×
Ad

ಗೃಹಿಣಿ ಶಕ್ತಿ ಯೋಜನೆ | ಮಹಿಳಾ ಕೃಷಿ ಕಾರ್ಮಿಕರ ಸಹಾಯಧನ ಸಾವಿರ ರೂ.ಗೆ ಹೆಚ್ಚಳ: ಸಿಎಂ ಬೊಮ್ಮಾಯಿ

Update: 2023-02-24 12:01 IST

ಬೆಂಗಳೂರು: ಗೃಹಿಣಿ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಮಾಸಿಕ 500 ರೂ.ಗಳನ್ನು ನೀಡುವುದಾಗಿ ಘೋಷಿಸಿದ್ದ ಮೊತ್ತ 1000 ರೂ.ಗಳಿಗೆ ಹೆಚ್ಚಿಸಲಾಗುವುದು ಹಾಗೂ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬಜೆಟ್‍ನಲ್ಲಿ ಘೋಷಿಸಲಾಗಿದ್ದ ಒಂದು ಸಾವಿರ ಬಸ್ಸುಗಳನ್ನು 2000ಕ್ಕೆ ಹೆಚ್ಚಳ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಕಟಿಸಿದ್ದಾರೆ. 

ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆ ವೇಳೆ ಮಾತನಾಡಿದ ಅವರು,  ಕಟ್ಟಡ ಕಾರ್ಮಿಕರ ಮಕ್ಕಳಿಗೆ ನಾಲ್ಕು ಸಾವಿರ ಶಿಶು ವಿಹಾರಗಳನ್ನು ಪ್ರಾರಂಭಿಸಲು ಬಜೆಟ್‍ನಲ್ಲಿ ಅನುದಾನ  ಮೀಸಲಿಡಲಾಗಿದೆ.  ನಿರುದ್ಯೋಗಿಗಳಿಗೆ ಬದುಕುವ ದಾರಿ ಕಲ್ಪಿಸಲಾಗಿದ್ದು, ಆಶಾ ಅಂಗನವಾಡಿ ಕಾರ್ಯಕರ್ತೆಯರು, ಅಡುಗೆ ಸಹಾಯಕರ ಗೌರವಧನವನ್ನು ಒಂದು ಸಾವಿರ ರೂ.ಹೆಚ್ಚಿಸಲಾಗಿದೆ ಎಂದು ಅವರು ಹೇಳಿದರು.

ಇ-ಕಾಮರ್ಸ್ ನಲ್ಲಿ ತೊಡಗಿರುವವರ ವಾಹನಗಳಿಗೆ 2 ಲಕ್ಷ ಜೀವ ವಿಮೆ ಹಾಗೂ ಅಪಘಾತ ವಿಮೆಯನ್ನು ಮೊದಲ ಬಾರಿಗೆ ಘೋಷಿಸಲಾಗಿದೆ. ಈ ಬಾರಿಯ ಆಯವ್ಯಯದಲ್ಲಿ ಘೋಷಿಸಲಾಗಿರುವ ಎಲ್ಲ ಯೋಜನೆಗಳು ನಮ್ಮ ಸರಕಾರದ ಸೂಕ್ಷ್ಮತೆಯನ್ನು ಬಿಂಬಿಸುತ್ತದೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

ರಾಯಚೂರಿನಲ್ಲಿ ಏಮ್ಸ್: ರಾಯಚೂರಿನಲ್ಲಿ ಏಮ್ಸ್ ಮಾದರಿಯ ಆಸ್ಪತ್ರೆ ಸ್ಥಾಪನೆಗೆ ಬೇಡಿಕೆ ಇದೆ. ಈ ಬಗ್ಗೆ ಕೇಂದ್ರ ಸರಕಾರ ಪುನರ್ ರಚನೆ ಮಾಡುತ್ತಿದೆ. ರಾಜ್ಯ ಸರಕಾರವು  ಭೂಮಿ, ಮೂಲಸೌಕರ್ಯದ ವೆಚ್ಚವನ್ನು ಭರಿಸುವುದಾಗಿ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.  

Similar News