ಶುದ್ಧ ವಾಯು ಕಾರ್ಯಕ್ರಮಕ್ಕೆ ಮಿಶ್ರ ಪ್ರತಿಫಲ

Update: 2023-02-23 18:43 GMT

ವಾಯುಮಾಲಿನ್ಯವು ಸ್ಥಿರ ಮೂಲ(ವಿದ್ಯುತ್ ಉತ್ಪಾದನೆ ಸ್ಥಾವರಗಳು, ತೈಲ ಶುದ್ಧೀಕರಣಾಗಾರಗಳು, ಕೈಗಾರಿಕೆಗಳು), ಚಲಿಸುವ ಮೂಲಗಳು(ವಾಹನಗಳು, ರೈಲು ಇತ್ಯಾದಿ) ಅಲ್ಲದೆ ಮನೆಯಲ್ಲಿಯೂ ಸೃಷ್ಟಿಯಾಗುತ್ತದೆ. ದೇಶದಲ್ಲಿ 2019ರಲ್ಲಿ 16.6 ಲಕ್ಷ ಮಂದಿ ವಾಯುಮಾಲಿನ್ಯದಿಂದ ಅಕಾಲಿಕ ಮರಣ ಹೊಂದಿದ್ದಾರೆ. ಹೆಚ್ಚಿನ ಸಾವಿಗೆ ಪಿಎಂ 2.5 ಕಾರಣ ಎಂದು ಲ್ಯಾನ್ಸೆಟ್ ಕಮಿಷನ್ ಆನ್ ಪೊಲ್ಯೂಷನ್ ಆ್ಯಂಡ್ ಹೆಲ್ತ್ ಹೇಳಿದೆ. ಜಾಗತಿಕವಾಗಿ, ವಾಯುಮಾಲಿನ್ಯದಿಂದ ವಾರ್ಷಿಕ 66.7 ಲಕ್ಷ ಮಂದಿ ಅಕಾಲಿಕ ಮರಣಕ್ಕೆ ತುತ್ತಾಗುತ್ತಾರೆ. ಕೋಟ್ಯಂತರ ಮಂದಿ ಇಂದಿಗೂ ಸೀಮೆಎಣ್ಣೆ ಸ್ಟವ್, ಜೈವಿಕ ಉರುವಲು, ಬೆರಣಿ ಮತ್ತಿತರ ವಸ್ತುಗಳು ಹಾಗೂ ಕಲ್ಲಿದ್ದಲು ಬಳಸುತ್ತಾರೆ. ವಾತಾಯನ ವ್ಯವಸ್ಥೆ ಸಮರ್ಪಕವಾಗಿ ಇಲ್ಲದೆ ಇರುವುದರಿಂದ, ಅಡುಗೆ ಕೋಣೆಗಳು ಮೃತ್ಯುಕೂಪವಾಗಿಬಿಟ್ಟಿವೆ.



ಬೆಂಗಳೂರಿನಲ್ಲಿ ಮರಗಳು ಎಲೆ ಉದುರಿಸುತ್ತಿದ್ದು, ಬರಲಿರುವ ಬೇಸಿಗೆಗೆ ಸಿದ್ಧಗೊಳ್ಳುತ್ತಿವೆ. ಟಬೂಬಿಯಾ ರೋಸಿಯಾ ಮರಗಳು ಹೂ ಬಿಟ್ಟು ಕಂಗೊಳಿಸುತ್ತಿವೆ. ಫೆಬ್ರವರಿಯಲ್ಲೇ ಬೇಸಿಗೆ ಚುರುಗುಟ್ಟಿಸುತ್ತಿದೆ. ಎಲೆಗಳನ್ನು ಮರಗಳ ಬುಡದಲ್ಲೇ ಸುಡುವುದನ್ನೂ ಕಾಣಬಹುದು. ನಗರದಲ್ಲಿ ಗುಬ್ಬಚ್ಚಿಗಳು ಬಹುತೇಕ ಕಣ್ಮರೆಯಾಗಿವೆ. ಎಳೆಯ ಮಕ್ಕಳಲ್ಲಿ ಉಸಿರಾಟದ ಸಮಸ್ಯೆಗಳು ಅಧಿಕಗೊಂಡಿವೆ. ರಸ್ತೆಗಳ ಗುಂಡಿಗಳು ವಾಹನ ಚಾಲಕರ ಬೆನ್ನು ಮೂಳೆ ಮುರಿಯುತ್ತಿವೆ. ಎಲೆಗಳನ್ನು ಗುಡಿಸಿ ಹೈರಾಣಾಗುತ್ತಿರುವ ಪೌರ ಕಾರ್ಮಿಕರದ್ದು ಬೇರೆಯದೇ ಕಥೆ-ವ್ಯಥೆ. ಇವೆಲ್ಲವೂ ಜಗತ್ತನ್ನು ಕಾಡುತ್ತಿರುವ ಮಾಲಿನ್ಯವೆಂಬ ಗಂಭೀರ ಸಮಸ್ಯೆಯೊಂದಿಗೆ ತಳಕು ಹಾಕಿಕೊಂಡಿವೆ.

ಮಾಲಿನ್ಯ ನಾಗರಿಕತೆಯನ್ನು ಕಾಡುತ್ತಿರುವ ಅತಿ ದೊಡ್ಡ ಸಮಸ್ಯೆ; ಕೈಗಾರಿಕೀಕರಣ ಹಾಗೂ ನಗರೀಕರಣದ ಕೊಡುಗೆ. ದೇಶದ ನಗರಗಳು ಪರಿಸರ ಮಾಲಿನ್ಯದಿಂದ ನರಕಸದೃಶವಾಗುತ್ತಿವೆ. ಅಕ್ಟೋಬರ್ ಬಂತೆಂದರೆ ಸಾಕು, ಸುಟ್ಟ ಕೂಳೆಯ ಕಣಗಳು ಹಿಮದೊಟ್ಟಿಗೆ ಸೇರಿಕೊಂಡು ದಿಲ್ಲಿಯನ್ನು ಆವರಿಸಿಬಿಡುತ್ತವೆ. ಕಾಮಗಾರಿಗಳು ಸ್ಥಗಿತಗೊಳ್ಳುತ್ತವೆ; ಶಾಲೆಗಳು ಬಂದ್ ಆಗುತ್ತವೆ. ಬೆಂಗಳೂರಿನ ರಸ್ತೆಗಳ ಧಾರಣ ಶಕ್ತಿಯನ್ನು ಮೀರಿ ವಾಹನಗಳು ಇಡುಕಿರಿದುಕೊಂಡಿವೆ(ಜನಸಂಖ್ಯೆ 1.31 ಕೋಟಿ; ವಾಹನಗಳು 1.04 ಕೋಟಿ). ಸೂಕ್ತ ಪಾರ್ಕಿಂಗ್ ವ್ಯವಸ್ಥೆಯಿಲ್ಲದ ಕಾರಣ, ವಾಹನಗಳಿಗೆ ರಸ್ತೆಗಳೇ ಮನೆ. ನಾಗರಿಕತೆಯ ಚಾಲಕ ಶಕ್ತಿ ಎನ್ನಿಸಿಕೊಂಡಿರುವ ವಿದ್ಯುತ್, ಜಲ ಮೂಲ ಹಾಗೂ ಕಲ್ಲಿದ್ದಲು-ಪಳೆಯುಳಿಕೆ ಇಂಧನಗಳ ದಹನದಿಂದ ಬರುತ್ತದೆ. ದೇಶದ ಕಲ್ಲಿದ್ದಲಿನ ಗುಣಮಟ್ಟ ಕಡಿಮೆ (ಗಂಧಕದ ಪ್ರಮಾಣ ಹೆಚ್ಚು) ಇರುವುದರಿಂದ, ಆಮದು ಮಾಡಿಕೊಳ್ಳಲಾಗುತ್ತಿದೆ. ನಗರೀಕರಣದೊಟ್ಟಿಗೆ ವಿದ್ಯುತ್ ಬಳಕೆಯೂ ಹೆಚ್ಚುತ್ತಿದೆ. ಉಷ್ಣ ವಿದ್ಯುತ್ ಸ್ಥಾವರಗಳು ವಾಯು-ಜಲ ಮಾಲಿನ್ಯದ ದೊಡ್ಡ ಮೂಲಗಳು.

ಇಂಧನ ಗುಣಮಟ್ಟ ಹೆಚ್ಚಳ:
ಸರಕಾರ ವಾಹನಗಳಿಂದಾಗುವ ಮಾಲಿನ್ಯವನ್ನು ತಡೆಯಲು ಇಂಧನದ ಗುಣಮಟ್ಟ ಹೆಚ್ಚಳಕ್ಕೆ ಮುಂದಾಯಿತು. ಇದಕ್ಕಾಗಿ ಬಿಎಸ್‌ಇಎಸ್ ಅಥವಾ ಬಿಎಸ್(ಭಾರತ್ ಸ್ಟೇಜ್ ಎಮಿಷನ್ ಸ್ಟ್ಯಾಂಡರ್ಡ್) ಮಾನದಂಡವನ್ನು ಪರಿಚಯಿಸಿತು. ಅಕ್ಟೋಬರ್ 2010ರಲ್ಲಿ ದೇಶದ ಪ್ರಮುಖ 13 ನಗರಗಳಲ್ಲಿ ಜಾರಿಗೊಂಡ ಬಿಎಸ್ 4, ಎಪ್ರಿಲ್ 2017ರಿಂದ ದೇಶದೆಲ್ಲೆಡೆ ಅನ್ವಯಗೊಂಡಿತು. ನವೆಂಬರ್ 15, 2017ರಿಂದ ಪೆಟ್ರೋಲಿಯಂ ಮಂತ್ರಾಲಯ ಬಿಎಸ್ 6ನ್ನು ಪರಿಚಯಿಸಿತು. ಮೊದಲಿಗೆ, ತೀವ್ರ ಮಾಲಿನ್ಯಕ್ಕೀಡಾಗಿದ್ದ ದಿಲ್ಲಿಯಲ್ಲಿ ಎಪ್ರಿಲ್ 2018ರಿಂದ ಜಾರಿಗೊಂಡಿತು. ಮಾಲಿನ್ಯ ನಿಯಂತ್ರಣಕ್ಕೆ 2 ಸ್ಟ್ರೋಕ್ ದ್ವಿಚಕ್ರವಾಹನಗಳು ಹಾಗೂ ಮಾರುತಿ-800 ಉತ್ಪಾದನೆ ನಿಲುಗಡೆ, ಇಲೆಕ್ಟ್ರಾನಿಕ್ ಕಂಟ್ರೋಲ್‌ಗಳ ಪರಿಚಯಿಸುವಿಕೆ ಮತ್ತಿತರ ಕ್ರಮಗಳನ್ನು ಕೈಗೊಂಡಿದ್ದರೂ, ವಾಹನಗಳಿಗೆ ಬೇಡಿಕೆ ಹೆಚ್ಚುತ್ತಲೇ ಸಾಗಿದೆ. ಬಿಎಸ್ 4 ವಾಹನಗಳನ್ನು ಸಂಪೂರ್ಣ ನಿಷೇಧಿಸಬೇಕೆಂದು ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಎಪ್ರಿಲ್ 1, 2020ರಿಂದ ಬಿಎಸ್ 6 ವಾಹನಗಳನ್ನು ಮಾತ್ರ ಉತ್ಪಾದನೆ, ಮಾರಾಟ ಮತ್ತು ನೋಂದಣಿ ಮಾಡಲಾಗುತ್ತಿದೆ. ಬಿಎಸ್ 7(ಬಿಎಸ್6 ಹಂತ 2) ಎಪ್ರಿಲ್ 1, 2023ರಿಂದ ಜಾರಿಗೊಳ್ಳಬೇಕಿದೆ. ಬಿಎಸ್ 6 ಪೆಟ್ರೋಲ್ ಬಳಸುವ ಪ್ರಯಾಣಿಕರ ವಾಹನಗಳು ಕಿಲೋಮೀಟರ್‌ಗೆ ಸಾರಜನಕದ ಆಕ್ಸೈಡ್ 60 ಮಿಲಿಗ್ರಾಂ ಮತ್ತು ಪಿಎಂ 4.5 ಮಿಲಿಗ್ರಾಂ ಮತ್ತು ಡೀಸೆಲ್ ವಾಹನಗಳು ಸಾರಜನಕದ ಆಕ್ಸೈಡ್ 80 ಮಿಲಿಗ್ರಾಂಗಿಂತ ಕಡಿಮೆ ಹಾಗೂ ಪಿಎಂ 4.5 ಮಿಲಿಗ್ರಾಂ ಮತ್ತು ಎರಡರಲ್ಲೂ ಗಂಧಕದ ಪ್ರಮಾಣ 10 ಪಿಪಿಎಂ(ದಶಲಕ್ಷದಲ್ಲಿ ಒಂದು ಭಾಗ) ಇರಬೇಕು ಎಂಬ ಮಿತಿ ಹೇರಲಾಗಿದೆ.

ಜಗತ್ತಿನ ಅತ್ಯಂತ ಮಲಿನ ನಗರಗಳು ದೇಶದಲ್ಲಿವೆ. ಇವುಗಳ ಸ್ಥಿತಿಗೆ ಕಾರಣವೇನು? ಮಾಲಿನ್ಯವನ್ನು ತಡೆಯಲು ಇಲ್ಲವೇ ಅಳೆದು ಸೂಕ್ತ ಕ್ರಮ ಕೈಗೊಳ್ಳಲು ಸರಕಾರ ಏನಾದರೂ ಮಾಡಿದೆಯೇ? ಒಕ್ಕೂಟ ಸರಕಾರ ಇದಕ್ಕಾಗಿ 4 ವರ್ಷಗಳ ಹಿಂದೆ ರಾಷ್ಟ್ರೀಯ ಶುದ್ಧ ವಾಯು ಕಾರ್ಯಕ್ರಮ(ಎನ್‌ಸಿಎಪಿ)ವನ್ನು ಆರಂಭಿಸಿತು. ರಾಷ್ಟ್ರೀಯ ವಾಯು ಗುಣಮಟ್ಟ ಪರಾಮರ್ಶನ ಕಾರ್ಯಕ್ರಮ(ಎನ್‌ಎಎಂಪಿ)ದಡಿ 2011-15ರ ಅವಧಿಯಲ್ಲಿ ಪರಿವೇಷ್ಟಕ ವಾಯು ಗುಣಮಟ್ಟ(ಎನ್‌ಎಎಕ್ಯುಎಸ್)ವನ್ನು ಮುಟ್ಟದ 131 ನಗರಗಳನ್ನು ಗುರುತಿಸಲಾಯಿತು. ವಾತಾವರಣದಲ್ಲಿ ಸೂಕ್ಷ್ಮ ಕಣ(ತೇಲಾಡುವ ಘನ ವಸ್ತು, ಪಿಎಂ 2.5) ಪ್ರಮಾಣ 12 ಮೈಕ್ರೋ ಗ್ರಾಂ/ಘನ ಮೀಟರ್ ಇರಬೇಕು. ಹೆಚ್ಚು ಪ್ರಮಾಣದಲ್ಲಿದ್ದರೆ ಶ್ವಾಸಕೋಶಕ್ಕೆ ಹಾನಿಯುಂಟು ಮಾಡುತ್ತವೆ. ದೇಶದಲ್ಲಿ ನಿಗದಿಪಡಿಸಿರುವ ವಾರ್ಷಿಕ ಮಿತಿ- ಪಿಎಂ 2.5 ಘನಮೀಟರ್‌ಗೆ 40 ಮೈಕ್ರೋಗ್ರಾಂ ಹಾಗೂ ಪಿಎಂ 10 ಘನಮೀಟರ್‌ಗೆ 60 ಮೈಕ್ರೋಗ್ರಾಂ. ಎನ್‌ಸಿಎಪಿ 2024ರೊಳಗೆ ಇದನ್ನು ಶೇ.20-30ರಷ್ಟು ಕಡಿಮೆಗೊಳಿಸುವ ಗುರಿ ನಿಗದಿಪಡಿಸಿತು. ಆದರೆ, ಸೆಪ್ಟಂಬರ್ 2020ರಲ್ಲಿ ಗುರಿಯನ್ನು ಬದಲಿಸಿ, 2026ರೊಳಗೆ ಶೇ.40ರಷ್ಟು ಕಡಿತಗೊಳಿಸಲು ನಿರ್ಧರಿಸಲಾಯಿತು. ಈ ಗುರಿ ಮುಟ್ಟಲು ನಗರಗಳಿಗೆ ಹಂಚಿಕೆಯಾದ ಮೊತ್ತ ಅಂದಾಜು 6,897.06 ಕೋಟಿ ರೂ.! ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಈ ಕಾರ್ಯಕ್ರಮದ ಸಂಯೋಜಕನಾಗಿದ್ದು, ಪಿಎಂ 10 ಕಣಗಳನ್ನು ಪರಿಶೀಲಿಸಿ ಅನುದಾನ ಹಂಚಿಕೆ ಮಾಡುತ್ತದೆ. ಆದರೆ, ಅತ್ಯಂತ ಅಪಾಯಕಾರಿಯಾದ ಪಿಎಂ 2.5 ಕಣಗಳನ್ನು ಈ ನಗರಗಳು ಪರಾಮರ್ಶನ ಮಾಡುತ್ತಿಲ್ಲ. ಅಗತ್ಯ ಉಪಕರಣಗಳ ಕೊರತೆ ಇದಕ್ಕೆ ಕಾರಣ. ಆಯ್ಕೆಯಾದ ನಗರಗಳು 2020-21ರಿಂದಲೇ ಗಾಳಿಯ ಗುಣಮಟ್ಟ ಹೆಚ್ಚಳಕ್ಕೆ ಮುಂದಾಗಬೇಕಿತ್ತು; ಪಿಎಂ 10 ಕಣಗಳ ಪ್ರಮಾಣ ಶೇ.15ರಷ್ಟು ಕಡಿಮೆಯಾಗಬೇಕಿತ್ತು ಮತ್ತು 'ಒಳ್ಳೆಯ ಗಾಳಿ' ಇರುವ ದಿನಗಳ ಸಂಖ್ಯೆ ಕನಿಷ್ಠ 200 ಇರಬೇಕಿತ್ತು. ಇದಕ್ಕಿಂತ ಕಡಿಮೆ ಇರುವ ನಗರಗಳಿಗೆ ಪರಿಸರ ಮಂತ್ರಾಲಯ ಅನುದಾನವನ್ನು ಕಡಿತಗೊಳಿಸುತ್ತಿತ್ತು.

ಜನಾರೋಗ್ಯಕ್ಕೆ ಧಕ್ಕೆ:
ಆದರೆ, ಇಷ್ಟು ಅನುದಾನ ನೀಡಿದರೂ, ಒಟ್ಟಾರೆ ಸಾಧನೆ ಏನಾಗಿದೆ? ಹಣ ಹರಿದಿದೆ ನಿಜ. ನಮ್ಮ ನಗರಗಳ ಗಾಳಿ ಶುದ್ಧಗೊಂಡಿತೇ? ಉತ್ತರ ನಿರಾಶಾದಾಯಕವಾಗಿದೆ. ಅತ್ಯಂತ ಮಲಿನ ದೇಶಗಳ ಪಟ್ಟಿಯಲ್ಲಿ ಭಾರತದ ಸ್ಥಾನ 5 (ಬಾಂಗ್ಲಾ ಮೊದಲ ಸ್ಥಾನದಲ್ಲಿದೆ). ವಾಯುಮಾಲಿನ್ಯವು ಸ್ಥಿರ ಮೂಲ(ವಿದ್ಯುತ್ ಉತ್ಪಾದನೆ ಸ್ಥಾವರಗಳು, ತೈಲ ಶುದ್ಧೀಕರಣಾಗಾರಗಳು, ಕೈಗಾರಿಕೆಗಳು), ಚಲಿಸುವ ಮೂಲಗಳು(ವಾಹನಗಳು, ರೈಲು ಇತ್ಯಾದಿ) ಅಲ್ಲದೆ ಮನೆಯಲ್ಲಿಯೂ ಸೃಷ್ಟಿಯಾಗುತ್ತದೆ. ದೇಶದಲ್ಲಿ 2019ರಲ್ಲಿ 16.6 ಲಕ್ಷ ಮಂದಿ ವಾಯುಮಾಲಿನ್ಯದಿಂದ ಅಕಾಲಿಕ ಮರಣ ಹೊಂದಿದ್ದಾರೆ. ಹೆಚ್ಚಿನ ಸಾವಿಗೆ ಪಿಎಂ 2.5 ಕಾರಣ ಎಂದು ಲ್ಯಾನ್ಸೆಟ್ ಕಮಿಷನ್ ಆನ್ ಪೊಲ್ಯೂಷನ್ ಆ್ಯಂಡ್ ಹೆಲ್ತ್ ಹೇಳಿದೆ. ಜಾಗತಿಕವಾಗಿ, ವಾಯುಮಾಲಿನ್ಯದಿಂದ ವಾರ್ಷಿಕ 66.7 ಲಕ್ಷ ಮಂದಿ ಅಕಾಲಿಕ ಮರಣಕ್ಕೆ ತುತ್ತಾಗುತ್ತಾರೆ. ಕೋಟ್ಯಂತರ ಮಂದಿ ಇಂದಿಗೂ ಸೀಮೆಎಣ್ಣೆ ಸ್ಟವ್, ಜೈವಿಕ ಉರುವಲು, ಬೆರಣಿ ಮತ್ತಿತರ ವಸ್ತುಗಳು ಹಾಗೂ ಕಲ್ಲಿದ್ದಲು ಬಳಸುತ್ತಾರೆ. ವಾತಾಯನ ವ್ಯವಸ್ಥೆ ಸಮರ್ಪಕವಾಗಿ ಇಲ್ಲದೆ ಇರುವುದರಿಂದ, ಅಡುಗೆ ಕೋಣೆಗಳು ಮೃತ್ಯುಕೂಪವಾಗಿಬಿಟ್ಟಿವೆ.

ಇಂಧನ ಮತ್ತು ಶುದ್ಧ ವಾಯು ಸಂಶೋಧನಾ ಸಂಸ್ಥೆ(ಸಿಆರ್‌ಇಎ)ಯು ಎನ್‌ಸಿಎಪಿಯ ನಾಲ್ಕು ವರ್ಷಗಳ ಸಾಧನೆಯನ್ನು ವಿಶ್ಲೇಷಿಸಿದೆ; ಅದರ ಪ್ರಕಾರ, 'ಆಯ್ಕೆ ಮಾಡಿರುವ 131 ನಗರಗಳಲ್ಲಿ 38 ಮಾತ್ರ 2021-22ರ ಗುರಿಯನ್ನು ಸಾಧಿಸಿವೆ. ಇದರಲ್ಲಿ 37 ನಗರಗಳು ಮಾಲಿನ್ಯದ ಮೂಲವನ್ನು ಗುರುತಿಸಿ, ಅಳತೆ ಮಾಡಿವೆ. ಆದರೆ, ವರದಿಗಳನ್ನು ಸಾರ್ವಜನಿಕಗೊಳಿಸಿಲ್ಲ ಹಾಗೂ ಕ್ರಿಯಾಯೋಜನೆಗಳನ್ನು ಸಿದ್ಧಗೊಳಿಸಿಲ್ಲ. ಎನ್‌ಸಿಎಪಿಯಡಿ ಇದು ಕಡ್ಡಾಯ. 2024ರೊಳಗೆ ದೇಶದಲ್ಲಿ 1,500 ವಾಯು ಗುಣಮಟ್ಟ ಪರಾಮರ್ಶನ ಕೇಂದ್ರಗಳನ್ನು ಸ್ಥಾಪಿಸಬೇಕಿದೆ. ಆದರೆ, ನಾಲ್ಕು ವರ್ಷದಲ್ಲಿ ಸ್ಥಾಪನೆಯಾಗಿರುವುದು 180 ಯಂತ್ರ ಮಾತ್ರ. ಅಂದರೆ, ಅನುದಾನಕ್ಕೆ ಅನುಗುಣವಾಗಿ ಸಾಧನೆ ಆಗಿಲ್ಲ. ವಾಯುಮಾಲಿನ್ಯ ಕಾರ್ಯನೀತಿ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಕ್ಲೈಮೇಟ್ ಟ್ರೆಂಡ್ಸ್ ಮತ್ತು ರೆಸ್ಪೈರರ್ ಲಿವಿಂಗ್ ಸೈನ್ಸಸ್ ಸಂಸ್ಥೆಗಳು 'ಎಸಿಸಿಎಪಿ ಟ್ರ್ಯಾಕರ್' ಕಾರ್ಯಕ್ರಮದಡಿ ನಿಗದಿತ ಸಾಧನೆ ಆಗುತ್ತಿದೆಯೇ ಎಂದು ಅವಲೋಕಿಸುತ್ತಿವೆ. 2020ರಲ್ಲಿ ಅತ್ಯಂತ ಮಲಿನ ನಗರ ಎಂದು ಕುಖ್ಯಾತವಾಗಿದ್ದ ದಿಲ್ಲಿಯಲ್ಲಿ ಪಿಎಂ2.5 ಸಾಂದ್ರತೆ ಘನ ಮೀಟರ್‌ಗೆ 99.71 ಮೈಕ್ರೋಗ್ರಾಂ ಇತ್ತು. 2019ಕ್ಕೆ ಹೋಲಿಸಿದರೆ, ಸ್ವಲ್ಪ ಸುಧಾರಣೆಯಾಗಿದೆ. ಅತಿ ಹೆಚ್ಚು ಮಲಿನಗೊಂಡಿವೆ ಎನ್ನಲಾದ 10 ನಗರಗಳಲ್ಲಿ ಹೆಚ್ಚಿನವು ಸಿಂಧೂಗಂಗಾ ಬಯಲಿನಲ್ಲಿವೆ ಮತ್ತು ಈ ಪಟ್ಟಿಯಲ್ಲಿ ಬಿಹಾರದ ಪಟ್ನಾ, ಮುಝಫ್ಫರ್‌ಪುರ ಹಾಗೂ ಗಯಾ ಮೇಲಿನ ಸ್ಥಾನದಲ್ಲಿವೆ. ಸೆಪ್ಟಂಬರ್ 2022ರ ವಿಜ್ಞಾನ ಮತ್ತು ಪರಿಸರ ಕೇಂದ್ರ(ಸಿಎಸ್‌ಇ)ದ ವರದಿ ಪ್ರಕಾರ, 43ರಲ್ಲಿ 14 ನಗರಗಳಲ್ಲಿ ಮಾತ್ರ ಪಿಎಂ2.5 ಪ್ರಮಾಣ ಶೇ.10ರಷ್ಟು ಕಡಿಮೆಯಾಗಿದೆ. ಆದರೆ, ಎನ್‌ಸಿಎಪಿ ಕಾರ್ಯಕ್ರಮದಲ್ಲಿ ಇಲ್ಲದ 46 ನಗರಗಳಲ್ಲಿ 21ರಲ್ಲಿ ಪಿಎಂ2.5 ಗಮನಾರ್ಹವಾಗಿ ಕಡಿಮೆಯಾಗಿದೆ. ಇದರರ್ಥ-ಎನ್‌ಸಿಎಪಿ ಹೆಚ್ಚೇನೂ ಪರಿಣಾಮ ಬೀರಿಲ್ಲ. ಆದರೆ, ಹಣದ ಹೊಳೆ ಹರಿದಿದೆ.'

ಬೆಂಗಳೂರಿನ ಶುದ್ಧ ವಾಯು ಯೋಜನೆಗಳಿಗೆ ಅನುದಾನ:
ಏತನ್ಮಧ್ಯೆ, ಇದೇ ಕಾರ್ಯಕ್ರಮದಡಿ ಬೆಂಗಳೂರಿಗೆ ಮೂರನೇ ಕಂತು 116 ಕೋಟಿ ರೂ. ಅನುದಾನ ಲಭ್ಯವಾಗಿದೆ. 15ನೇ ಹಣಕಾಸು ಯೋಜನೆಯಡಿ ಮೊದಲ ಕಂತು 279 ಕೋಟಿ ರೂ. ಹಾಗೂ ಎರಡನೇ ಕಂತು 140 ಕೋಟಿ ರೂ. ಈ ಮೊದಲು ಬಿಡುಗಡೆಯಾಗಿತ್ತು. ಮೊದಲ ಕಂತಿನ ಅನುದಾನದಲ್ಲಿ ಹಲವು ಯೋಜನೆಗಳು ಅನುಷ್ಠಾನಗೊಳ್ಳುತ್ತಿವೆ ಮತ್ತು ಎರಡನೇ ಕಂತಿನ ಅನುದಾನದ ಕ್ರಿಯಾಯೋಜನೆಗಳಿಗೆ ಇತ್ತೀಚೆಗೆ ಮುಖ್ಯಮಂತ್ರಿ ಕಚೇರಿಯಿಂದ ಅನುಮತಿ ಲಭ್ಯವಾಗಿದೆ. ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಗೊಳಿಸುವ ಏಜೆನ್ಸಿ(ಬಿಬಿಎಂಪಿ, ಬಿಎಸ್‌ಎನ್‌ಎಲ್, ನೀರು ಸರಬರಾಜು ಮತ್ತು ನೈರ್ಮಲ್ಯ ಮಂಡಳಿ, ಖಾಸಗಿ ಕೇಬಲ್ ಕಂಪೆನಿಗಳು ಇತ್ಯಾದಿ)ಗಳ ನಡುವೆ ಹೊಂದಾಣಿಕೆಯಿಲ್ಲದ್ದರಿಂದ, ಬೆಂಗಳೂರು ಗಾಯಗೊಂಡು ನರಳುತ್ತಿದೆ. ರಸ್ತೆ-ಚರಂಡಿ ನಿರ್ಮಾಣ, ಕಟ್ಟಡ ಮತ್ತಿತರ ನಿರ್ಮಾಣ ಕಾಮಗಾರಿಗಳ ಧೂಳು ಹಾಗೂ ಮೆಟ್ರೋ ವಿಸ್ತರಣೆ ಕಾಮಗಾರಿಗಳಿಂದ ನಗರ ಧೂಳಿನ ಕುಂಡವಾಗಿ ಪರಿಣಮಿಸಿದೆ.

ಮೂರನೇ ಕಂತಿನಲ್ಲಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ 50.52 ಕೋಟಿ ರೂ. ಸಿಗಲಿದೆ. ಬಿಬಿಎಂಪಿ ಈ ಅನುದಾನದಿಂದ ಮೆಟ್ರೋ ಫೀಡರ್ ಸೇವೆಗೆ 100 ವಿದ್ಯುತ್ ಬಸ್, ಘನ ತ್ಯಾಜ್ಯಕ್ಕೆ ಸಂಬಂಧಿಸಿದ ಚಟುವಟಿಕೆಗಳನ್ನು ನೋಡಿಕೊಳ್ಳುವ ಮಾರ್ಷಲ್‌ಗಳ ಬಳಕೆಗೆ 250 ವಿದ್ಯುತ್ ವಾಹನ ಮತ್ತು 5 ವಿದ್ಯುತ್ ಮಹಡಿ ಬಸ್‌ಗಳ ಖರೀದಿ, 15 ಇವಿ ಡಿಪೋ ನಿರ್ಮಾಣ, 25 ಪ್ರಮುಖ ಜಂಕ್ಷನ್‌ಗಳ ಹಸಿರೀಕರಣ, ಹೊಸ ಪಾರ್ಕ್‌ಗಳು-ನರ್ಸರಿಗಳ ನಿರ್ಮಾಣ, ಕಸ ಗುಡಿಸುವ ಯಂತ್ರಗಳ ಖರೀದಿ ಇತ್ಯಾದಿ ಯೋಜನೆ ಹಾಕಿಕೊಂಡಿದೆ. ಅನುದಾನ ಮಂಜೂರಿಗೆ ವಿಧಿಸಲಾದ 12 ಶರತ್ತುಗಳಲ್ಲಿ ಎರಡು-ಕಾಮಗಾರಿ ನಿಗದಿತ ಸಮಯದಲ್ಲಿ ಮುಗಿಯಬೇಕು ಮತ್ತು ಗುಣಮಟ್ಟ ಉತ್ತಮವಾಗಿರಬೇಕು! ಇದಕ್ಕಿಂತ ವಿಪರ್ಯಾಸ ಬೇರೆ ಇರಲಾರದು. ವರ್ಷಕ್ಕೆ 20,000 ಕೋಟಿ ರೂ. ಖರ್ಚು ಮಾಡಿದರೂ ದುರಸ್ತಿಯಾಗದ ರಸ್ತೆಗಳನ್ನು, ಹೊಸ ರಸ್ತೆ ಎರಡೇ ದಿನದಲ್ಲಿ ಕಿತ್ತುಹೋಗುವುದನ್ನು ಹಾಗೂ ಫ್ಲೈಓವರ್ ನಿರ್ಮಾಣ ನಿರಂತರವಾಗಿ ನಡೆಯುವುದನ್ನು ಕಂಡವರಿಗೆ, ಬಿಬಿಎಂಪಿ ಮೇಲೆ ನಂಬಿಕೆ ಬರಲು ಸಾಧ್ಯವೇ ಇಲ್ಲ. ಬಿಬಿಎಂಪಿಯಲ್ಲಿ ಜನರಿಂದ ಆಯ್ಕೆಯಾದ ತಲೆಯಾಳುಗಳು ಇಲ್ಲದೆ 2 ವರ್ಷ ಕಳೆದಿದೆ. ರಾಜ್ಯ ಸರಕಾರ ಚುನಾವಣೆ ನಡೆಸಲು ಕುಂಟುನೆಪ ಹೇಳಿಕೊಂಡು, ಕಾಲಹರಣ ಮಾಡುತ್ತಿದೆ. ಜನಪ್ರತಿನಿಧಿಗಳು ಇಲ್ಲದ ಬಿಬಿಎಂಪಿಯಲ್ಲಿ ಅಧಿಕಾರಿಗಳದ್ದೇ ರಾಜ್ಯಭಾರ.

ಆದರೆ, ವಿದ್ಯುತ್ ವಾಹನಗಳ ಹೆಚ್ಚಳ ಪಾರಿಸಾರಿಕವಾಗಿ ಒಂದು ಉತ್ತಮ ಆಯ್ಕೆ. ಇದರಿಂದ ಪಳೆಯುಳಿಕೆ ಇಂಧನಗಳ ಬಳಕೆ ಕಡಿಮೆಯಾಗುತ್ತದೆ. ಜೊತೆಗೆ, ಅತ್ಯಂತ ಮುಖ್ಯವಾಗಿ ಆಗಬೇಕಾದ್ದು ಸಾರ್ವಜನಿಕ ಸಂಚಾರ ವ್ಯವಸ್ಥೆಯನ್ನು ಬಲಪಡಿಸುವುದು. ಇದರಿಂದ ಖಾಸಗಿ ವಾಹನಗಳು ರಸ್ತೆಗೆ ಇಳಿಯುವುದು ತಪ್ಪುತ್ತದೆ; ಇಂಧನ ಬಳಕೆ ಕಡಿಮೆಯಾಗಿ, ಮಾಲಿನ್ಯ ತಗ್ಗುತ್ತದೆ. ಇದನ್ನು ಆಗುಮಾಡಲು, ಬಸ್ ಹಾಗೂ ಮೆಟ್ರೋ ದರವನ್ನು ಕಡಿಮೆಗೊಳಿಸಬೇಕಾಗುತ್ತದೆ. ರಸ್ತೆಗಳನ್ನು ಸುಸ್ಥಿತಿಯಲ್ಲಿಡುವುದರಿಂದ ಹಾಗೂ ಚತುರ ಸಿಗ್ನಲ್ ವ್ಯವಸ್ಥೆಯಿಂದ, ಧೂಳು-ಮಾಲಿನ್ಯ ಕಡಿಮೆಯಾಗುತ್ತದೆ.

ಇಚ್ಛಾಶಕ್ತಿ ಕೊರತೆ:
ಬೆಂಗಳೂರು ಸೇರಿದಂತೆ ನಮ್ಮ ನಗರಗಳನ್ನು ಜನಸ್ನೇಹಿಯಾಗಿಸುವುದು ಹಾಗೂ ಮಾಲಿನ್ಯಮುಕ್ತಗೊಳಿಸುವುದು ಹೇಗೆ? ವಿಶ್ವಬ್ಯಾಂಕ್‌ನ ವಾಯುಮಾಲಿನ್ಯ ಕುರಿತ ಅಧ್ಯಯನದ ಪ್ರಕಾರ, 'ದಕ್ಷಿಣ ಏಶ್ಯದಲ್ಲಿ ವಾಯುವಿನ ಗುಣಮಟ್ಟ ನಿರಂತರವಾಗಿ ಕುಸಿಯುತ್ತಿದೆ. ಜಗತ್ತಿನ 47 ಅತ್ಯಂತ ಮಲಿನ ನಗರಗಳಲ್ಲಿ 37 ಈ ಪ್ರಾಂತದಲ್ಲಿದೆ. ಇಲ್ಲಿನ ಶೇ.60ರಷ್ಟು ಜನರು ಮಾಲಿನ್ಯದ ದುಷ್ಪರಿಣಾಮ ಎದುರಿಸುತ್ತಿದ್ದಾರೆ. ಅಂದಾಜು 20 ಲಕ್ಷ ಮಂದಿ ಅಕಾಲಿಕ ಸಾವಿಗೆ ತುತ್ತಾಗುತ್ತಿದ್ದಾರೆ. ಪಿಎಂ2.5 ಕಣಗಳು ನೂರಾರು ಕಿಲೋಮೀಟರ್ ಸಂಚರಿಸಬಲ್ಲವು. ಅವಕ್ಕೆ ಗಡಿಗಳಿಲ್ಲ. ಮಾಲಿನ್ಯ ನಿಯಂತ್ರಣಕ್ಕೆ ದೇಶಗಳು ಪ್ರತ್ಯೇಕ ಕಾರ್ಯಕ್ರಮಗಳನ್ನು ರೂಪಿಸಿಕೊಂಡಿದ್ದು, ಇದರಿಂದ 2018-2030ರ ಅವಧಿಯಲ್ಲಿ ಪಿಎಂ2.5 ಪ್ರಮಾಣ ಕೇವಲ ಶೇ.4ರಷ್ಟು ಕಡಿಮೆಯಾಗಬಹುದು. ಆದರೆ, ದೇಶಗಳು ಒಟ್ಟಾಗಿ ಸಂಯೋಜಿತ ಕಾರ್ಯಾಚರಣೆ ನಡೆಸಿದಲ್ಲಿ 2030ರೊಳಗೆ ಪಿಎಂ2.5ನ್ನು ಅರ್ಧದಷ್ಟು ಕಡಿಮೆ ಗೊಳಿಸಬಹುದು. ಜೊತೆಗೆ, ಅಪಾರ ಹಣ ಉಳಿತಾಯವಾಗುತ್ತದೆ. ಇದಕ್ಕಾಗಿ ಮೂರು ಕವಲಿನ ಯೋಜನೆ-ನಂಬಿಕಾರ್ಹ ಮಾಹಿತಿ ಸಂಗ್ರಹ ಮತ್ತು ಪರಾಮರ್ಶನ, ಅನುಭವಗಳ ಹಂಚಿಕೆ ಮತ್ತು ಕಡಿಮೆ ವೆಚ್ಚದ ಪರಿಹಾರಗಳ ಅಳವಡಿಕೆ ಹಾಗೂ ಶುದ್ಧ ಹಸಿರು ತಂತ್ರಜ್ಞಾನದ ಬಳಕೆ-ಅಗತ್ಯವಿದೆ. ವಾಯುಮಾಲಿನ್ಯ ಒಂದು ದಿನದಲ್ಲಿ ಆದದ್ದಲ್ಲ. ಹೀಗಾಗಿ, ಅದರ ನಿವಾರಣೆ ಕೂಡ ಕಾಲ ಹಾಗೂ ಹಣವನ್ನು ಬೇಡುತ್ತದೆ. ಆದರೆ, ಇದರಿಂದ ಅಪಾರ ಲಾಭವಿದೆ. ಅಂದಾಜು 7.5 ದಶಲಕ್ಷ ಜೀವಗಳನ್ನು ಉಳಿಸಬಹುದು; ದೇಶಗಳು ಆರೋಗ್ಯ ರಕ್ಷಣೆಗೆ ಮಾಡುವ ಹಣ ಉಳಿಸಬಹುದು; ಜನರ ಉತ್ಪಾದಕತೆ ಹೆಚ್ಚುತ್ತದೆ. ಆದರೆ, ಸಮಸ್ಯೆ ಇರುವುದು ರಾಜಕೀಯ ಇಚ್ಛಾಶಕ್ತಿಯ ಕೊರತೆಯಲ್ಲಿ'.
ಕರ್ತವ್ಯಲೋಪ, ನಿರ್ಲಕ್ಷ್ಯ, ಭ್ರಷ್ಟಾಚಾರ ನಮ್ಮ ಡಿಎನ್‌ಎಯಲ್ಲೇ ಸೇರಿಹೋಗಿರುವಾಗ, ಈ ಇಚ್ಛಾಶಕ್ತಿಯನ್ನು ಎಲ್ಲಿಂದ ತರುವುದು?