ಸಂಪುಟ ದರ್ಜೆಯ ರಾಜಕೀಯ ಕಾರ್ಯದರ್ಶಿ ಹುದ್ದೆ ಸೃಷ್ಟಿ: ಹೈಕೋರ್ಟ್ ನೋಟಿಸ್
ಬೆಂಗಳೂರು, ಫೆ.23: ರಾಜ್ಯದಲ್ಲಿ ಸಂಪುಟ ದರ್ಜೆಯ ಸ್ಥಾನಮಾನಗಳನ್ನು ನೀಡಿ, ರಾಜಕೀಯ ಕಾರ್ಯದರ್ಶಿ ಮತ್ತು ಮುಖ್ಯಮಂತ್ರಿಗಳ ಸಲಹೆಗಾರರ ಹುದ್ದೆ ಸೃಷ್ಟಿ ಮಾಡಿರುವ ಕ್ರಮವನ್ನೂ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ಸಂಬಂಧ ರಾಜ್ಯ ಸರಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.
ಸಂಪುಟ ದರ್ಜೆಯ ಸ್ಥಾನ ನೀಡಿ ನೇಮಕ ಮಾಡಿರುವುದು ಸಂವಿಧಾನದ 164(1)(ಎ) ಉಲ್ಲಂಘನೆ ಎಂದು ಆರೋಪಿಸಿ ಸಮಾಜ ಪರಿವರ್ತನಾ ಸಮುದಾಯ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ಈ ಆದೇಶ ನೀಡಿದೆ. ಅಲ್ಲದೆ, ಎಲ್ಲ ಪ್ರತಿವಾದಿಗಳಿಗೂ ನೋಟಿಸ್ ಜಾರಿ ಮಾಡಿ ಆಕ್ಷೇಪಣೆ ಸಲ್ಲಿಸಲು ಸೂಚನೆ ನೀಡಿ ಆದೇಶಿಸಿದೆ.
ಅರ್ಜಿದಾರರು, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ಮಾಜಿ ಶಾಸಕ ಡಿ.ಎನ್.ಜೀವರಾಜ್ ಅವರನ್ನು ಸಿಎಂ ರಾಜಕೀಯ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿರುವುದು. ಬೇಳೂರು ಸುದರ್ಶನ್‍ರನ್ನು ಇ-ಕಾಮರ್ಸ್ ವಿಭಾಗದ ಸಲಹೆಗಾರರನ್ನಾಗಿ ನೇಮಕ ಮಾಡಿರುವುದನ್ನು ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ.
ಸಂವಿಧಾನದ ಪ್ರಕಾರ ಶಾಸನ ಸಭೆಯ ಸದಸ್ಯರ ಸಂಖ್ಯೆಯಲ್ಲಿ ಸಂಪುಟ ದರ್ಜೆ ಸಚಿವರ ಸಂಖ್ಯೆ ಶೇ.15ಕ್ಕಿಂತ ಹೆಚ್ಚಿಗೆ ಇರುವಂತಿಲ್ಲ. ಅದರ ಪ್ರಕಾರ 34 ಜನರಿಗೆ ಮಾತ್ರ ಸಚಿವ ಸ್ಥಾನ ನೀಡಬಹುದು. ಸಲಹೆಗಾರರನ್ನು ನೇಮಿಸಿಕೊಂಡು ಅವರಿಗೆ ಸಂಪುಟ ದರ್ಜೆಯ ಸ್ಥಾನಮಾನ ನೀಡುವ ಮೂಲಕ ಸಂವಿಧಾನ ಉಲ್ಲಂಘಿಸಲಾಗಿದೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ.