×
Ad

ಗರ್ಭದಲ್ಲಿದ್ದ ಮಗುವಿನ ಅಂಗವೈಕಲ್ಯ ಮುಚ್ಚಿಟ್ಟ ವೈದ್ಯೆಗೆ 11 ಲಕ್ಷ ರೂ.ದಂಡ

Update: 2023-02-21 22:06 IST

ಧಾರವಾಡ, ಫೆ.21: ಗರ್ಭಿಣಿಯೊಬ್ಬರ ಪರೀಕ್ಷೆ ವೇಳೆಯಲ್ಲಿ ಹೊಟ್ಟೆಯಲ್ಲಿ ಇರುವ ಮಗುವಿನಲ್ಲಿದ್ದ ಅಂಗವೈಕಲ್ಯವನ್ನು ಪೋಷಕರ ಗಮನಕ್ಕೆ ತರದೆ ನಿರ್ಲಕ್ಷ್ಯ ವಹಿಸಿದ್ದ ವೈದ್ಯೆಗೆ ಧಾರವಾಡ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು 11 ಲಕ್ಷ ರೂ.ದಂಡ ವಿಧಿಸಿದೆ.

ಧಾರವಾಡ ನಗರದ ಶ್ರೀನಗರ ಭಾವಿಕಟ್ಟಿಯ ನಿವಾಸಿಗಳಾದ ಪರಶುರಾಮ ಘಾಟಗೆ ಮತ್ತು ಪ್ರೀತಿ ಎಂಬ ದಂಪತಿ ಅನ್ಯಾಯಕ್ಕೆ ಒಳಗಾದವರಾಗಿದ್ದಾರೆ. ಗರ್ಭಿಣಿಯಾಗಿದ್ದ ಪ್ರೀತಿ 3ನೆ ತಿಂಗಳಿಂದ 9ನೆ ತಿಂಗಳಿನವರೆಗೆ ಧಾರವಾಡದ ಪ್ರಸೂತಿ ತಜ್ಞೆ ಡಾ. ಸೌಭಾಗ್ಯ ಕುಲಕರ್ಣಿ ಬಳಿ ಕಾಲಕಾಲಕ್ಕೆ ಪರೀಕ್ಷೆ ಮಾಡಿಸಿಕೊಂಡಿದ್ದರು.

ಈ ವೇಳೆ ವೈದ್ಯೆ ಸೌಭಾಗ್ಯ ಪ್ರೀತಿ ಹೊಟ್ಟೆಯಲ್ಲಿರುವ ಮಗು ಆರೋಗ್ಯವಾಗಿದ್ದು, ಯಾವುದೇ ಸಮಸ್ಯೆ ಇಲ್ಲವೆಂದು ಪ್ರೀತಿ ಮತ್ತು ಆಕೆಯ ಪತಿಗೆ ಹೇಳಿ, 9ನೆ ತಿಂಗಳು ಮುಗಿದಾಗ ಶಸ್ತ್ರ ಚಿಕಿತ್ಸೆ ಮೂಲಕ ಹೆರಿಗೆ ಮಾಡಿಸುವಂತೆ ಸಲಹೆ ನೀಡಿದ್ದರು. 

ಖಾಸಗಿ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿದರೆ, ಅಷ್ಟು ಹಣ ಕಟ್ಟಲು ಕಷ್ಟವಾಗುತ್ತದೆ ಎಂದು ಯೋಚನೆ ಮಾಡಿದ್ದ ದಂಪತಿ 2019ರ ಜ.31ರಂದು ಧಾರವಾಡ ಎಸ್‍ಡಿಎಮ್‍ಸಿ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿಕೊಂಡಿದ್ದರು. ಹೆಣ್ಣು ಮಗು ಜನಿಸಿತ್ತು. 

ಆದರೆ, ಆ ಮಗುವಿನ 2 ಕಾಲುಗಳು ಅಂಗವಿಕಲತೆಯಿಂದ ಕೂಡಿದ್ದವು. ಈ ಹಿನ್ನೆಲೆಯಲ್ಲಿ ದಂಪತಿ ವೈದ್ಯ ವಿರುದ್ಧ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ಸಲ್ಲಿಸಿದ್ದರು.

ದೂರಿನ ವಿಚಾರಣೆ ನಡೆಸಿದ ಆಯೋಗವು ವೈದ್ಯರು ಮಗುವಿನ ಅಂಗವಿಕಲತೆ ಬಗ್ಗೆ ಗೊತ್ತಿದ್ದರೂ ದೂರುದಾರರ ಗಮನಕ್ಕೆ ತರದೆ, ತಮ್ಮ ಕರ್ತವ್ಯದಲ್ಲಿ ನಿರ್ಲಕ್ಷ್ಯ ವಹಿಸಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.

ದೂರುದಾರರ ಮಗುವಿನ ಈವರೆಗಿನ ವೈದ್ಯಕೀಯ ಖರ್ಚಿಗೆ 50 ಸಾವಿರ ರೂ., ಓಡಾಟ ಮತ್ತು ಖರ್ಚು ವೆಚ್ಚಕ್ಕೆ ರೂ. 50 ಸಾವಿರ ರೂ., ಮಗುವಿನ ಪಾಲಕರಿಗೆ ಆಗಿರುವ ಮಾನಸಿಕ ನೋವು ಮತ್ತು ಹಿಂಸೆಗಾಗಿ 2 ಲಕ್ಷ ರೂ., ಮಗುವಿನ ಭವಿಷ್ಯದ ವೈದ್ಯಕೀಯ ಖರ್ಚು ವೆಚ್ಚಕ್ಕೆ 3 ಲಕ್ಷ ರೂ., ಮಗುವಿನ ಭವಿಷ್ಯದ ಜೀವನ ನಿರ್ವಹಣೆಗೆ 5 ಲಕ್ಷ ರೂ. ಮತ್ತು ಈ ಪ್ರಕರಣದ ಖರ್ಚು ವೆಚ್ಚಕ್ಕಾಗಿ ರೂ. 10 ಸಾವಿರ ರೂ. ಸೇರಿದಂತೆ, ಒಟ್ಟು 11,10,000 ರೂ. ಪರಿಹಾರ ನೀಡುವಂತೆ ಆದೇಶ ನೀಡಿದೆ.

Similar News