ಬಿಜೆಪಿಯಲ್ಲಿರುವ ಗುಂಪು ರಾಜಕೀಯದ ಶೇ. ಒಂದರಷ್ಟೂ ಕಾಂಗ್ರೆಸ್ ನಲ್ಲಿಲ್ಲ: ರಾಮಲಿಂಗಾರೆಡ್ಡಿ

Update: 2023-02-22 05:10 GMT

ಮುಂದಿನ ವಿಧಾನಸಭಾ ಚುನಾವಣಾ ಸಿದ್ಧತೆಯ ಬಗ್ಗೆ ಹಿರಿಯ ಕಾಂಗ್ರೆಸ್ ನಾಯಕ, ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಅವರು ‘ವಾರ್ತಾಭಾರತಿ’ಯೊಂದಿಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ

ಚುನಾವಣೆ ಹತ್ತಿರವಾಗುತ್ತಿದೆ. ದಿಲ್ಲಿಯಲ್ಲಿ ಬಿಬಿಸಿ ಕಚೇರಿ ಮೇಲೆ ಐಟಿ ದಾಳಿಯಾಗಿದೆ. ಏನೆನ್ನುತ್ತೀರಿ?
ರಾಮಲಿಂಗಾರೆಡ್ಡಿ:
ನಮ್ಮ ದೇಶದಲ್ಲಿಂದು ವಾಕ್ ಸ್ವಾತಂತ್ರ್ಯವೂ ಇಲ್ಲ. ಬಿಜೆಪಿ, ಮೋದಿ, ಅಮಿತ್ ಶಾ ವಿರುದ್ಧ ಮಾತನಾಡುವವರನ್ನು ಜೈಲಿಗೆ ಹಾಕಲಾಗುತ್ತದೆ. ಬಹುತೇಕ ಮಾಧ್ಯಮಗಳು ಉದ್ದಿಮೆದಾರರ ಕೈಯಲ್ಲಿವೆ. ಪತ್ರಿಕಾ ರಂಗ ಬಲಹೀನವಾಗಿದೆ. ಸೇಡಿನ ಮನೋಭಾವದಿಂದ ಬಿಬಿಸಿ ಮೇಲೆ ಕೇಂದ್ರ ಸರಕಾರ ಐಟಿ ದಾಳಿ ಮಾಡಿದೆ. ಹಿಂದೆಯೂ ಕೆಲ ಮಾಧ್ಯಮಗಳು ನಿಷ್ಠುರವಾಗಿ ವರದಿ ಮಾಡಿದಾಗ ಅವುಗಳ ಕಚೇರಿ ಮೇಲೆ ದಾಳಿಯಾಗಿತ್ತು. ನಮ್ಮ ವಿರುದ್ಧ ಮಾತಾಡಿದರೆ ನಿಮಗೆ ಇದೆಲ್ಲ ಕಾದಿದೆ ಎಂದು ಅರ್ಥ, ಅಷ್ಟೆ.

 ಸರಕಾರ ನಡೆಯುವುದು ಸಂವಿಧಾನದ ಆಧಾರದಲ್ಲಿ. ಅಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ, ವಾಕ್ ಸ್ವಾತಂತ್ರ್ಯ ಎಲ್ಲವೂ ಇದೆ. ಇಲ್ಲದೇ ಹೋದಾಗ ಅದನ್ನು ಮರಳಿ ತರುವುದು ನ್ಯಾಯಾಂಗದ ಕೆಲಸ. ಹಾಗಿದ್ದೂ ಯಾಕೆ ಹೀಗೆ?
ರಾಮಲಿಂಗಾರೆಡಿ್ಡ: ನ್ಯಾಯಾಂಗದಲ್ಲಿ ನಮಗೆಲ್ಲ ವಿಶ್ವಾಸ ಇದೆ. ಇಂಥ ಸಂದರ್ಭದಲ್ಲಿ ನ್ಯಾಯಾಂಗ ನೇರವಾಗಿ ವಿಚಾರಣೆ ಕೈಗೆತ್ತಿಕೊಳ್ಳಬೇಕು. ಆಗ ಪ್ರಜಾಪ್ರಭುತ್ವದಲ್ಲಿನ ಸಂಸ್ಥೆಗಳು ನಿರ್ಭೀತಿಯಿಂದ ಕೆಲಸ ಮಾಡುವುದಕ್ಕೆ ಅವಕಾಶವಾಗುತ್ತದೆ. ನ್ಯಾಯಾಂಗ ಇಂಥದ್ದನ್ನೆಲ್ಲ ತಡೆಯುತ್ತದೆ ಎಂಬ ವಿಶ್ವಾಸವಿದೆ. 

 ಚುನಾವಣೆ ವಿಚಾರಕ್ಕೆ ಬರುವುದಾದರೆ, ಬಿಟಿಎಂ ಕ್ಷೇತ್ರದಲ್ಲಿ ನಿಮಗೆ ಪ್ರತಿಸ್ಪರ್ಧಿಗಳೇ ಇಲ್ಲ ಎಂಬ ಮಾತಿದೆ?
ರಾಮಲಿಂಗಾರೆಡಿ್ಡ: ನಮ್ಮ ಪಕ್ಷದ ಇತರ ಯಾವ ನಾಯಕರೂ ಅಡ್ಡಿ ಬರುವುದಿಲ್ಲ. ನಾನು ಸ್ಪರ್ಧಿಸುವುದಿಲ್ಲ ಎಂದಾಗ ಅವರಲ್ಲೇ ಒಬ್ಬರನ್ನು ಆಯ್ಕೆ ಮಾಡುತ್ತಾರೆ.

 ಅಂದರೆ ರಾಮಲಿಂಗಾರೆಡ್ಡಿಯವರು ಎರಡನೇ ಹಂತದ ನಾಯಕರನ್ನು ಬೆಳೆಸಿಲ್ಲವಾ ಅಥವಾ ಇದು ನಿಮ್ಮ ಮೇಲಿನ ಗೌರವವಾ?
ರಾಮಲಿಂಗಾರೆಡ್ಡಿ:
ಬಹಳಷ್ಟು ಸದಸ್ಯರಿಗೆ ಈಗಾಗಲೇ ಸ್ಥಾನಮಾನಗಳಿವೆ. ನಾನು ಸ್ಪರ್ಧಿಸುವ ಸಂದರ್ಭದಲ್ಲಿ ಸಹಜವಾಗಿಯೇ ಅವರಾರೂ ಕೇಳುವುದಿಲ್ಲ. ಸಾಮಾನ್ಯವಾಗಿ ಎಲ್ಲ ಕಡೆ ಹೀಗೆಯೇ. 

 ಬಿಜೆಪಿ ನಿಮ್ಮ ಮೇಲೆ ಮಾಡಿರುವ ಭ್ರಷ್ಟಾಚಾರ ಆರೋಪದ ಬಗ್ಗೆ?
ರಾಮಲಿಂಗಾರೆಡ್ಡಿ: ಭ್ರಷ್ಟಾಚಾರಿಗಳು ಈ ದೇಶದಲ್ಲಿ, ರಾಜ್ಯದಲ್ಲಿ ಯಾರಾದರೂ ಇದ್ದರೆ ಮೊದಲ ಸ್ಥಾನ ಬಿಜೆಪಿಗೆ. ಕಾಂಗ್ರೆಸ್ ವಿರುದ್ಧ ಭ್ರಷ್ಟಾಚಾರ ಆರೋಪ ಇರಲಿಲ್ಲ ಅಥವಾ ಕಾಂಗ್ರೆಸ್ ಇದ್ದಾಗ ಭ್ರಷ್ಟಾಚಾರ ಇರಲೇ ಇಲ್ಲ ಅಂತಲೂ ಅಲ್ಲ. ಮಿತಿಯಲ್ಲಿತ್ತು. ಪ್ರಪಂಚ ಇರುವವರೆಗೂ ಭ್ರಷ್ಟಾಚಾರ ಇರುತ್ತದೆ. ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು. ಕಾನೂನು ಸುವ್ಯವಸ್ಥೆ ನಿಯಂತ್ರಣದಲ್ಲಿಟ್ಟುಕೊಳ್ಳುವಂತೆ ಇದು ಕೂಡ. ಬಿಜೆಪಿ ಬಂದಮೇಲೆ ಲಂಗುಲಗಾಮಿಲ್ಲದೆ ಭ್ರಷ್ಟಾಚಾರ ವ್ಯಾಪಕವಾಗಿದೆ. ಸರಕಾರಿ ಅಧಿಕಾರಿಗಳಂತೂ ನಿತ್ಯವೂ ಸರಕಾರಕ್ಕೆ ಶಾಪ ಹಾಕುತ್ತಾರೆ. ಜನಸಾಮಾನ್ಯರಿಗೂ ಹೊಡೆತ ಬಿದ್ದಿದೆ. 

 ಪಿಎಫ್ಐ ವಿರುದ್ಧದ ಪ್ರಕರಣಗಳನ್ನು ನೀವು ಅಧಿಕಾರದಲ್ಲಿದ್ದಾಗ ವಾಪಸ್ ಪಡೆದಿರಿ ಮತ್ತು ಮುಸ್ಲಿಮರ ತುಷ್ಟೀಕರಣ ಮಾಡಿದಿರಿ ಎಂಬ ಆರೋಪಗಳಿವೆ?
ರಾಮಲಿಂಗಾರೆಡ್ಡಿ: ಬಿಜೆಪಿಯವರಿಗೆ ಮಾನ ಮರ್ಯಾದೆ ಇಲ್ಲ. ಬಹಳಷ್ಟು ಸಲ ಹೇಳಿದ್ದೇನೆ. ಮಾನ ಮರ್ಯಾದೆ ಇಲ್ಲದವರು ಊರಿಗೆ ದೊಡ್ಡವರಂತೆ. ಪಿಎಫ್ಐ ಬೆಳೆಸಿದವರೇ ಬಿಜೆಪಿಯವರು. ಕೇಂದ್ರದಲ್ಲಿ ಬಿಜೆಪಿ 9 ವರ್ಷದಿಂದ ಆಡಳಿತದಲ್ಲಿದೆ. ಅದನ್ನು ಬಹಳ ಹಿಂದೆಯೇ ನಿಷೇಧಿಸಬಹುದಿತ್ತು. ಯಾಕೆ ಮಾಡಲಿಲ್ಲ? ಪಿಎಫ್ಐ ಕಾಂಗ್ರೆಸ್ ಮತಗಳನ್ನು ಕಸಿಯುತ್ತದೆ, ಒಡೆಯುತ್ತದೆ ಎಂದು ಅಂಥವರನ್ನು ಬೆಳೆಸಿದ್ದೇ ಬಿಜೆಪಿ. ಸಿದ್ದರಾಮಯ್ಯ ಸರಕಾರದಲ್ಲಿ ಪಿಎಫ್ಐನವರನ್ನು ಬಿಟ್ಟುಬಿಟ್ಟರು ಎನ್ನುತ್ತಾರೆ. ನಮ್ಮ ಸರಕಾರ ಮಾತ್ರವಲ್ಲ, ಬಹಳಷ್ಟು ಕೇಸ್ಗಳನ್ನು ಬಿಜೆಪಿ ಸರಕಾರವೂ ಹಿಂದೆಗೆದುಕೊಂಡಿದೆ. ಆರ್ಟಿಐ ದಾಖಲೆಯೇ ಇದೆ. ಸಿದ್ದರಾಮಯ್ಯ ಅವಧಿಯಲ್ಲಿ ಅನೇಕ ಪ್ರಕರಣಗಳನ್ನು ವಾಪಸ್ ಪಡೆಯಲಾಗಿದೆ. ಆದರೆ ಯಾವುದೇ ಪ್ರಕರಣಗಳಲ್ಲಿ ಪಿಎಫ್ಐ ಕಾರ್ಯಕರ್ತರು ಭಾಗಿಯಾಗಿದ್ದರೆಂದು ಎಫ್ಐಆರ್ ಅಥವಾ ಆರೋಪಪಟ್ಟಿ ಯಾವುದರಲ್ಲೂ ಉಲ್ಲೇಖವಿಲ್ಲ.

ನಮಗಿಂತ ಹಲವು ಪಟ್ಟು ಕಿತ್ತಾಟ ಬಿಜೆಪಿಯಲ್ಲಿ ಇದೆ. ಮಾಧ್ಯಮಗಳಲ್ಲಿ ಕಾಂಗ್ರೆಸ್ ಕಿತ್ತಾಟವನ್ನು ಸಣ್ಣದಿದ್ದರೂ ದೊಡ್ಡದಾಗಿ ತೋರಿಸುತ್ತಾರೆ. ಬೇಕೆಂದೇ ಹುಡುಕುತ್ತಾರೆ. ಬಿಜೆಪಿಯಲ್ಲಿ ಎಷ್ಟೇ ಇದ್ದರೂ ಮುಚ್ಚಿಡುತ್ತಾರೆ. ಅವರಲ್ಲಿರುವ ಗುಂಪು ರಾಜಕೀಯದ ಒಂದು ಪರ್ಸೆಂಟ್ ಕೂಡ ನಮ್ಮಲ್ಲಿಲ್ಲ.  

ಹಾಗಾದರೆ ಹೀಗೆ ಹೇಳುವ ಮೂಲಕ ಕೋಮುಧ್ರುವೀಕರಣ ಮಾಡಿ ಅದನ್ನು ಚುನಾವಣೆಗೆ ಬಳಸುವ ಆಲೋಚನೆ ಬಿಜೆಪಿಯದ್ದೇ? ಅದನ್ನು ಹೇಗೆ ಎದುರಿಸುತ್ತೀರಿ?
ರಾಮಲಿಂಗಾರೆಡ್ಡಿ: ಬಿಜೆಪಿ ಬತ್ತಳಿಕೆಯಲ್ಲಿ ಈ ಥರದ ಸುಳ್ಳುಗಳು ಬಿಟ್ಟರೆ ಬೇರೇನಿಲ್ಲ. ಉದಾಹರಣೆಗೆ, ಸ್ವಾತಂತ್ರ್ಯ ಚಳವಳಿಯಲ್ಲಿ ಅವರು ಭಾಗವಹಿಸಲೇ ಇಲ್ಲ. ಬಿಜೆಪಿಯೂ ಇರಲಿಲ್ಲ, ಜನಸಂಘವೂ ಇರಲಿಲ್ಲ. ಇವರ ಪೂರ್ವಜರಾದ ವಿಶ್ವ ಹಿಂದೂ ಪರಿಷತ್, ಆರೆಸ್ಸೆಸ್ ಇವಾವುವೂ ಬ್ರಿಟಿಷರ ವಿರುದ್ಧ ಹೋರಾಡಲೇ ಇಲ್ಲ. ಅವರು ಸ್ವಯಂಘೋಷಿತ ದೇಶಭಕ್ತರು. ಈ ದೇಶ ಕಟ್ಟಿದ್ದು ಕಾಂಗ್ರೆಸ್ ಪಕ್ಷ. ಸುಮಾರು 75 ವರ್ಷಗಳಲ್ಲಿ 50 ವರ್ಷ ದೇಶವನ್ನಾಳಿದ್ದೇ ಕಾಂಗ್ರೆಸ್. ಬಿಜೆಪಿಯವರಿಗೆ ಮಹಾತ್ಮಾ ಗಾಂಧಿ, ನೆಹರೂ, ಇಂದಿರಾ ಗಾಂಧಿ ಇವರೆಲ್ಲರ ತೇಜೋವಧೆ ಮಾಡುವುದೇ ಕೆಲಸ.

 ವಿಧಾನಸಭೆಯಲ್ಲಿ ಸಾವರ್ಕರ್ ಫೋಟೊ ಹಾಕಿದಾಗ ಪಕ್ಷವಾಗಿ ಕಾಂಗ್ರೆಸ್ ವಿರೋಧಿಸಿತು. ಆದರೆ ನಿಮ್ಮ ಪಕ್ಷದೊಳಗೇ ಅದರ ಬಗ್ಗೆ ಒಂದು ಸಹಮತ ಇದೆಯಲ್ಲವೆ?
ರಾಮಲಿಂಗಾರೆಡ್ಡಿ: ಸಾವರ್ಕರ್ ಫೋಟೊ ವಿಚಾರದಲ್ಲಿ ನಮ್ಮ ಪಕ್ಷ ವಿರೋಧ ಮಾಡಿದೆ. ಸಾವರ್ಕರ್ ಸ್ವಾತಂತ್ರ್ಯೋತ್ಸವ ಚಳವಳಿಯಲ್ಲಿ ಭಾಗವಹಿಸಿದ್ದು ನಿಜ. ಅವರಿಗೆ ಕರಿನೀರಿನ ಶಿಕ್ಷೆಯಾಯಿತು. ಆಗ ಕೆಲವೇ ವರ್ಷಗಳಲ್ಲಿ ಕ್ಷಮಾಪಣಾ ಪತ್ರ ಬರೆಯುತ್ತಾರೆ. ಇನ್ನು ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸುವುದಿಲ್ಲ ಎಂದು ಬರೆದುಕೊಟ್ಟು ಆಚೆ ಬಂದರು. ಅದಕ್ಕೆ ಕಾಂಗ್ರೆಸ್ ವಿರೋಧ ಮಾಡುತ್ತದೆ. ಬಹಳಷ್ಟು ಜನರಿಗೆ ಗಲ್ಲುಶಿಕ್ಷೆಯಾಗಿತ್ತು. ಯಾರಾದರೂ ಕ್ಷಮಾಪಣೆ ಪತ್ರ ಬರೆದುಕೊಟ್ಟಿದ್ದರೆ? ಇವರು ಪಿಂಚಣಿಯನ್ನೂ ತೆಗೆದುಕೊಂಡರು.

 ಯಾವ ವಿಚಾರಗಳನ್ನಿಟ್ಟುಕೊಂಡು ಕಾಂಗ್ರೆಸ್ ಚುನಾವಣೆ ಎದುರಿಸಲಿದೆ?
ರಾಮಲಿಂಗಾರೆಡ್ಡಿ: 2013ರಲ್ಲಿ ನಾವು 165 ಆಶ್ವಾಸನೆಗಳನ್ನು ಕೊಟ್ಟಿದ್ದೆವು. ಮುಖ್ಯಮಂತ್ರಿ ಸಿದ್ದರಾಮಯ್ಯ ಅಷ್ಟೂ ಭರವಸೆಗಳನ್ನು ಈಡೇರಿಸಿದರು. ಅನೇಕ ಜನಪರ ಕಾರ್ಯಕ್ರಮಗಳನ್ನು ಕೊಟ್ಟಿದ್ದೆವು. ಈಗಲೂ ಕೆಲವು ಘೋಷಣೆಗಳನ್ನು ಮಾಡಿದ್ದೇವೆ. ಉಚಿತ ವಿದ್ಯುತ್, ಗೃಹಲಕ್ಷ್ಮೀ ಯೋಜನೆ, 10 ಕೆಜಿ ಅಕ್ಕಿ ಇತ್ಯಾದಿ. ಇನ್ನೂ ಕೆಲವು ಘೋಷಣೆಗಳಾಗಲಿವೆ. ಅಧಿಕಾರಕ್ಕೆ ಬಂದರೆ ಜನಪರ ಆಡಳಿತ ಮತ್ತು ಈ ಘೋಷಣೆಗಳ ಅನುಷ್ಠಾನ ಆಗಲಿದೆ ಎಂಬುದನ್ನು ಜನರಿಗೆ ತಿಳಿಸುತ್ತೇವೆ.

 ಚುನಾವಣೆ ಗೆಲ್ಲಲು ನಿಮ್ಮ ಪ್ರಣಾಳಿಕೆ, ನಿಮ್ಮ ಸಂಘಟನೆ ಇಷ್ಟೇ ಸಾಕಾಗುತ್ತದೆಯೆ?
ರಾಮಲಿಂಗಾರೆಡ್ಡಿ: 2019ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂತು. ಪ್ರಣಾಳಿಕೆಯಲ್ಲಿ 600 ಆಶ್ವಾಸನೆಗಳನ್ನು ಕೊಟ್ಟಿದ್ದರು. 60ನ್ನೂ ಈಡೇರಿಸಿಲ್ಲ. ಅದೊಂದು ವಿಚಾರವಾದರೆ, ಇವರ ಆಡಳಿತದಲ್ಲಿ ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ, ದೈನಂದಿನ ಅಗತ್ಯದ ವಸ್ತುಗಳ ಬೆಲೆ ಏರಿಕೆ, ನಿರುದ್ಯೋಗ ಹೆಚ್ಚಳ, ಭ್ರಷ್ಟಾಚಾರ ತಾಂಡವವಾಡುತ್ತಿದೆ. ಸಬ್ ಇನ್ಸ್ಪೆಕ್ಟರ್ ನೇಮಕ, ಉಪನ್ಯಾಸಕರ ನೇಮಕ ಎಲ್ಲದರಲ್ಲೂ ಹಗರಣ.

 ಇವೆಲ್ಲವೂ, ಹಿಂದೂ ಧರ್ಮ ಅಪಾಯದಲ್ಲಿದೆ ಎಂಬ ಒಂದೇ ಒಂದು ಸ್ಲೋಗನ್ನಡಿ ಮರೆಯಾಗಿ ಹೋಗಿವೆ. ನೀವೆತ್ತಿರುವ ಪ್ರಶ್ನೆಗಳ ಚರ್ಚೆಯೇ ಆಗುತ್ತಿಲ್ಲ?
ರಾಮಲಿಂಗಾರೆಡ್ಡಿ: ಅದನ್ನು ಜನರು ಅರ್ಥ ಮಾಡಿಕೊಳ್ಳಬೇಕು. ಮತ ಹಾಕಿದವರು ಅಭಿವೃದ್ಧಿ ಆಗಿದೆಯೇ ಎಂದು ನೋಡಬೇಕು. ಕೊಟ್ಟ ಆಶ್ವಾಸನೆ ಈಡೇರಿಸಿದವರನ್ನು ಗೆಲ್ಲಿಸುವ ಮನಃಸ್ಥಿತಿ ಜನರಲ್ಲಿ ಬರಬೇಕು. ಇಷ್ಟೆಲ್ಲ ಅನಾಹುತಗಳ ಬಳಿಕವೂ ಜನರು ಬಿಜೆಪಿಗೆ ಮತಹಾಕಿ ಅಧಿಕಾರಕ್ಕೆ ತಂದರೆ ಅದು ಕಾಂಗ್ರೆಸ್ ಸೋಲಲ್ಲ. ಜೆಡಿಎಸ್ ಸೋಲಲ್ಲ. ಜನರೇ ಸೋತಹಾಗೆ.

 ಕಾಂಗ್ರೆಸ್ಗೆ ಮತಹಾಕಬೇಕೆಂದರೆ ಸಿದ್ದರಾಮಯ್ಯ ಹಿಂದೂವಿರೋಧಿ, ಬಣ ರಾಜಕೀಯ ಇದೆ ಎಂಬ ಆರೋಪ ಮಾಡುತ್ತಾರೆ?
ರಾಮಲಿಂಗಾರೆಡ್ಡಿ: ಪ್ರಜಾಪ್ರಭುತ್ವದಲ್ಲಿನ ಪಕ್ಷಗಳಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳು ಇರುತ್ತವೆ. ಬಿಜೆಪಿಯಲ್ಲಿ ಇಲ್ಲವಾ? ನಮಗಿಂತ ಹಲವು ಪಟ್ಟು ಕಿತ್ತಾಟ ಬಿಜೆಪಿಯಲ್ಲಿ ಇದೆ. ಮಾಧ್ಯಮಗಳಲ್ಲಿ ಕಾಂಗ್ರೆಸ್ ಕಿತ್ತಾಟವನ್ನು ಸಣ್ಣದಿದ್ದರೂ ದೊಡ್ಡದಾಗಿ ತೋರಿಸುತ್ತಾರೆ. ಬೇಕೆಂದೇ ಹುಡುಕುತ್ತಾರೆ. ಬಿಜೆಪಿಯಲ್ಲಿ ಎಷ್ಟೇ ಇದ್ದರೂ ಮುಚ್ಚಿಡುತ್ತಾರೆ. ಅವರಲ್ಲಿರುವ ಗುಂಪು ರಾಜಕೀಯದ ಒಂದು ಪರ್ಸೆಂಟ್ ಕೂಡ ನಮ್ಮಲ್ಲಿಲ್ಲ. ಯಡಿಯೂರಪ್ಪಪಕ್ಷ ಕಟ್ಟಿದ್ದರು. ಅವರನ್ನು ಮೂಲೆಗೆ ತಳ್ಳಿಯೇಬಿಟ್ಟರು.

 ಜೆಡಿಎಸ್ ಹೆಚ್ಚು ಸ್ಥಾನ ಗೆಲ್ಲುವ ಯತ್ನದಲ್ಲಿದೆ. ಮುಸ್ಲಿಮ್ ಮತಗಳ ಮೇಲೆಯೂ ಹೆಚ್ಚು ಕಣ್ಣಿಟ್ಟಿದೆ. ಕಾಂಗ್ರೆಸ್ಗೆ ಏನಾದರೂ ಭಯವಿದೆಯೆ?
ರಾಮಲಿಂಗಾರೆಡ್ಡಿ:ನಮ್ಮ ಮತಬ್ಯಾಂಕ್, ಅವರ ಮತಬ್ಯಾಂಕ್ ಬೇರೆಬೇರೆ. ಅವರು ಸಿಎಂ ಇಬ್ರಾಹಿಂ ಅವರನ್ನು ಅಧ್ಯಕ್ಷರನ್ನಾಗಿ ಮಾಡಿಕೊಂಡಿದ್ದಾರೆ. ಆದರೆ ನನ್ನ ಪ್ರಕಾರ, ಅಲ್ಪಸಂಖ್ಯಾತರು, ಅದರಲ್ಲೂ ಮುಸ್ಲಿಮ್ ಸಮುದಾಯ ಈ ಸಲವೂ ಕಾಂಗ್ರೆಸ್ಗೇ ಬೆಂಬಲ ನೀಡುತ್ತದೆ.

 ಬಿಜೆಪಿಯ ನೆಲೆಯಿರುವ ಕರಾವಳಿ, ಮಧ್ಯ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್ ಪ್ರಯತ್ನ ಯಾವ ರೀತಿಯದು?
ರಾಮಲಿಂಗಾರೆಡ್ಡಿ: ಈ ಸಲ ಕರಾವಳಿಯಲ್ಲಿಯೂ ನಮಗೆ ಒಳ್ಳೆಯ ಫಲಿತಾಂಶವೇ ಬರುತ್ತದೆ. ಹಿಂದೆ ಎಲ್ಲೆಲ್ಲಿ ಕಡಿಮೆಯಾಗಿತ್ತೋ ಅಲ್ಲೆಲ್ಲ ಹೆಚ್ಚಾಗಲಿದೆ. ನ್ಯೂಟ್ರಲ್ ಮತದಾರರಿರುತ್ತಾರೆ. ಜಾತಿ ಧರ್ಮ ನೋಡಿ ಮತ ಹಾಕುವುದಿಲ್ಲ. ಈ ಸಲ ಅವರ ಮತಗಳೂ ನಮಗೆ ಬರಲಿವೆ.

 ಚುನಾವಣೆ ಹತ್ತಿರವಾಗುತ್ತಿದ್ದಂತೆ ನೀವು ಕುಕ್ಕರ್ ಹಂಚಿಕೆ ಮಾಡುತ್ತೀರಿ ಎಂಬುದು ಬಿಜೆಪಿ ಆರೋಪ?
ರಾಮಲಿಂಗಾರೆಡ್ಡಿ: 2018ರಲ್ಲಿ ಪ್ರವಾಹ ವೇಳೆ ಕೋಟಿ ಮೌಲ್ಯಕ್ಕೂ ಹೆಚ್ಚು ಸಾಮಗ್ರಿಯನ್ನು ಕೊಡಗು, ಕೇರಳಕ್ಕೆ ಕಳಿಸಿದೆವು. 2019ರಲ್ಲಿ ಉತ್ತರ ಕರ್ನಾಟಕದಲ್ಲಿ ವಿಪರೀತ ಮಳೆಯಾದಾಗ ಜಯನಗರ ಮತ್ತು ನಮ್ಮ ಕ್ಷೇತ್ರದಿಂದ ಒಂದು ಕೋಟಿ 20 ಲಕ್ಷ ರೂ. ಮೌಲ್ಯದ ಸಾಮಗ್ರಿ ಕಳಿಸಿದೆವು. ಕೋವಿಡ್ ಸಂದರ್ಭದಲ್ಲಿ ಎರಡೂ ವರ್ಷ ಸಾವಿರಾರು ಜನರಿಗೆ ಮನೆಮನೆಗೆ ಊಟ ಕಳಿಸಿದ್ದೆವು. ಬೆಳಗ್ಗೆ ನಮ್ಮ ಕಾರ್ಯಕರ್ತರು ಹಾಲು, ತರಕಾರಿ ತಂದು ಮನೆಮನೆಗೆ ಹಂಚಿ ಬರುತ್ತಿದ್ದರು. ಕ್ಷೇತ್ರದಲ್ಲಿ ಸಂಕ್ರಾಂತಿ ಹಬ್ಬ 3 ವರ್ಷದಿಂದ ಮಾಡುತ್ತಿದ್ದೇವೆ. ಅಲ್ಲಿ ಆಟಗಳನ್ನು ಏರ್ಪಡಿಸಿ ಗೆದ್ದವರಿಗೆ ಟಿವಿ, ಕುಕ್ಕರ್, ಗ್ರೈಂಡರ್ ಬಹುಮಾನ ಕೊಡುತ್ತೇವೆ. ಅದರ ವೀಡಿಯೊ ಇಟ್ಟುಕೊಂಡು ಬಿಜೆಪಿಯವರು ಅಪಪ್ರಚಾರ ಮಾಡಿದರು. ಇದೇ ಬಿಜೆಪಿ ಮುಖಂಡರು ಕೊಡಗಿನಲ್ಲಿ ಪ್ರವಾಹವಾದಾಗ ಒಂದು ಪೈಸೆ ಸಹಾಯ ಮಾಡಲಿಲ್ಲ. ಉತ್ತರ ಕರ್ನಾಟಕಕ್ಕೆ ಒಂದು ವೂಟೆ ಅಕ್ಕಿಯನ್ನೂ ಕಳಿಸಲಿಲ್ಲ. ಕೋವಿಡ್ ವೇಳೆ ಇವರೆಲ್ಲ ತಮಗೆಲ್ಲಿ ಕೊರೋನ ಬಂದೀತೊ ಎಂದು ಮನೆಯಲ್ಲಿ ಬೆಚ್ಚಗೆ ಮಲಗಿದ್ದರು. ಅಂಥವರ ಮಾತಿಗೆ ಸೊಪ್ಪುಹಾಕಬೇಕಿಲ್ಲ.

 ಕೊಳೆಗೇರಿಗಳ ಅಭಿವೃದ್ಧಿ ನಿಮ್ಮ ಕ್ಷೇತ್ರದಲ್ಲಿ ಆಗಿಲ್ಲ ಎಂಬ ಆರೋಪವಿದೆ?
ರಾಮಲಿಂಗಾರೆಡ್ಡಿ: ಕೊಳೆಗೇರಿ ಎನ್ನುವ ಪ್ರಶ್ನೆಯೇ ಇಲ್ಲ. ಎಲ್ಲರಿಗೂ ಎಲ್ಲ ಸೌಲಭ್ಯವನ್ನೂ ಮಾಡಿಕೊಟ್ಟಿದ್ದೇವೆ. 3-4 ಅಂತಸ್ತುಗಳ ಕಟ್ಟಡಗಳಾಗಿವೆ.    

 ನಿಮ್ಮ ಕ್ಷೇತ್ರದಲ್ಲಿನ ಸಂಚಾರ ದಟ್ಟಣೆ ಕಡಿಮೆ ಮಾಡಲು ಇಲ್ಲಿಯವರೆಗೆ ಕ್ರಮಗಳಾಗಿಲ್ಲ ಎಂಬ ಆರೋಪದ ಬಗ್ಗೆ?
ರಾಮಲಿಂಗಾರೆಡಿ್ಡ: ಜಯದೇವ ಸರ್ಕಲ್ ಫ್ಲೈಓವರ್ ನಾವೇ ಕಟ್ಟಿಸಿದ್ದು. ಡೈರಿ ಸರ್ಕಲ್ ಫ್ಲೈಓವರ್ ನಮ್ಮ ಕಾಲದಲ್ಲಿಯೇ ಆಯಿತು. ಸಿಲ್ಕ್ ಬೋರ್ಡ್ ಫ್ಲೈಓವರ್ ನಾವೇ ಕಟ್ಟಿಸಿದ್ದು. ಈಗ ಸಿಲ್ಕ್ ಬೋರ್ಡ್ ನಿಂದ ಜೆಪಿ ನಗರದವರೆಗೂ ಮೆಟ್ರೋ ಜೊತೆಗೇ ಫ್ಲೈಓವರ್ ಆಗುತ್ತಿದೆ.

 ಕಾಂಗ್ರೆಸ್ಗೆ ಜನ ಯಾಕೆ ಮತಹಾಕಬೇಕು?
ರಾಮಲಿಂಗಾರೆಡ್ಡಿ: ಜನ ನೆಮ್ಮದಿಯಾಗಿರಬೇಕಾದರೆ, ಭ್ರಷ್ಟಾಚಾರ ರಹಿತ ರಾಜ್ಯ ಬೇಕಾದರೆ, ಒಳ್ಳೆಯ ಆಡಳಿತ ಬೇಕಾದರೆ ಕಾಂಗ್ರೆಸ್ಗೆ ಮತಹಾಕಬೇಕು. ಕಾಂಗ್ರೆಸ್ ಎಲ್ಲರಿಗೂ ಸೇರಿರುವ ಪಕ್ಷ. ಕಂಗ್ರೆಸ್ ಪಕ್ಷಕ್ಕೆ ಜಾತಿ, ಮತ ಭೇದವಿಲ್ಲ. ಸರ್ವಧರ್ಮ, ಸರ್ವಭಾಷೆ, ಸರ್ವಜನರನ್ನು ಒಟ್ಟಾಗಿಸಿರುವ ಪಕ್ಷವೆಂದರೆ ಅದು ಕಾಂಗ್ರೆಸ್. ಹಿಂದೆ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇವೆ. ಸೋತಿರಬಹುದು. ಅಪಪ್ರಚಾರದಿಂದಾಗಿ ಸೋತೆವು ಹೊರತು ಕೆಲಸ ಮಾಡದೆ ಸೋತಿಲ್ಲ.

Full View