ಚಿಕ್ಕಮಗಳೂರು | ವಿವಿಧ ಅಂಗಡಿಗಳ ಮೇಲೆ ದಾಳಿ: ಪರವಾನಿಗೆ ರಹಿತ ಬಂದೂಕುಗಳ ದುರಸ್ತಿ ಮಾಡುತ್ತಿದ್ದ ಮೂವರು ವಶಕ್ಕೆ

47 ಬಂದೂಕು, 2 ರಿವಾಲ್ವರ್, 22 ರೈಫಲ್ ಗುಂಡುಗಳನ್ನು ವಶಕ್ಕೆ ಪಡೆದ ಪೊಲೀಸರು

Update: 2023-02-23 13:43 GMT

ಚಿಕ್ಕಮಗಳೂರು, ಫೆ.23: ಪರವಾನಿಗೆ ರಹಿತ ಬಂದೂಕುಗಳನ್ನು ದುರಸ್ತಿ ಮಾಡಿಕೊಡುತ್ತಿದ್ದ ಆರೋಪದ ಮೇರೆಗೆ ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ವಿವಿಧ ಅಂಗಡಿಗಳ ಮೇಲೆ ದಾಳಿ ನಡೆಸಿರುವ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ ಪರವಾನಿಗೆ ಇಲ್ಲದ 47 ಬಂದೂಕು, 2 ರಿವಾಲ್ವರ್ ಸೇರಿದಂತೆ ಬಂದೂಕಿನ ನಳಿಕೆ, ಗುಂಡುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ತನಿಖೆ ವೇಳೆ ಪರವಾನಿಗೆ ಇಲ್ಲದೇ ಅಕ್ರಮವಾಗಿ ಬಂದೂಕು ಹೊಂದಿದ್ದ ಆರೋಪದ ಮೇರೆಗೆ ಮೂವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಕಳೆದ ಮಂಗಳವಾರ ಹಾಗೂ ಬುಧವಾರ ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಠಾಣೆ ಹಾಗೂ ಮೂಡಿಗೆರೆ ತಾಲೂಕಿನ ಬಾಳೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಮೂವರು ವ್ಯಕ್ತಿಗಳು ನಡೆಸುತ್ತಿದ್ದ ಬಂದೂಕು ದುರಸ್ತಿ ಅಂಗಡಿಗಳ ಮೇಲೆ ದಾಳಿ ನಡೆಸಿರುವ ಪೊಲೀಸರು ಕೊಪ್ಪ ತಾಲೂಕಿನ ನೇತ್ರಕೊಂಡ ಎಸ್ಟೇಟ್ ನಿವಾಸಿ ಸದಾಶಿವಾಚಾರಿ, ಮೂಡಿಗೆರೆ ತಾಲೂಕಿನ ಕೆಳಗೂರು ನಿವಾಸಿ ಸುಧಾಕರ್ ಆಚಾರ್ ಹಾಗೂ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಪಟ್ಟಣದ ರಂಭಾಪುರಿ ಮಠ ರಸ್ತೆಯ ನಿವಾಸಿ ರಾಮಚಂದ್ರಾಚಾರಿ ಎಂಬವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಬಂಧಿತ ಮೂವರು ಆರೋಪಿಗಳಿಂದ ಪರವಾನಿಗೆ ಇಲ್ಲದ 47 ಬಂದೂಕು, 2 ರಿವಾಲ್ವರ್, 24 ಬಂದೂಕಿನ ನಳಿಕೆ, 22 ರೈಫಲ್ ಗುಂಡುಗಳು, 40 ಬಕ್‍ಶಾಟ್ ಗುಂಡುಗಳು, 15 ಕಾಟ್ರಿಡ್ಜ್‍ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಘಟನೆ ಸಂಬಂಧ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ 2 ಹಾಗೂ ಬಾಳೂರು ಪೊಲೀಸ್ ಠಾಣೆಯಲ್ಲಿ 1 ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಈ ಪ್ರಕರಣದಲ್ಲಿ ಬಂಧಿತ ಆರೋಪಿ ಸದಾಶಿವಾಚಾರಿ ಎಂಬಾತ ನೀಡಿದ ಮಾಹಿತಿ ಮೇರೆಗೆ ಪೊಲೀಸರು ಪರವಾನಿಗೆ ಇಲ್ಲದೇ ಅಕ್ರಮವಾಗಿ ಬಂದೂಕು ಹೊಂದಿದ್ದ ಕಳಸ ತಾಲೂಕಿನ ಸಂಪಿಗೆಗದ್ದೆ ನಿವಾಸಿ ಸುಂದರ ಹಾಗೂ ಸಂಪಿಗೆ ಮನೆ ನಿವಾಸಿ ಗಂಗಾಧರ ಶೆಟ್ಟಿ ಹಾಗೂ ಎನ್.ಆರ್.ಪುರ ತಾಲೂಕಿನ ಹಕ್ಕಲುಮನೆ ನಿವಾಸಿ ಶಿವರಾಜ್ ಎಂಬ ಮೂವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು 3 ಅಕ್ರಮ ಬಂದೂಕನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಪೊಲೀಸ್ ಇಲಾಖೆಯ ಪ್ರಕಟನೆಯಲ್ಲಿ ತಿಳಿಸಲಾಗಿದೆ.

ಅಕ್ರಮ ಬಂದೂಕು ಪ್ರಕರಣ ಸಂಬಂಧ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ 2 ಪ್ರಕರಣಗಳು ದಾಖಲಾಗಿದ್ದು, ಪರವಾನಿಗೆ ಇಲ್ಲದ 17 ಹಾಗೂ ಪರವಾನಿಗೆ ಇರುವ 2 ಬಂದೂಕುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಾಳೂರು ಪೊಲೀಸ್ ಠಾಣೆಯಲ್ಲಿ 1 ಪ್ರಕರಣ ದಾಖಲಾಗಿದ್ದು, ಪರವಾನಿಗೆ ಇಲ್ಲದ 21 ಹಾಗೂ ಪರವಾನಿಗೆ ಇರುವ 8 ಹಾಗೂ ಪರವಾನಿಗೆ ಇಲ್ಲದ 2 ರಿವಾಲ್ವರ್‍ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಳಸ ಠಾಣೆಯಲ್ಲಿ 2 ಪ್ರಕರಣಗಳಿಗೆ ಸಂಬಂಧಿಸಿದಂತೆ ಪರವಾನಿಗೆ ಇಲ್ಲದ 2 ಬಂದೂಕನ್ನು ವಶಕ್ಕೆ ಪಡೆಯಲಾಗಿದೆ. ಎನ್.ಆರ್.ಪುರ ಠಾಣೆಯ 1 ಪ್ರಕರಣ ಸಂಬಂಧ ಪೊಲೀಸರುಪರವಾನಿಗೆ ಇಲ್ಲದ 1 ಬಂದೂಕನ್ನು ವಶಕ್ಕೆ ಪಡೆದಿದ್ದಾರೆ. 

ಜಿಲ್ಲೆಯ ಬಾಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಬಿದರೆ ಗ್ರಾಮದಲ್ಲಿ ಮಾನಸಿಕ ಅಸ್ವಸ್ಥ ಎನ್ನಲಾದ ವ್ಯಕ್ತಿಯೊಬ್ಬ ಪರವಾನಿಗೆ ಇಲ್ಲದ ಬಂದೂಕಿನಿಂದ ಗುಂಡು ಹಾರಿಸಿದ್ದ ವೇಳೆ ಬೈಕ್‍ನಲ್ಲಿ ಹೋಗುತ್ತಿದ್ದ ಮೂವರು ಸವಾರರ ಪೈಕಿ ಇಬ್ಬರು ಸವಾರರಿಗೆ ಗುಂಡು ತಗುಲಿ ಮೃತಪಟ್ಟ ಘಟನೆ ಇತ್ತೀಚಿಗೆ ನಡೆದಿತ್ತು. ಜಿಲ್ಲೆಯಲ್ಲಿ ಅಕ್ರಮವಾಗಿ ಬಂದೂಕು ಮಾರಾಟ ಮಾಡುವವರ ಜಾಲ ಇದೆ ಎನ್ನುವ ಆರೋಪ ಹಿಂದಿನಿಂದಲೂ ಕೇಳಿ ಬಂದಿದ್ದು, ಬಿದರೆ ಗ್ರಾಮದಲ್ಲಿ ನಡೆದ ಘಟನೆ ಬೆನ್ನಲ್ಲೇ ಪೊಲೀಸ್ ಇಲಾಖೆ ಪರವಾನಿಗೆ ಇಲ್ಲದೇ ಅಕ್ರಮವಾಗಿ ಬಂದೂಕು ಹೊಂದಿರುವವರ ಬೆನ್ನು ಬಿದ್ದಿದ್ದು, ತನಿಖೆ ಮುಂದುವರಿದಿರುವುದರಿಂದ ಜಿಲ್ಲಾದ್ಯಂತ ಅಕ್ರಮವಾಗಿ ಬಂದೂಕು ಹೊಂದಿರುವವರು, ಮಾರಾಟ ಮಾಡುವವರಲ್ಲಿ ನಡುಕ ಹುಟ್ಟಿದೆ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ.

Similar News