ಚುನಾವಣಾ ಚಿಹ್ನೆ ರಾಜಕೀಯ ಪಕ್ಷದ ಅಸ್ಮಿತೆ

Update: 2023-02-22 04:52 GMT

ಕೇಂದ್ರ ಚುನಾವಣಾ ಆಯೋಗ ಶಿವಸೇನೆಯ ಮೂಲ ಚಿಹ್ನೆಯಾದ ಬಿಲ್ಲು ಬಾಣವನ್ನು ಶಿಂದೆ ಬಣಕ್ಕೆ ನೀಡಿರುವುದು, ಶಿಂದೆ ಬಣವೇ ನಿಜವಾದ ಶಿವಸೇನೆ ಎಂದು ಘೋಷಿಸಿರುವುದು ಉದ್ಧವ್ ಠಾಕ್ರೆ ಬಣದ ಆಕ್ರೋಶಕ್ಕೆ ಕಾರಣವಾಗಿದೆ.

ಚುನಾವಣಾ ಆಯೋಗ ಬಿಜೆಪಿ ಏಜೆಂಟ್ ರೀತಿ ಕೆಲಸ ಮಾಡುತ್ತಿದೆ ಎಂದು ಉದ್ಧವ್ ಠಾಕ್ರೆ ಬಣ ಆರೋಪಿಸಿದೆ. ಪಕ್ಷದ ಚಿಹ್ನೆ ವಿವಾದ ಸುಪ್ರೀಂಕೋರ್ಟ್ನಲ್ಲಿರುವಾಗಲೇ ಚುನಾವಣಾ ಆಯೋಗ ನೀಡಿರುವ ಈ ಆದೇಶವನ್ನು ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸುತ್ತೇವೆ ಎಂದು ಉದ್ಧವ್ ಬಣದ ನಾಯಕ ಸಂಜಯ್ ರಾವುತ್ ಹೇಳಿದ್ದಾರೆ. ಚಿಹ್ನೆಗಾಗಿ 2,000 ಕೋಟಿ ರೂ. ಡೀಲ್ ನಡೆದಿದೆ ಎಂದೂ ಅವರು ಗಂಭೀರ ಆರೋಪ ಮಾಡಿದ್ದಾರೆ.

ದಶಕಗಳಿಂದ ಪಕ್ಷದ ಸಂಕೇತವಾಗಿದ್ದ ಚಿಹ್ನೆಯೇ ಹೋಗಿಬಿಟ್ಟರೆ ಪಕ್ಷದ ಅಸ್ತಿತ್ವವೇ ಕಳೆದುಕೊಂಡ ಹಾಗೆ ಎಂಬ ಭಾವನೆ ಆ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರಿಗೆ ಬರುವುದು ಸಹಜ. ಏಕೆಂದರೆ ಪಕ್ಷದ ಚಿಹ್ನೆ ಅವರ ಪಾಲಿಗೆ ಕೇವಲ ಚಿಹ್ನೆ ಅಲ್ಲ. ಅದು ಅವರ ಅಸ್ಮಿತೆ.

ಆದರೆ, ಮಹಾ ವಿಕಾಸ್ ಅಘಾಡಿ (ಎಂವಿಎ) ನಾಯಕ, ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್ಸಿಪಿ) ಸ್ಥಾಪಕ ಶರದ್ ಪವಾರ್, ಇದರಿಂದ ಯಾವುದೇ ದೊಡ್ಡ ಪರಿಣಾಮವಾಗದು. ಹೊಸ ಚಿಹ್ನೆ ತೆಗೆದುಕೊಳ್ಳಿ ಎಂದು ತಮ್ಮ ಮಿತ್ರ ಉದ್ಧವ್ ಠಾಕ್ರೆಗೆ ಸಲಹೆ ನೀಡಿದ್ದಾರೆ. ಹೊಸ ಚಿಹ್ನೆಯನ್ನು ಜನರು ಸ್ವೀಕರಿಸುತ್ತಾರೆ ಎಂದೂ ಪವಾರ್ ಹೇಳಿದ್ದಾರೆ.

ಪವಾರ್ರನ್ನು ಭಾರತೀಯ ಪವರ್ ಪಾಲಿಟಿಕ್ಸ್ನ ಪಿತಾಮಹ ಎಂದರೂ ತಪ್ಪಲ್ಲ. ಅಂತಹ ಮಹಾ ಅನುಭವಿ ಹೇಳಿರುವ ಈ ಮಾತು ಸತ್ಯವೂ ಹೌದು.

ರಾಜಕೀಯ ಪಕ್ಷಗಳು ಕಾಲಾನುಕ್ರಮದಲ್ಲಿ ಹೇಗೆ ಬದಲಾದ ಚಿಹ್ನೆಗಳೊಡನೆ ಸಾಗಿಬಂದಿವೆ ಎಂಬ ಇತಿಹಾಸ ಕೂಡ ಬಹಳ ಕುತೂಹಲಕಾರಿಯಾಗಿದೆ. ಹಾಗೆಯೆ ರಾಜಕೀಯ ಪಕ್ಷವೊಂದರ ವಿಚಾರದಲ್ಲಿ ಚಿಹ್ನೆ ಏಕೆ ಮಹತ್ವದ್ದಾಗುತ್ತದೆ? ಏಕೆ ಒಂದು ಚಿಹ್ನೆಯ ಬಗ್ಗೆ ಯಾವುದೇ ಪಕ್ಷ ಅಷ್ಟೊಂದು ಹಕ್ಕು ಸಾಧಿಸುತ್ತದೆ ಎಂಬುದಕ್ಕೂ ಕಾರಣವಿದೆ.

ಹಾಗಾದರೆ ರಾಜಕೀಯ ಪಕ್ಷದ ಚಿಹ್ನೆ ಅಥವಾ ಚುನಾವಣಾ ಚಿಹ್ನೆ ಎಂಬುದು ಏನು? ಅದಕ್ಕೆ ಬಹಳ ಮಹತ್ವವಿದೆ. ಅದು ಒಂದು ರಾಜಕೀಯ ಪಕ್ಷದ ಅಸ್ತಿತ್ವವನ್ನೇ ನಿರ್ಧರಿಸುವ ಸಂಗತಿಯೂ ಆಗುತ್ತದೆ. ಮತ ಚಲಾಯಿಸಲು ಹೋಗುವ ಮತದಾರನ ಮುಂದಿರುವುದು ಒಂದು ಪಕ್ಷದ ಅಭ್ಯರ್ಥಿಯ ಮುಖವಲ್ಲ. ಬದಲಿಗೆ ಅವನು ಯಾವ ಪಕ್ಷದಿಂದ ಸ್ಪರ್ಧಿಸುತ್ತಾನೋ ಆ ಪಕ್ಷದ ಚಿಹ್ನೆ. ಆ ಚಿಹ್ನೆ ಮಾತ್ರವೇ ಪಕ್ಷವನ್ನೂ ಅದರ ಅಭ್ಯರ್ಥಿಯನ್ನೂ ಪ್ರತಿನಿಧಿಸುತ್ತದೆ. ಒಮ್ಮೆ ಒಂದು ಪಕ್ಷದ ಚಿಹ್ನೆ ಮತದಾರನ ಮನಸ್ಸಿನಲ್ಲಿ ಗಟ್ಟಿಯಾದರೆ, ಆತ ಅದರ ಮೂಲಕವೇ ಪಕ್ಷವನ್ನು ಗುರುತಿಸುತ್ತಾನೆ. ಆಮೇಲೆ ತನ್ನ ಆಯ್ಕೆಯನ್ನು ಅವನು ನಿರ್ಧರಿಸುವುದು ಚಿಹ್ನೆಯ ಆಧಾರದ ಮೇಲೆಯೇ. ಹಾಗಾಗಿಯೇ ಯಾವುದೇ ಪಕ್ಷ, ಮತದಾರನ ಮನಸ್ಸಿನಲ್ಲಿ ಆಗಲೇ ಅಚ್ಚೊತ್ತಿರುವ ತನ್ನ ಆ ಹೆಗ್ಗುರುತನ್ನು ಕಳೆದುಕೊಳ್ಳಲು ಬಯಸುವುದಿಲ್ಲ. ಆದರೂ ರಾಜಕೀಯ ಪರಿಸ್ಥಿತಿಗಳು ರಾಜಕೀಯ ಪಕ್ಷಗಳ ಅಸ್ತಿತ್ವವನ್ನು ಬದಲು ಮಾಡಿದಾಗ, ಪಕ್ಷದ ಚಿಹ್ನೆಯೂ ಬದಲಾದದ್ದು ಇದೆ. 

ದೇಶದಲ್ಲಿ ಮೊದಲ ಸಲ ಚುನಾವಣಾ ಚಿಹ್ನೆಗಳ ಬಳಕೆ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಶುರುವಾಯಿತು. ಜನಸಾಮಾನ್ಯರನ್ನು, ಅದರಲ್ಲೂ ಅನಕ್ಷರಸ್ಥರನ್ನು ತಲುಪಲು ಸುಲಭವಾದ ಮಾರ್ಗವಾಗಿ, ಚುನಾವಣಾ ಚಿಹ್ನೆ ಬಳಕೆ ಆರಂಭಿಸಲಾಯಿತು. ಅಂದಿನಿಂದ ದೇಶದ ಎರಡು ಅತಿ ದೊಡ್ಡ ರಾಜಕೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಮೂರು ಬಾರಿ ತಮ್ಮ ಚಿಹ್ನೆಗಳು ಬದಲಾದ ಸಂದರ್ಭವನ್ನು ಕಂಡಿವೆ. 

1952ರಿಂದ 1969ರವರೆಗೆ ಕಾಂಗ್ರೆಸ್ ಪಕ್ಷಕ್ಕೆ ನೊಗ ಹೊತ್ತ ಜೋಡೆತ್ತು ಚಿಹ್ನೆಯಾಗಿತ್ತು. ನೆಹರೂ ಬಳಿಕ ಕಾಂಗ್ರೆಸ್ ಹೋಳಾಗಿ ಇಂದಿರಾ ಕಾಂಗ್ರೆಸ್ ಚಿಹ್ನೆ - ಹಸು ಮತ್ತು ಕರು ಆಯಿತು. 1971ರಿಂದ 1977ರವರೆಗೆ ಈ ಚಿಹ್ನೆಯಿತ್ತು. ಅದಾದ ಬಳಿಕ ಕಾಂಗ್ರೆಸ್ ಮತ್ತೆ ಒಡೆಯಿತು. ಆಗ ಇಂದಿರಾ ಗಾಂಧಿ ಬಣಕ್ಕೆ ಹಸ್ತದ ಗುರುತು ಸಿಕ್ಕಿತು. 1977ರಲ್ಲಿ ಬದಲಾದ ಈ ಚಿಹ್ನೆಯೇ ಕಾಂಗ್ರೆಸ್ ಪಾಲಿನ ಗುರುತಾಗಿ ಇಂದಿಗೂ ಉಳಿದುಬಂದಿದೆ. 

ಇದೇ ರೀತಿ ಈಗಿನ ಬಿಜೆಪಿ ಮೊದಲು ಭಾರತೀಯ ಜನಸಂಘ ಎಂದಿತ್ತು. 1951ರಿಂದ 1977ರವರೆಗೆ ದೀಪ ಅದರ ಚಿಹ್ನೆಯಾಗಿತ್ತು. 1977ರಲ್ಲಿ ಜನತಾ ಪಕ್ಷದೊಂದಿಗೆ ಜನಸಂಘ ವಿಲೀನವಾದಾಗ ಅದರ ಚಿಹ್ನೆ ನೇಗಿಲು ಹೊತ್ತ ರೈತ ಆಯಿತು. ಮತ್ತೆ ಅವರೆಡೂ ವಿಭಜನೆಯಾಗಿ ಜನಸಂಘ 1980ರಲ್ಲಿ ಭಾರತೀಯ ಜನತಾ ಪಕ್ಷ ಎಂದಾದಾಗ ಅದಕ್ಕೆ ಕಮಲದ ಗುರುತು ಸಿಕ್ಕಿತು. ಅದೇ ಚಿಹ್ನೆ ಬಿಜೆಪಿಯ ಹೆಗ್ಗುರುತಾಗಿ ಇಂದಿಗೂ ಇದೆ.

ಇನ್ನೊಂದೆಡೆ ಜನಸಂಘದಿಂದ ಬೇರೆಯಾದ ಜನತಾ ಪಕ್ಷ ವಿಭಜನೆಯಾಗಿ ಜನತಾ ದಳ ಅಸ್ತಿತ್ವಕ್ಕೆ ಬಂದಾಗ ಅದರ ಚಿಹ್ನೆ ಚಕ್ರವಾಗಿತ್ತು. ಜನತಾ ದಳ ಮತ್ತೆ ಹೋಳಾಗಿ ಜೆಡಿಯು, ಜೆಡಿಎಸ್ ಎಂದಾದವು. ಅವುಗಳಿಗೆ ಕ್ರಮವಾಗಿ ಬಾಣ ಮತ್ತು ತೆನೆ ಹೊತ್ತ ಮಹಿಳೆ ಚಿಹ್ನೆ ದೊರೆತವು. 

ಅಂದಹಾಗೆ, ಭಾರತದಲ್ಲಿ ಯಾವುದೇ ಪಕ್ಷಕ್ಕೆ ತನ್ನ ಸಿದ್ಧಾಂತ ಹಾಗೂ ಬಯಕೆಯಂತೆ ತಾನೇ ಚಿಹ್ನೆ ವಿನ್ಯಾಸ ಮಾಡುವ ಆಯ್ಕೆ ಇಲ್ಲ. ಇಲ್ಲಿ ಚುನಾವಣಾ ಆಯೋಗದ ಬಳಿ ಈಗಾಗಲೇ ಇರುವ ಸಾವಿರಾರು ಚಿಹ್ನೆಗಳ ಪೈಕಿ ಮೂರನ್ನು ಆಯ್ಕೆ ಮಾಡಿ ಅದರಲ್ಲಿ ತಮ್ಮ ಮೊದಲ, ಎರಡನೇ ಹಾಗೂ ಮೂರನೇ ಆದ್ಯತೆ ಯಾವುದಕ್ಕೆ ಎಂದು ಹೇಳಬೇಕು. ಅದರಲ್ಲಿ ಒಂದನ್ನು ಆಯೋಗ ಅಂತಿಮಗೊಳಿಸುತ್ತದೆ. ಅದೇ ಆ ಪಕ್ಷದ ಚಿಹ್ನೆಯಾಗುತ್ತದೆ.

ಆಯೋಗದ ಬಳಿ ಇರುವ ಚಿಹ್ನೆಗಳಲ್ಲಿ ನಾವು ನಿತ್ಯ ಬದುಕಿನಲ್ಲಿ ಕಾಣುವ ಅದೆಷ್ಟೋ ವಸ್ತು, ವಿಷಯಗಳಿರುತ್ತವೆ. ಅದರಲ್ಲಿ ಗ್ಯಾಸ್ ಸಿಲಿಂಡರ್, ಐಸ್ ಕ್ರೀಮ್ನಿಂದ ಮೊಬೈಲ್ ಚಾರ್ಜರ್ವರೆಗೆ ವೈವಿಧ್ಯಮಯ ಬೃಹತ್ ಸಂಗ್ರಹವೇ ಇರುತ್ತದೆ.

Similar News