×
Ad

ಇನ್ನು ಮುಂದೆ ವಕ್ಫ್‌ನಿಂದಲೇ ವಿವಾಹ ಪ್ರಮಾಣ ಪತ್ರ: ಸರಕಾರದ ಅಧಿಕೃತ ಆದೇಶ

Update: 2023-02-22 23:42 IST

ಮಂಗಳೂರು, ಫೆ.22: ರಾಜ್ಯದಲ್ಲಿ ವಕ್ಫ್ ಮಂಡಳಿಯಿಂದ ಮುಸ್ಲಿಮ್ ದಂಪತಿಗೆ ವಿವಾಹ ಪ್ರಮಾಣ ಪತ್ರ ನೀಡುವುದಕ್ಕೆ ಉಂಟಾಗಿದ್ದ ಕಾನೂನು ತೊಡಕುಗಳು ನಿವಾರಣೆಯಾಗಿದ್ದು, ಇನ್ನು ಮುಂದೆ ವಕ್ಫ್‌ನಿಂದಲೇ ವಿವಾಹ ಪ್ರಮಾಣ ಪತ್ರ ದೊರೆಯಲಿದೆ.

ಮಂಗಳವಾರ ಬೆಂಗಳೂರಿನ ವಿಕಾಸ ಸೌಧದಲ್ಲಿ ಮುಜರಾಯಿ ಮತ್ತು ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ಅಧ್ಯಕ್ಷತೆಯಲ್ಲಿ ನಡೆದ ವಕ್ಫ್ ಮಂಡಳಿಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ರಾಜ್ಯದಲ್ಲಿ ವಿವಾಹ ಪ್ರಮಾಣ ಪತ್ರ ವಿತರಿಸುವ ಅಧಿಕಾರವನ್ನು ಸರಕಾರ ವಕ್ಫ್‌ಗೆ ಮಾತ್ರ ನೀಡಿದ್ದು, ಸರಕಾರ ಇದೀಗ ಅಧಿಕೃತ ಆದೇಶ ಹೊರಡಿಸಿದೆ.

ಎರಡು ವರ್ಷಗಳ ಹಿಂದೆ ವಕ್ಫ್‌ನಿಂದ ನೀಡಲಾಗುತ್ತಿದ್ದ ವಿವಾಹ ಪ್ರಮಾಣ ಪತ್ರಕ್ಕೆ ಸಂಬಂಧಿಸಿ ಹೈದರಾಬಾದ್ ಕರ್ನಾಟಕದ ಖಾಝಿ ಮುಹಮ್ಮದ್ ಹುಸೈನ್ ಸಿದ್ದೀಖಿ ಮತ್ತು ಇನ್ನೊಬ್ಬರು ಕರ್ನಾಟಕ ಹೈಕೋರ್ಟ್‌ನ ಕಲಬುರಗಿ ಪೀಠದಲ್ಲಿ ಪ್ರಶ್ನಿಸಿದ್ದ ಹಿನ್ನೆಲೆಯಲ್ಲಿ ವಕ್ಫ್‌ನಿಂದ ವಿವಾಹ ಪ್ರಮಾಣ ಪತ್ರ ನೀಡುವುದಕ್ಕೆ ತಡೆ ಉಂಟಾಗಿತ್ತು. ಹೈಕೋರ್ಟ್ ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲು ಸರಕಾರಕ್ಕೆ ಆದೇಶ ನೀಡಿತ್ತು ಎನ್ನಲಾಗಿದೆ.

ಖಾಝಿಗಳಿಗೆ ವಿವಾಹ ಪ್ರಮಾಣ ಪತ್ರ ನೀಡಲು ಅಧಿಕಾರ ಇದೆಯೇ? ಎಂದು ಪರಿಶೀಲಿಸುವಂತೆ ಉಚ್ಚ ನ್ಯಾಯಾಲಯವು ಸರಕಾರಕ್ಕೆ ಸೂಚಿಸಿತ್ತು. ಆದರೆ ಸರಕಾರ ನಿರ್ಧಾರ ಕೈಗೊಳ್ಳುವಲ್ಲಿ ತಡವಾದ ಹಿನ್ನೆಲೆಯಲ್ಲಿ ವಿವಾಹ ಪ್ರಮಾಣ ಪತ್ರಕ್ಕಾಗಿ ಅಲೆದಾಡಬೇಕಾದ ಪರಿಸ್ಥಿತಿ ಇತ್ತು.

ವಕ್ಫ್‌ನಿಂದ ವಿವಾಹ ಪತ್ರ ನೀಡುವುದು ಸ್ಥಗಿತಗೊಂಡ ಕಾರಣದಿಂದಾಗಿ ಮುಸ್ಲಿಮ್ ದಂಪತಿ ವಿವಾಹ ಪ್ರಮಾಣ ಪತ್ರಕ್ಕಾಗಿ ಉಪನೋಂದಣಿ ಕಚೇರಿಗೆ ಅಲೆದಾಡಬೇಕಾದ ಸಮಸ್ಯೆ ಉಂಟಾಗಿತ್ತು.

ಏಳು ಷರತ್ತುಗಳು: ವಿವಾಹಿತ ಮುಸ್ಲಿಮ್ ಅರ್ಜಿದಾರರಿಗೆ ವಿವಾಹ ಪ್ರಮಾಣಪತ್ರಗಳನ್ನು ನೀಡಲು ವಕ್ಫ್ ಮಂಡಳಿ ಮತ್ತು ಜಿಲ್ಲೆಗಳ ವಕ್ಫ್ ಅಧಿಕಾರಿಗಳಿಗೆ 7 ಷರತ್ತುಗಳನ್ನು ವಿಧಿಸಿದೆ. ಅವುಗಳ ವಿವರ ಇಂತಿವೆ.

ವಿವಾಹ ಪ್ರಮಾಣ ಪತ್ರ ಪಡೆಯಲು ವರ ಮತ್ತು ವಧು ತಮ್ಮ ಹೆಸರು, ತಂದೆಯ ಹೆಸರು, ಮದುವೆಯ ದಿನಾಂಕ, ಮದುವೆಯ ಸ್ಥಳ, ವಕೀಲ ಮತ್ತು ಸಾಕ್ಷಿಯ ಹೆಸರನ್ನು ಸೂಚಿಸುವ ಜಂಟಿ ಅಫಿಡವಿಟ್ ಅನ್ನು ಸಲ್ಲಿಸಬೇಕು.

ಅರ್ಜಿದಾರರು ಸಂಬಂಧಪಟ್ಟ ಮಸೀದಿಯ ಆಡಳಿತ ಸಮಿತಿಯಿಂದ ವಿವಾಹ ನೋಂದಾಯಿಸಿದ ಬಗ್ಗೆ ದಾಖಲೆ ನಿಕಾಹ್-ನಾಮಾ ಒದಗಿಸಬೇಕು.

ವಕ್ಫ್ ಅಧಿಕಾರಿಯು ವಿವಾಹ ಪ್ರಮಾಣಪತ್ರವನ್ನು ನೀಡುವ ಮೊದಲು ಸಂಬಂಧಪಟ್ಟ ಮಸೀದಿಯಿಂದ ನೀಡಿದ ಅರ್ಜಿದಾರರಿಂದ ಒದಗಿಸಲಾದ ಮೂಲ ನಿಕಾಹ್-ನಾಮವನ್ನು ಪರಿಶೀಲಿಸಬೇಕು.

ವಿತರಣಾ ಪ್ರಾಧಿಕಾರವು ಮದುವೆಯ ಪ್ರಮಾಣಪತ್ರವನ್ನು ನೀಡುವ ಮೊದಲು ಆಯಾ ಮಸೀದಿಯಿಂದ ನಿರ್ವಹಿಸಲ್ಪಟ್ಟ ಮೂಲ ವಿವಾಹ ನೋಂದಣಿ ದಾಖಲೆಯನ್ನು ಪರಿಶೀಲಿಸುತ್ತದೆ.

ವಿತರಿಸುವ ಪ್ರಾಧಿಕಾರವು ವರ ಮತ್ತು ವಧುವಿನ ಪೂರ್ವ ಅವಶ್ಯಕತೆಯಂತೆ ಜಂಟಿ ಭಾವಚಿತ್ರಗಳನ್ನು ಪಡೆಯಬೇಕು.

ದೂರವಾಣಿ ಮೂಲಕ ನಡೆದ ವಿವಾಹ ಮತ್ತು ವೆಬ್ ಮೂಲಕ ನಡೆದ ಮದುವೆಗೆ ಪ್ರಮಾಣ ಪತ್ರ ನೀಡುವಂತಿಲ್ಲ.

ಎನ್‌ಆರ್‌ಐ/ವಿದೇಶಿ ನಾಗರಿಕರಿಗೆ ವಿವಾಹ ಪ್ರಮಾಣಪತ್ರಗಳನ್ನು ನೀಡುವಾಗ ನ್ಯಾಯವ್ಯಾಪ್ತಿಯ ಪೊಲೀಸ್ ಪ್ರಾಧಿಕಾರ/ಪೊಲೀಸ್ ಆಯುಕ್ತರ ಕಚೇರಿ(ವಿದೇಶಿ ಶಾಖೆ)/ಆಯಾ ಜಿಲ್ಲೆಗಳ ಪೊಲೀಸ್ ಅಧೀಕ್ಷಕರ ಕಚೇರಿಯಿಂದ ಪೂರ್ವಾನುಮತಿ ಪಡೆಯತಕ್ಕದ್ದು.

"ವಿವಾಹ ಪ್ರಮಾಣ ಪತ್ರ ವಿತರಿಸುವ ಅಧಿಕಾರವನ್ನು ವಕ್ಫ್‌ಗೆ ನೀಡುವಂತೆ ನಾವು ಹಲವು ಸಮಯಗಳಿಂದ ಹೋರಾಟ ನಡೆಸುತ್ತಿದ್ದೆವು. ಇದೀಗ ಸರಕಾರ ಈ ಅಧಿಕಾರವನ್ನು ವಕ್ಫ್‌ಗೆ ನೀಡಿದ್ದು, ನಮ್ಮ ಹೋರಾಟ ಯಶಸ್ವಿಯಾಗಿದೆ".

ಬಿ.ಎ.ಅಬ್ದುಲ್ ನಾಸಿರ್ ಲಕ್ಕಿಸ್ಟಾರ್
ಅಧ್ಯಕ್ಷರು, ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿ

Similar News