ವೈದ್ಯರೇ ಇಲ್ಲ ಎಂದರೆ ಹೇಗೆ?: ಹಳ್ಳಿಯತ್ತ ವೈದ್ಯರನ್ನು ನಿಯೋಜಿಸಲು ಶಾಸಕರ ಒತ್ತಾಯ
ಬೆಂಗಳೂರು, ಫೆ.23: ಹಳ್ಳಿಗಳ ಕಡೆಗೆ ವೈದ್ಯರನ್ನು ನಿಯೋಜನೆ ಮಾಡಬೇಕು. ಯಾವುದೇ ಕಾರಣಕ್ಕೂ ಗ್ರಾಮೀಣ ಪ್ರದೇಶದಲ್ಲಿ ವೈದ್ಯರು ಆಸ್ಪತ್ರೆಗಳಲ್ಲಿ ಇಲ್ಲದಂತೆ ಆಗಬಾರದು ಎಂದು ಸರಕಾರಕ್ಕೆ ಸದಸ್ಯರು ಒತ್ತಾಯ ಮಾಡಿದರು.
ಗುರುವಾರ ವಿಧಾನಸಭೆಯಲ್ಲಿ ಪ್ರಶ್ನೋತ್ತರ ಅವಧಿ ವೇಳೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಪ್ರಸ್ತಾ ಪಿಸಿದ ಉತ್ತರಕ್ಕೆ ಆಕ್ಷೇಪಿಸಿದ ಕಾಂಗ್ರೆಸ್ ಸದಸ್ಯರು, ಇಂಡಿ ಪಟ್ಟಣದಲ್ಲಿ ಪ್ರಸೂತಿ ವೈದ್ಯರ ಕೊರತೆ ಬಗ್ಗೆ ಉಲ್ಲೇಖಿಸಿದರು. ಈ ವೇಳೆ ಕಾಂಗ್ರೆಸ್‍ನ ಪ್ರಿಯಾಂಕ ಖರ್ಗೆ, ವೈದ್ಯರೇ ಇಲ್ಲ ಎಂದರೆ ಹೇಗೆ, ನೀವು ವೈದ್ಯರನ್ನು ನಿಯೋಜಿಸಬೇಕು ಎಂದರು.
ಆಗ ಸಚಿವರು, ಹಳ್ಳಿಗಳಲ್ಲಿ ಸೇವೆ ಸಲ್ಲಿಸಲು ವೈದ್ಯರು ಹೋಗುತ್ತಿಲ್ಲ. ಇದರಿಂದ ಹಳ್ಳಿಗಳಲ್ಲಿ ವೈದ್ಯರ ಕೊರತೆ ಆಗುತ್ತಿದೆ ಎಂದರು. ಇದಕ್ಕೆ ವಿಧಾನಸಭಾಧ್ಯಕ್ಷ ಕಾಗೇರಿ ಅವರು ಮಧ್ಯೆಪ್ರವೇಶಿಸಿ, ಇದೊಂದು ಗಂಭೀರ ವಿಚಾರ ವೈದ್ಯರ ಕತೆಯೇ ಬೇರೆ ಇದೆ. ಯಾರೋ ಒಬ್ಬ ವೈದ್ಯರು ಬಂದರೆ ಸಾಕು ಎಂಬ ನಮ್ಮ ಪರಿಸ್ಥಿತಿ ನಮ್ಮದಾಗಿದೆ. ವೈದ್ಯರಿಗೆ ಸಮಾಜದಲ್ಲಿ ವಿಶೇಷ ಸ್ಥಾನಮಾನ ಇದೆ ಎಂದರು. ಇದಕ್ಕೆ ಹಲವು ಸದಸ್ಯರು ದನಿಗೂಡಿಸಿ ಸರ್ಕಾರ ಹಳ್ಳಿಗಾಡಿನಲ್ಲಿ ವೈದ್ಯರ ಸೇವೆಗೆ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಪಕ್ಷಭೇದ ಮರೆತು ಒತ್ತಾಯಿಸಿದರು.
ಆಗ ಮಾತನಾಡಿದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ರಾಜ್ಯದ ಶೇ.95ರಷ್ಟು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರ ನೇಮಕಾತಿ ಮಾಡಿದ್ದೇವೆ. 1480 ವೈದ್ಯರನ್ನು ನೇಮಕ ಮಾಡಿಕೊಂಡಿದ್ದೇವೆ. ಉಳಿದ ಶೇ. 5 ರಷ್ಟು ಕಡೆ ಆಯುಷ್ ವೈದ್ಯರನ್ನು ನೇಮಕ ಮಾಡಿದ್ದೇವೆ ಎಂದು ಹೇಳಿದರು.