ಗ್ರಾಮೀಣ ಪ್ರದೇಶಕ್ಕೆ 3,600 ಹೊಸ ಬಸ್‍ಗಳ ಖರೀದಿ: ಸಚಿವ ಸುನಿಲ್ ಕುಮಾರ್

Update: 2023-02-22 17:30 GMT

ಬೆಂಗಳೂರು, ಫೆ. 22: ‘ಗ್ರಾಮೀಣ ಪ್ರದೇಶದಲ್ಲಿನ ಸರಕಾರಿ ಬಸ್‍ಗಳ ಕೊರತೆ ನೀಗಿಸುವ ನಿಟ್ಟಿನಲ್ಲಿ ಕೆಎಸ್ಸಾರ್ಟಿಸಿ ಸೇರಿದಂತೆ ಸಾರಿಗೆ ನಿಗಮಗಳಿಗೆ ಒಟ್ಟು 3,604 ಹೊಸ ಬಸ್‍ಗಳ ಖರೀದಿ ಪ್ರಕ್ರಿಯೆ ಆರಂಭಿಸಿದ್ದು, ಶೀಘ್ರದಲ್ಲೆ ಅವುಗಳನ್ನು ಒದಗಿಸುವ ಮೂಲಕ ಶಾಲಾ-ಕಾಲೇಜು ಮಕ್ಕಳು ಸೇರಿದಂತೆ ಸಾರ್ವಜನಿಕ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಲಾಗುವುದು’ ಎಂದು ಇಂಧನ ಸಚಿವ ಸುನಿಲ್ ಕುಮಾರ್ ಭರವಸೆ ನೀಡಿದ್ದಾರೆ.

ಬುಧವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ ಸದಸ್ಯ ಇ.ತುಕರಾಮ್ ಕೇಳಿದ ಪ್ರಶ್ನೆಗೆ ಸಾರಿಗೆ ಸಚಿವರ ಪರವಾಗಿ ಉತ್ತರ ನೀಡಿದ ಸುನಿಲ್ ಕುಮಾರ್, ಕಲ್ಯಾಣ ಕರ್ನಾಟಕ ಸಾರಿಗೆ ನಿಗಮದಿಂದ ಒಟ್ಟು 800 ಬಸ್‍ಗಳನ್ನು ಖರೀದಿಸಲಾಗುತ್ತಿದ್ದು, ಜನ ದಟ್ಟಣೆ ಹಾಗೂ ಅವಶ್ಯಕತೆಯನ್ನು ಆಧರಿಸಿ ಬಸ್‍ಗಳನ್ನು ಒದಗಿಸಲಾಗುವುದು ಎಂದು ಹೇಳಿದರು.

ಕಲ್ಯಾಣ ಕರ್ನಾಟಕ ವ್ಯಾಪ್ತಿಯ 41 ವಿಧಾನಸಭಾ ಕ್ಷೇತ್ರಗಳಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಒಟ್ಟು 45 ಘಟಕಗಳಿದ್ದು, ಈ ಪೈಕಿ ರಾಯಚೂರಿನಲ್ಲಿ ಹೊಸದಾಗಿ ಘಟಕ ನಿರ್ಮಿಸಲಾಗುತ್ತಿದೆ. ಪರೀಕ್ಷೆ ಸಂದರ್ಭದಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆ ಆಗದಂತೆ ಮುನ್ನಚ್ಚರಿಕೆ ವಹಿಸಲಾಗುವುದು ಎಂದು ಅವರು ಭರವಸೆ ನೀಡಿದರು.

ಚಾಕಲೇಟ್ ಖರೀದಿ ಆಸೆ: ‘ಕುಣಿಗಲ್ ತಾಲೂಕಿನಲ್ಲಿ ಶಾಲಾ-ಕಾಲೇಜುಗಳಿಗೆ ತೆರಳುವ 300ಕ್ಕೂ ಅಧಿಕ ವಿದ್ಯಾರ್ಥಿಗಳು ನಿತ್ಯ ನಾಲ್ಕೈದು ಗಂಟೆ ಬಸ್ಸಿಗಾಗಿ ಕಾಯಬೇಕಿದೆ. ಬಸ್ ಸೌಲಭ್ಯ ಕಲ್ಪಿಸಲು ಒತ್ತಾಯಿಸಿದರೆ ಸರಕಾರ ನಮಗೆ ಚಾಕಲೇಟ್ ಖರೀದಿ ಮಾಡುವ ಆಸೆ ತೋರಿಸಿದಂತೆ ಹೊಸ ಬಸ್ ಖರೀದಿ ಆಸೆ ತೋರಿಸುತ್ತಿದೆ’ ಎಂದು ಲೇವಡಿ ಮಾಡಿದರು.

ಬಳಿಕ ಉತ್ತರ ನೀಡಿದ ಸಚಿವ ಸುನಿಲ್ ಕುಮಾರ್, ‘ಕುಣಿಗಲ್ ಕ್ಷೇತ್ರದಲ್ಲಿ ಸಾರಿಗೆ ಬಸ್‍ಗಳ ಸಮಸ್ಯೆ ನಿವಾರಣೆ ಸಂಬಂಧ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಪರಿಹಾರ ಒದಗಿಸಲಾಗುವುದು. ಯಾವುದೇ ಕಾರಣಕ್ಕೂ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ತೊಂದರೆ ಆಗದಂತೆ ಕ್ರಮ ವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು’ ಎಂದು ಭರವಸೆ ನೀಡಿದರು.

Similar News