ಮಂಡ್ಯ | ನಾಲೆಯಲ್ಲಿ ತುಂಡು ತುಂಡಾದ ವ್ಯಕ್ತಿಯ ಮೃತದೇಹ ಪತ್ತೆ

ಗುರುತು ಪತ್ತೆಗೆ ಪೊಲೀಸರ ಮನವಿ

Update: 2023-02-23 13:06 GMT

ಮಂಡ್ಯ, ಫೆ.23: ತಾಲೂಕಿನ ಕೆರಗೋಡು ಪೊಲೀಸ್ ಠಾಣೆ ವ್ಯಾಪ್ತಿಯ ವಿಸಿ ನಾಲೆಯಲ್ಲಿ ಸುಮಾರು 35-40 ವಯಸ್ಸಿನ ವ್ಯಕ್ತಿಯ ಕೈಗಳು, ಕಾಲುಗಳು, ತಲೆ ಬುರಡೆ, ಮುಂಡ ಪತ್ತೆಯಾಗಿರುವುದು ಗುರುವಾರ ವರದಿಯಾಗಿದೆ. 

ದುಷ್ಕರ್ಮಿಗಳು ವ್ಯಕ್ತಿಯನ್ನು ಕೊಲೆಮಾಡಿ, ತುಂಡು ತುಂಡಾಗಿ ಕತ್ತರಿಸಿ ನಾಲೆಗೆ ಎಸೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಕೊಲೆಯಾದ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ. ಕೆರಗೋಡು ಪೋಲೀಸರು ತನಿಖೆ ಕೈಗೊಂಡಿದ್ದಾರೆ.

ಹೊಡಾಘಟ್ಟ ಗ್ರಾಮದ ಬಳಿಯ ನಾಲೆಯಲ್ಲಿ ವ್ಯಕ್ತಿಯ ಕಾಲು, ತಲೆ ಬುರಡೆ, ಹೊಟ್ಟೆಯ ಭಾಗ, ಡಣಾಯಕನಪುರ ಗ್ರಾಮದ ಬಳಿಯ ನಾಲೆಯಲ್ಲಿ ಕೈಗಳು ಮತ್ತು ಶಿವಾರ ಗ್ರಾಮದ ಬಳಿ ಕಾಲುಗಳು ಪತ್ತೆಯಾಗಿವೆ.

ಮೃತನ ಎಡ ಕೈ ಮೇಲೆ ‘ಕಾವ್ಯ ರಘು’ ಎಂದು ಮತ್ತು ಬಲಗೈ ಮೇಲೆ ‘ವಂಜಾ/ವಂಜಾಕ್ಷಿ’ಎಂಬ ಅಚ್ಚೆ ಹಾಕಿಸಿರುವ ಗುರುತು ಇದ್ದು, ಯಾವುದಾದರೂ ಇತ್ತೀಚಿಗೆ ಮನುಷ್ಯ ಕಾಣೆಯಾಗಿರುವ ಬಗ್ಗೆ ಹಾಗೂ ಮೃತನ ಬಗ್ಗೆ ಮಾಹಿತಿ ಇದ್ದಲ್ಲಿ 9480804831(ಸಿಪಿಐ), 9480804820(ಡಿವೈಎಸ್ಪಿ), 9480804851(ಪಿಎಸ್ಸೈ) ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಲು ಪೊಲೀಸರು ಮನವಿ ಮಾಡಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಡಿವೈಎಸ್ಪಿ ಓಂಪ್ರಕಾಶ್ ಭೇಟಿ ನೀಡಿ ಪರಿಶೀಲಿಸಿದ್ದು, ಈ ಸಂಬಂಧ ಕೆರಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳೆದ ವರ್ಷ ಜೂನ್ ತಿಂಗಳಲ್ಲಿ ಪಾಂಡವಪುರ ಮತ್ತು ಶ್ರೀರಂಗಪಟ್ಟಣ ತಾಲೂಕು ವ್ಯಾಪ್ತಿಯಲ್ಲೇ ಇಂತಹದ್ದೇ ಪ್ರಕರಣ ಪತ್ತೆಯಾಗಿದ್ದು, ಇಬ್ಬರು ಮಹಿಳೆಯರ ಶವಗಳು ತುಂಡುತುಂಡಾಗಿ ಪತ್ತೆಯಾಗಿದ್ದವು. ಇದುವರೆಗೂ ಪ್ರಕರಣವನ್ನು ಬೇಧಿಸಲು ಸಾಧ್ಯವಾಗಿಲ್ಲ.

Similar News