ್ಥಿಕ ಸಬಲೀಕರಣ, ಬ್ಯಾಂಕ್ ಖಾತೆ, ಸ್ವಸಹಾಯ ಸಂಘ ಎಲ್ಲವೂ ಸಾಧ್ಯವಾಗಿದೆ ಎಂದು ಅವರು ವಿವರಿಸಿದರು.

ರಾಜ್ಯದಲ್ಲಿ ಮಹಿಳಾ ಸ್ವಸಹಾಯ ಸಂಘಗಳಿಗೆ ಸರಕಾರದಿಂದ 4 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ನೆರವು ಒದಗಿಸಲಾಗಿದೆ. ಹಾಗೆಯೇ 1.83 ಲಕ್ಷ ಸ್ವಸಹಾಯ ಗುಂಪುಗಳಿಗೆ ಮೂರು ವರ್ಷಗಳಲ್ಲಿ ಬ್ಯಾಂಕುಗಳಿಂದ 45 ಸಾವಿರ ಕೋಟಿ ಸಾಲ ಕೊಡಿಸಲಾಗಿದೆ. ಮೋದಿಯವರ ಉಪಕ್ರಮದಿಂದ ಇಂದು ದೇಶದಲ್ಲಿ 50 ಕೋಟಿ ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದೆ ಎಂದು ಅವರು ವಿವರಿಸಿದರು.

ಬಿಜೆಪಿ ಸರಕಾರವು ಭ್ರಷ್ಟಾಚಾರವನ್ನು ನಿರ್ಮೂಲ ಮಾಡಲು ಶ್ರಮಿಸುತ್ತಿದೆ. ಈಗ ಎಲ್ಲ ಯೋಜನೆಗಳ ಫಲಾನುಭವಿಗಳಿಗೂ ನೇರವಾಗಿ ನಗದನ್ನು ವರ್ಗಾಯಿಸಲಾಗುತ್ತಿದೆ. ಇಂತಹ ಅಗಾಧ ಡಿಜಿಟಲೀಕರಣ ಅಮೆರಿಕದಲ್ಲಿ ಸಹ ಸಾಧ್ಯವಾಗಿಲ್ಲ ಎಂದು ಅವರು ಅಭಿಪ್ರಾಯ ಪಟ್ಟರು.

ಬಿಜೆಪಿ ಜನಸಾಮಾನ್ಯರ ಪಕ್ಷವಾಗಿದ್ದು, ಜನಪರ ಚಿಂತನೆಯನ್ನು ಒಳಗೊಂಡಿದೆ. ಮಂಡ್ಯ ಜಿಲ್ಲೆಯಲ್ಲಿ ಪಕ್ಷವು ತನ್ನ ನೆಲೆಯನ್ನು ಗಟ್ಟಿಗೊಳಿಸಿ ಕೊಳ್ಳುತ್ತಿದೆ. ಮುಂಬರುವ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಪಕ್ಷದ ಪರವಾಗಿ ಅಲೆ ಸೃಷ್ಟಿಯಾಗಬೇಕು ಎಂದು ಅವರು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ನಿರ್ಮಲ ಕುಮಾರ ಸುರಾನ, ಜಿಲ್ಲಾ ಬಿಜೆಪಿ ಅಧ್ಯಕ್ಷ ಸಿ ಪಿ ಉಮೇಶ್, ಮಹಿಳಾ ಮೋರ್ಚಾದ ರಾಜ್ಯ ಅಧ್ಯಕ್ಷೆ ಗೀತಾ ವಿವೇಕಾನಂದ, ಮುಖಂಡರಾದ ಮಲ್ಲಿಕಾರ್ಜುನ ಮುಂತಾದವರು ಉಪಸ್ಥಿತರಿದ್ದರು.

Similar News