ನಾವು ಇಂದು ಬದುಕಿರುವುದಕ್ಕೆ ನಮ್ಮ ದೇಶದ ಉಚಿತ ಕೊರೋನ ಲಸಿಕೆ ಕಾರಣ: ಶೋಭಾ ಕರಂದ್ಲಾಜೆ

Update: 2023-02-21 11:51 GMT

ಬೇಲೂರು: 'ಕೊರೋನ ಸಂದರ್ಭದಲ್ಲಿ ಜಗತ್ತು ತತ್ತರಿಸಿದ ಸಂದರ್ಭದಲ್ಲಿ ದೇಶದಲ್ಲಿಯೇ ಲಸಿಕೆ ತಯಾರಿಸುವ ಮೂಲಕ ದೇಶದ ಜನರನ್ನು ರಕ್ಷಣೆ ಮಾಡುವ ಕೆಲಸವನ್ನು ನರೇಂದ್ರ ಮೋದಿ ಸರ್ಕಾರ ಮಾಡಿದೆ. ನಾವು ಇಲ್ಲಿ ಬದುಕಿ ಕುಳಿತಿದ್ದರೆ, ಅದಕ್ಕೆ ನಮ್ಮ ದೇಶದ ಉಚಿತ ಲಸಿಕೆ ಕಾರಣ' ಎಂದು ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ. 

ಬೇಲೂರಿನಲ್ಲಿ ಇಂದು ನಡೆದ  ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಅವರು, ''ಕೇಂದ್ರದ ಬಿಜೆಪಿ ಸರ್ಕಾರ ಜನರ ಆಶೋತ್ತರಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿದೆ.‌ ಎಲ್ಲ ಜನರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದೆ. ಸ್ವಾವಲಂಬಿ ದೇಶ, ಆತ್ಮನಿರ್ಭರ ದೇಶ ನಿರ್ಮಾಣ ಮಾಡುವ ಸಂಕಲ್ಪವನ್ನು ನರೇಂದ್ರ ಮೋದಿ ಸರ್ಕಾರ ಮಾಡಿದೆ'' ಎಂದು ತಿಳಿಸಿದರು.

ಹಾಸನ ಜಿಲ್ಲೆಯಲ್ಲಿ ಘಟಾನುಟಿ ರಾಜಕಾರಣಿಗಳು ಇದ್ದರೂ ಬೇಲೂರು ತಾಲೂಕಿಗೆ ನೀರಾವರಿಯಿಂದ ವಂಚಿಸಿದ್ದಾರೆ. ಯಗಚಿ ಏತ ನೀರಾವರಿ ಮತ್ತು ಬಯಲು ಸೀಮಗೆ ಶಾಶ್ವತ ನೀರಾವರಿ ಕಲ್ಪಿಸುವ ರಣಘಟ್ಟ ಯೋಜನೆ ನೀಡಿದ ಹೆಗ್ಗಳಿಕೆ ಬಿಜೆಪಿಗೆ ಸಲ್ಲುತ್ತದೆ ಎಂದು ಹೇಳಿದರು.

'ನಿಮ್ಮದೇ ಸರ್ಕಾರಗಳು ಇರುವ ಸಂದರ್ಭದಲ್ಲಿ ಬೇಲೂರು ವಿಧಾನಸಭಾ ಕ್ಷೇತ್ರಕ್ಕೆ ಒಂದೇ ಒಂದು ಶಾಶ್ವತ ಯೋಜನೆ ನೀಡಿದ ಬಗ್ಗೆ ಜನತೆಗೆ ಉತ್ತರ ನೀಡಬೇಕಿದೆ' ಎಂದು ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಸವಾಲು ಹಾಕಿದರು. 

ಈ ಭಾರಿ ಬೇಲೂರಿನಲ್ಲಿ ಶತಾಯ-ಗತಾಯ ಕಮಲ ಅರಳುವುದು ಖಚಿತವಾಗಿದೆ. ಇದಕ್ಕೆ ಸಾಕ್ಷಿ ಇಲ್ಲಿನ ಭಾರಿ ಜನಸ್ತೋಮವೇ ಸಾಕ್ಷಿ ಎಂದು ವಿಶ್ವಾಸ ವ್ಯಕ್ತಪಡಿಸಿದರು. 

ಸಭಾ ಕಾರ್ಯಕ್ರಮದ ನಂತರ ಜೆ.ಪಿ ನಡ್ಡಾ ಅವರು ಬೇಲೂರಿನ ವಿಶ್ವ ಪ್ರಸಿದ್ದ ಚನ್ನಕೇಶವ ದೇವಾಲಯಕ್ಕೆ ಭೇಟಿ ನೀಡಿದರು. 

ಮಂತ್ರಿ ಬಸವರಾಜ ಬೊಮ್ಮಾಯಿ, ಅಬಕಾರಿ ಸಚಿವ ಕೆ.ಗೋಪಾಲಯ್ಯ, ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ರಾಷ್ಟ್ರೀಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಹುಲ್ಲಹಳ್ಳಿ ಸುರೇಶ್ ಸೇರಿದಂತೆ ಹಲವು ಮುಖಂಡರು ಜೊತೆಗಿದ್ದರು. 

Similar News