ಜೆಡಿಎಸ್ ಸಭಾತ್ಯಾಗದ ನಡುವೆ BMS ಖಾಸಗಿ ವಿವಿ ವಿಧೇಯಕ ಅಂಗೀಕಾರ
Update: 2023-02-23 23:10 IST
ಬೆಂಗಳೂರು, ಫೆ.23: ಬಿಎಂಎಸ್ ಶಿಕ್ಷಣ ಸಂಸ್ಥೆಗೆ ಸಂಬಂಧಿಸಿದಂತೆ ಸಾಕಷ್ಟು ವಿವಾದಗಳು ಇದ್ದು, ಈ ಸಂಬಂಧ ನ್ಯಾಯಾಲಯದಲ್ಲಿ ಪ್ರಕರಣಗಳು ದಾಖಲಾಗಿವೆ. ಈ ಹಂತದಲ್ಲಿ ಬಿಎಂಎಸ್ ಶಿಕ್ಷಣ ಸಂಸ್ಥೆಗೆ ವಿಶ್ವವಿದ್ಯಾಲಯದ ಸ್ಥಾನಮಾನ ನೀಡುವ ವಿಧೇಯಕ ಜಾರಿಗೆ ತರುವುದು ಸರಿಯಲ್ಲ ಎಂದು ವಿರೋಧಿಸಿ ಜೆಡಿಎಸ್ ಸದಸ್ಯರು ವಿಧಾನಸಭೆಯಲ್ಲಿ ಸಭಾತ್ಯಾಗ ಮಾಡಿದರು.
ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ 2022ನೆ ಸಾಲಿನ ಬಿಎಂಎಸ್ ವಿಶ್ವವಿದ್ಯಾಲಯ ವಿಧೇಯಕ ಮಂಡಿಸುತ್ತಿದ್ದಂತೆ ಜೆಡಿಎಸ್ ಸದಸ್ಯರು ಇದಕ್ಕೆ ವಿರೋಧ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಸದನದಲ್ಲಿ ಗದ್ದಲದ ವಾತಾವರಣ ಏರ್ಪಟ್ಟಿತ್ತು. ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಮಧ್ಯಪ್ರವೇಶಿಸಿ, ಬಿಎಂಎಸ್ ಶಿಕ್ಷಣ ಸಂಸ್ಥೆಯ ವಿವಾದಕ್ಕೂ ಈ ವಿಧೇಯಕಕ್ಕೂ ಸಂಬಂಧವಿಲ್ಲ. ಇದು ವಿಶ್ವವಿದ್ಯಾಲಯದ ಮಾನ್ಯತೆ ನೀಡಲು ತರುತ್ತಿರುವ ವಿಧೇಯಕ ಎಂದು ಸಮರ್ಥಿಸಿಕೊಂಡರು.