ಒಂದು ಕಡೆ ಬಿಜೆಪಿ, ಮತ್ತೊಂದು ಕಡೆ ಕಾಂಗ್ರೆಸ್ ಸೇರಿದ ಸಿ.ಟಿ.ರವಿ ಆಪ್ತನಿಂದ ಬೈಕ್ ಜಾಥಾ

ರಾಜಕೀಯ ಮೇಲಾಟಕ್ಕೆ ಸಾಕ್ಷಿಯಾದ ಚಿಕ್ಕಮಗಳೂರು ನಗರ

Update: 2023-02-21 13:26 GMT

ಚಿಕ್ಕಮಗಳೂರು, ಫೆ.21: ಜಿಲ್ಲೆಯಲ್ಲಿ ವಿಧಾನಸಭೆ ಚುನಾವಣೆಯ ಕಾವು ಹೆಚ್ಚುತ್ತಿದ್ದು, ಪಕ್ಷಾಂತರ ಪರ್ವವು ಬಿರುಸುಪಡೆದುಕೊಂಡಿದೆ. ಕ್ಷೇತ್ರ ಜಿದ್ದಾಜಿದ್ದಿನ ಕಣಕ್ಕೆ ಸಾಕ್ಷಿಯಾಗುತ್ತಿದ್ದು, ಇತ್ತೀಚೆಗೆ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡಿರುವ ಶಾಸಕ ಸಿ.ಟಿ.ರವಿ ಆಪ್ತ ಹಾಗೂ ಲಿಂಗಾಯತ ಸಮುದಾಯದ ಪ್ರಭಾವಿ ಮುಖಂಡ ಎಚ್.ಡಿ.ತಮ್ಮಯ್ಯ ಅವರು ಮಂಗಳವಾರ ನಗರದಲ್ಲಿ ಬೃಹತ್ ಬೈಕ್ ಜಾಥಾ ನಡೆಸುವ ಮೂಲಕ ಶಕ್ತಿ ಪ್ರದರ್ಶನ ನಡೆಸಿದರು.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಮಂಗಳವಾರ ನಗರದ ಕುವೆಂಪು ಕಲಾಮಂದಿರದಲ್ಲಿ ಬಿಜೆಪಿಯಿಂದ ಆಯೋಜಿಸಿದ್ದ ವೃತ್ತಿಪರ ಮತ್ತು ಚಿಂತಕರ ಸಭೆ ಭಾಗವಹಿಸಲು ಆಗಮಿಸಿದ್ದು, ಈ ವೇಳೆ ಬಿಜೆಪಿ ಮುಖಂಡರು, ಕಾರ್ಯಕರ್ತರು ನಗರದಲ್ಲಿ ಬೈಕ್ ಜಾಥಾ ನಡೆಸಿದ್ದರು. ಇದೇ ಸಂದರ್ಭದಲ್ಲಿ ಇತ್ತೀಚೆಗೆ ಕಾಂಗ್ರೆಸ್ ಮನೆ ಸೇರಿಕೊಂಡಿರುವ ಸಿ.ಟಿ.ರವಿ ಆಪ್ತ ಎಚ್.ಡಿ.ತಮ್ಮಯ್ಯ ಅವರು ನೂರಾರು ಬೆಂಬಲಿಗರೊಂದಿಗೆ ಬದಲಾವಣೆಗಾಗಿ ಸಂಕಲ್ಪ ಯಾತ್ರೆ ಹೆಸರಿನಲ್ಲಿ ಬೈಕ್ ಜಾಥಾ ನಡೆಸಿ ಸಿ.ಟಿ.ರವಿ ಸೇರಿದಂತೆ ಬಿಜೆಪಿಯವರಿಗೆ ತಿರುಗೇಟು ನೀಡಿದರು.

ರವಿವಾರ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡಿದ್ದ ಎಚ್.ಡಿ.ತಮ್ಮಯ್ಯ ಮಂಗಳವಾರ ನಗರಕ್ಕೆ ಆಗಮಿಸಿದ್ದು, ಈ ವೇಳೆ ಅವರ ನೂರಾರು ಬೆಂಬಲಿಗರು ಬೈಕ್ ಜಾಥಾ ನಡೆಸಿ ಕ್ಷೇತ್ರದಲ್ಲಿ ಶಕ್ತಿ ಪ್ರರ್ದಶನಕ್ಕೆ ಮುಂದಾಗಿದ್ದರು. ಮಂಗಳವಾರ ನಗರದ ಹೊರವಲಯದಲ್ಲಿರುವ ಕರ್ತಿಕೆರೆ ಗ್ರಾಮದಿಂದ ಚಿಕ್ಕಮಗಳೂರು ನಗರಕ್ಕೆ ಬೈಕ್ ಜಾಥಾ ಮೂಲಕ ಎಚ್.ಡಿ.ತಮ್ಮಯ್ಯ ಅವರನ್ನು ಕರೆತಂದ ಬೆಂಬಲಿಗರು ನಗರದ ಪ್ರಮುಖ ರಸ್ತೆಗಳಲ್ಲಿ ಜಾಥಾ ನಡೆಸಿದರು. 

ಎಚ್.ಡಿ.ತಮ್ಮಯ್ಯ ನೂರಾರು ಬೆಂಬಲಿಗರೊಂದಿಗೆ ತೆರೆದ ವಾಹನದಲ್ಲಿ ಸಂಚರಿಸುತ್ತಾ ಸಾರ್ವಜನಿಕರ ಕಡೆ ಕೈಬಿಸಿ ಮುನ್ನಡೆಯುತ್ತಿದ್ದರೇ, ಅವರ ಬೆಂಬಲಿಗರು ಬೈಕ್ ಏರಿ ತಮ್ಮಯ್ಯ ಪರ ಘೋಷಣೆಗಳನ್ನು ಕೂಗುತ್ತಾ ಸಾಗಿದರು. ಬೈಕ್ ಜಾಥ ಕಾಂಗ್ರೆಸ್ ಕಚೇರಿ ತಲುಪುತ್ತಿದ್ದಂತೆ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ತಮ್ಮಯ್ಯ ಅವರನ್ನು ಪಕ್ಷದ ಕಚೇರಿಗೆ ಬರಮಾಡಿಕೊಂಡರು.

ಈ ಬಾರಿಯ ಚುನಾವಣೆಯಲ್ಲಿ ಸಿ.ಟಿ.ರವಿ ತಮ್ಮ ಆಪ್ತನಿಂದಲೇ ಸವಾಲು ಎದುರಿಸಬೇಕಾಗಿದ್ದು, ಇದು ಸಾರ್ವಜನಿಕರಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದ್ದು, ವ್ಯಾಪಕ ಚರ್ಚೆಗೂ ಗ್ರಾಸವಾಗಿದೆ.

Similar News