ಅಧಿಕಾರ ಕೇಂದ್ರೀಕರಣ ಬಿಜೆಪಿ ಸರಕಾರದ ಉದ್ದೇಶ: ಯು.ಟಿ.ಖಾದರ್

Update: 2023-02-23 04:04 GMT

ಬೆಂಗಳೂರು, ಫೆ.22: ‘ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಚುನಾವಣೆ ಬಗ್ಗೆ ರಾಜ್ಯ ಸರಕಾರ ಆಸಕ್ತಿ ತೋರುತ್ತಿಲ್ಲ. ಅಧಿಕಾರ ವಿಕೇಂದ್ರೀಕರಣದ ಬಗ್ಗೆ ಇವರು ಆಸಕ್ತಿ ತೋರಬೇಕಿತ್ತು. ಆದರೆ, ಅಧಿಕಾರ ಕೇಂದ್ರೀಕರಣದ ಬಗ್ಗೆ ಮಾತ್ರ ಇವರ ಆಸಕ್ತಿ ಇದ್ದಂತಿದೆ’ ಎಂದು ವಿಪಕ್ಷ ಉಪ ನಾಯಕ ಯು.ಟಿ.ಖಾದರ್ ವಾಗ್ದಾಳಿ ನಡೆಸಿದರು.

ಬುಧವಾರ ವಿಧಾನಸಭೆಯಲ್ಲಿ 2023-24ನೆ ಸಾಲಿನ ಬಜೆಟ್ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಅವರು, ‘ಅಭಿವೃದ್ಧಿ ಕಾರ್ಯಗಳು ತಾಲೂಕು ಪಂಚಾಯತಿ, ಜಿಲ್ಲಾ ಪಂಚಾಯತಿ ಮಟ್ಟದಲ್ಲಿ ತೀರ್ಮಾನವಾಗಬೇಕು. ಆದರೆ, ಈಗಿನ ಪರಿಸ್ಥಿತಿಯಲ್ಲಿ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿಗಳು ಇಲ್ಲ. 15ನೆ ಹಣಕಾಸು ಆಯೋಗದಿಂದ ತಲಾ 12 ಲಕ್ಷ ರೂ.ಗಳನ್ನು ಕಡಿತ ಮಾಡಿ ಗ್ರಾಮ ಪಂಚಾಯಿತಿಗಳಿಗೆ ಅನುದಾನ ಕಳುಹಿಸುವಂತಹ ಪರಿಸ್ಥಿತಿ ಇದೆ. ಗ್ರಾಮ ಪಂಚಾಯತಿಗೆ ಹೋದ ಅನುದಾನವನ್ನು ತಾಲೂಕು ಹಾಗೂ ಜಿಲ್ಲಾ ಪಂಚಾಯತಿ ಇಲ್ಲದೆ ಇರುವುದರಿಂದ ಅಧಿಕಾರಿಗಳೆ ಕೂತು ಯಾವ ಕೆಲಸಕ್ಕೆ ಎಷ್ಟು ಕೊಡಬೇಕು ಎಂಬುದನ್ನು ತೀರ್ಮಾನ ಮಾಡುತ್ತಿದ್ದಾರೆ ಎಂದು ಕಿಡಿಗಾರಿದರು.

ಗ್ರಾಮ ಪಂಚಾಯಿತಿಗಳಲ್ಲಿ ಕೆಲಸ ಮಾಡುತ್ತಿರುವ ಡೇಟಾ ಎಂಟ್ರಿ ಆಪರೇಟರ್‍ಗಳು, ಬಿಲ್ ಕಲೆಕ್ಟರ್, ವಾಟರ್ ಮೆನ್‍ಗಳು, ಕ್ಲಿನರ್‍ಗಳಿಗೆ ವೇತನ ಶ್ರೇಣಿ ನಿಗದಿ ಮಾಡಬೇಕು. ಅವರಿಗೆ ಇಎಸ್‍ಐ, ಪಿಎಫ್ ಇಲ್ಲ. ಅದೇ ರೀತಿ, ರಾಷ್ಟ್ರೀಯ ಆರೋಗ್ಯ ಮಿಷನ್ ಅಡಿಯಲ್ಲಿ ಕೆಲಸ ಮಾಡುವ ವೈದ್ಯರು, ನರ್ಸ್‍ಗಳು, ಲ್ಯಾಬ್ ಟೆಕ್ನಿಶಿಯನ್, ಸಿಬ್ಬಂದಿಗಳಿಗೆ ಭತ್ತೆ ಹೆಚ್ಚಳ ಮಾಡಿಲ್ಲ. ಬೀದಿ ನಾಯಿಗಳ ಬಗ್ಗೆ ಗಮನ ಇಟ್ಟು ಅನುದಾನ ಕೊಡುವ ಸರಕಾರ, ಇವರಿಗೆ ಯಾಕೆ ಕೈ ಬಿಟ್ಟಿದೆ ಎಂದು ಅವರು ಪ್ರಶ್ನಿಸಿದರು.

ಮೀನುಗಾರರ ಬೋಟುಗಳು ಡಿಸೇಲ್ ಖಾಲಿಯಾಗಿ ನಿಂತಿವೆ. ಅವರಿಗೆ 200 ಲೀಟರ್ ಡಿಸೇಲ್ ನೀಡುವುದಾಗಿ ಹೇಳಿದ್ದಾರೆ. ಈ ಬಾರಿಗೆ ಅದಕ್ಕೆ ಉಳಿಕೆ ಹಣ ನೀಡಬೇಕು. ಕಡಲ್ಕೊರೆತ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಬೀಡಿ ಕಾರ್ಮಿಕರಿಗೆ ಇರುವ ಕಲ್ಯಾಣ ಯೋಜನೆಗಳ ಸಮರ್ಪಕ ಅನುಷ್ಠಾನ ಆಗಬೇಕು. ಬ್ರಹ್ಮಶ್ರೀ ನಾರಾಯಣ ಗುರು ಅಭಿವೃದ್ಧಿ  ನಿಗಮ ಸ್ಥಾಪನೆ ಮಾಡಿರುವುದು ಸ್ವಾಗತ. ಆದರೆ, ಅದಕ್ಕೆ ಅನುದಾನ ಎಷ್ಟು ಸ್ಪಷ್ಟಪಡಿಸಬೇಕು ಎಂದು ಅವರು ಹೇಳಿದರು.

ಕರಾವಳಿ ಭಾಗದಲ್ಲಿ ಬ್ಯಾರಿ, ಬಂಟ, ಕುಳಾಲ, ಆಚಾರ್ಯ, ಕೋಟ, ಶೆಟ್ಟಿಗಾರ್, ಶೇರಿಗಾರ್, ಬೋವಿ, ಕ್ರಿಶ್ಚಿಯನ್ ನಂತಹ ಸಣ್ಣ ಸಣ್ಣ ಸಮುದಾಯಗಳಿಗೆ ಅವರಿಗೆ ಎಷ್ಟು ಅನುದಾನ ನಿಗದಿಪಡಿಸಲಾಗಿದೆ ಎಂಬುದು ಸ್ಪಷ್ಟಪಡಿಸಬೇಕಾಗಿದೆ. ಅಬ್ಬಕ್ಕ ಭವನ ನಿರ್ಮಾಣಕ್ಕೆ ನಮ್ಮ ಸರಕಾರ 8 ಕೋಟಿ ರೂ.ಗಳು ನೀಡಿತ್ತು. ಉಳಿದ 2 ಕೋಟಿ ರೂ.ಗಳನ್ನು ಈ ಸರಕಾರ ಕೊಟ್ಟಿಲ್ಲ ಎಂದು ಖಾದರ್ ತಿಳಿಸಿದರು.

ಅಬ್ಬಕ್ಕ ಉತ್ಸವಕ್ಕೆ ನಾವು 50 ಲಕ್ಷ ರೂ. ನೀಡಿದ್ದೆವು. ನೀವು 10 ಲಕ್ಷ ರೂ. ನೀಡಿದ್ದೀರಾ. ಇದರಲ್ಲಿ ಉತ್ಸವ ಮಾಡಲು ಸಾಧ್ಯವೇ? ಚುನಾವಣೆ ಬಂದಾಗ ಕೇಂದ್ರ ಮಂತ್ರಿಗಳು ಬಂದು ಅಬ್ಬಕ್ಕ ಹೆಸರು ಉಲ್ಲೇಖಿಸುತ್ತಾರೆ. ಪೂರಕ ಅಂದಾಜಿನಲ್ಲಿ ಬಳ್ಳಾರಿ ಉತ್ಸವಕ್ಕೆ 2 ಕೋಟಿ ರೂ, ಚಿಕ್ಕಬಳ್ಳಾಪುರ ಉತ್ಸವಕ್ಕೆ 2 ಕೋಟಿ ರೂ., ಲಕ್ಕುಂಡಿ ಉತ್ಸವಕ್ಕೆ 100 ಕೋಟಿ ರೂ., ಕದಂಬ ಉತ್ಸವಕ್ಕೆ 2 ಕೋಟಿ ರೂ. ಹಾಗೂ ಬೆಳಗಾವಿಯಲ್ಲಿ ಜಗನ್ನಾಥ್‍ರಾವ್ ಜೋಶಿ ಜನ್ಮಶತಮಾನೋತ್ಸವ ಸ್ಮಾರಕಕ್ಕೆ 5 ಕೋಟಿ ರೂ.ನೀಡಿದ್ದಾರೆ. ಆದರೆ, ಅಬ್ಬಕ್ಕ ಅವರಿಗೆ ಇಷ್ಟೊಂದು ಅವಮಾನ ಏಕೆ? ಅವರು ಏನು ಮಾಡಿದ್ದಾರೆ? ಎಂದು ಮುಖ್ಯಮಂತ್ರಿ ಸ್ಪಷ್ಟಪಡಿಸಬೇಕು ಎಂದು ಖಾದರ್ ಆಗ್ರಹಿಸಿದರು.

ದ್ವೇಷ ಮುಕ್ತ ಹಾಗೂ ದುಷ್ಚಟ ಮುಕ್ತ ಸಮಾಜ ನಿರ್ಮಾಣ ಮಾಡಬೇಕು. ದ್ವೇಷ ಮುಕ್ತ ಸಮಾಜ ನಿರ್ಮಿಸಲು ಯಾವುದೆ ತಾರತಮ್ಯ ಇಲ್ಲದೆ ನಾವು ಅಧಿಕಾರ ನಡೆಸುವಂತಾಗಬೇಕು. ದುಷ್ಚಟ ಮುಕ್ತ ಸಮಾಜ ನಿರ್ಮಿಸಲು ಗೃಹ ಇಲಾಖೆಯನ್ನು ಬಲಪಡಿಸಬೇಕು. ಸೈಬರ್ ಅಪರಾಧಗಳಿಗೆ ಕಡಿವಾಣ, ಮಾದಕ ದ್ರವ್ಯ ಸಾಗಾಣೆಗೆ ಅಂಕುಶ ಹಾಕಬೇಕು. ಇತ್ತೀಚೆಗೆ ಗುಜರಾತಿನ ಮುಂದ್ರಾ ಬಂದರಿನಲ್ಲಿ ಸಾವಿರಾರು ಕೋಟಿ ರೂ.ಮೌಲ್ಯದ ಮಾದಕ ದ್ರವ್ಯ ಸಿಕ್ಕಿತ್ತು ಎಂದು ಅವರು ಹೇಳಿದರು. 

ಇಂದಿರಾ ಕ್ಯಾಂಟೀನ್ ಬಡವರು 10 ರೂ.ಗಳಿಗೆ ಊಟ ಮಾಡುವ ಯೋಜನೆ, ಅದಕ್ಕೆ ಅನುದಾನ ನೀಡದೆ ಬಂದ್ ಮಾಡಿದ್ದು ಸರಿಯಲ್ಲ. ಅದಕ್ಕೆ ಅಗತ್ಯವಿರುವ ಅನುದಾನ ನೀಡಬೇಕು ಎಂದು ಅವರು ಒತ್ತಾಯಿಸಿದರು.

► ಕವನ ವಾಚಿಸಿದ ಯು.ಟಿ.ಖಾದರ್

ದಹನ ಮಾಡಿದ ಕಟ್ಟಿಗೆಯ ಜಾತಿ ಯಾವುದು, ದಫನ ಮಾಡಿದ ಮಣ್ಣಿನ ಜಾತಿ ಯಾವುದು, ಐಸಿಯುನಲ್ಲಿ ತೂಗಿದ ರಕ್ತದ ಜಾತಿ ಯಾವುದು, ವೆಂಟಿಲೇಟರ್ ಆಮ್ಲಜನಕದ ಜಾತಿ ಯಾವುದು, ಹೆಣವ ಹೊತ್ತ ಹೆಗಲ ಜಾತಿ ಯಾವುದು, ಇದನ್ನು ನೋಡಿ ಮುಖನಾಗಿರುವ ನಮ್ಮ ಜಾತಿ ಯಾವುದು, ಬಾ ಅಣ್ಣ ನಾನು ಹಿಂದೂ ನೀನು ಮುಸಲ್ಮಾನ, ಕ್ರಿಶ್ಚಿಯನ್ ಎನ್ನುವ ಬದಲು ಇದು ವಿಭಜಿಸೋಣ, ಬಾ ಅಣ್ಣ ಹಿಂದೂ, ಮುಸ್ಲಿಮ್, ಕ್ರಿಶ್ಚಿಯನ್ ಎನ್ನುವ ಮೊದಲು ಒಡೆದಾಡುವ ಮುನ್ನ ಇದನ್ನು ಪಾಲು ಮಾಡೋಣ ಎಂದು ಕವನ ವಾಚಿಸಿದ ಯು.ಟಿ.ಖಾದರ್, ಇದು ಹಿಂದಿನವರು ಬರೆದ ಕವನ ಅಲ್ಲ, ಇಂದಿನ ಯುವ ಜನಾಂಗ ಬರೆದಿರುವ ಸ್ಪಷ್ಟವಾದ ಸಂದೇಶ. ಇದು ನಮ್ಮೆಲ್ಲರಿಗೂ ಮಾದರಿಯಾಗಲಿ ಎಂದು ಹಾರೈಸಿದರು.

ಸಾಲದ ಮೇಲೆ ತೇಲುವ ಬಜೆಟ್: ರಾಜ್ಯದ ಜಿಡಿಪಿಯು ಈ ವರ್ಷ ಶೇ.7ಕ್ಕಿಂತ ಕಡಿಮೆ ಇರುವ ಸಾಧ್ಯತೆಯಿದೆ. ಕೃಷಿ ಕ್ಷೇತ್ರದಲ್ಲಿ ಶೇ.18.1ರಷ್ಟು ಇದ್ದ ಬೆಳವಣಿಗೆ ಈ ಬಾರಿ ಶೇ.5.5ಕ್ಕೆ ಇಳಿಕೆಯಾಗಿದೆ. ಕೈಗಾರಿಕೆಯ ಬೆಳವಣಿಗೆ ಶೇ.9 ಇದ್ದದ್ದು ಶೇ.5.1ಕ್ಕೆ ಇಳಿದಿದೆ. ಸೇವಾ ಕ್ಷೇತ್ರವು ಶೇ.9.2ಕ್ಕೆ ಇಳಿದಿದೆ. ಆದರೂ, ಆದಾಯ ಹೆಚ್ಚಳವಾಗಿದೆ ಎಂದು ಸರಕಾರ ತೋರಿಸುತ್ತಿದೆ. ಸರಕಾರ ಶೇ.26ರಷ್ಟು ತೆರಿಗೆ ಹೆಚ್ಚು ಸಂಗ್ರಹವಾಗಿರುವ ಬಗ್ಗೆ ಪ್ರಸ್ತಾಪಿಸಿದೆ. ಜನರು ಪರೋಕ್ಷ ತೆರಿಗೆಗಳನ್ನು ಪಾವತಿಸುತ್ತಿರುವುದರಿಂದ ಆದಾಯ ಹೆಚ್ಚಳವಾಗಿದೆ. ಜನರಿಗೆ ಭಾರ ಬಿದ್ದಿದೆ. ಇದು ಸಾಲದ ಮೇಲೆ ತೇಲುವ ಬಜೆಟ್ ಆಗಿದೆ ಎಂದು ಯು.ಟಿ.ಖಾದರ್ ಟೀಕಿಸಿದರು.

Similar News