ಪಂಚಮಸಾಲಿ ಮೀಸಲಾತಿ ಪ್ರಶ್ನಿಸಿರುವ ಅರ್ಜಿ ವಜಾ ಕೋರಿ ಸರಕಾರದಿಂದ ಹೈಕೋರ್ಟ್ ಗೆ ಮನವಿ

Update: 2023-02-22 17:57 GMT

ಬೆಂಗಳೂರು, ಫೆ.22: ಪಂಚಮಸಾಲಿ ಲಿಂಗಾಯತ ಮೀಸಲಾತಿ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯನ್ನು ವಜಾಗೊಳಿಸಬೇಕೆಂದು ಕೋರಿ ಹೈಕೋರ್ಟ್‍ಗೆ ರಾಜ್ಯ ಸರಕಾರ ಮನವಿ ಮಾಡಿದೆ.

ಪಂಚಮಸಾಲಿ ಲಿಂಗಾಯತ ಸಮುದಾಯವನ್ನು ಪ್ರವರ್ಗ-2ಎಗೆ ಸೇರ್ಪಡೆ ಮಾಡುವುದಕ್ಕೆ ಸಂಬಂಧಿಸಿದಂತೆ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸಲ್ಲಿಸಿರುವ ಮಧ್ಯಂತರ ವರದಿಯನ್ನು ಕಾನೂನು ಬಾಹಿರ ಎಂಬುದಾಗಿ ಘೋಷಿಸುವಂತೆ ಕೋರಿ ಬೆಂಗಳೂರಿನ ಡಿ.ಜಿ.ರಾಘವೇಂದ್ರ ಎಂಬುವವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

ಆದರೆ, ರಾಜ್ಯ ಸರಕಾರವು ಮನವಿ ಮಾಡಿ, ಹಿಂದುಳಿದ ವರ್ಗಗಳ ಆಯೋಗದ ಕಾಯಿದೆಯ ಸೆಕ್ಷನ್ 9ರ ಪ್ರಕಾರ ರಾಜ್ಯ ಸರಕಾರಗಳು ಆಯೋಗದೊಂದಿಗೆ ಚರ್ಚಿಸಿ ಪ್ರತಿ ಹತ್ತು ವರ್ಷಗಳಿಗೊಮ್ಮೆ ಹಿಂದುಳಿದ ವರ್ಗಗಳ ಪಟ್ಟಿಯನ್ನು ಪರಿಷ್ಕರಣೆ ಮಾಡುವುದಕ್ಕೆ ಅವಕಾಶ ಕಲ್ಪಿಸಲಾಗಿದೆ. 

ಹೀಗಾಗಿ ಮೀಸಲಾತಿಯನ್ನು ಪರಿಷ್ಕರಣೆ ಮಾಡುವ ಅಧಿಕಾರ ರಾಜ್ಯ ಸರಕಾರಕ್ಕಿದ್ದು, ಪಂಚಮಸಾಲಿ ಲಿಂಗಾಯತರಿಗೆ ಮೀಸಲಾತಿ ನೀಡುವ ಕುರಿತು ಸಲ್ಲಿಕೆಯಾಗಿರುವ ಅರ್ಜಿಯನ್ನು ವಜಾಗೊಳಿಸಬೇಕು ಎಂದು ಸರಕಾರ ಹೈಕೋರ್ಟ್‍ಗೆ ಮನವಿ ಮಾಡಿದೆ.

ಅರ್ಜಿ ವಿಚಾರಣೆ ನಡೆಸುತ್ತಿರುವ ಹೈಕೋರ್ಟ್ ವಿಭಾಗೀಯ ಪೀಠಕ್ಕೆ ರಾಜ್ಯ ಸರಕಾರ ಆಕ್ಷೇಪಣೆ ಸಲ್ಲಿಸಿದೆ. 
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ಸರಕಾರ ಸಲ್ಲಿಸಿರುವ ಆಕ್ಷೇಪಣೆಗೆ ಪ್ರತಿ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಬೇಕು ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು. ಮನವಿಯನ್ನು ಪರಿಗಣಿಸಿದ ನ್ಯಾಯಪೀಠ ವಿಚಾರಣೆಯನ್ನು ಒಂದು ವಾರ ಕಾಲ ಮುಂದೂಡಿದೆ.

Similar News