118 ಪುಟಗಳ ಲಿಖಿತ ಉತ್ತರ ನೀಡಿದರೂ ‘ಉತ್ತರ ಅಪೂರ್ಣ’: BJP ಶಾಸಕ ಮಸಾಲೆ ಜಯರಾಮ್ ಆಕ್ಷೇಪ
ಬೆಂಗಳೂರು, ಫೆ. 22: ‘ತುಮಕೂರು ಜಿಲ್ಲೆಯಲ್ಲಿ ಮೂರು ವರ್ಷಗಳಿಂದ ಕೃಷಿ ಇಲಾಖೆ ಎಷ್ಟು ಕೃಷಿ ಹೊಂಡಗಳನ್ನು ನಿರ್ಮಿಸಿದೆ ಮತ್ತು ಎಷ್ಟು ಮೊತ್ತದ ಅನುದಾನ ನೀಡಿದೆ ಎಂಬ ಪ್ರಶ್ನೆಗೆ 118 ಪುಟಗಳ ಲಿಖಿತ ಉತ್ತರ ಹಾಗೂ ಸಿಡಿ ರೂಪದ ಉತ್ತರ ನೀಡಿದ್ದರೂ, ಪೂರ್ಣ ಪ್ರಮಾಣದ ಉತ್ತರ ನೀಡಿಲ್ಲ’ ಎಂದು ಆಡಳಿತ ಪಕ್ಷದ ಸದಸ್ಯ ಮಸಾಲೆ ಜಯರಾಮ್ ಆಕ್ಷೇಪಿಸಿದ್ದಾರೆ.
ಬುಧವಾರ ವಿಧಾನಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ‘ಕೃಷಿ ಹೊಂಡಗಳನ್ನು ನಿರ್ಮಿಸದೆ ಅನುದಾನ ತೆಗೆದುಕೊಳ್ಳುವ ಮೂಲಕ ವಂಚನೆ ಮಾಡಲಾಗುತ್ತಿದೆ. ಇನ್ನೂ ಕೆಲ ಪ್ರಕರಣಗಳನ್ನು ಕೃಷಿ ಹೊಂಡಗಳನ್ನು ನಿರ್ಮಿಸಿದರೂ ಅನುದಾನ ಬಿಡುಗಡೆ ಮಾಡಿಲ್ಲ’ ಎಂದು ದೂರಿದರು.
ಬಳಿಕ ಉತ್ತರಿಸಿ ಸಚಿವ ಬಿ.ಸಿ.ಪಾಟೀಲ್, ‘2019-20ನೆ ಸಾಲಿನಲ್ಲಿ 1,854 ಕೃಷಿ ಹೊಂಡಗಳನ್ನು ನಿರ್ಮಿಸಲಾಗಿದ್ದು, 754 ಲಕ್ಷ ರೂ.ವೆಚ್ಚ ಭರಿಸಲಾಗಿದೆ. 2020-21ನೆ ಸಾಲಿನಲ್ಲಿ ಕೃಷಿ ಭಾಗ್ಯ ಯೋಜನೆಯಡಿ ನೂತನ ಕೃಷಿ ಹೊಂಡಗಳ ಅನುಷ್ಠಾನಕ್ಕೆ ಅನುದಾನ ಒದಗಿಸಿಲ್ಲ. 2021-22ನೆ ಸಾಲಿನಿಂದ ಕೃಷಿ ಭಾಗ್ಯ ಯೋಜನೆ ಮುಂದುವರೆಸಿಲ್ಲ ಎಂದು ಸ್ಪಷ್ಟಪಡಿಸಿದರು.
‘ಜಲಾನಯನ ಅಭಿವೃದ್ಧಿ ಇಲಾಖೆಯಡಿ 3,688 ಕೃಷಿ ಹೊಂಡಗಳನ್ನು ನಿರ್ಮಿಸಿದ್ದು, ಒಟ್ಟು 2618 ಲಕ್ಷ ರೂ.ವೆಚ್ಚ ಭರಿಸಲಾಗಿದೆ. ಮೂರು ವರ್ಷದಲ್ಲಿ ತುಮಕೂರು ಜಿಲ್ಲೆಯಲ್ಲಿ ಕೃಷಿ ಹೊಂಡಕ್ಕಾಗಿ ಕೃಷಿ ಇಲಾಖೆಯು 1854 ಫಲಾನುಭವಿಗಳ ಮಾಹಿತಿಯನ್ನು ಸಿ.ಡಿ.ರೂಪದಲ್ಲಿ ಹಾಗೂ ಜಲಾನಯನ ಅಭಿವೃದ್ಧಿ ಇಲಾಖೆಯ ಒಟ್ಟು 3,688 ಫಲಾನುಭವಿಗಳ ವಿವರವನ್ನು ಅನುಬಂಧ ರೂಪದಲ್ಲಿ ಒದಗಿಸಿದೆ ಎಂದು ಹೇಳಿದರು.