ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಕನ್ನಡವೇ ಮಾಯ !

ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ

Update: 2023-02-21 12:02 GMT

ಶಿವಮೊಗ್ಗ, ಫೆ.21: ಶಿವಮೊಗ್ಗದ ಹೊರವಲಯದ ಸೊಗಾನೆಯಲ್ಲಿ ನಿರ್ಮಾಣಗೊಂಡಿರುವ ವಿಮಾನ ನಿಲ್ದಾಣವನ್ನು ಇದೇ 27 ರಂದು ಉದ್ಘಾಟನೆಗೊಳ್ಳಲಿದ್ದು, ಉದ್ಘಾಟನೆಗೆ ಕೆಲವೇ ದಿನಗಳು ಬಾಕಿ ಇರುವಾಗಲೇ, ಹೊಸ ವಿವಾದ ಸೃಷ್ಟಿಯಾಗಿದೆ.

ಇಷ್ಟು ದಿನ ವಿಮಾನ ನಿಲ್ದಾಣಕ್ಕೆ ಯಾರ ಹೆಸರನ್ನು ಇಡಬೇಕು ಅನ್ನೋ ಚರ್ಚೆ ಮುನ್ನೆಲೆಗೆ ಇತ್ತು. ಬಿಎಸ್ ಯಡಿಯೂರಪ್ಪ, ಕುವೆಂಪು, ಬಂಗಾರಪ್ಪ ಅವರ ಹೆಸರು ಇಡಬೇಕು ಅನ್ನೋ ವಾದಗಳು ಜೋರಾಗಿ ಕೇಳಿಬಂದಿದ್ದವು. ಕೊನೆಗೆ ರಾಜ್ಯ ಸರ್ಕಾರ ರಾಷ್ಟ್ರಕವಿ ಕುವೆಂಪು ಅವರ ಹೆಸರನ್ನು ಇಡಲು ನಿರ್ಧರಿಸುವ ಮೂಲಕ ಒಂದು ವಿವಾದಕ್ಕೆ ತೆರೆ ಎಳೆದಿತ್ತು. 

ಕುವೆಂಪು ಅವರ ಹೆಸರನ್ನು ಇಡಲು ರಾಜ್ಯ ಸರ್ಕಾರ ಸಂಪುಟದಲ್ಲಿ ತೀರ್ಮಾನ ತೆಗೆದುಕೊಂಡು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಆದರೆ ವಿಮಾನ ನಿಲ್ದಾಣದಲ್ಲಿ ಯಾವುದೇ ಕನ್ನಡ ಸೂಚನಾ ಫಲಕಗಳು ಇಲ್ಲದಿರೋದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.

ಈ ಹಿನ್ನೆಲೆಯಲ್ಲಿ ಕನ್ನಡಾಭಿಮಾನಿಗಳು, ಕನ್ನಡ ಪರ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಟ್ವಿಟರ್, ಫೇಸ್ಬುಕ್ ಸೇರಿದಂತೆ ಸೋಶಿಯಲ್ ಮೀಡಿಯಾಗಳಲ್ಲಿ ವಿಮಾನ ನಿಲ್ದಾಣದಲ್ಲಿ ಕನ್ನಡವನ್ನು ಕಡೆಗಣಿಸಿರುವ ಫೋಟೋಗಳನ್ನು ಶೇರ್ ಮಾಡಿ ಸರ್ಕಾರದ ವಿರುದ್ಧ ಹಾಗೂ ಅಧಿಕಾರಿಗಳ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. #StopHindiImposition ಎಂಬ ಹ್ಯಾಶ್ ಟ್ಯಾಗ್ ನಡಿ ಹಲವರು ಟ್ವಿಟ್ ಮಾಡುತ್ತಿದ್ದಾರೆ. 

''ಕನ್ನಡ ಎಲ್ರಪ್ಪಾ???? ಈ ನಿಲ್ದಾಣಕ್ಕೆ ಕುವೆಂಪು ಹೆಸ್ರು ಇಡ್ತೀವಿ ಅಂತೀರಾ. ಆ ಹೆಸರಿಟ್ಟು ಕನ್ನಡ ಇಲ್ದೆ ಅವ್ರಿಗೂ ಅವಮಾನ ಮಾಡೋದಿಕ್ಕಾ???'' ಎಂದು ಸಿನೆಮಾ ನಿರ್ದೇಶಕ ಮಂಸೋರೆ ಅವರು ಟ್ವೀಟ್ ಮಾಡಿದ್ದಾರೆ. 

''ಶಿವಮೊಗ್ಗ ವಿಮಾನ ನಿಲ್ದಾಣ ಹೀಗೆ ಬಿಟ್ರೆ ಕನ್ನಡದ ಅಸ್ತಿತ್ವ ಇಲ್ಲದ ಹಾಗೆ ಮಾಡಿಬಿಡ್ತಾರೆ. ಕನ್ನಡವನ್ನು ಮರೆತ ವಿಮಾನ ನಿಲ್ದಾಣ. ಎಲ್ಲಿ ನೋಡಿದ್ರು ಹಿಂದಿ ಹಿಂದಿ ಹಿಂದಿ. ಅಪ್ಪಟ ಕನ್ನಡಿಗರಿರೋ ಶಿವಮೊಗ್ಗದ ಈ ನಿಲ್ದಾಣ ಸಂಪೂರ್ಣ ಹಿಂದಿ ಹಾಗೂ ಆಂಗ್ಲಮಯ.. ನಿಲ್ಲಲಿ ಕನ್ನಡಿಗರ ಮೇಲೆ ಹಿಂದಿ ಹೇರಿಕೆ.''

- ರೂಪೇಶ್ ರಾಜಣ್ಣ, ಕನ್ನಡ ಪರ ಹೋರಾಟಗಾರ

'ಬೇರೆ ರಾಜ್ಯದವರ ಜೊತೆ ಹಿಂದಿ ಮಾತಾಡೋಕೆ ನಾವು ಹಿಂದಿ ಕಲಿಬೇಕಾ? ಇದು ಹೆರಿಕೆ ಅಲ್ಲದೆ ಇನ್ನೇನು? ಯಾಕೆ ಬೇರೆ ರಾಜ್ಯದವರು ಕನ್ನಡ ಕಲಿಬಾರದು? ಸಚಿವ ಸುನಿಲ್ ಕುಮಾರ್ ಅವರೇ, ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನಾ ಸಮಾರಂಭದಲ್ಲಿ ನೀವು ಹೇಳಿದಹಾಗೆ ಕನ್ನಡ ಪರಮೋಚ್ಚ ಮಾಡಿ ತೋರಿಸಿ' ಎಂದು 
ಸಚಿನ್ ಕುಂಬಾರ ಎಂಬವರು ಟ್ವೀಟ್ ಮಾಡಿದ್ದಾರೆ. 

'ಕನ್ನಡದ ಕಂಪು ಇಲ್ಲದ ಕುವೆಂಪು ವಿಮಾನ ನಿಲ್ದಾಣ. ಇದು ನಮ್ಮ ಹುಟ್ಟೂರಿನ ದುಸ್ಥಿತಿ' ಎಂದು ನೆಟ್ಟಿಗರೊಬ್ಬರು ಟ್ವೀಟಿಸಿದ್ದಾರೆ. 
 

Similar News