ಚರ್ಮ ಗಂಟು ರೋಗಕ್ಕೆ 30,297 ಜಾನುವಾರು ಬಲಿ: ಸಚಿವ ಪ್ರಭು ಚೌವ್ಹಾಣ್
ಬೆಂಗಳೂರು, ಫೆ. 22: ರಾಜ್ಯಾದ್ಯಂತ ಜಾನುವಾರುಗಳಲ್ಲಿ ಕಾಣಿಸಿಕೊಂಡ ಚರ್ಮ ಗಂಟು ರೋಗಕ್ಕೆ 3,25,353 ಜಾನುವಾರುಗಳ ತುತ್ತಾಗಿದ್ದು, ಈ ಪೈಕಿ 30,297 ಜಾನುವಾರುಗಳು ಮೃತಪಟ್ಟಿವೆ ಎಂದು ಪಶು ಸಂಗೋಪನಾ ಸಚಿವ ಪ್ರಭು ಚೌವ್ಹಾಣ್ ತಿಳಿಸಿದ್ದಾರೆ.
ಬುಧವಾರ ವಿಧಾನ ಪರಿಷತ್ತಿನಲ್ಲಿ ಪ್ರಶ್ನೋತ್ತರ ಕಲಾಪ ವೇಳ ಕೆ.ಎ.ತಿಪ್ಪೇಸ್ವಾಮಿರವರ ಪ್ರಶ್ನೆಗೆ ಉತ್ತರಿಸಿದ ಅವರು, ಚರ್ಮಗಂಟು ರೋಗದಿಂದ ಸಾವನ್ನಪ್ಪಿದ ಜಾನುವಾರುಗಳ ಮಾಲಕರಿಗೆ ಇದುವರೆಗೂ 37 ಕೋಟಿ ರೂ. ಪರಿಹಾರ ಬಿಡುಗಡೆ ಮಾಡಲಾಗಿದೆ. ಇನ್ನೂ, 12 ಕೋಟಿ ರೂ.ಗಳನ್ನು ಶೀಘ್ರದಲ್ಲೇ ಬಿಡುಗಡೆ ಮಾಡಿ ಚರ್ಮಗಂಟು ರೋಗದಿಂದ ಜಾನುವಾರು ಕಳೆದುಕೊಂಡ ಮಾಲಕರಿಗೆ ನೀಡಲಾಗುವುದು ಎಂದು ಹೇಳಿದರು.
ಚರ್ಮಗಂಟು ರೋಗಕ್ಕೆ ತುತ್ತಾಗಿದ್ದ 3,25,353 ಜಾನುವಾರುಗಳ ಪೈಕಿ 2,57,084 ಜಾನುವಾರುಗಳು ಗುಣಮುಖವಾಗಿವೆ ಎಂದ ಅವರು, 2022-23ನೆ ಸಾಲಿನಲ್ಲಿ ಜಾನುವಾರುಗಳ ಚಿಕಿತ್ಸೆಗಾಗಿ ಔಷಧಿ ಮತ್ತು ರಸಾಯನಿಕಗಳನ್ನು ಪೂರೈಸಲು ರಾಜ್ಯ ವಲಯದ ಲೆಕ್ಕ ಶೀರ್ಷಿಕೆಯಡಿಯಲ್ಲಿ 12.62 ಕೋಟಿ ಅನುದಾನ ಹಾಗೂ ಜಿಲ್ಲಾ ವಲಯದಲ್ಲಿ 54.39 ಕೋಟಿ ಅನುದಾನ ಬಳಸಿಕೊಳ್ಳಲಾಗಿದೆ ಎಂದು ಹೇಳಿದರು.