ಯುವತಿ ಮೇಲೆ ಮೂತ್ರ ವಿಸರ್ಜನೆ ಎನ್ನುವುದು ಸತ್ಯಕ್ಕೆ ದೂರ: ಕೆಎಸ್ಸಾರ್ಟಿಸಿ ಸ್ಪಷ್ಟನೆ

Update: 2023-02-23 14:31 GMT

ಬೆಂಗಳೂರು, ಫೆ.23: ಸರಕಾರಿ ಬಸ್ಸಿನಲ್ಲಿ ಪ್ರಯಾಣಿಕ ಮೂತ್ರ ವಿಸರ್ಜನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಯು ಮಹಿಳಾ ಪ್ರಯಾಣಿಕರ ಮೇಲೆ ಮೂತ್ರ ವಿಸರ್ಜನೆ ಮಾಡಿರುವುದಿಲ್ಲ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಗುರುವಾರ ಸ್ಪಷ್ಟನೆ ನೀಡಿದೆ.

ಫೆ.21ರಂದು ವಿಜಯಪುರದಿಂದ ಮಂಗಳೂರಿಗೆ ತೆರಳುತ್ತಿದ್ದ ನಾನ್ ಎಸಿ ಸ್ಲೀಪರ್ ಬಸ್‍ನಲ್ಲಿ ಈ ಘಟನೆ ನಡೆದಿತ್ತು. ಮೆಕ್ಯಾನಿಕಲ್ ಇಂಜಿನಿಯರ್ ಆಗಿರುವ 32 ವರ್ಷದ ವ್ಯಕ್ತಿಯೊಬ್ಬರು ಕುಡಿದ ಮತ್ತಿನಲ್ಲಿ ಕೃತ್ಯ ಎಸಗಿದ್ದರು. ಬಸ್‍ನಲ್ಲಿ ಮೂತ್ರವಿಸರ್ಜನೆ ಮಾಡಿದ ಪ್ರಯಾಣಿಕನ ಬಗ್ಗೆ ಮಾಹಿತಿ ಪಡೆಯಲು ಚಾಲಕ ಮತ್ತು ಕಂಡಕ್ಟರ್ ಪ್ರಯತ್ನಿಸಿದ್ದಾರೆ. ಆದರೆ, ಆರೋಪಿ ಕ್ಷಮೆಯಾಚಿಸಿದ್ದು, ತನ್ನ ವೈಯಕ್ತಿಕ ವಿವರಗಳನ್ನು ಬಹಿರಂಗಪಡಿಸಿಲ್ಲ. ಮಹಿಳಾ ಪ್ರಯಾಣಿಕರು ದೂರು ದಾಖಲಿಸಲು ನಿರಾಕರಿಸಿದ್ದರಿಂದ ಬಸ್ ನಿಗದಿತ ಪ್ರಯಾಣ ಮುಂದುವರಿಸಿದೆ ಎಂದು ತಿಳಿಸಿದೆ.

ಘಟನೆ ಕುರಿತು ಕೆಎಸ್ಸಾರ್ಟಿಸಿ ಸ್ಪಷ್ಟನೆ ನೀಡಿದ್ದು, ದೂರು ಸ್ವೀಕರಿಸಿದ ಬಳಿಕ ಮಂಗಳೂರು ಡಿಪೋ 2, ಬಸ್ ನಂ. ಕೆಎ 19 ಎಫ್ 3554 ಚಾಲಕ ಸಂತೋಷ ಮಠಪತಿ ಹಾಗೂ ವಿಜಯಪುರ-ಮಂಗಳೂರು ಬಸ್‍ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕಂಡಕ್ಟರ್ ಉಮೇಶ್ ಕರಡಿ ಅವರ ಹೇಳಿಕೆಗಳನ್ನು ಪಡೆಯಲಾಗಿದೆ. ಈ ಮಾರ್ಗದಲ್ಲಿ ಸಂಚರಿಸುತ್ತಿದ್ದ ಬಸ್ಸಿನಲ್ಲಿ ಆಸನ ಸಂಖ್ಯೆ 3 ಮತ್ತು ಆಸನ ಸಂಖ್ಯೆ 29 ರಲ್ಲಿ ಕಾಯ್ದಿರಿಸದ ಪ್ರಯಾಣಿಕರಿದ್ದರು ಎಂದು ಕಂಡುಬಂದಿದೆ ಎಂದು ಹೇಳಿದೆ.

ಬಸ್ಸಿನ ಸಿಬ್ಬಂದಿ ಕಿರೇಸೂರು ಹೋಟೆಲ್‍ನಲ್ಲಿ ರಾತ್ರಿ 10.30ಕ್ಕೆ ನಿಗದಿತ ಉಪಹಾರ ಮತ್ತು ಪ್ರಕೃತಿ ಕರೆಗೆ ವಿರಾಮ ನೀಡಿದರು ಮತ್ತು 15-20 ನಿಮಿಷಗಳ ವಿರಾಮದ ಬಗ್ಗೆ ಪ್ರಯಾಣಿಕರಿಗೆ ತಿಳಿಸಿದರು. ಬಿಡುವಿನ ವೇಳೆಯಲ್ಲಿ ಆಸನ ಸಂಖ್ಯೆ 29 ರಲ್ಲಿ ಪ್ರಯಾಣಿಸುತ್ತಿದ್ದ ಕಾಯ್ದಿರಿಸದ ಪ್ರಯಾಣಿಕರೊಬ್ಬರು ಕುಡಿದ ಮತ್ತಿನಲ್ಲಿ ಬಸ್‍ನಿಂದ ಹೊರಬರುವ ಬದಲು ಆಸನ ಸಂಖ್ಯೆ 3 ರ ಬಳಿ ಹೋಗಿ ಮೂತ್ರ ವಿಸರ್ಜನೆ ಮಾಡುತ್ತಿರುವುದು ಕಂಡುಬಂದಿದೆ.

ವಿರಾಮದಿಂದ ಬಸ್ ಹತ್ತುವ ಮಹಿಳಾ ಪ್ರಯಾಣಿಕರು, ತಮ್ಮ ಸೀಟಿನಲ್ಲಿ ಆತ ಮೂತ್ರ ವಿಸರ್ಜಿಸುತ್ತಿರುವುದನ್ನು ನೋಡಿದ್ದಾರೆ. ಬಳಿಕ ಚಾಲಕ, ಕಂಡಕ್ಟರ್ ಮತ್ತು ಇತರ ಪ್ರಯಾಣಿಕರು ಮದ್ಯದ ಅಮಲಿನಲ್ಲಿದ್ದ ಪ್ರಯಾಣಿಕನನ್ನು ಬಸ್‍ನಿಂದ ಇಳಿಸಿ ಹೋಟೆಲ್ ಬಳಿಯೆ ಬಿಟ್ಟರು. ಆಸನ ಸಂಖ್ಯೆ 3 ಅನ್ನು ಡ್ರೈವರ್ ಮತ್ತು ಕಂಡಕ್ಟರ್ ನೀರಿನಿಂದ ತೊಳೆದು ಬಟ್ಟೆಯಿಂದ ಒರೆಸಿದರು ಮತ್ತು ಮಹಿಳಾ ಪ್ರಯಾಣಿಕರಿಗೆ ಆಸನ ಸಂಖ್ಯೆ 9 ರಲ್ಲಿ ಪ್ರಯಾಣಿಸಲು ಅವಕಾಶ ನೀಡಲಾಯಿತು ಎಂದಿರುವ ಕೆಎಸ್ಸಾರ್ಟಿಸಿ , ಬಸ್ಸಿನಲ್ಲಿದ್ದ ಪ್ರಯಾಣಿಕರೊಬ್ಬರು ಯುವತಿ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾರೆ ಎಂಬ ಆರೋಪ ಸರಿಯಲ್ಲ ಎಂದು ಸ್ಪಷ್ಟಪಡಿಸಿದೆ.

Similar News