×
Ad

ಕಡೂರು: ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರ ದಾಳಿ; ಗ್ರಾಮ ಸಹಾಯಕ ಬಂಧನ

Update: 2023-02-22 18:47 IST

ಕಡೂರು, ಫೆ.22: ನಿವೇಶನ ಹಕ್ಕುಪತ್ರದ ಚಕ್ಕುಬಂಧಿ ಸರಿಪಡಿಸಿಕೊಡುತ್ತೇನೆಂದು ಗ್ರಾಮ ಸಹಾಯಕನೋರ್ವ ಮಹಿಳೆಯೊಬ್ಬರಿಂದ 7 ಸಾವಿರ ರೂ. ಲಂಚ ಪಡೆಯುತ್ತಿದ್ದ ಸಂದರ್ಭ ಲೋಕಾಯುಕ್ತ ಪೋಲೀಸರು ದಾಳಿ ನಡೆಸಿ ಬಂಧಿಸಿರುವ ಘಟನೆ ಬುಧವಾರ ಪಟ್ಟಣದಲ್ಲಿ ವರದಿಯಾಗಿದೆ.

ಗ್ರಾಮ ಸಹಾಯಕ ಶಿವಣ್ಣ ಬಂಧಿತ ಆರೋಪಿಯಾಗಿದ್ದು, ಈತ ಪಟ್ಟಣ ಸಮೀಪದ ಶ್ರೀರಾಂಪುರ ಗ್ರಾಮದ ನಿವಾಸಿ ಸರೋಜಮ್ಮ ಎಂಬವರಿಂದ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಸರೋಜಪ್ಪ ಅವರು ಪತಿ ಗೋವಿಂದಪ್ಪ ಎಂಬವರ ಹೆಸರಿನಲ್ಲಿದ್ದ ನಿವೇಶನದ ಹಕ್ಕುಪತ್ರವನ್ನು 94(ಸಿ) ಯೋಜನೆಯಡಿ 2022, ಆ.3ರಂದು ಪಡೆದಿದ್ದರು. ಅದರ ಚಕ್ಕುಬಂಧಿಯಲ್ಲಿದ್ದ ಲೋಪ ಸರಿಪಡಿಸಲು 2022, ಡಿ.8ರಂದು ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ಪಟ್ಟಣದಲ್ಲಿರುವ ಕಸಬಾ ಹೋಬಳಿ ರಾಜಸ್ವ ನಿರೀಕ್ಷಕರ ಕಚೇರಿಯಲ್ಲಿದ್ದ ಗ್ರಾಮ ಸಹಾಯಕ ಶಿವಣ್ಣ ಎಂಬಾತ, ಚಕ್ಕುಬಂಧಿ ಸರಿಪಡಿಸಲು ಸರ್ವೇಯರ್, ಶಿರಸ್ತೇದಾರ್, ತಹಶೀಲ್ದಾರ್ ಬಳಿ ಓಡಾಡಿ ಕೆಲಸ ಮಾಡಿಸಬೇಕು, 10 ಸಾವಿರ ಹಣ ನೀಡಬೇಕು ಎಂದು ತಿಳಿಸಿದ್ದು, ಸರೋಜಮ್ಮ ಮುಂಗಡವಾಗಿ ಶಿವಣ್ಣನಿಗೆ 3 ಸಾವಿರ ರೂ. ನೀಡಿದ್ದರು.

ಗ್ರಾಮ ಸಹಾಯಕ ಶಿವಣ್ಣ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಬಗ್ಗೆ ಸರೋಜಮ್ಮ ಲೋಕಾಯುಕ್ತ ಪೊಲೀಸರಿಗೆ ದೂರು ಸಲ್ಲಿಸಿದ್ದು, ಬುಧವಾರ ಸರೋಜಮ್ಮ ಅವರಿಂದ ಹಣ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆಂದು ತಿಳಿದು ಬಂದಿದೆ.

ದಾಳಿಯಲ್ಲಿ ಡಿವೈಎಸ್ಪಿ ತಿರುಮಲೇಶ್, ಪೋಲಿಸ್ ಇನ್‍ಸ್ಪೆಕ್ಟರ್ ಗಳಾದ ಮಲ್ಲಿಕಾರ್ಜುನ್, ಅನಿಲ್ ರಾಥೋಡ್ ಮತ್ತು ಸಿಬ್ಬಂದಿ ಭಾಗವಹಿಸಿದ್ದರು. ಬಂಧಿತ ಶಿವಣ್ಣ ಅವರನ್ನು ರಾತ್ರಿ ಚಿಕ್ಕಮಗಳೂರು ನ್ಯಾಯಾಲಯದಲ್ಲಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯಿತು.

Similar News