ಪ್ರಶ್ನೆ ಕೇಳಿದ ಸದಸ್ಯರೇ ಇಲ್ಲ, ಒಂದು ಪ್ರಶ್ನೆಗೆ ಸೀಮಿತವಾದ ಕೊನೆಯ ದಿನದ ಕಲಾಪ!

Update: 2023-02-24 15:05 GMT

ಬೆಂಗಳೂರು, ಫೆ.24: ವಿಧಾನಸಭೆಯಲ್ಲಿ ಪ್ರಶ್ನೋತ್ತರ ಕಲಾಪದಲ್ಲಿ ಪ್ರಶ್ನೆ ಕೇಳಿದ್ದ 15 ಸದಸ್ಯರು ಸದನಕ್ಕೆ ಗೈರು ಹಾಜರಾಗಿದ್ದರು. ಹೀಗಾಗಿ, ಒಂದು ಪ್ರಶ್ನೆಗೆ ಮಾತ್ರ ಪ್ರಶ್ನೋತ್ತರ ಕಲಾಪ ಸೀಮಿತಗೊಂಡು ಕೊನೆಯದಿನ ದಾಖಲೆಯಾಯಿತು.

ಕರ್ನಾಟಕ ವಿಧಾನಸಭೆಯ ಹಾಗೂ ಪ್ರಸಕ್ತ ಬಜೆಟ್ ಅಧಿವೇಶನದ ಕೊನೆಯ ದಿನವಾದ ಶುಕ್ರವಾರ ಸದನದಲ್ಲಿ ಸದಸ್ಯರ ಹಾಜರಾತಿ ಕೊರತೆ ಎದ್ದು ಕಾಣುತ್ತಿತ್ತು. ಆಡಳಿತ ಮತ್ತು ಪ್ರತಿಪಕ್ಷದ ಕಡೆಗಳು ಸದಸ್ಯರ ಹಾಜರಾತಿ ಕೇವಲ ಬೆರಳೆಣಿಯಷ್ಟಿತ್ತು. 

ಮತ್ತೊಂದೆಡೆ ನಿಗದಿತ ಸಮಯಕ್ಕಿಂತ ಸುಮಾರು ಅರ್ಧಗಂಟೆಯಷ್ಟು ವಿಳಂಬವಾಗಿ ವಿಧಾಸಭೆ ಸಮಾವೇಶಗೊಂಡಾಗ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಅಧಿವೇಶನದ ಕೊನೆಯ ದಿನವಾಗಿದೆ ಎಂದು ಪ್ರಕಟಿಸಿ, ಪ್ರಶ್ನೋತ್ತರ ಕಲಾಪಕ್ಕೆ ಅನುವು ಮಾಡಿಕೊಟ್ಟರು.

ಆದರೆ, ಪ್ರಶ್ನೆ ಕೇಳಿದ್ದ 15 ಸದಸ್ಯರು ಸದನಕ್ಕೆ ಹಾಜರಾಗಿರಲಿಲ್ಲ. ಒಂದು ಪ್ರಶ್ನೆಗೆ ಮಾತ್ರ ಪ್ರಶ್ನೋತ್ತರ ಕಲಾಪ ಸೀಮಿತಗೊಂಡು ದಾಖಲೆಯಾಯಿತು. ಆಡಳಿತ ಪಕ್ಷದ ಶಾಸಕ ಅಪ್ಪಚ್ಚುರಂಜನ್ ಪರವಾಗಿ ಮಾಜಿ ಸ್ಪೀಕರ್ ಕೆ.ಜಿ.ಬೋಪಯ್ಯ ಪ್ರಶ್ನೆ ಕೇಳಿದರು, ಅದಕ್ಕೆ ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್ ಅವರಿಂದ ಉತ್ತರ ಪಡೆದರು.

ಅನಂತರ, ಸ್ಪೀಕರ್ ಕಾಗೇರಿ ಮಾತನಾಡಿ, 15 ಪ್ರಶ್ನೆಗಳ ಪೈಕಿ ಒಂದು ಪ್ರಶ್ನೆಗೆ ಮಾತ್ರ ಉತ್ತರಿಸಲಾಗಿದೆ. ಅದು ಸದಸ್ಯ ಅಪ್ಪಚ್ಚುರಂಜನ್ ಪರವಾಗಿ ಬೋಪಯ್ಯ ಅವರು ಪ್ರಶ್ನೆ ಕೇಳಿದ್ದಾರೆ. ಉಳಿದಂತೆ ಪ್ರಶ್ನೆ ಕೇಳಿದವರು ಬಂದಿಲ್ಲ ಎಂದು ಬೇಸರ ವ್ಯಕ್ತಪಡಿಸಿ ಪ್ರಶ್ನೋತ್ತರ ಕಲಾಪ ಮುಗಿದೆ ಎಂದು ಪ್ರಕಟಿಸಿದರು.

Similar News