ರಾಮನಗರದ ಆರೋಗ್ಯ ವಿವಿ, ವೈದ್ಯಕೀಯ ಕಾಲೇಜಿಗೆ 300ಕೋಟಿ ರೂ.ಬಿಡುಗಡೆ: ಸಚಿವ ಅಶ್ವತ್ಥನಾರಾಯಣ

Update: 2023-02-21 14:47 GMT

ಬೆಂಗಳೂರು, ಫೆ.21: ರಾಮನಗರದಲ್ಲಿ 270 ಎಕರೆ ಜಾಗದಲ್ಲಿ ಆರೋಗ್ಯ ವಿವಿ ಮತ್ತು ಹೊಸ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಸರಕಾರ 300 ಕೋಟಿ ರೂ.ಮಂಜೂರು ಮಾಡಿದ್ದು, ಮುಖ್ಯಮಂತ್ರಿ ಸದ್ಯದಲ್ಲೆ ಶಂಕುಸ್ಥಾಪನೆ ಮಾಡಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಅಶ್ವತ್ಥನಾರಾಯಣ ಹೇಳಿದ್ದಾರೆ.

ಮಂಗಳವಾರ ರಾಮನಗರ ಜಿಲ್ಲೆಯಲ್ಲಿ ಹೊಸದಾಗಿ ತಾಲೂಕಾಗಿ ರಚನೆಯಾಗಿರುವ ಹಾರೋಹಳ್ಳಿಯಲ್ಲಿ ಮಂಗಳವಾರ ನೂತನ ತಾಲೂಕು ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ರಾಮನಗರದಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿವಿ ಸ್ಥಾಪನೆಯಾಗಲಿದೆ. ಜೊತೆಗೆ ಹೊಸ ವೈದ್ಯಕೀಯ ಕಾಲೇಜೂ ಬರಲಿದೆ. ಇದಕ್ಕೆ ಬೇಕಾಗಿರುವ ಹಣದಲ್ಲಿ ಶೇ.50ರಷ್ಟನ್ನು(300 ಕೋಟಿ ರೂ) ಈಗಾಗಲೆ ಮಂಜೂರು ಮಾಡಲಾಗಿದೆ ಎಂದರು.

ಬಿಡದಿಯಲ್ಲಿ ಹೊಸ ಐಟಿಐ ಮತ್ತು ಪಾಲಿಟೆಕ್ನಿಕ್ ಕಾಲೇಜನ್ನು ಆರಂಭಿಸಲಾಗುವುದು. ಬೆಂಗಳೂರು ವಿವಿಯ ಸ್ನಾತಕೋತ್ತರ ಕೇಂದ್ರದ ನಿರ್ಮಾಣಕ್ಕೆ ಜಿಗೇನಹಳ್ಳಿಯಲ್ಲಿ ಜಾಗ ಗುರುತಿಸುವ ಜೊತೆಗೆ 50 ಕೋಟಿ ರೂ.ಒದಗಿಸಲಾಗಿದೆ. ತಿಪ್ಪಸಂದ್ರದಲ್ಲಿ ಕೇವಲ ಒಂದು ವರ್ಷದಲ್ಲಿ 49 ಕೋಟಿ ರೂ. ವೆಚ್ಚದಲ್ಲಿ ಜಿಟಿಟಿಸಿ ನಿರ್ಮಿಸಿದ್ದು, ಲೋಕಾರ್ಪಣೆಗೆ ಸಜ್ಜಾಗಿದೆ ಎಂದು ಅಶ್ವತ್ಥ ನಾರಾಯಣ ತಿಳಿಸಿದರು.

ಟಾಟಾ ಟೆಕ್ನಾಲಜೀಸ್ ಜೊತೆ ಒಡಂಬಡಿಕೆ ಮಾಡಿಕೊಂಡು ಪ್ರತಿ ಐಟಿಐ ಕಾಲೇಜನ್ನು 30 ಕೋಟಿ ರೂ. ವೆಚ್ಚದಲ್ಲಿ ಮೇಲ್ದರ್ಜೆಗೆ ಏರಿಸಲಾಗಿದೆ. ರಾಮನಗರದ ಸರಕಾರಿ ಎಂಜಿನಿಯರಿಂಗ್ ಕಾಲೇಜನ್ನು ಐಐಟಿ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತದೆ ಎಂದು ಅವರು ಹೇಳಿದರು.

ರಾಮನಗರ ಜಿಲ್ಲೆಯಲ್ಲಿ ಕೈಗಾರಿಕೆಗಳ ಸ್ಥಾಪನೆಗೂ ಒತ್ತು ಕೊಡಲಾಗಿದೆ. ರಾಜ್ಯದಲ್ಲಿ ಅತ್ಯಂತ ಹೆಚ್ಚು ಕೈಗಾರಿಕೆಗಳ ಜಿಲ್ಲಾ ಪಟ್ಟಿಯಲ್ಲಿ ಜಿಲ್ಲೆಯು 2ನೇ ಸ್ಥಾನದಲ್ಲಿದೆ. ಬಿಡದಿಯ ಟೊಯೋಟಾ ಕಾರ್ಖಾನೆಯಲ್ಲಿ ವರ್ಷಕ್ಕೆ 3 ಲಕ್ಷ ವಾಹನಗಳನ್ನು ತಯಾರಿಸಲಾಗುತ್ತಿದೆ. ಅಲ್ಲಿ ಸುಜುಕಿ ಕಾರುಗಳ ತಯಾರಿಕೆಯೂ ಶುರುವಾಗಿದೆ. ಇದರಿಂದ ಉದ್ಯೋಗ ಅವಕಾಶಗಳ ಸಂಖ್ಯೆ ಮೂರು ಪಟ್ಟು ಜಾಸ್ತಿಯಾಗಿದೆ. ಪ್ರಪಂಚದ ಎಲ್ಲ ದೇಶಗಳಿಗೂ ಕಾರುಗಳ ಬಿಡಿಭಾಗಗಳು ಇಲ್ಲಿಂದ ಪೂರೈಕೆ ಆಗುತ್ತಿದೆ ಎಂದು ಅವರು ವಿವರಿಸಿದರು.

ಬಿಡದಿ ಮತ್ತು ಹಾರೋಹಳ್ಳಿ ಕೈಗಾರಿಕಾ ಪ್ರದೇಶಗಳ ವಿಸ್ತರಣೆಗೆ ಅನುವು ಮಾಡಿಕೊಡಲಾಗಿದೆ. ಇಲ್ಲಿ ಕೈಗಾರಿಕಾ ಟೌನ್‍ಶಿಪ್ ನಿರ್ಮಾಣಕ್ಕೆ ಕ್ರಮ ವಹಿಸಲಾಗಿದೆ. ಕುದೂರಿನ ಬಳಿ ಹೊಸದಾಗಿ ಕೈಗಾರಿಕಾ ಪ್ರದೇಶ ನಿರ್ಮಾಣವಾಗಲಿದೆ ಎಂದು ಅಶ್ವತ್ಥ ನಾರಾಯಣ ಮಾಹಿತಿ ನೀಡಿದರು.

ಹಾರೋಹಳ್ಳಿ ತಾಲೂಕು ರಚನೆಗೆ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ತಾತ್ವಿಕ ಅನುಮೋದನೆ ನೀಡಿದ್ದರು. ನಮ್ಮ ಸರಕಾರ 2022ರ ಜನವರಿಯಲ್ಲಿ ಈ ಸಂಬಂಧ ಅಂತಿಮ ಅಧಿಸೂಚನೆ ಹೊರಡಿಸಿತು. ಹೊಸದಾಗಿ ಘೋಷಣೆಯಾದ 12 ತಾಲೂಕುಗಳ ಪೈಕಿ ಎರಡರಲ್ಲಿ ಮಾತ್ರ ಅಂತಿಮ ಅಧಿಸೂಚನೆ ಆಗಿದೆ. ಅವೆರಡರಲ್ಲಿ ಒಂದು ಹಾರೋಹಳ್ಳಿಯಾಗಿದೆ ಎಂದು ಅಶ್ವತ್ಥನಾರಾಯಣ ವಿವರಿಸಿದರು.

ರಾಮನಗರ ಜಿಲ್ಲೆಯ ಎಲ್ಲ ತಾಲೂಕುಗಳ 2.25 ಲಕ್ಷ ಮನೆಗಳಿಗೆ ಶುದ್ದ ಕುಡಿಯುವ ನೀರು ಒದಗಿಸುವುದಕ್ಕಾಗಿ ಜಲಜೀವನ್ ಮಿಷನ್ ಯೋಜನೆ ಅಡಿ 1,800 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ದೊಡ್ಡ ಮರಳವಾಡಿ ಯೋಜನೆ, ಮಂಚನಬೆಲೆ ಜಲಾಶಯ ಯೋಜನೆ, ಸತ್ತೇಗಾಲ ಯೋಜನೆ, ವೈಜಿ ಗುಡ್ಡ ಯೋಜನೆ, ಬಹುಗ್ರಾಮ ಕುಡಿಯುವ ನೀರು ಯೋಜನೆ ಇವುಗಳು ಇದರಲ್ಲಿ ಸೇರಿವೆ. ಇದಲ್ಲದೆ, ರಾಮನಗರದಲ್ಲಿ ಕುಡಿಯುವ ನೀರು ಸೌಕರ್ಯಕ್ಕಾಗಿ 450 ಕೋಟಿ ರೂ. ಒದಗಿಸಲಾಗಿದೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಶಾಸಕಿ ಅನಿತಾ ಕುಮಾರಸ್ವಾಮಿ, ಜಿಲ್ಲಾಧಿಕಾರಿ ಅವಿನಾಶ್ ಮೆನನ್, ಜಿಪಂ ಸಿಇಒ ದಿಗ್ವಿಜಯ್ ಘೋಟ್ಕೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ, ರೇಷ್ಮೆ ಉದ್ಯಮಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಗೌತಮ ಗೌಡ ಸೇರಿದಂತೆ ಇನ್ನಿತರರು ಇದ್ದರು.

‘ಹಾರೋಹಳ್ಳಿ ನೂತನ ತಾಲೂಕು ಒಟ್ಟು 11 ಗ್ರಾ.ಪಂ.ಗಳನ್ನು ಒಳಗೊಂಡಿದ್ದು, 82 ಗ್ರಾಮಗಳಿವೆ. ಜನಸಂಖ್ಯೆಯು 90 ಸಾವಿರ ಆಗಿದೆ. ತಾಲೂಕು ಕಚೇರಿಗೆ ಬೇಕಾದ ಹುದ್ದೆಗಳನ್ನು ಬಿಜೆಪಿ ಸರಕಾರ ಸೃಜಿಸಿದ್ದು, ಎಲ್ಲ ಕಚೇರಿಗಳಿಗೂ ಜಾಗ ಒದಗಿಸಿದೆ. ಅಗತ್ಯ ಬಿದ್ದರೆ ಕಚೇರಿಗಳ ಕಟ್ಟಡ ನಿರ್ಮಿಸಲು 30 ಗುಂಟೆ ಜಮೀನನ್ನು ಮೀಸಲಿಡಲಾಗಿದೆ. ಹಿಂದಿನ ಸರಕಾರ ಹಾರೋಹಳ್ಳಿಯನ್ನು ತಾಲೂಕು ಎಂದು ಘೋಷಿಸಿತ್ತಷ್ಟೇ. ಆದರೆ ಅದಕ್ಕೆ ಅಗತ್ಯವಾದ ಪ್ರಕ್ರಿಯೆಗಳನ್ನು ನಡೆಸಿದ ಶ್ರೇಯಸ್ಸು ಬಿಜೆಪಿ ಸರಕಾರಕ್ಕೆ ಸಲ್ಲಬೇಕು’

-ಅಶ್ವತ್ಥ ನಾರಾಯಣ, ಜಿಲ್ಲಾ ಉಸ್ತುವಾರಿ ಸಚಿವ

Similar News