ನನ್ನ ಹೆಸರೇಳಿ ಹಿರೇಮಠ್ ಮತ ಕೇಳಿದರೆ ಉಗಿದು ಕಳಿಸಿ: ಸಿದ್ದರಾಮಯ್ಯ

Update: 2023-02-22 16:54 GMT

ಬಾಗಲಕೋಟೆ, ಫೆ. 22: ‘ನನ್ನ ಹೆಸರು ಹೇಳಿಕೊಂಡು ಇಲ್ಲಿ ಹಿರೇಮಠ ಅವರು ಮತ ಕೇಳುತ್ತಿದ್ದಾರಂತೆ, ನೀವು ಅಂತಹವರಿಗೆ ಉಗಿದು ಕಳಿಸಿ, ನನ್ನ ಹೆಸರು ಹೇಳುವ ಯೋಗ್ಯತೆ ಅವರಿಗೆ ಇದೆಯಾ ಎಂದು ಕೇಳಿ’ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಇಂದಿಲ್ಲಿ ತಿಳಿಸಿದ್ದಾರೆ.

ಬುಧವಾರ ಜಿಲ್ಲೆಯ ಹುನಗುಂದದಲ್ಲಿ ನಡೆದ ಪ್ರಜಾಧ್ವನಿ ಯಾತ್ರೆಯ ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡಿದ ಅವರು, ಹಿರೇಮಠ್ ಅವರ ಮನೆಯ ಮದುವೆ ಕಾರ್ಯಕ್ಕೆ ಹೋಗಿದ್ದೆ ಅಷ್ಟೇ, ಮದುವೆ, ಸಾವಿನ ಕಾರ್ಯಗಳಿಗೆ ಹೋಗುವುದೇ ಬೇರೆ ರಾಜಕೀಯವೇ ಬೇರೆ. ನಾನು ನೂರಕ್ಕೆ ನೂರು ವಿಜಯಾನಂದ ಕಾಶಪ್ಪನವರ್ ಪರ. ಕಾಶಪ್ಪನವರ್ ಗೆದ್ದರೆ ಸಿದ್ದರಾಮಯ್ಯ ಗೆದ್ದಂತೆ’ ಎಂದು ಹೇಳಿದರು.

‘ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಗಳೂರಿನಲ್ಲಿ ಮುಂದಿನ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಚರ್ಚೆಯಾಗಬೇಕಿರುವುದು ಅಬ್ಬಕ್ಕ ವರ್ಸಸ್ ಟಿಪ್ಪು ಎಂದಿದ್ದಾರೆ. ಇದು ನಿಮ್ಮ ಜೀವನಕ್ಕೆ ಪ್ರಸ್ತುತವೇ ಎಂದು ಜನರೇ ಯೋಚನೆ ಮಾಡಬೇಕಲ್ವ? ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ರಸ್ತೆ, ಚರಂಡಿ ಹೀಗೆ ಅಭಿವೃದ್ಧಿ ಬಗ್ಗೆ ಮಾತನಾಡಬೇಡಿ, ಲವ್ ಜಿಹಾದ್ ಬಗ್ಗೆ ಮಾತನಾಡಿ ಎಂದಿದ್ದಾರೆ. ಇದರಿಂದ ಯುವಜನರಿಗೆ ಉದ್ಯೋಗ ಸಿಗುತ್ತಾ, ಬಡವರ ಹೊಟ್ಟೆ ತುಂಬುತ್ತಾ?’ ಎಂದು ಪ್ರಶ್ನಿಸಿದರು.

‘ಇಂತಹ ದ್ವೇಷ ರಾಜಕೀಯದ ಬದಲಾಗಿ ನಾವು ಅಭಿವೃದ್ಧಿ ರಾಜಕಾರಣ ಮಾಡುತ್ತೇವೆ. ನಾವು ಮುಂದೆ ಅಧಿಕಾರಕ್ಕೆ ಬಂದ ನಂತರ ಪ್ರತಿ ವ್ಯಕ್ತಿಗೆ 10 ಕೆ.ಜಿ ಅಕ್ಕಿಯನ್ನು ಉಚಿತವಾಗಿ ನೀಡುತ್ತೇವೆ. ಬರೀ ಶ್ರೀಮಂತರು ಊಟ ಮಾಡಿದರೆ ಸಾಕೇ? ಬಡವ ಹೊಟ್ಟೆ ತುಂಬ ಊಟ ಮಾಡುವುದು ಬೇಡ್ವಾ? ಇದಕ್ಕೂ ನಾವು ಗ್ಯಾರೆಂಟಿ ಕಾರ್ಡ್ ಅನ್ನು ಕೊಡುತ್ತೇವೆ’ ಎಂದು ಅವರು ಭರವಸೆ ನೀಡಿದರು. 

Similar News