VIDEO- ಮುಂದಿನ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ, ಇದೇ ನನ್ನ ಕೊನೆಯ ಅಧಿವೇಶನ: ಸದನದಲ್ಲಿ ಯಡಿಯೂರಪ್ಪ ಭಾವುಕ

Update: 2023-02-22 15:52 GMT

ಬೆಂಗಳೂರು, ಫೆ. 22: ‘ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡುವುದಿಲ್ಲ’ ಎಂದು ಈಗಾಗಲೇ ಸ್ಪಷ್ಟಪಡಿಸಿದ್ದು, ನಾನು ಮತ್ತೆ ಈ ಸದನಕ್ಕೆ ಬರುವುದಿಲ್ಲ. ಇದೇ ಕೊನೆಯ ಅಧಿವೇಶನ’ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಶಿಕಾರಿಪುರ ಕ್ಷೇತ್ರದ ಹಾಲಿ ಶಾಸಕ ಬಿ.ಎಸ್.ಯಡಿಯೂರಪ್ಪ ಭಾವುಕರಾಗಿ ನುಡಿದಿದ್ದಾರೆ.

ಬುಧವಾರ ವಿಧಾನಸಭೆಯಲ್ಲಿ ಆಯವ್ಯಯದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ಬಿಜೆಪಿ ಯಡಿಯೂರಪ್ಪನವರನ್ನು ಕಡೆಗಣಿಸಿದೆ ಎಂದು ವಿಪಕ್ಷಗಳ ಆರೋಪ ಮಾಡುತ್ತಿವೆ. ಆದರೆ, ಬಿಜೆಪಿ ಅಥವಾ ಪ್ರಧಾನಿ ಮೋದಿ ನನ್ನನ್ನು ಕಡೆಗಣಿಸಿಲ್ಲ. ಇದುವರೆಗೆ ಹಲವು ಅವಕಾಶಗಳನ್ನು ನನಗೆ ನೀಡಿವೆ. ಹೀಗಾಗಿ ಪಕ್ಷ ಹಾಗೂ ಮೋದಿಯವರಿಗೆ ನಾನು ಋಣಿಯಾಗಿದ್ದೇನೆ’ ಎಂದು ಹೇಳಿದರು.

‘ನನ್ನ ರಾಜಕೀಯ ಜೀವನದಲ್ಲಿ ನಾಲ್ಕು ಬಾರಿ ಸಿಎಂ ಆಗುವ ಅವಕಾಶವನ್ನು ಬಿಜೆಪಿ ನನಗೆ ಕೊಟ್ಟಿದೆ. ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದೇನೆ. ಆದರೆ, ಈ ಯಡಿಯೂರಪ್ಪ ಸುಮ್ಮನೆ ಮನೆಯಲ್ಲಿ ಕೂರುವುದಿಲ್ಲ. ಬಿಜೆಪಿಯನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಲು ರಾಜ್ಯದ ಉದ್ದಗಲಕ್ಕೂ ಪ್ರವಾಸ ಕೈಗೊಳ್ಳುವೆ ಎಂದ ಅವರು, ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಭರವಸೆ ವ್ಯಕ್ತಪಡಿಸಿದರು.

ಈ ಹಿಂದಿನ ಯಾವುದೇ ಸರಕಾರಗಳು ನೀಡದಷ್ಟು ಯೋಜನೆಗಳನ್ನು ಬಿಜೆಪಿ ಸರಕಾರ ಕೊಟ್ಟಿದೆ. ಹೀಗಾಗಿ ನಮ್ಮ ಸರಕಾರದ ಯೋಜನೆಗಳನ್ನು ಜನರಿಗೆ ತಿಳಿಸುವ ಕೆಲಸವನ್ನು ಮಾಡಬೇಕು. ರಾಜ್ಯದ ಬಜೆಟ್ ಎಲ್ಲ ವರ್ಗದ ಜನರನ್ನು ತಲುಪುವ ಬಜೆಟ್ ಆಗಿದೆ. ಪ್ರಾದೇಶಿಕ ಅಸಮಾನತೆ ನಿವಾರಣೆಗೆ ಪ್ರಯತ್ನ ಮಾಡಲಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನೆರೆಯ ರಾಜ್ಯಗಳಿಗೆ ಮಾದರಿ ರೀತಿಯಲ್ಲಿ 402 ಕೋಟಿ ರೂ.ಮೊತ್ತದ ಹೆಚ್ಚುವರಿ ಆಯವ್ಯಯ ಮಂಡನೆ ಮಾಡಿದ್ದು, ದೂರಗಾಮಿ ಅಭಿವೃದ್ಧಿಗೆ ಪೂರಕ ಬಜೆಟ್ ಇದಾಗಿದೆ. ರೈಲ್ವೆ, ರಸ್ತೆ, ವಿದ್ಯುತ್ ಸಹಿತ ಮೂಲ ಸೌಕರ್ಯಕ್ಕೆ ವಿಶೇಷ ಆದ್ಯತೆ ನೀಡಿದ್ದು, ಡಬಲ್ ಇಂಜಿನ್ ಸರಕಾರದ ಇರುವ ಕಾರಣದಿಂದಲೇ ರಾಜ್ಯ ಹಾಘೂ ದೇಶ ಸದೃಢವಾಗಿದ್ದು, ವಿಕಾಸ ಹೊಂದುತ್ತಿದೆ ಎಂದು ಯಡಿಯೂರಪ್ಪ ಸಮರ್ಥಿಸಿಕೊಂಡರು.

‘ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರು ಒಮ್ಮೆ ಗೆದ್ದು ಬಂದ ಕ್ಷೇತ್ರವನ್ನು ಬಿಟ್ಟು ಬಂದು ಬೇರೆ ಕಡೆ ಸ್ಪರ್ಧಿಸಲು ಕ್ಷೇತ್ರ ಹುಡುಕಾಟ ನಡೆಸಿದ್ದಾರೆ. ಆದರೆ, ನೀವು ಆಯ್ಕೆಯಾದ ಕ್ಷೇತ್ರದಲ್ಲಿ ಮತ್ತೆ ಸ್ಪರ್ಧಿಸಲು ನಿಮಗೆ ಧೈರ್ಯವಿಲ್ಲ ಎಂದರೆ ನೀವು ಅಭಿವೃದ್ಧಿ ಕೆಲಸ ಮಾಡಿಲ್ಲ ಅಥವಾ ಸೋಲಿನ ಭೀತಿ ಇರಬೇಕು. ಬೇರೆ ಕ್ಷೇತ್ರಗಳ ಜನರು ನಿಮ್ಮನ್ನು ಹೇಗೆ ನಂಬಬೇಕು. ಹೀಗಾಗಿ ಸಿದ್ದರಾಮಯ್ಯನವರು ಪುನಃ ಅದೇ ಕ್ಷೇತ್ರದಿಂದ ಮತ್ತೆ ಸ್ಪರ್ಧಿಸಿ, ಆಯ್ಕೆಯಾಗಬೇಕು. ಆಗ ಮಾತ್ರ ಜನರಿಗೆ ವಿಶ್ವಾಸ ಬರುತ್ತದೆ. ಇಲ್ಲವಾದರೆ ನಿಮ್ಮನ್ನು ಆಯ್ಕೆ ಮಾಡಿದ ಜನರಿಗೆ ನೀವು ದ್ರೋಹ ಮಾಡಿದಂತೆ ಆಗುತ್ತದೆ’

-ಬಿ.ಎಸ್.ಯಡಿಯೂರಪ್ಪ ಮಾಜಿ ಮುಖ್ಯಮಂತ್ರಿ

Full View

Similar News