ಕೊಪ್ಪ | ರಸ್ತೆ ಅಗಲೀಕರಣಕ್ಕೆ ಸ್ಪಂದಿಸದ ಅಧಿಕಾರಿಗಳು: ಅಧ್ಯಕ್ಷರು ಸೇರಿ ಒಂದೇ ಗ್ರಾ.ಪಂ 10 ಜನ ಸದಸ್ಯರು ರಾಜೀನಾಮೆ

Update: 2023-02-23 14:14 GMT

ಚಿಕ್ಕಮಗಳೂರು, ಫೆ.22: ಗ್ರಾಮ ಪಂಚಾಯತ್ ಸದಸ್ಯರಾಗಿ ಆಯ್ಕೆಯಾಗಿ 2 ವರ್ಷ ಕಳೆದರೂ ಗ್ರಾಪಂ ವ್ಯಾಪ್ತಿಯ ಜ್ವಲಂತ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ ಒಂದೇ ಗ್ರಾಮ ಪಂಚಾಯತ್‍ನ ಅಧ್ಯಕ್ಷ, ಉಪಾಧ್ಯಕ್ಷ ಸೇರಿ 10 ಮಂದಿ ಸದಸ್ಯರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಘಟನೆ ಜಿಲ್ಲೆಯ ಕೊಪ್ಪ ತಾಲೂಕಿನ ಗುಡ್ಡೆತೋಟ ಗ್ರಾಮದಲ್ಲಿ ವರದಿಯಾಗಿದೆ.

ಕೊಪ್ಪ ತಾಲೂಕಿನ ಜಯಪುರ ಹೋಬಳಿಯ ಗುಡ್ಡೇತೋಟ ಗ್ರಾಪಂ ಅಧ್ಯಕ್ಷ ಪ್ರಶಾಂತ್, ಉಪಾಧ್ಯಕ್ಷ ಉದಯ್‍ಕುಮಾರ್ ಹಾಗೂ ಗೀತಾ, ವಾಸು, ರವಿ, ರೇಖಾ, ಸುಂದರ್‍ರಾಜ್, ಸವಿತಾ, ಮಂಜು, ಮೀನಾಕ್ಷಿ ಎಂಬವರೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಗ್ರಾಪಂ ಸದಸ್ಯರಾಗಿದ್ದು, ಗುರುವಾರ ಗ್ರಾಪಂ ಪಿಡಿಒ ಮೂಲಕ ತಾಪಂ ಇಒಗೆ ಸಾಮೂಹಿಕ ರಾಜೀನಾಮೆ ಪತ್ರವನ್ನು ಸಲ್ಲಿಸಿ, ಗ್ರಾಮದ ಅಭಿವೃದ್ಧಿ ಕೆಲಸಗಳಿಗೆ ಅಧಿಕಾರಿಗಳು ಸಹಕಾರ ನೀಡದೇ ನಿರ್ಲಕ್ಷ್ಯವಹಿಸಿದ್ದಾರೆಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತಾವು ಗಡ್ಡೇತೋಟ ಗ್ರಾಪಂ ಸದಸ್ಯರಾಗಿ ಆಯ್ಕೆಯಾಗಿ ಎರಡು ವರ್ಷ ಕಳೆದಿದ್ದು, ಗ್ರಾಮದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಮಾಡಲು ಅನುದಾನ ಹಾಗೂ ಅಧಿಕಾರಿಗಳ ಸಹಕಾರ ಸಿಗುತ್ತಿಲ್ಲ. ಗ್ರಾಮದಲ್ಲಿ ಕಳೆದ ಬಾರಿ ಸಂಭವಿಸಿದ ಅತೀವೃಷ್ಟಿಯಿಂದಾಗಿ 18 ಮನೆಗಳಿಗೆ ಹಾನಿಯಾಗಿದ್ದು, ಈ ಮನೆಗಳನ್ನು ಸ್ಥಳಾಂತರ ಮಾಡಲು ಇಂದಿಗೂ ಸಾಧ್ಯವಾಗಿಲ್ಲ. ಗ್ರಾಮದ ಶಾಂತಿನಗರದಲ್ಲಿ ಹೊಸ ಬಡಾವಣೆ ನಿರ್ಮಾಣಕ್ಕೆ ಜಾಗ ಮಂಜೂರಾತಿ ಆಗಿಲ್ಲ. ಹಲ್ಲಿಗದ್ದೆಯಿಂದ ಹಳ್ಳಕಿ ಸಂಪರ್ಕ ರಸ್ತೆಯ ದುರಸ್ತಿಗೆ ಅನುದಾನ ಸಿಕ್ಕಿಲ್ಲ, ಸಬ್ಬಳ ಕಾಲುರಸ್ತೆ ದುರಸ್ತಿ ಮಾಡಲು ಸಾಧ್ಯವಾಗಿಲ್ಲ. ಗ್ರಾಪಂ ವ್ಯಾಪ್ತಿಯಲ್ಲಿನ ಸ್ಮಶಾನ ಜಾಗ ಸಂಬಂಧ ಸಮಸ್ಯೆಗಳ ಪರಿಹಾರಕ್ಕೆ ಹಲವು ಬಾರಿ ಮನವಿ ಮಾಡಿದರೂ ಅಧಿಕಾರಿಗಳು, ಜನಪ್ರತಿನಿಧಿಗಳು ಸ್ಪಂದಿಸಿಲ್ಲ. ಈ ಕಾರಣಕ್ಕೆ ಬೇಸತ್ತು  10 ಮಂದಿ ಗ್ರಾಪಂ ಸದಸ್ಯರು ಸಾಮೂಹಿಕವಾಗಿ ರಾಜೀನಾಮೆ ನೀಡುತ್ತಿದ್ದೇವೆ ಎಂದು ರಾಜೀನಾಮೆ ಪತ್ರದಲ್ಲಿ ಸದಸ್ಯರು ಉಲ್ಲೇಖಿಸಿದ್ದಾರೆ.

ಗ್ರಾಪಂ ವ್ಯಾಪ್ತಿಯಲ್ಲಿ ಜ್ವಲಂತ ಸಮಸ್ಯೆಗಳಿದ್ದು, ಈ ಸಮಸ್ಯೆಗಳ ಪರಿಹಾರಕ್ಕೆ ಹಲವು ಬಾರಿ ಮನವಿ ಮಾಡಿದರೂ ಅಧಿಕಾರಿಗಳು ಸ್ಪಂದಿಸಿಲ್ಲ. ಎರಡು ವರ್ಷಗಳಾದರೂ ಈ ಸಮಸ್ಯೆಗಳಿಗೆ ಪರಿಹಾರ ಸಿಗದಂತಾಗಿದ್ದು, ತಮ್ಮನ್ನು ಆಯ್ಕೆ ಮಾಡಿರುವ ಮತದಾರರಿಗೆ ಇದರಿಂದಾಗಿ ಪ್ರಾಮಾಣಿಕವಾಗಿ ಸೇವೆ ನೀಡಲು ಸಾಧ್ಯವಾಗುತ್ತಿಲ್ಲ. ಪ್ರಾಮಾಣಿಕವಾಗಿ ಜನರ ಸೇವೆ ಮಾಡುವ ಉದ್ದೇಶ ಹೊಂದಿದ್ದ ತಮಗೆ ಈ ಭ್ರಷ್ಟವ್ಯವಸ್ಥೆಯಿಂದ ಭ್ರಮನಿರಸನವಾಗಿದ್ದು, ಅಧಿಕಾರಿಗಳ ದುರ್ವರ್ತನೆ ಮತ್ತು ಭ್ರಷ್ಟ ವ್ಯವಸ್ಥೆಗೆ ಇದೇ ನಮ್ಮ ಉತ್ತರ ಎಂದು ರಾಜೀನಾಮೆ ಪತ್ರದ ಮೂಲಕ ಅಸಮಾಧಾನ ತೋಡಿಕೊಂಡಿದ್ದಾರೆ.

ಇದನ್ನೂ ಓದಿ: ಬೆಳಗಾವಿ | ಕಮಿಷನ್ ಕಿರುಕುಳಕ್ಕೆ ಬೇಸತ್ತು ಗ್ರಾ.ಪಂ ಸದಸ್ಯೆ ರಾಜೀನಾಮೆ

Similar News