×
Ad

ಪ್ರಶ್ನಿಸದಿದ್ದರೆ ಇನ್ನೂ ಹಲವು ಕುಟುಂಬಗಳು ನಾಶವಾಗುತ್ತವೆ: ಮತ್ತೆ ಫೇಸ್​ಬುಕ್ ಪೋಸ್ಟ್ ಮಾಡಿದ ಡಿ. ರೂಪಾ

Update: 2023-02-22 13:36 IST

ಬೆಂಗಳೂರು: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಬಗ್ಗೆ ಐಪಿಎಸ್ ಅಧಿಕಾರಿ ಡಿ.ರೂಪಾ ಮಾತಾಡಿದ್ದಾರೆ ಎನ್ನಲಾದ ಆಡಿಯೋ ಒಂದು ವೈರಲ್ ಆಗಿದ್ದು, ಈ ಬಗ್ಗೆ ರೂಪಾ ಅವರು ಫೇಸ್​ಬುಕ್ ಫೋಸ್ಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ.

ಇಬ್ಬರೂ ಅಧಿಕಾರಿಗಳನ್ನ ವರ್ಗಾವಣೆ ಮಾಡಿ ರಾಜ್ಯ ಸರಕಾರ ಮಂಗಳವಾರ ಆದೇಶ ಹೊರಡಿಸಿದೆ. ಅಲ್ಲದೇ ಮಾಧ್ಯಮಗಳ ಮುಂದೆ ಯಾವುದೇ ಪ್ರತಿಕ್ರಿಯೆ ನೀಡಬಾರದು, ಸಾಮಾಜಿಕ ಜಾಲತಾಣದಲ್ಲಿ ಯಾವುದೇ ಪೋಸ್ಟ್ ಹಾಕಬಾರದೆಂದು ತಾಕೀತು ಮಾಡಿದೆ. ಈ ನಡುವೆ ಸಾಮಾಜಿಕ ಕಾರ್ಯಕರ್ತ ಗಂಗರಾಜು ಜೊತೆ ರೋಹಿಣಿ ಸಿಂಧೂರಿ ವಿರುದ್ಧ ಡಿ. ರೂಪಾ ಮಾತನಾಡಿದ್ದಾರೆ ಎನ್ನಲಾದ ಸಂಭಾಷಣೆಯ ಆಡಿಯೋ ವೈರಲ್ ಆಗುತ್ತಿದ್ದು, ಇದಕ್ಕೆ ಫೇಸ್ ಬುಕ್ ಮೂಲಕವೇ ರೂಪಾ ಅವರು ಪ್ರತಿಕ್ರಿಯಿಸಿದ್ದಾರೆ.  

ಫೇಸ್ ಬುಕ್ ಪೋಸ್ಟ್ ನಲ್ಲೇನಿದೆ? 

''Dear media, ದಯವಿಟ್ಟು ನಾನು ರೋಹಿಣಿ ಸಿಂಧೂರಿ ವಿರುದ್ಧ ಎತ್ತಿದ ಭ್ರಷ್ಟಾಚಾರದ ವಿಷಯದ ಬಗ್ಗೆ ಗಮನಹರಿಸಿ. ಜನಸಾಮಾನ್ಯರ ಮೇಲೆ ಹೆಚ್ಚು ಪರಿಣಾಮ ಬೀರುವ ಭ್ರಷ್ಟಾಚಾರದ ವಿರುದ್ಧ ಹೋರಾಡುವ ಯಾರನ್ನೂ ನಾನು ತಡೆದಿಲ್ಲ. ಅದೇ ರೀತಿ, ಕರ್ನಾಟಕದಲ್ಲಿ ಒಬ್ಬ ಐಎಎಸ್ ಅಧಿಕಾರಿ ಮೃತಪಟ್ಟಿದ್ದಾರೆ, ಹಾಗೂ ತಮಿಳುನಾಡಿನಲ್ಲಿ ಒಬ್ಬ ಐಪಿಎಸ್ ಅಧಿಕಾರಿ ಮೃತಪಟ್ಟಿದ್ದಾರೆ, ಕರ್ನಾಟಕದಲ್ಲಿ ಒಬ್ಬ ಐಎಎಸ್ ಪತಿ-ಪತ್ನಿ ಈಗಾಗಲೇ ವಿಚ್ಛೇದನ ಪಡೆದಿದ್ದಾರೆ. ನಾನು ಮತ್ತು ನನ್ನ ಪತಿ ಇನ್ನೂ ಒಟ್ಟಿಗೆ ಇದ್ದೇವೆ. ನಾವು ಇನ್ನೂ ಕುಟುಂಬವನ್ನು ಉಳಿಸಿಕೊಳ್ಳಲು ಹೋರಾಡುತ್ತಿದ್ದೇವೆ. ಕುಟುಂಬಕ್ಕೆ ಕಂಟಕಪ್ರಾಯವಾಗುವುವರನ್ನು ದಯವಿಟ್ಟು ಪ್ರಶ್ನಿಸಿ. ಇಲ್ಲದಿದ್ದರೆ ಇನ್ನೂ ಹಲವು ಕುಟುಂಬಗಳು ನಾಶವಾಗುತ್ತವೆ''.

''ನಾನು ಧೈರ್ಯವಂತ ಮಹಿಳೆ, ನಾನು ಹೋರಾಡುತ್ತೇನೆ. ಎಲ್ಲಾ ಮಹಿಳೆಯರಿಗೂ ಹೋರಾಟ ಮಾಡುವ ಶಕ್ತಿ ಇರುವುದಿಲ್ಲ. ದಯವಿಟ್ಟು ಅಂತಹ ಮಹಿಳೆಯರಿಗೆ ಧ್ವನಿಯಾಗಿರಿ. ಭಾರತವು ಕೌಟುಂಬಿಕ ಮೌಲ್ಯಗಳಿಗೆ ಹೆಸರುವಾಸಿಯಾಗಿದೆ. ಅದನ್ನು ಮುಂದುವರಿಸೋಣ'' ಎಂದು ರೂಪಾ ಅವರು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ. 

ಇದನ್ನೂ ಓದಿ: ರೋಹಿಣಿ ಸಿಂಧೂರಿ ಕ್ಯಾನ್ಸರ್ ಇದ್ದ ಹಾಗೆ, ಎಲ್ಲರನ್ನೂ ಬುಟ್ಟಿಗೆ ಹಾಕೊಳ್ತಾಳೆ: ಡಿ.ರೂಪಾ ಅವರದ್ದೆನ್ನಲಾದ ಆಡಿಯೋ ವೈರಲ್

Full View Full View

Similar News