×
Ad

ಆಪ್ತನ ಬಂಧನ: ಬೆಂಬಲಿಗರ ಜತೆಗೂಡಿ ಪೊಲೀಸರೊಂದಿಗೆ ಸಂಘರ್ಷಕ್ಕಿಳಿದ ಸ್ವಘೋಷಿತ ಧಾರ್ಮಿಕ ಮುಖಂಡ

ಠಾಣೆಗೆ ದಾಳಿ ನಡೆಸಿದ ಬೆನ್ನಲ್ಲೇ ಆರೋಪಿಯನ್ನು ಬಿಡುಗಡೆಗೊಳಿಸಲಾಗುವುದೆಂದ ಪೊಲೀಸರು

Update: 2023-02-23 20:01 IST

ಚಂಡೀಗಢ: ಪಂಜಾಬ್‌ನ ಸ್ವಯಂ-ಘೋಷಿತ ಧಾರ್ಮಿಕ ಮುಖಂಡನ ಸಹಾಯಕನನ್ನು ಬಂಧಿಸಿರುವುದನ್ನು ಖಂಡಿಸಿ ನೂರಾರು ಬೆಂಬಲಿಗರು ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ,  ಪೊಲೀಸರೊಂದಿಗೆ ಸಂಘರ್ಷಕ್ಕಿಳಿದ ಬೆನ್ನಲ್ಲೇ, ಆತನನ್ನು ಬಂಧನದಿಂದ ಬಿಡುಗಡೆ ಮಾಡಲಾಗುವುದು ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ. 

"ಅವರು (ಲವ್‌ಪ್ರೀತ್ ತೂಫಾನ್) ನಿರಪರಾಧಿ ಎಂಬುದಕ್ಕೆ ಸಾಕಷ್ಟು ಪುರಾವೆಗಳನ್ನು ನೀಡಿದ್ದಾರೆ. ಎಸ್‌ಐಟಿ (ವಿಶೇಷ ತನಿಖಾ ತಂಡ) ಇದನ್ನು ಗಮನಿಸಿದೆ. ಪ್ರತಿಭಟನಾನಿರತ ಜನರು ಇನ್ನು ಶಾಂತಿಯುತವಾಗಿ ಚದುರಿ ಹೋಗಲಿದ್ದಾರೆ." ಎಂದು ಅಮೃತಸರ ಪೊಲೀಸ್ ಕಮಿಷನರ್ ಜಸ್ಕರನ್ ಸಿಂಗ್ ಸುದ್ದಿಗೆ ತಿಳಿಸಿದ್ದಾರೆ.  

'ವಾರಿಸ್ ಪಂಜಾಬ್ ದೇ' ಎಂಬ ಸಂಘಟನೆಯ ಮುಖ್ಯಸ್ಥ ಅಮೃತಪಾಲ್ ಸಿಂಗ್, ಬಂದೂಕುಗಳು ಮತ್ತು ಕತ್ತಿಗಳೊಂದಿಗೆ ನೂರಾರು ಬೆಂಬಲಿಗರೊಂದಿಗೆ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ ಬೆನ್ನಲ್ಲೇ ಅವರ ಸಹವರ್ತಿ ಲವ್‌ಪ್ರೀತ್ ತೂಫಾನ್ ಸಿಂಗ್ ರನ್ನು ಬಿಡುಗಡೆಗೊಳಿಸುವುದಾಗಿ ಪ್ರಕಟಣೆ ಹೊರಬಿದ್ದಿದೆ.

ವ್ಯಕ್ತಿಯೊಬ್ಬನನ್ನು ಅಪಹರಿಸಿ ಥಳಿಸಿದ ಆರೋಪದ ಮೇಲೆ ಪೊಲೀಸರು ತೂಫಾನ್ ಸಿಂಗ್ ನನ್ನು ಬಂಧಿಸಿದ್ದರು. 

“ಕೇವಲ ರಾಜಕೀಯ ಉದ್ದೇಶದಿಂದ ಎಫ್‌ಐಆರ್ ದಾಖಲಿಸಲಾಗಿದೆ, ಒಂದು ಗಂಟೆಯಲ್ಲಿ ಪ್ರಕರಣವನ್ನು ರದ್ದುಗೊಳಿಸದಿದ್ದರೆ, ಮುಂದೆ ನಡೆಯುವ ಅನಾಹುತಕ್ಕೆ ಆಡಳಿತವೇ ಹೊಣೆಯಾಗಲಿದೆ.." ಎಂದು ಅಮೃತಪಾಲ್ ಸಿಂಗ್ ಎಚ್ಚರಿಸಿದ್ದರು.

Similar News